ಒಂದೇ ಗುಕ್ಕಿಗೆ ನೋಡಿಬಿಡಬಹುದಾದ ಸರಣಿ ಇದಲ್ಲ. ಹಾಗೆ ಧಾವಂತದಲ್ಲಿ ನೋಡಬೇಕಾಗೂ ಇಲ್ಲ. ದಿನದ ಕೆಲಸಗಳೆಲ್ಲ ಮುಗಿದ ಮೇಲೆ ದಿನಕ್ಕೊಂದು ಗಂಟೆ ನೋಡುತ್ತಾ ಹತ್ತು ದಿನಗಳನ್ನು ಮರಡೋನಾ ಜತೆಗೆ ಕಳೆಯಬಹುದು. ಹತ್ತು ಎಪಿಸೋಡುಗಳ ಸರಣಿ ಅಮೇಜಾನ್ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮ್ ಆಗುತ್ತಿದೆ.
ಈ ಸೀರಿಸ್ ಬಗ್ಗೆ ಬರೆಯುವ ಆರಂಭದಲ್ಲೇ ಒಂದು ನಿಬಂಧನೆ ವಿಧಿಸುವ ಅಗತ್ಯವಿದೆ. ಈ ವೆಬ್ ಸರಣಿಯನ್ನು ನೋಡಬೇಕಿದ್ದರೆ ನೀವು ಫುಟ್ಬಾಲ್ ಆಟದ ಪ್ರೇಮಿಯಾಗಿರಬೇಕು. ಒಂದುವೇಳೆ ಅಷ್ಟಾಗಿ ಈ ಕ್ರೀಡೆಯ ಜ್ಞಾನವಿಲ್ಲದೇ ನೋಡಿದರೆ ನಿಮಗೆ ಫುಟ್ಬಾಲ್ ಬಗ್ಗೆ ಆಸಕ್ತಿ ಹುಟ್ಟುವ ಅಪಾಯವಿದೆ!
ಆತ ಹದಿನಾರರ ಹರೆಯದಲ್ಲೇ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಆದವ. ಭಾರತೀಯರ ದೃಷ್ಟಿಕೋನದಿಂದ ನೋಡಿದರೆ ಆತ ಫುಟ್ಬಾಲ್ ಜಗತ್ತಿನ ಸಚಿನ್ ತೆಂಡೂಲ್ಕರ್. ಅಷ್ಟುಮಾತ್ರ ಹೇಳಿಬಿಟ್ಟರೆ ಅದು ತೆಂಡೂಲ್ಕರ್ ಪಾಲಿಗೆ ನ್ಯಾಯಯುತವಲ್ಲ. ಏಕೆಂದರೆ ಆತ ಫುಟ್ಬಾಲ್ ಜಗದ ವಿನೋದ್ ಕಾಂಬ್ಳಿಯೂ ಆಗಿದ್ದ. ಅವನೇ ಡೀಗೋ ಅರ್ಮಾಂಡೋ ಮರಡೋನ – ಫುಟ್ಬಾಲ್ ಲೋಕದ ಸಾರ್ವಕಾಲಿಕ ಶ್ರೇಷ್ಠ ಮತ್ತು ಅಷ್ಟೇ ರಂಗುರಂಗಿನ ವ್ಯಕ್ತಿತ್ವದ ಆಟಗಾರ.
