‘ಭಾರತದ ಕೋಗಿಲೆ’ ಎಂದೇ ಜನಪ್ರಿಯರಾದ ಸರೋಜಿನಿ ನಾಯ್ಡು ಕುರಿತ ಬಯೋಪಿಕ್​ ಸಿನಿಮಾ ತಯಾರಾಗಲಿದೆ. ವಿನಯ್​ ಚಂದ್ರ ನಿರ್ದೇಶನದ ಚಿತ್ರ ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಸಿದ್ಧವಾಗುತ್ತಿದ್ದು, ಸರೋಜಿನಿ ನಾಯ್ಡು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಸೋನಾಲ್ ಮಾಂಟೆರೊ ಹಾಗೂ ಶಾಂತಿಪ್ರಿಯ.

ವಿನಯ್‌ ಚಂದ್ರ ನಿರ್ದೇಶನದಲ್ಲಿ ಕವಯಿತ್ರಿ ಸರೋಜಿನಿ ನಾಯ್ಡು ಬಯೋಪಿಕ್‌ ಸಿನಿಮಾ ಸೆಟ್ಟೇರಲಿದೆ. ಚರಣ್​ ಸುವರ್ಣ, ಹನಿ ಚೌಧರಿ ಮತ್ತು ಸಿ.ಬಿ.ಕುಲಕರ್ಣಿ ಜೊತೆಯಾಗಿ ಚಿತ್ರವನ್ನು ವಿಸ್ತಾ ಫಿಲಂಸ್ ಮೂಲಕ ನಿರ್ಮಿಸುತ್ತಿದ್ದಾರೆ. ಸರೋಜಿನಿ ನಾಯ್ಡು ಅವರ ಚಿಕ್ಕ ವಯಸ್ಸಿನ ಪಾತ್ರದಲ್ಲಿ ಸೋನಲ್​ ಮಾಂಟೆರೊ ನಟಿಸಿದರೆ, ಹಿರಿವಯಸ್ಸಿನ ಪಾತ್ರವನ್ನು ಶಾಂತಿಪ್ರಿಯ ನಿರ್ವಹಿಸಲಿದ್ದಾರೆ. ಒಂದು ಕಾಲದಲ್ಲಿ ತೆಲುಗು ಮತ್ತು ಹಿಂದಿ ಚಿತ್ರರಂಗಗಳಲ್ಲಿ ಜನಪ್ರಿಯ ನಾಯಕಿಯಾಗಿದ್ದ ಶಾಂತಿಪ್ರಿಯ, ಬಹುವರ್ಷಗಳ ನಂತರ ತೆರೆಗೆ ಮರಳುತ್ತಿದ್ದಾರೆ. ಸಿನಿಮಾ ಕುರಿತಂತೆ ಮಾಹಿತಿ ನೀಡಲು ಚಿತ್ರತಂಡ ಸುದ್ದಿಗೋಷ್ಠಿ ನಡೆಸಿತು. “28 ವರ್ಷಗಳ ನಂತರ ನಟನೆಗೆ ವಾಪಸ್ಸಾಗಿದ್ದೇನೆ. ಇಂಥದ್ದೊಂದು ಅವಕಾಶಕ್ಕೆ ಧನ್ಯವಾದಗಳು. ಸರೋಜಿನಿ ನಾಯ್ಡು ಅವರ ಪಾತ್ರ ನಿರ್ವಹಿಸುತ್ತಿದ್ದು, ಪಾತ್ರಕ್ಕೆ ಶಕ್ತಿಮೀರಿ ಜೀವ ತುಂಬುವುದಕ್ಕೆ ಪ್ರಯತ್ನಿಸುತ್ತೇನೆ” ಎನ್ನುತ್ತಾರೆ ಶಾಂತಿಪ್ರಿಯ.

