ಅನೀಶ್ ತೇಜೇಶ್ವರ್, ತೇಜು ಮತ್ತು ಶ್ರಾವ್ಯ ರಾವ್ ನಟಿಸಿರುವ ‘ಮಾಯಾನಗರಿ’ ಸಿನಿಮಾದ ‘ಲಚ್ಚಿ ಲಚ್ಚಿ’ ಸಾಂಗ್ ರಿಲೀಸ್ ಆಗಿದೆ. ಶಂಕರ್ ಆರಾಧ್ಯ ಕತೆ, ಚಿತ್ರಕಥೆ ರಚಿಸಿ ಸಿನಿಮಾ ನಿರ್ದೇಶಿಸಿದ್ದಾರೆ. ಚಿತ್ರರಂಗದಲ್ಲಿ ನಡೆಯುವ ಒಂದಷ್ಟು ಸತ್ಯ ಘಟನೆಗಳೇ ಈ ಚಿತ್ರದ ಕಥಾವಸ್ತು ಎನ್ನುವುದು ವಿಶೇಷ.
ವಿಭಿನ್ನ ಶೈಲಿಯ ಹಾರರ್ – ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ಮಾಯಾನಗರಿ’ ಚಿತ್ರದ ‘ಲಚ್ಚಿ ಲಚ್ಚಿ’ ಸಾಂಗ್ ಬಿಡುಗಡೆಯಾಗಿದೆ. ರೀಲ್ಸ್ ಮಾಡುವ ಮೂಲಕ ಜನಪ್ರಿಯತೆ ಗಳಿಸಿ ಲಕ್ಷಾಂತರ ಫಾಲೋವರ್ಸ್ ಹೊಂದಿರುವ 5 ವರ್ಷದ ಮಗು ನಿಶಿತಾ ಕೈಯಲ್ಲಿ ಈ ಹಾಡನ್ನು ಬಿಡುಗಡೆಗೊಳಿಸಲಾಯಿತು. ಅನೀಶ್ ತೇಜೇಶ್ವರ್, ತೇಜು ಮತ್ತು ಶ್ರಾವ್ಯ ರಾವ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವನ್ನು ಶಂಕರ್ ಆರಾಧ್ಯ ಕತೆ, ಚಿತ್ರಕಥೆ ರಚಿಸಿ ನಿರ್ದೇಶಿಸಿದ್ದಾರೆ. ಚಿತ್ರರಂಗದಲ್ಲಿ ನಡೆಯುವ ಒಂದಷ್ಟು ಸತ್ಯ ಘಟನೆಗಳನ್ನಿಟ್ಟುಕೊಂಡು ಶಂಕರ್ ಆರಾಧ್ಯ ಈ ಚಿತ್ರವನ್ನು ನಿರೂಪಿಸಿದ್ದಾರೆ. ಇತ್ತೀಚೆಗಷ್ಟೇ ಟ್ರೈಲರ್ ಬಿಡುಗಡೆಯಾಗಿದ್ದು, ಸದ್ಯದಲ್ಲೇ ಸಿನಿಮಾ ತೆರೆಕಾಣಲಿದೆ.
ನಿರ್ದೇಶಕ ಶಂಕರ್ ಮಾತನಾಡಿ, ‘ಈ ಹಾಡು ನಮ್ಮ ಚಿತ್ರಕ್ಕೆ ಟ್ರಂಪ್ ಕಾರ್ಡ್ ಆಗುತ್ತೆ ಅಂತ ಕಲರ್ ಫುಲ್ ಆಗಿಯೇ ಶೂಟ್ ಮಾಡಿದ್ದೇವೆ. ಕಂಠೀರವ ಸ್ಟುಡಿಯೋ ಹಾಗೂ ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ 6 ದಿನ ಇದನ್ನು ಚಿತ್ರೀಕರಿಸಿದ್ದೇವೆ. ಹಾರರ್, ಆ್ಯಕ್ಷನ್, ಫ್ಯಾಮಿಲಿ ಸೆಂಟಿಮೆಂಟ್ ಕಥೆ ಇದು. ಚಿತ್ರದಲ್ಲಿ ನಾಯಕ ಶಂಕರ್ ನಾಗ್ ಅಭಿಮಾನಿ. ಚಿತ್ರರಂಗದಲ್ಲಿ ದೊಡ್ಡ ನಿರ್ದೇಶಕನಾಗಬೇಕೆಂದು ಹೋರಾಟ ನಡೆಸುವ ಆತನಿಗೆ ಕೊನೆಗೂ ಒಂದು ಅವಕಾಶ ಸಿಕ್ಕಿ, ಮಾಯಾನಗರಿ ಎಂಬ ಸ್ಥಳಕ್ಕೆ ಹೋಗಬೇಕಾಗುತ್ತದೆ. ಆ ಊರಿಗೆ ಬರುವ ಆತ ಅಲ್ಲಿ ತಾನೇ ಪಾತ್ರವಾಗಬೇಕಾಗುತ್ತದೆ. ಹೀಗೆ ಕತೆ ಕುತೂಹಲಕಾರಿಯಾಗಿ ಸಾಗುತ್ತದೆ’ ಎನ್ನುತ್ತಾರೆ.
ಚಿತ್ರಕ್ಕೆ ಬೆಂಗಳೂರು, ಶಿವಮೊಗ್ಗ, ಸಾಗರ, ಚಿಕ್ಕಮಗಳೂರು, ಭದ್ರಾವತಿ ಸುತ್ತಮುತ್ತ ಸುಮಾರು 65 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಹಿರಿಯ ನಟ ದ್ವಾರಕೀಶ್ ಚಿತ್ರದಲ್ಲಿ ರಿಯಲ್ ಲೈಫ್ ಪಾತ್ರವನ್ನೇ ಮಾಡಿದ್ದಾರೆ. ಚಿತ್ರದಲ್ಲಿ ಇನ್ನೂ ಹಲವಾರು ವಿಶೇಷತೆಗಳಿದ್ದು, ಅವನ್ನು ಹಂತಹಂತವಾಗಿ ಪರಿಚಯಿಸಲಾಗುತ್ತದೆ ಎನ್ನುತ್ತಾರವರು. Sandalwood Pictures ಬ್ಯಾನರ್ ಅಡಿ ನಿರ್ಮಾಣವಾಗಿರುವ ಚಿತ್ರಕ್ಕೆ ಶ್ವೇತಾ ಶಂಕರ್ ಸಹ ನಿರ್ಮಾಣವಿದೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವಿಕ್ರಮ್ ಮೋರ್ ಫೈಟ್ ಕಂಪೋಸ್ ಮಾಡಿದ್ದಾರೆ. ಮದನ್ – ಹರಿಣಿ ಹಾಗೂ ಮುರಳಿ ನೃತ್ಯ ನಿರ್ದೇಶನ, ವಿಜಯ್ ಎಂ ಕುಮಾರ್ ಸಂಕಲನ, ಶ್ರೀನಿವಾಸ್ ಛಾಯಾಗ್ರಹಣ ಚಿತ್ರಕ್ಕಿದೆ. ಶರತ್ ಲೋಹಿತಾಶ್ವ, ಅವಿನಾಶ್, ಸುಚೇಂದ್ರ ಪ್ರಸಾದ್, ಎಡಕಲ್ಲು ಗುಡ್ಡದ ಚಂದ್ರಶೇಖರ್, ಚಿಕ್ಕಣ್ಣ, ಗಿರಿ ದಿನೇಶ್ ಹಾಗೂ ನಿಹಾರಿಕಾ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ.