ಪ್ರಗತಿಪರ ಆಲೋಚನೆಯ ಕೆ.ವಿ.ರಾಜು ಸಿನಿಮಾಗಳ ಕತೆ, ಸಂಭಾಷಣೆಗಳ ಮೂಲಕ ತಮ್ಮ ಚಿಂತನೆಗಳನ್ನು ಪ್ರೇಕ್ಷಕರಿಗೆ ದಾಟಿಸಿದವರು. ದೀರ್ಘಕಾಲದ ಆನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಚಿತ್ರನಿರ್ದೇಶಕ, ಬರಹಗಾರ ಕೆ.ವಿ.ರಾಜು (67 ವರ್ಷ) ಇಂದು ಅಗಲಿದ್ದಾರೆ. ಕನ್ನಡ ಚಿತ್ರರಂಗ ಕಂಡ ಸದಭಿರುಚಿಯ ನಿರ್ದೇಶಕ ಕೆ.ವಿ.ಜಯರಾಂ ಅವರ ಕಿರಿಯ ಸಹೋದರ ಕೆ.ವಿ.ರಾಜು. ಅಣ್ಣ ಜಯರಾಂ ನಿರ್ದೇಶನದ ‘ಬಾಡದ ಹೂವು’ (1982) ಚಿತ್ರದಲ್ಲಿ ಬರಹಗಾರರಾಗಿ, ಸಹಾಯಕ ನಿರ್ದೇಶಕರಾಗಿ ರಾಜು ಸಿನಿಮಾ ಪ್ರವೇಶಿಸಿದರು. ಅವರು ಸ್ವತಂತ್ರ್ಯ ನಿರ್ದೇಶಕರಾಗಿ ಕೆಲಸ ಮಾಡಿದ ‘ಕೂಗು’ ಕಾರಣಾಂತರಗಳಿಂದ ತೆರೆಕಾಣಲಿಲ್ಲ. ಬೆಳ್ಳಿಮೋಡ, ಇಂದ್ರಜಿತ್‌, ಬೆಳ್ಳಿ ಕಾಲುಂಗುರ, ನವಭಾರತ, ಪೊಲೀಸ್‌ ಲಾಕಪ್‌, ಯುದ್ಧಕಾಂಡ, ಕದನ, ರಾಷ್ಟ್ರಗೀತೆ, ಹುಲಿಯಾ ಸೇರಿದಂತೆ 25ಕ್ಕೂ ಹೆಚ್ಚು ಚಿತ್ರಗಳನ್ನು ರಾಜು ನಿರ್ದೇಶಿಸಿದ್ದಾರೆ. ‘ಇಂದ್ರಜಿತ್‌’ (1991, ಅಮಿತಾಭ್‌ ಬಚ್ಚನ್‌, ಜಯಪ್ರದಾ) ಮತ್ತು ‘ಉಧಾರ್‌ ಕೆ ಜಿಂದಗಿ’ (ಜಿತೇಂದ್ರ) ಅವರ ನಿರ್ದೇಶನದ ಹಿಂದಿ ಸಿನಿಮಾಗಳು.

