‘ಜೊತೆಗೆ ಬಂದಾತ ಯಾರು?’ ಅನ್ನುವ ಪ್ರಶ್ನೆ ಸಿನಿಮಾದ ಪಾತ್ರಧಾರಿಗೂ, ಪ್ರೇಕ್ಷಕನಿಗೂ ತಲೆಯಲ್ಲಿ ಕೊರೆಯುತ್ತಿರುವಾಗಲೇ ಇಡೀ ಕಥೆ ನಮ್ಮನ್ನು ತನ್ನಲ್ಲಿ ಸೆಳೆದುಕೊಂಡು ಮುಂದೆ ಸಾಗುತ್ತದೆ. ಇದು ನಿರ್ದೇಶಕರ ಕಥೆ ಹೇಳುವ ತಂತ್ರವೆಂದೇ ಭಾವಿಸಬಹುದು. ಪ್ರೇಮ್‌ಕುಮಾರ್ ನಿರ್ದೇಶನದ ‘ಮೇಯ್ಯಳಗನ್’ ತಮಿಳು ಸಿನಿಮಾ Netflixನಲ್ಲಿ ಸ್ಟ್ರೀಮ್ ಆಗುತ್ತಿದೆ.
ಕೆಲವು ಸಿನಿಮಾಗಳಿಗೆ ಸಬ್‌ಟೈಟಲ್ಸ್ ಇದ್ದರೂ ಕೂಡ ಕೇವಲ ಭಾಷಾ ತರ್ಜುಮೆಯೊಂದೇ ಆ ಭಾವವನ್ನು ನಮಗೆ ನೇರವಾಗಿ ದಾಟಿಸುವುದಿಲ್ಲ. ಭಾಷೆ ಗೊತ್ತಿದ್ದು, ಕೊಂಚವಾದರೂ ಆ ಸಿನಿಮಾದ ಕಥೆ ನಡೆಯುವ ಸ್ಥಳಗಳ ಜನಜೀವನ, ಸಂಸ್ಕೃತಿಯ ಅರಿವಿರಬೇಕು. ಆಗ ಆ ಸಿನಿಮಾ ಬರೀ ಕಥೆ ಇಷ್ಟವಾಗುವುದಕ್ಕಿಂತ ಹೆಚ್ಚಾಗಿ ನಮ್ಮ ಮನಸ್ಸನ್ನು ತಾಕುತ್ತದೆ. ‘ಮೇಯ್ಯಳಗನ್’ ವಿಚಾರದಲ್ಲೂ ಅಷ್ಟೇ. ತಮಿಳು ಗೊತ್ತಿದ್ದು ಆ ಕಥೆ ನಡೆಯುವ ಸ್ಥಳದ ಪರಿಚಯವಿದ್ದರಂತೂ ಇದು ನಮಗೆ ಕನೆಕ್ಟ್ ಆಗುವ ರೀತಿಯೇ ಬೇರೆ. ಈ ಸಿನಿಮಾ ನಮ್ಮೊಳಗೆ ಇಳಿಯಬೇಕೆಂದರೆ ಗದ್ದಲವಿಲ್ಲದೆ, ಯಾವುದೇ ಅಡಚಣೆ ಇಲ್ಲದೆ ಒಂದೇ ಗುಕ್ಕಿನಲ್ಲಿ ನೋಡಬೇಕು.