ಮುಂಬೈ ಮೂಲದ ನಟ ಹಿತೇನ್​ ತೇಜ್ವಾನಿ ಮಾತನಾಡಿ, “ಸರೋಜಿನಿ ನಾಯ್ಡು ಅವರ ಜೀವನದಲ್ಲಿ ನಡೆದ ಹಲವು ಪ್ರಮುಖ ವಿಷಯಗಳನ್ನು ಈ ಚಿತ್ರದಲ್ಲಿ ತೆರೆದಿಡಲಾಗುತ್ತಿದೆ. ನಾನು ಸರೋಜಿನಿ ಅವರ ಪತಿ ಗೋವಿಂದರಾಜುಲು ನಾಯ್ಡು ಅವರ ಪಾತ್ರ ನಿರ್ವಹಿಸುತ್ತಿದ್ದೇನೆ. ಸರೋಜಿನಿ ಅವರ ಬಗ್ಗೆ ಜನರಿಗೆ ಅಷ್ಟಾಗಿ ಗೊತ್ತಿಲ್ಲ. ನಿಜ ಹೇಳಬೇಕೆಂದರೆ, ಅವರಿಗೆ ಗೋವಿಂದ್​ ರಾಜುಲು”ಬೆನ್ನೆಲುಬಾಗಿದ್ದರು. ಕೊನೆಯವರೆಗೂ ಸಹಕಾರ, ಪ್ರೋತ್ಸಾಹ ನೀಡಿದರು. ಕುಟುಂಬ ಮತ್ತು ಮಕ್ಕಳ ಬಗ್ಗೆ ಯೋಚನೆ ಬೇಡ ಎಂದು ಆಕೆಯನ್ನು ಹುರಿದುಂಬಿಸಿದರು. ಆಕೆಗೆ ಏನು ಇಷ್ಟವಿತ್ತೋ, ಅದೆಲ್ಲವನ್ನೂ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟರು” ಎಂದು ತಮ್ಮ ಪಾತ್ರ ಕುರಿತು ವಿವರಣೆ ನೀಡಿದರು.

‘ಪಂಚತಂತ್ರ’ ಸಿನಿಮಾ ಖ್ಯಾತಿಯ ಸೋನಾಲ್‌ ಮಾಂಟೆರೊ ಇತ್ತೀಚೆಗೆ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇಲ್ಲಿ ಅವರಿಗೆ ವಿಶಿಷ್ಟ ಪಾತ್ರ ಸಿಕ್ಕಿದೆ. “ನನಗೆ ಮೊದಲಿನಿಂದಲೂ ಬಯೋಪಿಕ್​ನಲ್ಲಿ ನಟಿಸಬೇಕು ಎಂಬ ಆಸೆ ಇತ್ತು. ಅದು ಇಷ್ಟು ಚಿಕ್ಕ ವಯಸ್ಸಿನಲ್ಲೇ ಸಿಗುತ್ತದೆ ಎಂಬ ನಂಬಿಕೆ ಇರಲಿಲ್ಲ. ಚರಣ್​ ಸುವರ್ಣ ಮತ್ತು ಹನಿ ಚೌಧರಿ ನನಗೆ ಸುಮಾರು ಏಳು ವರ್ಷಗಳಿಂದ ಪರಿಚಿತರು. ನನ್ನ ಬಿಸ್ನೆಸ್‌ ಪಾರ್ಟ್ನರ್​ಗಳು ಸಹ. ಕಥೆ ಹೇಳಿದಾಗ ಬಹಳ ಖುಷಿ ಆಯಿತು. ಸರೋಜಿನಿ ಅವರ ಚಿಕ್ಕವಯಸ್ಸಿನ ಪಾತ್ರ ಮಾಡುತ್ತಿದ್ದೇನೆ. ಅವರ ಕಾಲೇಜಿನ ದಿನಗಳು ಮತ್ತು ರಾಜಕೀಯಕ್ಕೆ ಪ್ರವೇಶಿಸುವುದಕ್ಕೆ ಮುಂಚಿನ ಪಾತ್ರ ಮಾಡುತ್ತಿದ್ದೇನೆ” ಎಂದರು ಸೋನಾಲ್‌.