ತೊಂಬತ್ತರ ದಶಕದ ಹಲವು ಸಿನಿಮಾಗಳಲ್ಲಿ ತಮ್ಮ ಸಂಭಾಷಣೆಗಳಿಂದಲೇ ಅವರು ಹೆಸರಾಗಿದ್ದರು. ಭ್ರಷ್ಟಾಚಾರ, ಅಸಮಾನತೆ, ಶೋಷಣೆ ಹಿನ್ನೆಲೆಯ ಕಥಾವಸ್ತುಗಳನ್ನು ತೆರೆಗೆ ಅಳವಡಿಸಲು ಪ್ರಯತ್ನಿಸಿದ ನಿರ್ದೇಶಕ, ಬರಹಗಾರ. ನೇರ ಮಾತಿನ ರಾಜು ತಮ್ಮ ಬರಹದಲ್ಲೂ ಈ ದಿಟ್ಟತನ ಕಾಯ್ದುಕೊಂಡಿದ್ದವರು. ನಿರ್ದೇಶನಕ್ಕಿಂತ ಹೆಚ್ಚಾಗಿ ಅವರು ಇತರೆ ನಿರ್ದೇಶಕರ ಸಿನಿಮಾಗಳಿಗೆ ಸಂಭಾಷಣೆ, ಚಿತ್ರಕಥೆ ಬರೆದದ್ದೇ ಹೆಚ್ಚು. ಐವತ್ತಕ್ಕೂ ಹೆಚ್ಚು ಚಿತ್ರಗಳಿಗೆ ಬರಹಗಾರರಾಗಿ ಕೆಲಸ ಮಾಡಿದ್ದಾರೆ. ಸಂಕಲನದಲ್ಲೂ ಅವರಿಗೆ ಅಪಾರ ಪರಿಣತಿಯಿತ್ತು. ಬರವಣಿಗೆ ತಮಗೆ ಖುಷಿ ಕೊಡುತ್ತದೆ ಎಂದು ಅವರು ಹೇಳಿಕೊಂಡಿದ್ದಿದೆ. ಅವರಿಗೆ ಸಹಾಯಕರಾಗಿ ಕೆಲಸ ಮಾಡಿರುವ ಹತ್ತಾರು ತಂತ್ರಜ್ಞರು ಹಾಗೂ ಬರಹಗಾರರು ಪ್ರಸ್ತುತ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಹಿಂದೆ ತಮಗೆ ಸಹಾಯಕರಾಗಿದ್ದವರ ನಿರ್ದೇಶನದ ಸಿನಿಮಾಗಳಿಗೆ ಸಂಭಾಷಣೆ ರಚಿಸುತ್ತಾ ಬಂದಿದ್ದರು. ಕೆ.ವಿ.ರಾಜು ಅವರಿಗೆ ಪ್ರತಿಷ್ಠಿತ ‘ಪುಟ್ಟಣ್ಣ ಕಣಗಾಲ್‌ ಪ್ರಶಸ್ತಿ’ ಸಂದಿದೆ. ರಾಜು ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಂತಾಪ ಸೂಚಿಸಿದೆ.