ನಿಮಗೆ ಗೊತ್ತಿರಬಹುದು, ಫುಟ್ಬಾಲ್ ಪ್ರಪಂಚ ಕ್ರಿಕೆಟ್ ಜಗತ್ತಿಗಿಂತ ದೊಡ್ಡದು. ಹಾಗೆಯೇ ಅಲ್ಲಿನ ಹಗರಣಗಳು ಕೂಡ. ಅಲ್ಲಿನ ಜಗಳಗಳು ಕೊಹ್ಲಿ-ಗಂಗೂಲಿ ಜಗಳಕ್ಕಿಂತ ವರ್ಣಮಯ. ಅಂತೆಯೇ ಅಲ್ಲಿನ ಗಾಸಿಪ್‌ಗಳು. ಅದರಲ್ಲೂ ಮರಡೋನ ಪುಟ್ಟ ವಯಸ್ಸಿಗೇ ಮಾಧ್ಯಮಗಳ ಅಲೆಗೆ ಸಿಕ್ಕಾತ. ಬೆಳೆಯುತ್ತಾ ಆತನ ಖ್ಯಾತಿಯ ಜತೆಗೆ ಬಿರುಸಿನ ಹೇಳಿಕೆ ನೀಡುವ ಸ್ವಭಾವ ಮತ್ತು ಯಥೇಚ್ಛ ಉಪ್ಪು-ಹುಳಿ-ಖಾರ ಮಿಶ್ರಿತ ಜೀವನ ಶೈಲಿ ಸುದ್ದಿ ಮಾಧ್ಯಮಗಳಿಗೆ ಹೇರಳ ಆಹಾರ ಒದಗಿಸಿದವು.
ಅಮೆಝಾನ್ ಪ್ರೈಮ್‌ನಲ್ಲಿ ನೋಡಬಹುದಾದ ‘ಮರಡೋನಾ: ಬ್ಲೆಸ್ಡ್ ಡ್ರೀಮ್’ ಶುರುವಾಗುವುದೇ ಆತನ ನಲುವತ್ತರ ಹೊಸ್ತಿಲಲ್ಲಿ. ತನ್ನ ಕಡಲ ತೀರದ ಬಂಗಲೆಯಲ್ಲಿ ಮಾದಕ ಪದಾರ್ಥ ಸೇವಿಸಿ ಉನ್ಮತ್ತ ಸ್ಥಿತಿಯಲ್ಲಿ ಕುಸಿದು ಬೀಳುವ ಮರಡೋನಾ ಸಾವು-ಬದುಕಿನ ಮಧ್ಯರೇಖೆಯಲ್ಲಿ ಆಸ್ಪತ್ರೆಯಲ್ಲಿ ಮಲಗಿದ್ದರೆ ಇತ್ತ ಕಡೆಯಿಂದ ಆತನ ಬಾಲ್ಯದಿಂದ ಕತೆ ಬಿಚ್ಚಿಕೊಳ್ಳಲು ಆರಂಭ. ದಕ್ಷಿಣ ಅಮೆರಿಕದ ತೀರ ರಾಷ್ಟ್ರ ಅರ್ಜೆಂಟೀನಾದ ಪುಟ್ಟ ಸ್ಲಮ್‌ನಲ್ಲಿ ಹುಟ್ಟಿದ ಮರಡೋನ ಹುಟ್ಟಾ ಫುಟ್ಬಾಲ್ ಪ್ರತಿಭೆ. ಗೆಳೆಯನ ಸಹಾಯದಿಂದ ಅಚಾನಕ್ಕಾಗಿ ಫುಟ್ಬಾಲ್ ಕ್ಲಬ್‌ನ ಸಂಪರ್ಕಕ್ಕೆ ಬರುತ್ತಾನೆ. ಎಂಟು ವರ್ಷ ಪ್ರಾಯದಲ್ಲೇ ಆತನ ಆಟದ ಮೋಡಿ ಅವನಿಗೆ ಹೆಸರು ತರುತ್ತದೆ. ಚೆಂಡು ಅವನ ಕಾಲಿಗೆ ಒಮ್ಮೆ ತಗುಲಿದರೆ ಅದು ಬಿಡುಗಡೆ ಕಾಣುತ್ತಿದ್ದುದೇ ಗೋಲ್ ಕಂಬಗಳ ಒಳಗೆ ಹೊಕ್ಕ ಮೇಲೆ. ಮುಂದೊಂದು ದಿನ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವ ಆಟಗಾರ ಎಂದು ಮಾಧ್ಯಮದಲ್ಲಿ ಸುದ್ದಿಯಾಗುವ ಮಟ್ಟಕ್ಕೆ ಮರಡೋನಾ ಜೂನಿಯರ್ ಕ್ಲಬ್ ಮಟ್ಟದಲ್ಲಿ ಮಿಂಚುತ್ತಾನೆ. ಮಿಲಿಟರಿ ಸರ್ವಾಧಿಕಾರದ ಕರಿನೆರಳಲ್ಲಿ ಅರ್ಜೆಂಟೀನಾದಲ್ಲಿ ಭರವಸೆದಾಯಕವಾಗಿ ಇದ್ದ ಏಕೈಕ ಸಂಗತಿ ಫುಟ್ಬಾಲ್ ಎಂಬುದನ್ನು ಮರಡೋನಾ ಸರಣಿಯ ಮೊದಲ ಎರಡು ಕಂತು ಪರಿಣಾಮಕಾರಿಯಾಗಿ ತೋರಿಸಿವೆ.
