ನವೀನ್‌ ದ್ವಾರಕಾನಾಥ್‌ ನಿರ್ದೇಶನದ ‘ಫಾರ್ ರಿಜಿಸ್ಟ್ರೇಷನ್’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಪೃಥ್ವಿ ಅಂಬಾರ್‌ ಮತ್ತು ಮಿಲನಾ ನಾಗರಾಜ್‌ ಚಿತ್ರದ ಪ್ರಮುಖ ಪಾತ್ರಧಾರಿಗಳು. ಇದೇ ಫೆಬ್ರವರಿ 23ರಂದು ಸಿನಿಮಾ ತೆರೆಕಾಣಲಿದೆ.

ಪೃಥ್ವಿ ಅಂಬಾರ್ ಮತ್ತು ಮಿಲನ ನಾಗರಾಜ್ ನಟನೆಯ ‘ಫಾರ್ ರಿಜಿಸ್ಟ್ರೇಷನ್’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮಕ್ಕೆ ವಾಲಗದ ಮೂಲಕ ಇಡೀ ಚಿತ್ರತಂಡ ಆಗಮಿಸಿದ್ದು ವಿಶೇಷ! ನಿರ್ದೇಶಕರಾದ ಶಶಾಂಕ್ ಹಾಗೂ ಚೇತನ್ ಕುಮಾರ್ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ತಮ್ಮ ಸಿನಿಮಾ ಕುರಿತು ಮಾತನಾಡಿದ ಹೀರೋ ಪೃಥ್ವಿ ಅಂಬಾರ್‌, ‘ಫಾರ್ ರಿಜಿಸ್ಟ್ರೇಷನ್ ಎರಡು ಸಹಪಾಠಿಗಳ ಪ್ರಯತ್ನ. ನವೀನ್ ಅವರ ಕನಸಿನ ಕೂಸು ಇದು. ತುಂಬಾ ಶ್ರಮ ವಹಿಸಿದ್ದಾರೆ. ಮನಸ್ಸಿನಲ್ಲಿ ಸಂಬಂಧಗಳು ರಿಜಿಸ್ಟರ್‌ ಆಗಬೇಕು ಅನ್ನೋದು ಚಿತ್ರದ ತಿರುಳು’ ಎಂದರು.

ನಾಯಕನಟಿ ಮಿಲನಾ ನಾಗರಾಜ್‌ ಅವರು ಚಿತ್ರದ ನಿರ್ಮಾಪಕ ವಿನಯ್‌ ಅವರ ಸಿನಿಮಾ ಪ್ರೀತಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ‘ನವೀನ್ ಸರ್ ಮನೆಗೆ ಬಂದು ಕಥೆ ವಿವರಿಸಿದರು. ಫಸ್ಟ್ ಹಾಫ್ ಕಥೆ ಹೇಳಿ ನಿಲ್ಲಿಸಿಬಿಟ್ಟರು. ಕಂಟಿನ್ಯೂ ಮಾಡಿ ಎಂದಾಗ, ನೀವು ಸಿನಿಮಾ ಒಪ್ಪಿಕೊಂಡರೇ ಕಥೆ ಹೇಳುವುದು ಎಂದರು. ಆಮೇಲೆ ಸಿನಿಮಾ ಮಾಡುತ್ತೇನೆ, ಬಂದು ಕಥೆ ಹೇಳಿ ಅಂದಾಗ ಕಥೆ ಹೇಳಿದರು. ಚಿತ್ರದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಇಂತಹ ನಿರ್ಮಾಪಕರು ಗೆಲ್ಲಬೇಕು’ ಎಂದರು ಮಿಲನಾ. ನಿರ್ಮಾಪಕ ವಿನಯ್‌ ಅವರು ಇದಾದ ನಂತರ ಮತ್ತೊಂದು ಸಿನಿಮಾ ನಿರ್ಮಾಣಕ್ಕೆ ಸಜ್ಜಾಗುತ್ತಿದ್ದಾರೆ.

ಇದು ಸಂಬಂಧಗಳ ಮಹತ್ವ ಸಾರಲಿರುವ ಸಿನಿಮಾ ಎನ್ನುವುದು ನಿರ್ದೇಶಕ ನವೀನ್‌ ದ್ವಾರಕಾನಾಥ್‌ ಅವರ ಮಾತು. ‘ಹೊಸ ಪ್ರಯತ್ನ ಮಾಡಿದ್ದೇವೆ. ಬೆನ್ನು ತಟ್ಟಿ ಹಾರೈಸಿ. ತಪ್ಪಾಗಿದ್ದರೆ ಇನ್ನೊಮ್ಮೆ ಬೆನ್ನು ತಟ್ಟಿ ಹೇಳಿ. ಚೆನ್ನಾಗಿ ಮಾಡಿ ಅಂತಾ ಹೇಳಿ ಮಾಡೋಣಾ. ಈ ಚಿತ್ರವನ್ನು ನಾನು ನನ್ನ ಗುರುಗಳಾದ ಸಿ ಆರ್ ಸಿಂಹ ಅವರಿಗೆ ಅರ್ಪಿಸುತ್ತೇನೆ’ ಎನ್ನುವುದು ನವೀನ್‌ ಅವರ ಮಾತು. ರವಿಶಂಕರ್, ತಬಲಾ ನಾಣಿ, ಸುಧಾ ಬೆಳವಾಡಿ, ಬಾಬು ಹಿರಣಯ್ಯ, ಸ್ವಾತಿ, ರಮೇಶ್ ಭಟ್, ಉಮೇಶ್ ಚಿತ್ರದ ಇತರೆ ಪ್ರಮುಖ ಪಾತ್ರಧಾರಿಗಳು. ಆರ್ ಕೆ ಹರೀಶ್ ಸಂಗೀತ ಸಂಯೋಜನೆ, ಅಭಿಲಾಷ್ ಕಲಾತಿ, ಅಭಿಷೇಕ್ ಜಿ ಕಾಸರಗೋಡು ಛಾಯಾಗ್ರಹಣ, ಮನು ಶೇಡ್ಗರ್ ಸಂಕಲನ ಚಿತ್ರಕ್ಕಿದೆ. Nishchal Films ಬ್ಯಾನರ್‌ ಅಡಿಯಲ್ಲಿ ತಯಾರಾಗಿರುವ ಸಿನಿಮಾ ಫೆಬ್ರವರಿ 23ರಂದು ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here