ಧೀರಜ್‌ ಮಿಶ್ರ ಅವರು ಚಿತ್ರಕಥೆ ರಚಿಸುತ್ತಿದ್ದಾರೆ. ಭಾರತದ ರಾಜಕೀಯ, ಸಾಹಿತ್ಯಿಕ ವಲಯದಲ್ಲಿ ಬಹುದೊಡ್ಡ ಹೆಸರು ಸರೋಜಿನಿ ನಾಯ್ಡು. ಅವರ ಕುರಿತು ಸಿನಿಮಾ ಮಾಡುವುದು ನಿಜಕ್ಕೂ ಸವಾಲು. ಸಾಕಷ್ಟು ರೀಸರ್ಚ್‌ ನಡೆಸಿಯೇ ಧೀರಜ್‌ ಚಿತ್ರಕಥೆ ರಚಿಸಿದ್ದಾರೆ. ಸಿನಿಮಾ ಕುರಿತು ಮಾತನಾಡಿದ ಅವರು, “ಕಳೆದ ಎಂಟು ವರ್ಷಗಳಿಂದ ಸರೋಜಿನಿ ಅವರ ಬಗ್ಗೆ ರೀಸರ್ಚ್​ ಮಾಡುತ್ತಿದ್ದೇನೆ. ಅವರು ಆಗಿನ ಕಾಲಕ್ಕೆ ಸ್ಕಾಲರ್​ಸಿಪ್​ ಪಡೆದು, ಲಂಡನ್​ನಲ್ಲಿ ಓದಿದವರು. ಅವರಿಗೆ ಹಲವು ಭಾಷೆಗಳು ಗೊತ್ತಿತ್ತು. ಭಾರತದ ಪ್ರತಿನಿಧಿಯಾಗಿ ಅವರು ಹಲವು ದೇಶಗಳಿಗೆ ಹೋಗಿದ್ದರು. ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು. ಅವರ ಹೋರಾಟ ಎಲ್ಲರಿಗೂ ಗೊತ್ತಾಗಬೇಕು. ಇಲ್ಲಿ ಸರೋಜಿನಿ ಅವರ ಕುರಿತಂತೆ ಬಹಳಷ್ಟು ಜನಕ್ಕೆ ಗೊತ್ತಿರದ ಸಂಗತಿಳನ್ನು ಹೇಳುವುದಕ್ಕೆ ಹೊರಟಿದ್ದೇವೆ. ಆಕೆ ಹೇಗೆ ಸ್ವಾತಂತ್ರ್ಯ ಹೋರಾಟಗಾರ್ತಿಯಾದರು, ಇಂಡಿಯನ್​ ನ್ಯಾಷನಲ್​ ಕಾಂಗ್ರೆಸ್​ನ ಮೊದಲ ಅಧ್ಯಕ್ಷೆ ಹೇಗಾದರೂ ಮುಂತಾದ ಹಲವು ವಿಷಯಗಳನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡುತ್ತಿದ್ದೇವೆ” ಎಂದರು.

ವಿನಯ್‌ ಚಂದ್ರ ಅವರು ನಿರ್ದೇಶನ ಮತ್ತು ಸಂಗೀತ ಸಂಯೋಜನೆಯ ಹೊಣೆಯನ್ನೂ ಹೊತ್ತಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿದ ವಿನಯ್‌ ಚಂದ್ರ, “ಇದೊಂದು ಬಹಳ ಸವಾಲಿನ ಕೆಲಸ. 1890ರ ಕಾಲಘಟ್ಟದಲ್ಲಿನ ಸಂಗೀತವನ್ನು ಕೇಳಿಸಬೇಕು. ಹೊಸ ಸಂಗೀತ ಎಂದನಿಸಬಾರದು. ತಾರಾಗಣ ಇನ್ನೂ ಪೂರ್ತಿಯಾಗಿಲ್ಲ. ಜರೀನಾ ವಹಾಬ್​ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 1878ರಿಂದ 1949ರ ಕಾಲಘಟ್ಟದಲ್ಲಿ ಈ ಚಿತ್ರ ನಡೆಯುತ್ತದೆ. ಬೆಂಗಳೂರು, ಮುಂಬೈ, ಉತ್ತರ ಪ್ರದೇಶದಲ್ಲಿ 50 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಕನ್ನಡ ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿ, ತೆಲುಗು ಮತ್ತು ತಮಿಳಿಗೆ ಡಬ್‌ ಆಗಲಿದೆ. ಸರೋಜಿನಿ ನಾಯ್ಡು ಅವರ ಕುಟುಂಬದ NOC ಸಿಕ್ಕಿದೆ. ಗೋಪಾಲಕೃಷ್ಣ ಗೋಖಲೆ ಅವರ ಪಾತ್ರವನ್ನು ರಂಗಾಯಣ ರಘು ಅವರಿಂದ ಮಾಡಿಸಬೇಕೆಂಬ ಆಸೆ ಇದೆ. ಜೂನ್​ ಮೊದಲ ವಾರದಲ್ಲಿ ಚಿತ್ರೀಕರಣ ಆರಂಭವಾಗಲಿದೆ” ಎಂದರು.

LEAVE A REPLY

Connect with

Please enter your comment!
Please enter your name here