ಅಮೋಲ್‌ ಪಾಟೀಲ್‌ ನಿರ್ದೇಶನ, ಪೃಥ್ವಿ ಶಾಮನೂರು ನಟನೆಯ ‘ಉಡಾಳ’ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಪೃಥ್ವಿ ಶಾಮನೂರು ಅವರಿಗೆ ನಾಯಕಿಯಾಗಿ ಹೃತಿಕ ಶ್ರೀನಿವಾಸ್ ನಟಿಸುತ್ತಿದ್ದಾರೆ. ಯೋಗರಾಜ್ ಸಿನಿಮಾಸ್ ಹಾಗೂ ರವಿ ಶಾಮನೂರು ಫಿಲಂಸ್ ಜೊತೆಗೂಡಿ ನಿರ್ಮಿಸುತ್ತಿರುವ ಚಿತ್ರವಿದು.

ಅಮೋಲ್‌ ಪಾಟೀಲ್‌ ಚೊಚ್ಚಲ ನಿರ್ದೇಶನದ ‘ಉಡಾಳ’ ಸಿನಿಮಾಗೆ ಬಿಜಾಪುರದಲ್ಲಿ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಂಡಿದೆ. ಯೋಗರಾಜ್ ಸಿನಿಮಾಸ್ ಹಾಗೂ ರವಿ ಶಾಮನೂರು ಫಿಲಂಸ್ ಜೊತೆಗೂಡಿ ನಿರ್ಮಿಸುತ್ತಿರುವ ಚಿತ್ರವಿದು. ‘ಪದವಿ ಪೂರ್ವ’ ಚಿತ್ರದ ಮೂಲಕ ನಾಯಕನಟನಾಗಿ ಬೆಳ್ಳಿತೆರೆಗೆ ಪರಿಚಯವಾದ ಪೃಥ್ವಿ ಶಾಮನೂರು ಹೀರೋ ಆಗಿ ನಟಿಸುತ್ತಿರುವ ಎರಡನೇ ಚಿತ್ರವಿದು. ಇಲ್ಲಿ ಅವರು ಗೈಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. 25 ದಿನಗಳ ಮೊದಲ ಹಂತದ ಚಿತ್ರೀಕರಣದಲ್ಲಿ ಹಾಡು, ನೃತ್ಯ ಹಾಗೂ ಮಾತಿನ ಭಾಗದ ಸನ್ನಿವೇಶಗಳನ್ನು ಚಿತ್ರಿಸಿಕೊಳ್ಳಲಾಗಿದೆ. ಈ ಭಾಗದ ಚಿತ್ರೀಕರಣ ಸಂಪೂರ್ಣ ಬಿಜಾಪುರದಲ್ಲೇ ನಡೆದಿದೆ. ಚಿತ್ರದ ಮುಕ್ಕಾಲು ಭಾಗದ ಚಿತ್ರೀಕರಣ ಮುಕ್ತಾಯವಾಗಿದ್ದು, ಸದ್ಯದಲ್ಲೇ ದ್ವಿತೀಯ ಹಂತದ ಚಿತ್ರೀಕರಣ ಆರಂಭವಾಗಲಿದೆ ಎನ್ನುತ್ತಾರೆ ನಿರ್ದೇಶಕ ಅಮೋಲ್‌.

‘ಉಡಾಳ ಪಕ್ಕಾ ಕಮರ್ಷಿಯಲ್ ಜಾನರ್ ಚಿತ್ರ. ಲವ್, ಕಾಮಿಡಿ ಸೇರಿದಂತೆ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ‌’ ಎಂದು ತಮ್ಮ ಸಿನಿಮಾ ಬಗ್ಗೆ ಹೇಳುತ್ತಾರೆ ಅಮೋಲ್‌. ಯೋಗರಾಜ್ ಭಟ್ ಅವರ ಜೊತೆಗೆ ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅಮೋಲ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಅಮೋಲ್ ಪಾಟೀಲ್ ಬಿಜಾಪುರ ಮೂಲದವರು ಎನ್ನುವುದು ವಿಶೇಷ. ಪೃಥ್ವಿ ಶಾಮನೂರು ಅವರಿಗೆ ನಾಯಕಿಯಾಗಿ ಹೃತಿಕ ಶ್ರೀನಿವಾಸ್ ನಟಿಸುತ್ತಿದ್ದಾರೆ. ಬಲ ರಾಜವಾಡಿ, ಸುಮಿತ್, ಹರೀಶ್ ಹಿರಿಯೂರು, ಮಾಳು ನಿತ್ನಾಳ್, ಪ್ರವೀಣ್ ಗೋಕಾಕ್, ದಯಾನಂದ್ ಚಿತ್ರದ ಇತರೆ ಪ್ರಮುಖ ಕಲಾವಿದರು. ಯೋಗರಾಜ್ ಭಟ್ ಅವರು ಚಿತ್ರಕ್ಕೆ ಹಾಡುಗಳನ್ನು ರಚಿಸಿದ್ದು, ಚೇತನ್ ಡ್ಯಾವಿ ಸಂಗೀತ ಸಂಯೋಜಿಸಿದ್ದಾರೆ. ಶಿವಶಂಕರ್ ನೂರಂಬಡ ಛಾಯಾಗ್ರಹಣ, ಅರ್ಜುನ್ ರಾಜ್ ಸಾಹಸ ನಿರ್ದೇಶನ ಹಾಗೂ ಮೋಹನ್, ರಘು ಅವರ ನೃತ್ಯ ನಿರ್ದೇಶನ ಚಿತ್ರಕ್ಕಿದೆ. ಇದೇ ವರ್ಷದ ಕೊನೆಗೆ ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ.

LEAVE A REPLY

Connect with

Please enter your comment!
Please enter your name here