ಈ ವರ್ಷ ಕಳೆಗುಂದಿದ್ದ ಚಿತ್ರರಂಗ 2022ರಲ್ಲಿ ಮತ್ತೆ ಗೆಲುವಿನ ಹಾದಿಗೆ ಮರಳುವ ಸೂಚನೆಯಿದೆ. IMDb ಮುಂದಿನ ವರ್ಷದ ಬಹುನಿರೀಕ್ಷಿತ ಟಾಪ್‌ 10 ಸಿನಿಮಾಗಳನ್ನು ಪಟ್ಟಿ ಮಾಡಿದೆ. ಯಶ್‌ ಅಭಿನಯದ ‘ಕೆಜಿಎಫ್‌ 2’ ಅಗ್ರಸ್ಥಾನದಲ್ಲಿದೆ.

ಕೋವಿಡ್‌ನಿಂದಾಗಿ ಭಾರತೀಯ ಚಿತ್ರರಂಗ 2021ರಲ್ಲಿ ಮಂಕಾಗಿತ್ತು. ಈಗ ಥಿಯೇಟರ್‌ಗಳು ಓಪನ್‌ ಆಗಿದ್ದು ನಿಧಾನವಾಗಿ ಸಿನಿಮಾರಂಗ ಚೇತರಿಸಿಕೊಳ್ಳುತ್ತಿದೆ. ಈ ವರ್ಷದ ಕೊನೆಗೆ ಒಂದೆರೆಡು ದೊಡ್ಡ ಸಿನಿಮಾಗಳು ತೆರೆಗೆ ಬಂದಿವೆ. ಮುಂದಿನ ವರ್ಷ ಬಹುಕೋಟಿ ವೆಚ್ಚದ ದೊಡ್ಡ ಸಿನಿಮಾಗಳು ತೆರೆಗೆ ಬರಲಿವೆ. IMDb 2022ರ ಬಹುನಿರೀಕ್ಷಿತ ಹತ್ತು ಭಾರತೀಯ ಸಿನಿಮಾಗಳನ್ನು ಪಟ್ಟಿ ಮಾಡಿದೆ. ತಿಂಗಳೊಂದರಲ್ಲಿ ಸುಮಾರು 200 ಮಿಲಿಯನ್‌ ವೀಕ್ಷಕರ ಪೇಜ್‌ವ್ಯೂಗಳನ್ನು ಆಧರಿಸಿ ಸಿದ್ಧಪಡಿಸಿರುವ ಪಟ್ಟಿಯಿದು. ಈ ಪಟ್ಟಿಯಲ್ಲಿ ಕನ್ನಡ, ತಮಿಳು ಮತ್ತು ಹಿಂದಿ ಚಿತ್ರಗಳಿವೆ.

ಪ್ರಶಾಂತ್‌ ನೀಲ್‌ ನಿರ್ದೇಶನದಲ್ಲಿ ಯಶ್‌ ಅಭಿನಯಿಸುತ್ತಿರುವ ‘ಕೆಜಿಎಫ್‌ 2’ ಪಟ್ಟಿಯ ಅಗ್ರಸ್ಥಾನದಲ್ಲಿದೆ. 2018ರಲ್ಲಿ ಮೊದಲ ಪಾರ್ಟ್‌ ತೆರೆಕಂಡಿತ್ತು. ಆಗ ಭಾರತದಾದ್ಯಂತ ಸಂಚಲನ ಸೃಷ್ಟಿಸಿದ್ದ ಸಿನಿಮಾ ಸಹಜವಾಗಿಯೇ ನಿರೀಕ್ಷೆ ಹುಟ್ಟುಹಾಕಿದೆ. ಸೆಕೆಂಡ್‌ ಪಾರ್ಟ್‌ನಲ್ಲಿ ಬಾಲಿವುಡ್‌ ತಾರೆಯರಾದ ಸಂಜಯ್‌ ದತ್ತ ಮತ್ತು ರವೀನಾ ಟಂಡನ್‌ ತಾರಾಬಳಗಕ್ಕೆ ಸೇರ್ಪಡೆಯಾಗಿದ್ದಾರೆ ಎನ್ನುವುದು ವಿಶೇಷ. ರಾಜಮೌಳಿ ನಿರ್ದೇಶನದಲ್ಲಿ ಜ್ಯೂನಿಯರ್‌ ಎನ್‌ಟಿಆರ್‌, ರಾಮ್‌ಚರಣ್‌ ತೇಜಾ, ಅಲಿಯಾ ಭಟ್‌ ಅಭಿನಯಿಸಿರುವ ‘RRR’ ಎರಡನೇ ಸ್ಥಾನದಲ್ಲಿದೆ. ರಾಜಮೌಳಿ ಅವರ ‘ಬಾಹುಬಲಿ’ ದೊಡ್ಡ ಯಶಸ್ಸು ಕಂಡಿತ್ತು. ಅಮೀರ್‌ ಖಾನ್‌, ಕರೀನಾ ಕಪೂರ್‌ ನಟನೆಯ ‘ಲಾಲ್‌ ಸಿಂಗ್‌ ಛಡ್ಡಾ’ಗೆ ಮೂರನೇ ಸ್ಥಾನ. ಟಾಮ್‌ ಹ್ಯಾಂಕ್‌ ನಟನೆಯ ‘ಫಾರೆಸ್ಟ್‌ ಗಂಪ್‌’ ಇಂಗ್ಲಿಷ್‌ ಸಿನಿಮಾದ ಹಿಂದಿ ಅವತರಣಿಕೆಯಿದು.

