ಬೆಂಗಳೂರು ಅರಮನೆ ಆವರಣದಲ್ಲಿ ನಡೆದ ‘ಕುಂದಾಪ್ರ ಕನ್ನಡ ಹಬ್ಬ – 2024’ ಸಮಾರಂಭದಲ್ಲಿ ‘Match made in Kundapra’ ವೆಬ್‌ ಸರಣಿ ಟ್ರೇಲರ್‌ ಮತ್ತು ಸರಣಿಯ ‘ಕಾಯಕವೇ ಕೈಲಾಸ’ ವೀಡಿಯೋ ಸಾಂಗ್‌ ಬಿಡುಗಡೆಯಾದವು. ‘ಮಾಧ್ಯಮ ಅನೇಕ’ ಸಂಸ್ಥೆ ನಿರ್ಮಾಣದ ಕುಂದಗನ್ನಡದ ಈ ಸರಣಿಯ ‘ಕಾಯಕವೇ ಕೈಲಾಸ’ ಸಾಂಗ್‌ Aneka Audio ಮ್ಯೂಸಿಕ್‌ ಲೇಬಲ್‌ನಲ್ಲಿ ರಿಲೀಸ್‌ ಆಗಿದೆ.

ಮೊನ್ನೆ ಆಗಸ್ಟ್‌ 17 ಮತ್ತು 18ರಂದು ಬೆಂಗಳೂರು ಅರಮನೆ ಆವರಣದಲ್ಲಿ ‘ಕುಂದಾಪ್ರ ಕನ್ನಡ ಹಬ್ಬ – 2024’ ಅದ್ಧೂರಿಯಾಗಿ ನೆರವೇರಿದೆ. ಭಾಷೆ – ಬದುಕನ್ನು ಸಂಭ್ರಮಿಸುವ ‘ವಿಶ್ವ ಕುಂದಾಪುರ ದಿನಾಚರಣೆ’ಯ ಸಂಭ್ರಮಾಚರಣೆಗೆ ಕುಂದಾಪುರ ಕನ್ನಡ ಪ್ರತಿಷ್ಠಾನದ ಜೊತೆಗೆ ಈ ವರ್ಷ ‘ಮಾಧ್ಯಮ ಅನೇಕ’ ಸಂಸ್ಥೆ ಕೈಜೋಡಿಸಿತ್ತು. ಆಗಸ್ಟ್‌ 18ರಂದು ಸಂಜೆ ಕುಂದಾಪ್ರ ಹಬ್ಬದ ಕಾರ್ಯಕ್ರಮದಲ್ಲಿ ಮಾಧ್ಯಮ ಅನೇಕ ಸಂಸ್ಥೆ ನಿರ್ಮಾಣದ ‘Match made in Kundapra’ ವೆಬ್ ಸರಣಿಯ ಟ್ರೇಲರ್‌ ಮತ್ತು ‘ಕಾಯಕವೇ ಕೈಲಾಸ’ ಹಾಡು ಬಿಡುಗಡೆಯಾದವು. ಕುಂದಾಪುರದಲ್ಲಿ ನಡೆಯುವ ಹಾಸ್ಯಭರಿತ ಕಥಾಹಂದರದ ಯುವ ದಂಪತಿಯ ಕಥೆಯಿದು. ಕುಂದಗನ್ನಡ ಈ ವೆಬ್ ಸರಣಿಯ ವೈಶಿಷ್ಟ್ಯ. ಕುಂದಾಪುರ ಮತ್ತು ಕರಾವಳಿಯ ಇತರ ಭಾಗಗಳ ಪ್ರತಿಭಾವಂತ ಕಲಾವಿದರು ಸರಣಿಯಲ್ಲಿ ಅಭಿನಯಿಸಿದ್ದಾರೆ. ಕುಂದಾಪುರ ಮತ್ತು ಸುತ್ತಮುತ್ತಲಿನ ರಮಣೀಯ ತಾಣಗಳಲ್ಲಿ ಚಿತ್ರೀಕರಣಗೊಂಡಿರುವ ಸರಣಿಯ ಟ್ರೇಲರ್‌ ಮತ್ತು ‘ಕಾಯಕವೇ ಕೈಲಾಸ’ ಸಾಂಗ್‌ ನೋಡುಗರ ಗಮನ ಸೆಳೆದವು.

