ಪ್ಯಾನ್‌ ಇಂಡಿಯಾ ಸಿನಿಮಾಗಳ ಮೂಲಕ ದೇಶದ ಗಮನ ಸೆಳೆದಿರುವ ಹೊಂಬಾಳೆ ಫಿಲಂಸ್‌ ಕಾಲಿವುಡ್‌ಗೆ ಪದಾರ್ಪಣೆ ಮಾಡಿದೆ. ಅವರು ಅಲ್ಲಿ ‘ರಘುತಥಾ’ ಸಿನಿಮಾ ನಿರ್ಮಿಸುತ್ತಿದ್ದು, ಕೀರ್ತಿ ಸುರೇಶ್‌ ನಟಿಸಲಿದ್ದಾರೆ. ಈ ಸ್ತ್ರೀಪ್ರಧಾನ ಸಿನಿಮಾದ ನಿರ್ದೇಶಕರು ಸುಮನ್‌ ಕುಮಾರ್‌.

‘ಕೆಜಿಎಫ್ 2’, ‘ಕಾಂತಾರ’ PAN ಇಂಡಿಯಾ ಸಿನಿಮಾಗಳ ಮೂಲಕ ಭಾರತೀಯ ಸಿನಿಮಾರಂಗದಲ್ಲಿ ಹೊಂಬಾಳೆ ಫಿಲಂಸ್‌ ಛಾಪು ಮೂಡಿಸಿದೆ. ಈ ಬ್ಯಾನರ್‌ನಡಿ ಇದೀಗ ಕನ್ನಡವೂ ಸೇರಿದಂತೆ ತೆಲುಗು, ಮಲಯಾಳಂ ಸಿನಿಮಾಗಳು ತಯಾರಾಗುತ್ತಿವೆ. ಇದೀಗ ಅವರು ತಮಿಳು ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಚಿತ್ರದ ಶೀರ್ಷಿಕೆ ‘ರಥುತಥಾ’. ಇದೊಂದು ಸ್ತ್ರೀಪ್ರಧಾನ ಕತೆಯಾಗಿದ್ದು ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟಿ ಕೀರ್ತಿ ಸುರೇಶ್‌ ಅಭಿನಯಿಸಲಿದ್ದಾರೆ. ಈ ಹಿಂದೆ ‘ದಿ ಫ್ಯಾಮಿಲಿ ಮ್ಯಾನ್‌’ ವೆಬ್‌ ಸರಣಿ ಸೇರಿದಂತೆ ಕೆಲವು ಸಿನಿಮಾಗಳಿಗೆ ಚಿತ್ರಕಥೆ ರಚಿಸಿದ್ದ ಸುಮನ್‌ ಕುಮಾರ್‌ ಸಿನಿಮಾ ನಿರ್ದೇಶಿಸಲಿದ್ದಾರೆ. ದಿಟ್ಟ ಯುವತಿಯ ಕತೆಯಿದು. ಆಕೆ ತನ್ನ ನೆಲ ಮತ್ತು ಜನರ ಗುರುತನ್ನು ರಕ್ಷಿಸುವ ನಿಟ್ಟಿನಲ್ಲಿ ಏನೆಲ್ಲ ಸಾಹಸಗಳನ್ನು ಮಾಡುತ್ತಾಳೆ ಎನ್ನುವುದು ಕತೆ.

ಈ ಚಿತ್ರದ ಕುರಿತು ಮಾತನಾಡುವ ಹೊಂಬಾಳೆ ಫಿಲಂಸ್‌ನ ವಿಜಯ್ ಕಿರಗಂದೂರು, ”ಇದೊಂದು ಕಾಮಿಡಿ – ಡ್ರಾಮಾ ಎನ್ನಬಹುದು. ಸಮಾಜದ ವಿರುದ್ದ ಸವಾಲೆಸೆಯುವ ಗಟ್ಟಿಗಿತ್ತಿ ಯುವತಿಯ ಸುತ್ತ ಕತೆ ಸುತ್ತುತ್ತದೆ. ತನ್ನ ಸಿದ್ಧಾಂತಗಳನ್ನು ಎತ್ತಿಹಿಡಿಯುವುದರ ಜತೆಗೆ, ಸಮಾಜದ ವಿರುದ್ಧ ಹೋರಾಡುತ್ತಲೇ ಆಕೆ ಹೇಗೆ ಎಲ್ಲರಿಗೂ ಸ್ಫೂರ್ತಿಯಾಗುತ್ತಾಳೆ ಎಂಬುದು ಚಿತ್ರದ ವಸ್ತು. ಇಂಥದ್ದೊಂದು ಪಾತ್ರಕ್ಕೆ ಕೀರ್ತಿ ಸುರೇಶ್‌ ಉತ್ತಮ ಆಯ್ಕೆಯಾಗಿದ್ದು, ಅವರೊಂದಿಗೆ ಕೆಲಸ ಮಾಡಲು ಹೊಂಬಾಳೆ ಫಿಲಂಸ್ ಹೆಮ್ಮೆ ಪಡುತ್ತದೆ. ಪ್ರೇಕ್ಷಕರು ನಗುತ್ತಲೇ ಆತ್ಮಾವಲೋಕನ ಮಾಡಿಕೊಳ್ಳುವ ವಿಭಿನ್ನ ಪ್ರಯತ್ನ ಇದಾಗಲಿದೆ” ಎಂದಿದ್ದಾರೆ. ಚಿತ್ರದಲ್ಲಿ ಕೀರ್ತಿ ಸುರೇಶ್ ಜತೆಗೆ ಎಂ.ಎಸ್.ಭಾಸ್ಕರ್, ದೇವದರ್ಶಿನಿ, ರವೀಂದ್ರ ವಿಜಯ್, ರಾಜೇಶ್ ಬಾಲಕೃಷ್ಣನ್ ನಟಿಸುತ್ತಿದ್ದಾರೆ. ಯಾಮಿನಿ ಯಜ್ಞಮೂರ್ತಿ ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿದ್ದು, ‘ಜೈ ಭೀಮ್’ ಖ್ಯಾತಿಯ ಸೀನ್ ರೋಲ್ಡನ್ ಸಂಗೀತ ಸಂಯೋಜಿಸುತ್ತಿದ್ದಾರೆ. ‘ರಘುತಥಾ’ ಚಿತ್ರೀಕರಣ ಪ್ರಾರಂಭವಾಗಿದ್ದು, 2023ರ ಬೇಸಿಗೆಗೆ ಸಿನಿಮಾ ಬಿಡುಗಡೆಯಾಗಲಿದೆ.

Previous articleಕ್ರೈಂ ಜಾನರ್‌ ಸಿನಿಮಾ ‘ಪ್ರಾಯಶಃ’; ಗಂಭೀರ ಪಾತ್ರದಲ್ಲಿ ವಿಜಯ್‌ ಶೋಭರಾಜ್‌
Next articleರಜನೀಕಾಂತ್‌ ಜೊತೆಗಿನ ನೆನಪು; ‘ಗೆಳೆಯ ಶಿವಾಜಿ’

LEAVE A REPLY

Connect with

Please enter your comment!
Please enter your name here