’96’ ಸಿನಿಮಾ ಬಗ್ಗೆ ಆಲೋಚಿಸುವಾಗಲೂ ಅದೊಂದು ಸಂದೇಹವಿತ್ತು. ಸಿನಿಮಾದ ಕಥೆಯಲ್ಲಿ ಭಗ್ನಪ್ರೇಮದ ಎಳೆ ಇರುವುದರಿಂದ ನಮಗೆ ಆ ಸೆಂಟಿಮೆಂಟ್ ಕನೆಕ್ಟ್ ಆಗುತ್ತಿದೆಯಾ ಅಂತ. ಅದನ್ನು ಪೂರ್ತಿಯಾಗಿ ನಿರ್ದೇಶಕ ಪ್ರೇಮ್‌ಕುಮಾರ್ ಅವರು ‘ಮೇಯ್ಯಳಗನ್’ ಸಿನಿಮಾದಲ್ಲಿ ಅಲ್ಲಗೆಳೆದಿದ್ದಾರೆ. ಏಕೆಂದರೆ ಪ್ರೇಮಕುಮಾರ್ ಅವರು ಕಥೆ ಹೇಳುವ ಧಾಟಿಯೇ ಭಿನ್ನವಿದೆ. ಅಲ್ಲೊಂದು ಸಾವಧಾನವಿದೆ. ಮುಂದೆ ನಮಗೆ ಆ ಸಿನಿಮಾ ದಾಟಿಸಬೇಕಾದ ಫೀಲ್‌ನ ಸಂಪೂರ್ಣ ಅನುಭವ ಬೇಕೆಂದರೆ ಆ ಕಥೆ ಸಾಗುವ ಗತಿಯೊಂದಿಗೆ ಹೊಂದಿಕೊಳ್ಳಬೇಕು. ಅದಕ್ಕೆ ಒಂದು ಸಂಯಮ ಬೇಕು. ಏಕೆಂದರೆ ಇಲ್ಲಿ ನಿರ್ದೇಶಕರಿಗೆ ಒಂದೇ ಗುಕ್ಕಿನಲ್ಲಿ ಎಲ್ಲ ಪಾತ್ರಗಳನ್ನು ಪರಿಚಯಿಸಿಬಿಡುವ ಹಪಾಹಪಿ ಇರುವುದಿಲ್ಲ. ಕಥೆ ಕೂಡ ಅಷ್ಟೇ. ಮೊದಲನೇ ದೃಶ್ಯದಲ್ಲೇ ಇಡೀ ಸಿನಿಮಾ ಯಾವುದರ ಬಗ್ಗೆ ಇದೆ ಅಂತ ಏಕಾಏಕಿ ಹೇಳಿಬಿಡುವ ತರಾತುರಿಯಿಲ್ಲ.
’96’ ಸಿನಿಮಾದಲ್ಲಿ ಎಷ್ಟೋ ವರ್ಷಗಳಾದ ನಂತರ ಒಂದೇ ಕ್ಲಾಸಿನಲ್ಲಿ ಓದುತ್ತಿದ್ದ ಹುಡುಗ ಹುಡುಗಿ ಇಬ್ಬರು ಭೇಟಿಯಾಗುತ್ತಾರೆ. ಆರಂಭದಲ್ಲೇ ಅವರಿಬ್ಬರ ಮಧ್ಯೆ ಯಾವುದೋ ಪ್ರೀತಿ ಇರಬಹುದು ಅನ್ನುವ ವಿಷಯವನ್ನಷ್ಟೇ ನಿರ್ದೇಶಕರು ಹೇಳುತ್ತಾರೆ. ಕಥೆ ಸಾಗುತ್ತಾ ಹೋದಂತೆ ಅವರಿಬ್ಬರೂ ಬಾಲ್ಯದಲ್ಲಿ ಹೇಗಿದ್ದರು? ನಂತರ ಹೇಗೆ ಬೇರೆಬೇರೆಯಾದರು? ಇಬ್ಬರು ಪರಸ್ಪರ ಭೇಟಿಯಾಗಲು ಪ್ರಯತ್ನಿಸಿದರಾ? ನಂತರ ಏನಾಯ್ತು? ಸದ್ಯದ ಪರಿಸ್ಥಿತಿಯಲ್ಲಿ ಆ ಹುಡುಗಿಗೆ ಮದುವೆಯಾಗಿದೆಯಾ? ಅನ್ನುವ ವಿಷಯಗಳನ್ನು ಹೇಳಲು ಇಡೀ ಸಿನಿಮಾವನ್ನು ಬಳಸಿಕೊಂಡಿದ್ದಾರೆ. ಹೀಗಿರುವಾಗ ಅವರಿಬ್ಬರು ಮತ್ತೆ ಒಂದಾಗಬಹುದು ಅನ್ನುವ ಪ್ರಶ್ನೆ ತಲೆಯಲ್ಲಿ ಕೊರೆಯುತ್ತಿರುವಾಗಲೇ ಈ ಹಿಂದೆ ಹೇಳಿದ ಎಲ್ಲಾ ವಿವರಗಳನ್ನು ಪ್ರೇಕ್ಷಕ ಕುತೂಹಲದಿಂದ ನೋಡುತ್ತಾ ಎಂಜಾಯ್ ಮಾಡುತ್ತಾನೆ. ಪ್ರಶ್ನೆಗಳಿಗೆ ಉತ್ತರ ಸಿಕ್ಕಿತು ಅನ್ನುವಷ್ಟರಲ್ಲಿ ಸಿನಿಮಾ ಅಂತ್ಯಕ್ಕೆ ಬಂದಿರುತ್ತದೆ.
