ಕನ್ನಡ ಸೇರಿದಂತೆ ಹಿಂದಿ, ಪಂಜಾಬಿ ಮತ್ತು ಗುಜರಾತಿ ಸಿನಿಮಾಗಳಲ್ಲಿ ಅಭಿನಯಿಸಿದ್ದ ರೀಟಾ ಆಂಚನ್ ಅಗಲಿದ್ದಾರೆ. ಲೋಕೇಶ್ ಅಭಿನಯದ ‘ಪರಸಂಗದ ಗೆಂಡೆತಿಮ್ಮ’ ಚಿತ್ರದಲ್ಲಿನ ‘ಮರಕಣಿ’ ಪಾತ್ರ ಅವರಿಗೆ ಹೆಸರು ತಂದುಕೊಟ್ಟಿತ್ತು.
ಕನ್ನಡದ ಎವರ್‌ಗ್ರೀನ್ ಸಿನಿಮಾ ‘ಪರಸಂಗದ ಗೆಂಡೆತಿಮ್ಮ’ದಲ್ಲಿ ‘ಮರಕಣಿ’ಯಾಗಿದ್ದ ನಟಿ ರೀಟಾ ರಾಧಾಕೃಷ್ಣ ಆಂಚನ್ ಇನ್ನು ನೆನಪು ಮಾತ್ರ. ಅನಾರೋಗ್ಯದಿಂದಾಗಿ ಮೊನ್ನೆ ನವೆಂಬರ್ 13ರಂದು ನಿಧನರಾದ ರೀಟಾಗೆ 68 ವರ್ಷವಾಗಿತ್ತು. 1978ರಲ್ಲಿ ತೆರೆಕಂಡಿದ್ದ ‘ಪರಸಂಗದ ಗೆಂಡೆತಿಮ್ಮ’ದಲ್ಲಿ ನಟ ಲೋಕೇಶ್ ಜೊತೆ ನಟಿಸಿದ್ದ ರೀಟಾ ಅವರ ‘ಮರಕಿಣಿ’ ಪಾತ್ರ ನೆನಪಿನಲ್ಲುಳಿಯುವಂಥದ್ದು. ‘ಅನುರಿಕ್ತೆ’, ‘ಧರ್ಮ ದಾರಿ ತಪ್ಪಿತು’, ‘ಸಂದರ್ಭ’ ಮೊದಲಾದ ಸಿನಿಮಾಗಳಲ್ಲಿಯೂ ಇವರು ಬಣ್ಣ ಹಚ್ಚಿದ್ದಾರೆ. ಕನ್ನಡ ಮಾತ್ರವಲ್ಲದೆ ಹಿಂದಿ, ಪಂಜಾಬಿ ಹಾಗೂ ಗುಜರಾತಿ ಸಿನಿಮಾಗಳಲ್ಲಿಯೂ ನಟಿಸಿ ಬಹುಭಾಷಾ ನಟಿಯೆನಿಸಿಕೊಂಡಿದ್ದಾರೆ. ಬದ್ನಾಂ, ಲಡ್ಕೀ ಜವಾನ್ ಹೋಗಯೀ, ಆಪ್ ಸೇ ಪ್ಯಾರ್ ಹುವಾ, ಫರ್ಜ್ ಔರ್ ಪ್ಯಾರ್… ಇವರು ನಟಿಸಿದ ಹಿಂದಿ ಚಿತ್ರಗಳು.
ವರನಟ ಡಾ ರಾಜಕುಮಾರ್, ಅಮಿತಾಬ್ ಬಚ್ಚನ್ ಅಭಿಮಾನಿಯಾಗಿದ್ದ ರೀಟಾ ಹುಟ್ಟಿ ಬೆಳೆದದ್ದು ಮುಂಬೈನಲ್ಲಿ. ವಿಶುಕುಮಾರ್ ನಿರ್ದೇಶನದ ‘ಕರಾವಳಿ’ ಸಿನಿಮಾ ಮೂಲಕ ಇವರು ಚಿತ್ರರಂಗಕ್ಕೆ ಪ್ರವೇಶಿಸಿದ್ದರು. ‘ಪರಸಂಗದ ಗೆಂಡೆತಿಮ್ಮ’ದಲ್ಲಿ ಚಿಕ್ಕಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದ ನಟ, ಉದ್ಯಮಿ ರಾಧಾಕೃಷ್ಣ ಮಂಚಿಗಯ್ಯ ಅವರನ್ನು ವಿವಾಹವಾದ ರೀಟಾ, ತದನಂತರ ಸಿನಿಮಾರಂಗಕ್ಕೆ ಗುಡ್ ಬೈ ಹೇಳಿದ್ರು. ‘ಮರಕಣಿ’ ಪಾತ್ರದ ಮೂಲಕ 80ರ ದಶಕದಲ್ಲಿ ಸಿನಿಮಾ ಪ್ರೇಕ್ಷಕರ ಮನಸ್ಸು ಗೆದ್ದಿದ್ದ ನಟಿ ರೀಟಾ ಅಂಚನ್ ಈ ಜಗತ್ತಿನಿಂದ ಮರೆಯಾದರೂ ಅವರ ನೆನಪು ಸದಾ ಹಸಿರಾಗಿರುತ್ತದೆ.