ಚಿತ್ರನಿರ್ದೇಶಕ ಬಿ.ಎಂ.ಗಿರಿರಾಜ್‌ ಅವರು ಕೆ.ವಿ.ರಾಜು ಅವರಿಗೆ ಸಲ್ಲಿಸಿದ ಅಕ್ಷರ ನಮನ –

“ಸತ್ತಂತಿಹರನು ಬಡಿದೆಚ್ಚರಿಸು ಅನ್ನೊ ಕುವೆಂಪು ಅವರ ಘೋಷ ವಾಕ್ಯವನ್ನು ಯಾರಾದರೂ ಅಂತರ್ಗತ ಮಾಡ್ಕೊಂಡು ಬದುಕಿದ್ದು ನಾನು ನೋಡಿದ್ದು ಕೆ.ವಿ.ರಾಜು ಸರ್ ಅಲ್ಲಿ ಮಾತ್ರ. ಯಾರೇ ಆದರೂ ಅವರ ಜೊತೆ ಅರ್ಧ ಗಂಟೆ ಆಪ್ತವಾಗಿ ಮಾತಾಡಿದ್ದಿದ್ದರೆ, ಸುಮ್ಮನೆ ಕೂತ್ಕೊಳಕ್ಕಾಗ್ತಿರಲಿಲ್ಲ. ಏನಾದರು ಮಾಡಬೇಕು ಅಂತ ಎದ್ದು ನಿಲ್ಲುತ್ತಿದ್ದರು. ಅವರ ಸಿನಿಮಾಗಳಂತೆ ಅವರ ವ್ಯಕ್ತಿತ್ವವೂ ಡೈನಮಿಕ್ ಆಗೇ ಇತ್ತು. ಸಮಾಜದ ಶೊಷಣೆಯ ಬಗ್ಗೆ ಜ್ವಾಲಾಮುಖಿಯಷ್ಟು ಸಿಟ್ಟಿತ್ತು. ಸಂದರ್ಶನ‌ ಕೊಡುವುದಕ್ಕೂ ಒಪ್ತಾ ಇರದಿದ್ದ ಸರ್‌ಗೆ ರಾಜ್ಯ ಪ್ರಶಸ್ತಿ ಕೊಡ್ತೀವಿ ಅಂದಾಗ “ಏಯ್ ಹೋಗ್ರೊ. ನನಗೂ ಅವಾರ್ಡ್‌ ಕೊಡ್ತಾರೆ. ಹಿಪಾಕ್ರೈಟ್‌ಗಳಿಗೂ ಅವಾರ್ಡ್‌ ಕೊಡ್ತಾರೆ. ಅವಾರ್ಡಿಗೆ ಮರ್ಯಾದೆ ಇಲ್ಲದಿದ್ದರೂ ನನಗೆ ಮರ್ಯಾದೆ ಇಲ್ವ” ಅಂತ ಎಂದಿನಂತೆ ಎಲ್ಲರನ್ನೂ ಬಯ್ತಾ ತಗಳಲ್ಲ ಅಂದರು. ಆಪ್ತರು, ಶಿಷ್ಯಂದಿರು ಹೋಗಿ ಎಮೋಷನಲ್ ಬ್ಲಾಕ್‌ಮೇಲ್ ಮಾಡಿ ಅವಾರ್ಡ್‌ ತಗೊಳ್ಳೊ ಹಾಗೆ ಮಾಡಿದರು. ಮನೆಗೆ ಮುಟ್ಟುವಷ್ಟರಲ್ಲಿ ಎಲ್ಲೋ ಅದನ್ನ ಕಳ್ಕೊಂಡರು ಅಂತ ಸುದ್ದಿಯಾಯ್ತು. ಕೊನೆಗೆ, ಇಲ್ಲ ಮನೆಯವರೇ ಜೋಪಾನವಾಗಿಟ್ಟುಕೊಂಡಿದ್ದಾರೆ ಅಂತ ಗೊತ್ತಾಯ್ತು.

ನನ್ನ ಸಿನಿಮಾಗಳನ್ನೆಲ್ಲ‌ ನೋಡಿ, ನನ್ನನ್ನು ಕರೆದು ‘ಈ ಶಾಟ್ ಹಿಂಗೆ ತೆಗಿಬೇಕಿತ್ತು’ ಅಂತೆಲ್ಲ ನನ್ನ ತಪ್ಪುಗಳನ್ನೆಲ್ಲ ನನಗೆ‌ ಹೇಳುತ್ತಿದ್ದರು. ಮರುಕ್ಷಣವೇ ಯಾರಾದರೂ ಬಂದರೆ ‘ಇವನೊಂದು ಸಿನಿಮಾ ಮಾಡಿದ್ದಾನೆ ನೋಡಿದ್ಯ? ಇಲ್ವ! ನೇಣು ಹಾಕ್ಕೊಂಡು ಸಾಯಿ’ ಅಂತ ಅವರನ್ನ ಬಯ್ದಿದ್ದು ನೋಡಿದ್ದೀನಿ. ಕೆಲವರು ಫೋನ್ ಮಾಡಿ ರಾಜು ಸರ್ ನಿಮ್ಮ ಬಗ್ಗೆ ಹೊಗಳ್ತಾ ಇದ್ದರು ಅಂತ ಅಂತಿದ್ದರು. ಆದರೆ ಅವರು ಮಾತ್ರ ಎದುರು ಸಿಕ್ಕಿದಾಗೆಲ್ಲ ‘ಅದೇನೊ ಸಿನಿಮಾನ ಹಾಗೆ ತೆಗೆದಿದಿಯಾ’ ಅಂತಲೇ ಬಯ್ಯುತ್ತಿದ್ದರು. ನಾನವರ ಶಿಷ್ಯ ಅಂತ ಅವರೆಲ್ಲೂ ಹೇಳಿಲ್ಲ. ಅದಕ್ಕೆ ಅವರೇ ಹೇಳಿದ್ದು ‘ಶಿಷ್ಯ ಆದರೆ ಒಂದಾ ನಾನೇ ನಿನ್ನ ಬೆರಳು ಕೇಳ್ತಿನಿ, ಇಲ್ಲ ನೀನೇ ಧರ್ಮರಾಯನ ತರಹ ಸುಳ್ಳು ಹೇಳಿ ನನ್ನ ತಲೆ‌ ತೆಗಿತೀಯ. ಒಳ್ಳೆಯ ಡೈರೆಕ್ಟರ್ ಆಗು’ ಅಂತಷ್ಟೇ ಹೇಳಿದರು. ಅವರು ಒಪ್ಪದೇ ಇದ್ದರೂ, 80ರ ದಶಕದಲ್ಲಿ ಹುಟ್ಟಿ ಕನ್ನಡ ಸಿನಿಮಾ ನೋಡಿ ಬೆಳೆದು ಇವತ್ತು ಇಂಡಸ್ಟ್ರಿಯಲ್ಲಿ ಸಕ್ರೀಯರಾಗಿರುವ ಅರ್ಧಕರ್ಧ ಜನ ಅವರನ್ನ ಮಾನಸಗುರು ಅಂತಲೇ ಒಪ್ಕೋತಾರೆ.

