ರಂಗಭೂಮಿ ಹಿನ್ನೆಲೆಯಿಂದ ಬಂದು ಬೆಳ್ಳಿತೆರೆಯಲ್ಲಿ ಗುರುತಿಸಿಕೊಂಡ ಕಲಾವಿದ ಹೇಮಂತ್‌ ಸುಶೀಲ್‌. ಇತ್ತೀಚಿನ ದಿನಗಳಲ್ಲಿ ಅವರು ಗಮನಾರ್ಹ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊನ್ನೆ ತೆರೆಕಂಡ ‘ಹೊಯ್ಸಳ’ ಚಿತ್ರದಲ್ಲಿನ ಅವರ ‘ಮಚ್ಚೆ’ ಪಾತ್ರ ಪ್ರೇಕ್ಷಕರಿಗೆ ಇಷ್ಟವಾಗಿದೆ. ಅವರೊಂದಿಗೆ ಒಂದು ಮಾತುಕತೆ…

‘ಹೊಯ್ಸಳ’ ಚಿತ್ರದ ‘ಮಚ್ಚೆ’ ಪಾತ್ರಕ್ಕೆ ನೀವು ಆಯ್ಕೆಯಾಗಿದ್ದು ಹೇಗೆ?
‘ಹೊಯ್ಸಳ’ ಸಿನಿಮಾ ಡೈರೆಕ್ಟರ್ ವಿಜಯ್ ನಾಗೇಂದ್ರ ಅವರು ಸುಮಾರು ಏಳೆಂಟು ವರ್ಷಗಳಿಂದ ಪರಿಚಯ. ನನ್ನಿಂದ ತಮ್ಮ ಚಿತ್ರದಲ್ಲಿ ಒಂದೊಳ್ಳೆ ಪಾತ್ರ ಮಾಡಿಸುವುದಾಗಿ ಹೇಳಿದ್ದರು. ಅದರಂತೆ ‘ಮಚ್ಚೆ’ ಪಾತ್ರಕ್ಕೆ ಕರೆದರು. ಈ ಪಾತ್ರಕ್ಕಾಗಿ ಎಂಟು ಕೆಜಿ ತೂಕ ಇಳಿಸಿ ಉದ್ದನೆಯ ಹೇರ್ ಸ್ಟೈಲ್ ಮಾಡುವಂತೆ ರೆಫರೆನ್ಸ್‌ ಫೋಟೋಗಳನ್ನು ಕಳುಹಿಸಿಕೊಟ್ಟಿದ್ದರು. ಎಲ್ಲಾ ಸರಿ ಹೊಂದಿದ ಮೇಲೆ ಶೂಟಿಂಗ್ ಪ್ರೊಸೆಸ್ ಶುರುವಾಯಿತು.

ನಿಮ್ಮ ಪಾತ್ರಕ್ಕೆ ಎಲ್ಲೆಲ್ಲಿ ಶೂಟಿಂಗ್ ಆಯ್ತು?
ಮೊದಲ ಶೇಡೂಲ್‌ 20 ದಿನ ಮೈಸೂರಿನಿಂದ ಆರಂಭವಾಗಿ ಬೆಳಗಾವಿ, ಗೋಕಾಕ್, ಸಂಕೇಶ್ವರ, ರಾಣಿ ಚೆನ್ನಮ್ಮ ಸರ್ಕಲ್, ಬೆಂಗಳೂರು HMTಯಲ್ಲಿ ನಡೆಯಿತು.

ಈ ಪಾತ್ರಕ್ಕೆ ಏನಾದ್ರೂ ವಿಶೇಷ ತಯಾರಿ ಮಾಡಿಕೊಂಡ್ರಾ ಹೇಗೆ?
ಸಿನಿಮಾದಲ್ಲಿ ನಾನು ಬಾರ್ಬರ್‌ ಪಾತ್ರ ಮಾಡಿರುವುದರಿಂದ ನಟನೆ ನೈಜವಾಗಿರಲು ಮನೆ ಹತ್ತಿರವಿರುವ ಬಾರ್ಬರ್‌ ಶಾಪ್‌ನಲ್ಲಿ ಕುಳಿತು ಅವರ ಮಾತಿನ ವರಸೆ, ನಡವಳಿಕೆ, ಹೇರ್‌ಕಟ್ ಮಾಡುವ ಸ್ಟೈಲ್ ಗಮನಿಸುತ್ತಿದ್ದೆ. ಜೊತೆಗೆ ಯೂಟ್ಯೂಬ್ ಮೂಲಕ ಬೇರೆ ಬೇರೆ ಸಿನಿಮಾಗಳ ರೆಫರೆನ್ಸ್‌ ನೋಡಿಕೊಂಡೆ. ನಮ್ಮ ಸುತ್ತಮುತ್ತಲಿನ ದುನಿಯಾವನ್ನು ಗಮನಿಸುತ್ತಲೇ ಇರುವುದರಿಂದ ವಿಶೇಷ ತಯಾರಿ ಏನೂ ಬೇಕೆಂದೆನಿಸಲಿಲ್ಲ.