‘ಮೇಯ್ಯಳಗನ್’ ಸಿನಿಮಾದಲ್ಲಿ ಕೂಡ ಅಷ್ಟೇ. ‘ಜೊತೆಗೆ ಬಂದಾತ ಯಾರು?’ ಅನ್ನುವ ಪ್ರಶ್ನೆ ಸಿನಿಮಾದ ಪಾತ್ರಧಾರಿಗೂ, ಪ್ರೇಕ್ಷಕನಿಗೂ ತಲೆಯಲ್ಲಿ ಕೊರೆಯುತ್ತಿರುವಾಗಲೇ ಇಡೀ ಕಥೆ ನಮ್ಮನ್ನು ತನ್ನಲ್ಲಿ ಸೆಳೆದುಕೊಂಡು ಮುಂದೆ ಸಾಗುತ್ತದೆ. ಇದು ನಿರ್ದೇಶಕ ಪ್ರೇಮ್‌ಕುಮಾರ್ ಅವರು ಕಥೆ ಹೇಳುವ ತಂತ್ರವೆಂದೇ ಪರಿಗಣಿಸಬಹುದು.
ಅಲ್ಲೇ ಹಿಂದೆ ಉಳಿದು ಹೋದ ಗೆಳೆಯರು ಮತ್ತು ಸಂಬಂಧಗಳನ್ನು ಬಿಟ್ಟು ಬಹುತೇಕರು ತಮ್ಮ ಹುಟ್ಟೂರುಗಳಿಂದ ಇನ್ನೊಂದು ಊರಿಗೆ ಬಂದಾಗಿದೆ. ಅದು ಕೆಲಸಕ್ಕಾಗಿರಬಹುದು ಅಥವಾ ಬೇರೊಂದು ಕಾರಣಕ್ಕಾಗಿರಬಹುದು. ಊರು ಬಿಟ್ಟು ಬಂದು ದಶಕಗಳಾದ ಮೇಲೆ ಒಮ್ಮೆ ಬಾಲ್ಯವನ್ನು ನೆನಪಿಸಿಕೊಂಡರೆ ಚಿಕ್ಕಂದಿನಲ್ಲಿ ನಮ್ಮೊಡನೆ ಒಡನಾಡಿದ್ದ ಅನೇಕರ ಹೆಸರುಗಳೇ ನೆನಪಾಗುತ್ತಿಲ್ಲ. ನಾವು ಬೆಳೆದ ವಾತಾವರಣದ ಹಸು, ಹೆಮ್ಮೆ, ಕರು, ಕೋಳಿ, ಹೊಲ, ಗದ್ದೆ, ಮನೆ, ಕೆರೆ, ಹಳ್ಳ, ಬೆಟ್ಟ, ಗುಡ್ಡ, ದೇವಸ್ಥಾನ ಇವೆಲ್ಲವೂ ನಮ್ಮ ನೆನಪಿನಲ್ಲಿ ಕೊಂಚಕೊಂಚವೇ ಮಸುಕಾಗುತ್ತಿವೆ. ಈ ಸಿನಿಮಾ ನೋಡುವಾಗ ಇದ್ದಕ್ಕಿದ್ದಂತೆ ಅವೆಲ್ಲವೂ ನೆನಪಾಗಿ ಕಣ್ಣಂಚು ಒದ್ದೆಯಾಗುವುದು ಸಹಜ. ಈ ಕ್ಷಣ ಅವುಗಳೆಲ್ಲ ನೆನಪಾದರೆ ತಕ್ಷಣವೇ ಓಡಿ ಹೋಗಿ ಅವು ಈಗ ಹೇಗಿರಬಹುದೆಂದು