ಮುಂದಿನ ಸರದಿ ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ ‘ಗಂಗೂಭಾಯಿ ಕಥೈವಾಡಿ’. ನೈಜ ಘಟನೆಗಳನ್ನು ಆಧರಿಸಿದ ಸಿನಿಮಾಗೆ ಅಲಿಯಾ ಭಟ್‌ ನಾಯಕಿ.
ವಿಜಯ್‌ ಅಭಿನಯದ ‘ಬೀಸ್ಟ್‌’ ತಮಿಳು ಸಿನಿಮಾ ಐದನೇ ಸ್ಥಾನದಲ್ಲಿದೆ. ನೆಲ್ಸನ್‌ ದಿಲೀಪ್‌ ಕುಮಾರ್‌ ನಿರ್ದೇಶನದ ಆಕ್ಷನ್‌ – ಥ್ರಿಲ್ಲರ್‌ ಚಿತ್ರವಿದು. ಕಂಗನಾ ರನಾವತ್‌ ನಟನೆಯ ಆಕ್ಷನ್‌ – ಥ್ರಿಲ್ಲರ್‌ ‘ಧಾಕಡ್‌’ ಆರನೇ ಸ್ಥಾನದಲ್ಲಿದೆ. ರಝ್ನೀಶ್‌ ರೇಝಿ ಘಾಯ್‌ ನಿರ್ದೇಶನದ ಚಿತ್ರದ ಪ್ರಮುಖ ಪಾತ್ರದಲ್ಲಿ ಅರ್ಜುನ್‌ ರಾಮ್‌ಪಾಲ್‌ ಇದ್ಧಾರೆ. ಪ್ರಭಾಸ್‌ ಮತ್ತು ಪೂಜಾ ಹೆಗ್ಡೆ ಜೋಡಿಯ ‘ರಾಧೆ ಶ್ಯಾಮ್‌’ ಏಳನೇ ಸ್ಥಾನದಲ್ಲಿದ್ದರೆ, ರಣಬೀರ್‌ ಕಪೂರ್‌ ಮತ್ತು ಅಲಿಯಾ ಭಟ್‌ ಜೋಡಿಯ ‘ಬ್ರಹ್ಮಾಸ್ತ್ರ’ ಎಂಟನೇ ಜಾಗದಲ್ಲಿದೆ. ಅಯಾನ್‌ ಮುಖರ್ಜಿ ನಿರ್ದೇಶನದ ಸಿನಿಮಾ ನಾಲ್ಕು ವರ್ಷಗಳ ಹಿಂದೆ ಘೋಷಣೆಯಾಗಿತ್ತು. ಟೈಗರ್‌ ಶ್ರಾಫ್‌ ಆಕ್ಷನ್‌ ಸಿನಿಮಾ ‘ಹೀರೋಪಂಥಿ 2’ ಒಂಬತ್ತನೇ ಸ್ಥಾನದಲ್ಲಿದೆ. ಅಹಮದ್‌ ಖಾನ್‌ ನಿರ್ದೇಶನದ ಚಿತ್ರದ ಹಿರೋಯಿನ್‌ ತಾರಾ ಸುತಾರಿಯಾ. ಪ್ರಭಾಸ್‌, ಸೈಫ್‌ ಅಲಿ ಖಾನ್‌ ಮತ್ತು ಕೃತಿ ಸನೂನ್‌ ನಟನೆಯ ‘ಆದಿಪುರುಷ್‌’ ಕೊನೆಯ ಸ್ಥಾನದಲ್ಲಿದೆ. ‘ರಾಮಾಯಣ’ದ ಕತೆಯ ಚಿತ್ರವನ್ನು ಓಂ ರಾವತ್‌ ನಿರ್ದೇಶಿಸುತ್ತಿದ್ದಾರೆ.

‘ಗಂಗೂಭಾಯಿ ಕಥೈವಾಡಿ’ ಹಿಂದಿ ಸಿನಿಮಾದಲ್ಲಿ ಅಲಿಯಾ ಭಟ್‌

LEAVE A REPLY

Connect with

Please enter your comment!
Please enter your name here