ಭಾಸ್ಕರ್‌ ಬಂಗೇರ ರಚನೆಯ ಸರಣಿಯ ‘ಕಾಯಕವೇ ಕೈಲಾಸ’ ಗೀತೆಗೆ ರವಿ ಬಸ್ರೂರು ಅವರ ದನಿಯಿದೆ. ಕುಂದಾಪ್ರ ಭಾಷೆಯ ಸೊಗಡಿನ ರವಿ ಬಸ್ರೂರು ಗಾಯನ ಹಾಡಿನಲ್ಲಿನ ನೇಟಿವಿಟಿಯ ಅಂದ ಹೆಚ್ಚಿಸಿದೆ. ಕಾರ್ಯಕ್ರಮದಲ್ಲಿ ಹಾಡು – ಟ್ರೇಲರ್‌ ಬಿಡುಗಡೆಯಾದ ನಂತರ ‘ಕುಂದಾಪ್ರ ಕನ್ನಡ ಪ್ರತಿಷ್ಠಾನ’ದ ಕಾರ್ಯದರ್ಶಿಯೂ ಆದ ನಿರೂಪಕ ರಾಘವೇಂದ್ರ ಕಾಂಚನ್‌, ‘ಕುಂದಗನ್ನಡದಲ್ಲಿ ತಯಾರಾಗಿರುವ ಮೊದಲ ವೆಬ್‌ ಸರಣಿ ಇದು. ನಮ್ಮೂರಿನ ಕಿಡಕಿ, ಬಾಗಿಲು, ತಳಿಕಂಡಿ, ಊರು, ಬದುಕು.. ಇವೆಲ್ಲವುಗಳ ಹಂದರ ಈ ವೆಬ್‌ ಸೀರೀಸ್‌. ಮಾಧ್ಯಮ ಅನೇಕ ಸಂಸ್ಥೆಗೆ ಶುಭವಾಗಲಿ’ ಎಂದು ಹಾರೈಸಿದರು. ಇದೇ ವೇಳೆ ಮಾಧ್ಯಮ ಅನೇಕ ಸಂಸ್ಥೆಯ ಅರವಿಂದ ಮೋತಿ ಮತ್ತು ಅನು ಮೋತಿ ಅವರಿಗೆ ಸ್ಮರಣಿಕೆ ನೀಡಲಾಯ್ತು. ಮಾಧ್ಯಮ ಅನೇಕ ಸಂಸ್ಥೆಯ ಅರವಿಂದ ಮೋತಿ ಅವರು ಮಾತನಾಡಿ, ‘ವಿಜೃಂಭಣೆಯಿಂದ ನಡೆದಿರುವ ಕುಂದಾಪ್ರ ಹಬ್ಬದ ಈ ವೇದಿಕೆಯಲ್ಲಿ ನಮ್ಮ ಸಂಸ್ಥೆ ನಿರ್ಮಾಣದ ವೆಬ್‌ ಸರಣಿಯ ಟ್ರೇಲರ್‌ ಮತ್ತು ಹಾಡು ಬಿಡುಗಡೆಯಾಗಿದೆ. ಇದಕ್ಕೆ ಅವಕಾಶ ಕಲ್ಪಿಸಿದ ಕುಂದಾಪುರ ಕನ್ನಡ ಪ್ರತಿಷ್ಠಾನದವರಿಗೆ ಧನ್ಯವಾದ’ ಎಂದು ವೆಬ್‌ ಸರಣಿ ನಿರ್ಮಾಣದಲ್ಲಿ ನೆರವಾದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.

‘ಮಾಧ್ಯಮ ಅನೇಕ’ ಸಂಸ್ಥೆಯು ಕನ್ನಡದ ವಿವಿಧ dialectಗಳಲ್ಲಿ ಮನೋರಂಜನಾ ಕಾರ್ಯಕ್ರಮಗಳನ್ನು ನಿರ್ಮಿಸುತಾ ಬಂದಿದೆ. ಈ ನಿಟ್ಟಿನಲ್ಲಿ ‘Super Couple’ ಒಂದು ಜನಪ್ರಿಯ ಸರಣಿ. ‘Super Couple’ ಬೆಂಗಳೂರು ಕನ್ನಡ ಮತ್ತು ಉತ್ತರ ಕರ್ನಾಟಕದ ಕನ್ನಡ ಮಿಳಿತಗೊಂಡು ಜನರನ್ನು ಮನರಂಜಿಸಿತ್ತು. ಇದೀಗ ಸಿದ್ಧವಾಗಿರುವ ‘Match made in Kundapra’ ಕುಂದಗನ್ನಡದ ವೆಬ್‌ ಸರಣಿ. ‘ಕುಂದಾಪ್ರ ಕನ್ನಡ ಹಬ್ಬ’ದಲ್ಲಿ ಕುಂದಗನ್ನಡದ ಸರಣಿಯ ಟ್ರೇಲರ್‌ ಮತ್ತು ಸಾಂಗ್‌ ಬಿಡುಗಡೆಯಾಗಿದ್ದು ವಿಶೇಷ. ಈ ಬಾರಿಯ ಕುಂದಾಪ್ರ ಹಬ್ಬಕ್ಕೆ ಕುಂದಾಪುರ ಕನ್ನಡ ಪ್ರತಿಷ್ಠಾನದ ಜೊತೆ ‘ಮಾಧ್ಯಮ ಅನೇಕ’ ಸಂಸ್ಥೆ ಕೈಜೋಡಿಸಿತ್ತು. ‘ಮಾಧ್ಯಮ ಅನೇಕ’ ಸಿಬ್ಬಂದಿ ಎರಡೂ ದಿನಗಳ ಕಾರ್ಯಕ್ರಮವನ್ನು ನಿರಂತರವಾಗಿ live ಮಾಡಿದರು. ಈ ಮೂಲಕ ದೂರದೂರುಗಳ ಸಾವಿರಾರು ಜನರು ಕುಂದಾಪ್ರ ಹಬ್ಬವನ್ನು ಕಣ್ತುಂಬಿಕೊಳ್ಳುವಂತಾಯ್ತು. ‘ಕುಂದಾಪ್ರ ಕನ್ನಡ ಹಬ್ಬ – 2024’ ಆಯೋಜಕರು ‘ಮಾಧ್ಯಮ ಅನೇಕ’ ಸಹಯೋಗಕ್ಕೆ ಧನ್ಯವಾದ ಅರ್ಪಿಸಿದ್ದಾರೆ.

LEAVE A REPLY

Connect with

Please enter your comment!
Please enter your name here