ನೋಡುವ ತವಕವಾಗುತ್ತದೆ. ಆ ಕಥೆಯನ್ನು ಹೇಳುವುದೇ ‘ಮೇಯ್ಯಳಗನ್’. ಮುಖ್ಯವಾಗಿ ಈ ಸಿನಿಮಾ ಯಾರನ್ನೂ ಕೆಟ್ಟವರು, ಒಳ್ಳೆಯವರು ಎಂದು ನೇರವಾಗಿ ಅಥವಾ ಪರೋಕ್ಷವಾಗಿ ಹೇಳುವುದಿಲ್ಲ. ಒಂದು ಘಟ್ಟದಲ್ಲಂತೂ ಒಂದು ಪಾತ್ರ ‘ಯಾರಿಗೂ ಕೇಡು ಬಯಸಬಾರದು. ಎಲ್ಲರನ್ನೂ ಕ್ಷಮಿಸಿ ಮುಂದೆ ಹೋಗಬೇಕು’ ಅಂತ ದೊಡ್ಡ ಮನಸ್ಸಿನಿಂದ ಹೇಳುತ್ತದೆ.
ಅದಕ್ಕಿಂತಲೂ ಮುಖ್ಯವಾಗಿ ಹತ್ತಿರದ ಸಂಬಂಧಗಳಲ್ಲೇ ಯಾವುದೋ ಒಂದು ವಿಚಾರಕ್ಕೆ ಮನಸ್ತಾಪವಾಗಿ ಆ ಕ್ಷಣದ ಕೋಪಕ್ಕೆ ಬೇಸರಗೊಂಡು ಊರು ಬಿಟ್ಟು ಹೊರಗೆ ಬಂದಿದ್ದರೆ ‘ಆ ಅಹಮ್ಮುಗಳನ್ನೆಲ್ಲ ಬಿಟ್ಟು ಎಲ್ಲವನ್ನೂ ಮರೆತು ಮತ್ತೊಮ್ಮೆ ಅಲ್ಲಿಗೆ ಭೇಟಿ ಕೊಡಿ’ ಎನ್ನುತ್ತ ಆ ಆಸೆಯನ್ನು ಈ ಸಿನಿಮಾ ಮನಸ್ಸಿನೊಳಗೆ ಚಿಗುರಿಸುತ್ತದೆ. ನಾವು ಸಾಕಿದ್ದ ಎಮ್ಮೆ, ಕರು, ಹಸುಗಳಿಗೆ ಒಂದೊಂದು ಹೆಸರಿಟ್ಟಿದ್ದೆವು ಅನ್ನುವುದನ್ನು ಹೇಳಿದರೂ ಈಗಿನ ಮಕ್ಕಳು ನಗಬಹುದು. ಈ ಸಿನಿಮಾದಲ್ಲಂತೂ ಯಾವುದನ್ನೂ ಕೇವಲ ವಸ್ತುವಾಗಿ, ಬರೀ ಪ್ರಾಣಿಯಾಗಿ, ಬರಿಯ ವ್ಯಕ್ತಿಗಳಾಗಿ ನೋಡದೆ ಅವುಗಳೊಡನೆ ಏರ್ಪಡುವ ನಂಟನ್ನು ಮನೋಜ್ಞವಾಗಿ ತೋರಿಸಿದ್ದಾರೆ. ಇವೆಲ್ಲವನ್ನೂ ನೋಡುವಾಗ ಮತ್ತೊಮ್ಮೆ ನಮ್ಮ ನೆನಪುಗಳಿಗೆ ಜಾರುವುದು 100% ಗ್ಯಾರಂಟಿ.