‘ಕನ್ನಡಿಗ’ ನೋಡಿ ಸರ್ ಅಂತ ಹೇಳಲು ಕಾಲ್ ಮಾಡಿದ್ದೆ. ಎತ್ತುತ್ತಾ ಇರಲಿಲ್ಲ. ಈಗ ಸಾವಿನ ಸುದ್ದಿ ಬಂದಿದೆ. ಅವರನ್ನ ನೆನೆಸಿಕೊಂಡರೇ ಸಾಕು, ಮೈ ಎಲ್ಲ ಮಿಂಚಿನ ಸಂಚಾರವಾಗತ್ತೆ. ಒಮ್ಮೆ ಅಮಿತಾಭ್‌ ಬಚ್ಚನ್‌ ಅವರನ್ನ ಡೈರೆಕ್ಟ್ ಮಾಡಬೇಕಾದರೆ ಒಂದು ದಿನ ಹೇಳಿದ್ದ ಟೈಮಿಗೆ ಅಮಿತಾಭ್ ಅವರು ಬಂದಿರಲಿಲ್ಲ. ಸಾಮಾನ್ಯವಾಗಿ ಎಂದೂ ತಡ ಮಾಡದವರು ಅವತ್ತು ಎರಡು ತಾಸು ತಡ ಮಾಡಿದ್ದರಂತೆ. ಆಗ ಅವರ ಅಸಿಸ್ಟೆಂಟ್ ಒಬ್ಬ ಅವರ ಗಾಡಿ ಬಂದಿದ್ದನ್ನ ನೋಡಿ, ‘ಸಾಬ್‌ ಆಗಯೇ, ಸಾಬ್‌ ಆಗಯೇ’ ಅಂತ ಕಿರುಚುತ್ತಲೇ ಬಂದ್ನಂತೆ. ಎರೆಡು ತಾಸು ಒಂದೇ ಕಡೆ ಕೂತಿದ್ದ ರಾಜು ಸರ್ ಎದ್ದು ಆ ಹುಡಿಗನ ತಲೆಗೆ ಮೊಟಕಿ, ‘ಯಹಾ ಸಾಬ್ ಮೈ ಹೂಂ. ಉನ್ಕೋ ಬೋಲೊ ಪ್ಯಾಕಪ್’ ಅಂತಂದರಂತೆ. ಇದು ಊಹಿಸಲೂ ಸಾಧ್ಯ ಇರದ ಘಟನೆಯಾಗಿರೋದರಿಂದ, ನಮಗೆಲ್ಲ ದಂತಕಥೆಯಾಗೇ ಉಳಿದು‌ ಬಿಟ್ಟಿದೆ. ಹೋಗಿ ಬನ್ನಿ ಸರ್. ನಿಮ್ಮ ಹಾಡು ಹಾಡ್ಕೊಂಡೇ ಇರ್ತಿವಿ…
ಸೋಲೆ ಇಲ್ಲ
ನಿಮ್ಮ ಹಾಡು ಹಾಡುವಾಗ”

LEAVE A REPLY

Connect with

Please enter your comment!
Please enter your name here