ಬಾರ್ಸಿಲೋನಾ ಫುಟ್ಬಾಲ್ ಕ್ಲಬ್‌ಗೆ ಸೇರ್ಪಡೆಯಾದ ಮೇಲೆ ಮರಡೋನಾಗೆ ಯುರೋಪಿನಾದ್ಯಂತ ಅಭಿಮಾನಿಗಳು ಹುಟ್ಟಿಕೊಳ್ಳುತ್ತಾರೆ. ಇದು ಒಂದೆಡೆ ಆತನಿಗೆ ಅಪಾರ ಸಂಪತ್ತು ತಂದುಕೊಟ್ಟರೆ ಮತ್ತೊಂದೆಡೆ ಟ್ಯಾಬ್ಲಾಯ್ಡ್‌ಗಳಿಂದ ತುಂಬಿರುವ ಯುರೋಪ್‌ನ ಸುದ್ದಿ ಮಾರುಕಟ್ಟೆಗೆ ಆತನೇ ಆಹಾರವಾಗುತ್ತಾನೆ. ಈ ಸನ್ನಿವೇಶಗಳಲ್ಲೆಲ್ಲ ಚಿತ್ರ ತಯಾರಕರು ಮೂಲ ದೃಶ್ಯಗಳನ್ನು ಅಲ್ಲಲ್ಲಿ ಬಳಸಿರುವ ರೀತಿ ಚೆನ್ನಾಗಿದೆ. ಮೂಲ ಮತ್ತು ಮರುಸೃಷ್ಟಿ ನಡುವೆ ಅಂತರವೇ ಇಲ್ಲದಷ್ಟು ನೈಜವಾಗಿದೆ ಚಿತ್ರಣ.
ಪಾಶ್ಚಿಮಾತ್ಯ ದೇಶಗಳಲ್ಲಿ ಒಬ್ಬರಂತೆಯೇ ಇಬ್ಬಿಬ್ಬರು ಇರುತ್ತಾರೋ ಅಥವಾ ನಮ್ಮ ಕಣ್ಣಿಗೆ ಅವರು ಒಂದೇ ರೀತಿ ಕಾಣುತ್ತಾರೋ ಗೊತ್ತಿಲ್ಲ. ಆದರೆ ಪಾಶ್ಚಾತ್ಯ ಸೀರೀಸುಗಳಲ್ಲಿ ಮೂಲ ವ್ಯಕ್ತಿಗಳನ್ನೇ ಹೋಲುವ ಪಾತ್ರಧಾರಿಗಳನ್ನು ಅದೆಲ್ಲಿಂದ ಹೊತ್ತು ತರುತ್ತಾರೋ ಎಂದು ಅಚ್ಚರಿಯಾಗುತ್ತದೆ. ಕ್ರೀಡಾಂಗಣದಲ್ಲಿ ಆತ ಕೂತಾಗ ಪಟಪಟನೆ ಕಾಲು ಕುಲುಕಿಸುವುದು, ಓಡಿ ಗೋಲು ಹೊಡೆಯುವುದು, ಮಾಧ್ಯಮಗಳ ಜತೆ ಮಾತನಾಡುವಾಗಿನ ಅವನ ನೋಟ – ಇಂಥಲ್ಲೆಲ್ಲ ಅಸಲಿ ಮರಡೋನಾಗೂ, ಪಾತ್ರಧಾರಿಗೂ ವ್ಯತ್ಯಾಸ ಕಂಡುಹಿಡಿಯುವುದು ಕಷ್ಟ. ವಿವಿಧ ವಯೋಮಾನದ ಮರಡೋನಾ ಪಾತ್ರವನ್ನು ಮೂವರು ನಿರ್ವಹಿಸಿದ್ದಾರೆ. ಫುವಾನ್ ಪಾಲೋಮೀನೋ, ನಝ಼ರೇನೋ ಕೆಸೇರೋ ಮತ್ತು ನಿಕೊಲಾಸ್ ಗೋಲ್ಡ್‌ಸ್ಮಿತ್ ಥೇಟ್ ಮರಡೋನಾರಂತೆಯೇ ಕಾಣುತ್ತಾರೆ.