ಕಾರ್ತಿಯ ಪಾತ್ರದ ಬಗ್ಗೆ ವಿವರವಾಗಿ ಹೇಳುವುದಕ್ಕಿಂತ ಸಿನಿಮಾ ನೋಡುತ್ತಲೇ ಅದನ್ನು ಎಂಜಾಯ್ ಮಾಡಬೇಕು. ಕಾರ್ತಿಯ ಪಾತ್ರದಷ್ಟು ಸಂಪೂರ್ಣವಾಗಿ ಇಲ್ಲದಿದ್ದರೂ ಹೆಚ್ಚು ಕಡಿಮೆ ಅದನ್ನೇ ಹೋಲುವ ಸಹೃದಯಿಗಳನ್ನು ನಾನು ಊರಿನಲ್ಲಿ ಕಣ್ಣಾರೆ ಕಂಡಿದ್ದೇನೆ. ಹಾಗಾಗಿ ಈ ಸಿನಿಮಾ ನೋಡುವಾಗ ಅವರೇ ನೆನಪಾಗುತ್ತಿದ್ದರು! ಅರವಿಂದ್ ಸ್ವಾಮಿಯ ಪಾತ್ರವಂತೂ ಊರನ್ನು ಬಿಟ್ಟು ಮತ್ತೊಂದೂರಿಗೆ ಬಂದಿರುವ ನಮ್ಮೆಲ್ಲರ ಮನಸ್ಥಿತಿಗೆ ಹಿಡಿದ ಕನ್ನಡಿ!
ಒಂದೇ ಕ್ಷಣದಲ್ಲಿ ಪ್ರೇಕ್ಷಕನನ್ನು ಅಳಿಸಿಬಿಡುವ ಈ ಇಬ್ಬರ ಪಾತ್ರಗಳು ಇಡೀ ಸಿನಿಮಾದಲ್ಲಿ ಒಂದಕ್ಕೊಂದು ಸವಾಲೆಸೆಯುತ್ತವೆ. ಒಂದು ಸಿನಿಮಾದಲ್ಲಿ ಪ್ರತಿಯೊಬ್ಬ ಕಲಾವಿದರಿಗೂ ನಟನೆಯ ಸವಾಲು ಹೀಗಿದ್ದರೆ ಚಂದ ಅಂತ ಈ ಸಿನಿಮಾ ನೋಡಿದಾಗ ಅನ್ನಿಸಿದ್ದು ಸುಳ್ಳಲ್ಲ. ಯಾಂತ್ರಿಕವಾಗಿ ಯೋಚಿಸುತ್ತ ಜಂಜಾಟಗಳಲ್ಲಿ ಮುಳುಗಿ ಹೋದ ನಮ್ಮನ್ನು ನಿಧಾನವಾಗಿ ತನ್ನೊಳಗೆ ಸೆಳೆದುಕೊಳ್ಳುತ್ತ, ನಮ್ಮೊಳಗೆ ಹುದುಗಿಹೋದ ನೆನಪುಗಳನ್ನು ಬಡಿದೆಬ್ಬಿಸುತ್ತ ಮತ್ತೆ ಆಲೋಚಿಸುವಂತೆ ಮಾಡುವ ಈ ಥರದ ಸಿನಿಮಾಗಳು ಎಲ್ಲ ಭಾಷೆಗಳಲ್ಲೂ ಬರಬೇಕು.