‘ಹೊಯ್ಸಳ’ ಸಿನಿಮಾದ ಕಲಾವಿದನಾಗಿ ಅಲ್ಲದೆ ಒಬ್ಬ ಸಾಮಾನ್ಯ ಪ್ರೇಕ್ಷಕನಾಗಿ ನೋಡಿದಾಗ ಈ ಸಿನಿಮಾ ಬಗ್ಗೆ ನಿಮಗೆ ಏನನ್ಸುತ್ತೆ?
ಸಮಾಜದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಜಾತಿ, ಧರ್ಮ, ಕೋಮುವಾದ ವ್ಯವಸ್ಥೆಗೆ ಚಿತ್ರದಲ್ಲಿ ಕನ್ನಡಿ ಹಿಡಿದಿದ್ದಾರೆ. ಆಧುನಿಕ ಯುಗದಲ್ಲಿದ್ದರೂ ಸಹ ಕೆಲವೊಂದು ಹಳೇ ಪದ್ಧತಿ ರೂಢಿಯಲ್ಲಿವೆ. ಜಾತಿ ವ್ಯವಸ್ಥೆಯ ಕರಾಳ ಮುಖವನ್ನು ಪರಿಚಯಿಸಬೇಕು, ಮನುಷ್ಯತ್ವಕ್ಕೆ ಬೆಲೆ ಸಿಗಬೇಕು ಎನ್ನುವುದು ಸಿನಿಮಾದ ಒಟ್ಟಾರೆ ಥಾಟ್‌.

ಹೀರೋ ಧನಂಜಯ್ ಅವರಿಗೆ ಇದು 25ನೇ ಸಿನಿಮಾ. ಅವರ ಸಿನಿಮಾ ಜರ್ನಿ ನೋಡಿದಾಗ ಏನನ್ಸುತ್ತೆ?
‘ಟಗರು’ ಚಿತ್ರದಿಂದಲೂ ಡಾಲಿ ಧನಂಜಯ್ ಅವರ ಅಭಿಮಾನಿಯಾಗಿ ಅವರ ಮೊದಲ ಸಿನಿಮಾ ‘ಡೈರೆಕ್ಟರ್ ಸ್ಪೆಷಲ್’ ಅನ್ನು ಥಿಯೇಟರ್‌ಗೆ ಹೋಗಿ ನೋಡಿದ್ದೆ. ಆಗಿನಿಂದಲೂ ಅವರ ಜರ್ನೀ ಫಾಲೋ ಮಾಡಿಕೊಂಡು ಬರುತ್ತಿದ್ದೇನೆ. ಡಾಲಿಯವರು ಯಾವತ್ತೂ ಸಹ ಒಬ್ಬ ಸ್ಟಾರ್‌ನಂತೆ ನಡೆದುಕೊಂಡಿಲ್ಲ. ವಿಶೇಷವೆಂದರೆ ಅಚ್ಯುತ್‌ ಸರ್‌ ಅವರೊಂದಿಗೆ ಇದು ನನ್ನ 7ನೇ ಸಿನಿಮಾ. ನಟ ರಾಘು ಶಿವಮೊಗ್ಗ ಅವರೂ ಹಳೆಯ ಪರಿಚಯ. ಒಟ್ಟಿನಲ್ಲಿ ಚಿತ್ರದಲ್ಲಿ ನಟಿಸಿರುವ ಎಲ್ಲಾ ಕಲಾವಿದರೂ ಒಂದೇ ಕುಟುಂಬದವರಂತಿದ್ದೆವು. ಈ ಪಾತ್ರ ನೀಡಿದ್ದಕ್ಕಾಗಿ ಧನಂಜಯ್ ಸರ್, ಡೈರೆಕ್ಟರ್ ವಿಜಯ ಸರ್, ಪ್ರೊಡ್ಯೂಸರ್ ಕಾರ್ತಿಕ್ ಹಾಗೂ ಯೋಗೀಶ್‌ ಸರ್‌ಗೆ ವಿಶೇಷ ಧನ್ಯವಾದ ತಿಳಿಸುತ್ತೇನೆ.

ಸದ್ಯ ಯಾವ ಸಿನಿಮಾದಲ್ಲಿ ನಟಿಸುತ್ತಾ ಇದ್ದೀರಿ? ರಿಲೀಸ್‌ಗೆ ಸಿದ್ದವಿರುವ ನಿಮ್ಮ ಸಿನಿಮಾಗಳು?
‘ವೀರಾಟಪರ್ವ’ ಸಿನಿಮಾದ ಮೂವರು ಲೀಡ್‌ ಆಕ್ಟರ್‌ಗಳಲ್ಲಿ ನಾನೂ ಒಬ್ಬ. ಈ ಸಿನಿಮಾ ಬಿಡುಗಡೆಗೆ ಸಿದ್ದವಿದೆ. ‘ಸೂರ್ಯ’ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ‘ಭರತ್’ ಸಿನಿಮಾದ ಸಿದ್ಧತೆ ನಡೆಯುತ್ತಿದೆ.

ರಂಗಭೂಮಿಯಲ್ಲಿ ಹೊಸ ಪಾತ್ರಗಳನ್ನು ಮಾಡಿದ್ರಾ? ಏನಾಗ್ತಿದೆ ಅಲ್ಲಿ?
ರಂಗಭೂಮಿ ಜೊತೆಗೆ ನನ್ನದು ಸುಮಾರು ಒಂದೂವರೆ ದಶಕದ ನಂಟು. ಸಿನಿಮಾಗಳಿಗೆ ಬಣ್ಣ ಹಚ್ಚಿದ 2 – 3 ವರ್ಷಗಳಿಂದ ರಂಗಭೂಮಿಗೆ ಹೆಚ್ಚು ಸಮಯ ನೀಡಲು ಆಗುತ್ತಿಲ್ಲ. ಶೂಟಿಂಗ್‌ ಡೇಟ್ಸ್‌ ಕ್ಲ್ಯಾಶ್ ಆಗುತ್ತಿದ್ದು, ಸಮಯ ಹೊಂದಾಣಿಕೆಯಾಗುತ್ತಿಲ್ಲ.

LEAVE A REPLY

Connect with

Please enter your comment!
Please enter your name here