ವಾಚ್ ಕಂಪನಿ ಜಾಹೀರಾತು ಬೇರೊಬ್ಬ ಆಟಗಾರನ ಪಾಲಾಗಿದ್ದಕ್ಕೆ ಮರಡೋನಾ ಕಿರಿಕಿರಿಗೊಳ್ಳುತ್ತಾನೆ. ಆ ಜಾಹೀರಾತು ಮತ್ತಷ್ಟು ಖ್ಯಾತಿ ತಂದುಕೊಡುತ್ತಿತ್ತು ಎಂದಲ್ಲ, ಮತ್ತಷ್ಟು ಜೇಬು ತುಂಬಿಸುತ್ತಿತ್ತು ಎಂಬ ಕಾರಣಕ್ಕೆ. ಕಡುಬಡತನದ ಹಿನ್ನೆಲೆಯಿಂದ ಬಂದಿದ್ದರೂ ಮರಡೋನಾಗೆ ಕೋಟಿ ಕೋಟಿ ದುಡಿಮೆಯೂ ಸಾಕಾಗದಷ್ಟು ಖರ್ಚಿಗೆ ದಾರಿ ಮಾಡಿಕೊಂಡಿದ್ದ ಎಂಬುದನ್ನು ಈ ದೃಶ್ಯದಲ್ಲಿ ಪರಿಣಾಮಕಾರಿಯಾಗಿ ಕಟ್ಟಿಕೊಡಲಾಗಿದೆ. ಹಾಗೆಯೇ ಪೀಲೆ-ಮರಡೋನಾ ಇಬ್ಬರಲ್ಲಿ ಶ್ರೇಷ್ಠ ಆಟಗಾರ ಯಾರು ಎಂಬುದನ್ನೂ ಸಿನಿಮೀಯ ನ್ಯಾಯದ ದೃಶ್ಯದಲ್ಲಿ ಸೊಗಸಾಗಿ ತೋರಿಸಲಾಗಿದೆ.
ಬಾರ್ಸಿಲೋನಾಕ್ಕೆ ಆಯ್ಕೆಯಾಗಿ ಪ್ರಥಮ ಬಾರಿ ಸ್ಪೇನ್‌ಗೆ ಹೋದಾಗ ಅಲ್ಲಿನ ಐಷಾರಾಮಿ ಕಾರು ಮರಡೋನ ಸೇರಿದಂತೆ ಅವನ ಸಂಗಡಿಗರಿಗೂ ವಿಶೇಷ ಅನುಭವ, ವಿಮಾನ ನಿಲ್ದಾಣದಲ್ಲೇ ಅದರ ಜತೆಗೆ ನಿಂತು ಫೋಟೋ ತೆಗೆಸಿಕೊಳ್ಳುತ್ತಾರೆ. ‘ಈ ದಕ್ಷಿಣ ಅಮೆರಿಕದವರು ತೀರಾ ಅನಾಗರೀಕರು’ ಎಂದು ತಂಡದ ಅಧ್ಯಕ್ಷ ಆ ಹೊತ್ತಿಗೆ ಆಡಿಕೊಳ್ಳುವ ಮಾತು ಐರೋಪ್ಯರ ಅಹಂಕಾರ ಮತ್ತು ಬೇರೆಲ್ಲಾ ದೇಶಗಳ ಬಗ್ಗೆ ಅವರಿಗಿರುವ ತಾತ್ಸಾರದ ಪ್ರತಿರೂಪ.
ನಮಗೆ ಐಪಿಎಲ್ – ಲಲಿತ್ ಮೋದಿ ಹಗರಣಗಳ ಬಗೆಗಷ್ಟೇ ಕೇಳಿ ಗೊತ್ತು. ಆದರೆ ಫುಟ್ಬಾಲ್ ದುನಿಯಾದಲ್ಲಿ ಭೂಮಿ ಮೇಲಿನ ತಿಮಿಂಗಿಲಗಳಿವೆ, ಭೂಗತ ಜಗತ್ತಿನ ದೊರೆಗಳಿದ್ದಾರೆ. ಸ್ಪೇನಿನ ಬಾರ್ಸಿಲೋನಾ ಕ್ಲಬ್ ಬಿಟ್ಟು ಇಟಲಿಯ ನಾಪೊಲಿ ಕ್ಲಬ್‌ಗೆ ಮರಡೋನಾ ಸೇರುವ ವೇಳೆಗೆ ನೋಡುಗರಿಗೆ ಈ ವಿಚಾರ ಸ್ಪಷ್ಟವಾಗುತ್ತದೆ. ಜತೆಗೆ ಅಭಿವೃದ್ಧಿ ಹೊಂದಿದ, ಸಮಾನತೆ ಬಗ್ಗೆ ಬೊಬ್ಬೆ ಹೊಡೆಯುವ ರಾಷ್ಟ್ರಗಳು ಅದ್ಯಾವ ಮಟ್ಟದಲ್ಲಿ ಜನಾಂಗೀಯ ನಿಂದನೆ ಮತ್ತು ತಾರತಮ್ಯವನ್ನು ಹೊದ್ದುಕೊಂಡಿದೆ ಎಂಬುದನ್ನು ತಿಳಿಯಲು ಈ ಸರಣಿ ನೋಡಬೇಕು.
ಜೀವನ ಚರಿತ್ರೆ ತೋರಿಸುವ ಇಂಥ ಸರಣಿಗಳಲ್ಲಿ ಹೆಚ್ಚಾಗಿ ಹಿನ್ನೆಲೆ ಧ್ವನಿ ಅಲ್ಲಲ್ಲಿ ಕತೆಯನ್ನು ಮುಂದಕ್ಕೊಯ್ಯುತ್ತದೆ. ಆದರೆ ಇಲ್ಲಿ ಮೊದಲ ಆರೂ ಎಪಿಸೋಡುಗಳಲ್ಲಿ ಅಷ್ಟೂ ಕತೆಯನ್ನು ದೃಶ್ಯಗಳ ಮೂಲಕವೇ ಕಟ್ಟಿಟ್ಟಿರುವುದು ನಿರ್ದೇಶಕನ ಪ್ರತಿಭೆ. ಏಳನೇ ಅಧ್ಯಾಯದಿಂದ ಇದು ಬದಲಾಗುತ್ತದೆ, ಮರಡೋನಾ ಕೂಡ. ಮದ, ಮದಿರೆ, ಮಾನಿನಿಯರ ಸಂಘ ಅವನನ್ನು ಸಂಪೂರ್ಣ ಆವರಿಸುವುದು ಇದೇ ಘಟ್ಟದಲ್ಲಿ. ತಂದೆ-ತಾಯಿ ಹೊರತುಪಡಿಸಿ ಸ್ನೇಹಿತರು, ಮ್ಯಾನೇಜರು, ಗರ್ಲ್ ಫ್ರೆಂಡುಗಳು ಎಲ್ಲರನ್ನೂ ಕಾಲಕಾಲಕ್ಕೆ ಬದಲು ಮಾಡಿದ ಮರಡೋನಾ ಫುಟ್ಬಾಲಿನಷ್ಟೇ ಚಂಚಲ, ನಿಂತಲ್ಲಿ ನಿಲ್ಲಲಾರ. ಈ ಸೀರೀಸ್ ಫುಟ್ಬಾಲ್ ಬಗ್ಗೆ ಹೇಳುತ್ತಾ ಸಾಗಿದಂತೆಯೇ ಮರಾಡೋನಾನ ತಿಕ್ಕಲುತನಗಳನ್ನು, ಹೈ ಪ್ರೊಫೈಲ್ ಪೆಡ್ಲರುಗಳನ್ನೂ, ಅವರ ಉನ್ನತ ಮಟ್ಟದ ಸಂಪರ್ಕಗಳನ್ನೂ ತಿಳಿಸುತ್ತದೆ. ಮರಡೋನಾ ತನ್ನ ವ್ಯಸನಗಳ ಸುಳಿಯೊಳಗೆ ಸಿಲುಕುವುದನ್ನು ವಿವರವಾಗಿ ತೋರಿಸುವ ಕೊನೆಯ ಮೂರು ಎಪಿಸೋಡುಗಳನ್ನು ನೋಡುವಾಗ ವಿಷಾದ ಆವರಿಸದಿರದು.
ಚಿತ್ರಕಥೆ ನಿಟ್ಟಿನಲ್ಲಿ ಇದು ವೇಗವಾಗಿ ಓಡುವ ಸರಣಿಯಲ್ಲ. ಒಂದು ಗಂಟೆ ಕಾಲದ ಪ್ರತಿ ಎಪಿಸೋಡೂ ಮರಾಡೋನಾ ಜೀವನದ ಒಂದೊಂದು ಹಂತವನ್ನು ತೆರೆದಿಡುತ್ತದೆ. ಹಾಗೆಂದು ಪ್ರತಿ ಕಂತೂ ಕುತೂಹಲಕರ ಘಟ್ಟದಲ್ಲಿ ನಿಲ್ಲುವುದಿಲ್ಲ. ಹಾಗಾಗಿ ಒಂದೇ ಗುಕ್ಕಿಗೆ ನೋಡಿಬಿಡಬಹುದಾದ ಸರಣಿ ಇದಲ್ಲ. ಹಾಗೆ ಧಾವಂತದಲ್ಲಿ ನೋಡಬೇಕಾಗೂ ಇಲ್ಲ. ದಿನದ ಕೆಲಸಗಳೆಲ್ಲ ಮುಗಿದ ಮೇಲೆ ದಿನಕ್ಕೊಂದು ಗಂಟೆ ನೋಡುತ್ತಾ ಹತ್ತು ದಿನಗಳನ್ನು ಮರಡೋನಾ ಜತೆಗೆ ಕಳೆಯಬಹುದಾದ ಸರಣಿಯಿದು. ಪ್ರತಿ ಅಧ್ಯಾಯದ ಕೊನೆಗೆ ಒಂದಷ್ಟು ಯೋಚನೆಗಳು ಕಾಡುತ್ತವೆ. ಅದೇ ಹೊತ್ತಿಗೆ “ತೊರೊ ತೊತ್ತೊರೋ ಗುರುಸ್ತಾವೋ” ಎಂದಷ್ಟೇ ನಮ್ಮ ಕಿವಿಗಳಿಗೆ ಅರ್ಥವಾಗುವ ಸ್ಪ್ಯಾನಿಷ್ ಹಾಡುಗಳನ್ನು ಕಿವಿಗೊಟ್ಟು ಕೇಳಿಸಬೇಕು ಅನಿಸುತ್ತದೆ.
ಅಮೆಝಾನ್ ಪ್ರೈಮ್‌ನಲ್ಲಿ ಬಿತ್ತರವಾಗುತ್ತಿರುವ, ಅಲೆಜಾಂದ್ರೋ ಐಮೆಟ್ಟಾ ನಿರ್ದೇಶನದ ಈ ಸರಣಿ ಮರಡೋನಾ ಬದುಕಿನ ಅರ್ಧಭಾಗ ಸೆರೆಹಿಡಿದಿದೆ. ಉಳಿದ ಅರ್ಧಕ್ಕೆ ಸೀಸನ್ 2ಗೆ ಕಾಯಬೇಕು.