ಚಿತ್ರದ ಒಂದು ಅನಿರೀಕ್ಷಿತ ಪ್ಲಸ್ ಪಾಯಿಂಟ್ ಎಂದರೆ ಇದು ಅತಿಯಾದ ದೇಶಪ್ರೇಮದ ಭಾವದಿಂದ ತಪ್ಪಿಸಿಕೊಂಡಿದೆ. ಆದರೆ ದುರ್ಬಲ ಚಿತ್ರಕಥೆಯನ್ನು, ತೆರೆಗೆ ಅಳವಡಿಸಿರುವ ನಿರ್ದೇಶಕ ಶಂತನು ಬಾಗ್ಚಿ ಅದನ್ನು ಯಾವುದೇ ರೀತಿಯಲ್ಲೂ ಉತ್ತಮಗೊಳಿಸುವ ಪ್ರಯತ್ನ ಮಾಡಿಲ್ಲ. ‘ಮಿಷನ್‌ ಮಜ್ನು’ ಹಿಂದಿ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಭಾರತೀಯ ಗೂಢಚಾರಿ ಸಿನಿಮಾಗಳಲ್ಲಿ, ಭಾರತ ಇರುವುದು ಎಷ್ಚು ಅನಿವಾರ್ಯವೋ ಅಷ್ಟೇ ಅನಿವಾರ್ಯ ಪಾಕಿಸ್ತಾನದ ಇರುವಿಕೆ ಕೂಡ. ಪಾಕಿಸ್ತಾನದ ವಿರುದ್ಧ ಭಾರತೀಯ ಏಜೆಂಟ್ ಸಾಹಸವನ್ನು ತೋರಿಸುವ ಇಂತಹ ಸ್ಪೈ ಥ್ರಿಲ್ಲರ್ ಸಿನಿಮಾಗಳ ಸಾಲಿಗೆ ಮತ್ತೊಂದು ಹೊಸ ಸೇರ್ಪಡೆ ‘ಮಿಷನ್ ಮಜ್ನು’. ಭಾರತ ೧೯೭೪ರಲ್ಲಿ ಪೋಖ್ರಾನ್‌ನಲ್ಲಿ ನಡೆಸಿದ ಮೊದಲ ಪರಮಾಣು ಸ್ಪೋಟದ ನಂತರದಲ್ಲಿ ನಡೆದ ಘಟನೆಗಳನ್ನು ಆಧರಿಸಿದ ಸಿನಿಮಾ ಇದು. ಸಿನಿಮಾದ ಆರಂಭದಲ್ಲಿ ತೋರಿಸುವ ಪ್ರಕಾರ ಇದು ನೈಜ್ಯ ಘಟನೆಗಳನ್ನು ಆಧರಿಸಿದ್ದು. 70ರ ದಶಕದಲ್ಲಿ ನಡೆದ ಹಲವು ವಿದ್ಯಮಾನಗಳನ್ನು ತೋರಿಸುವ ಮೂಲಕ ಚಿತ್ರಕ್ಕೊಂದು ಐತಿಹಾಸಿಕ ಆಧಾರವನ್ನು ಒದಗಿಸಲಾಗಿದೆಯಾದರೂ, ಚಿತ್ರಕಥೆ ಸಾಗುವ ರೀತಿ ಅದನ್ನು ವಾಸ್ತವಿಕತೆಯಿಂದ ದೂರ ಕೊಂಡೊಯ್ಯುತ್ತದೆ.

‘ಸ್ಮೈಲಿಂಗ್ ಬುದ್ಧ’ ಹೆಸರಿನಲ್ಲಿ ಭಾರತ ನಡೆಸಿದ ಪರಮಾಣು ಪರೀಕ್ಷೆಯ ವಿರುದ್ಧ, ಭಾರತದ ಮೇಲೆ ಜಾಗತಿಕ ಒತ್ತಡವನ್ನು ಹೇರಲು ಪಾಕಿಸ್ತಾನ ಬಹಿರಂಗವಾಗಿ ಯತ್ನಿಸುತ್ತಲೇ, ಒಳಗೊಳಗೆ ತಾನೂ ಪರಮಾಣು ಅಸ್ತ್ರದ ತಯಾರಿಗೆ ಮುಂದಾಗುತ್ತದೆ. ಇದರ ಸುಳಿವು ಸಿಕ್ಕ ಭಾರತೀಯ ಬೇಹುಗಾರಿಕಾ ಇಲಾಖೆ ರಾ, ಪಾಕಿಸ್ತಾನದಲ್ಲಿರುವ ತನ್ನ ಏಜೆಂಟ್ ಅಮನ್‌ದೀಪ್‌ ಸಿಂಗ್‌ಗೆ (ಸಿದ್ದಾರ್ಥ್ ಮಲ್ಹೋತ್ರ) ಈ ಕುರಿತು ಮಾಹಿತಿ ಸಂಗ್ರಹಿಸಲು ಹೇಳುತ್ತದೆ. ದರ್ಜಿಯ ವೇಷದಲ್ಲಿ, ತಾರಿಖ್ ಹುಸೇನ್ ಹೆಸರಿನಲ್ಲಿ, ಪಾಕಿಸ್ತಾನದ ಪ್ರಜೆಯಾಗಿ ಬದುಕುತ್ತಿರುವ ಅಮನ್‌ದೀಪ್‌ಗೆ ಬೆನ್ನಿಗಂಟಿದ ಕರಾಳ ಇತಿಹಾಸವೊಂದಿದೆ. ಆತನ ತಂದೆ ದೇಶದ ರಹಸ್ಯ ಮಾಹಿತಿಗಳನ್ನು ಮಾರಿ ದೇಶದ್ರೋಹಿಯೆನಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಕಾರಣ, ತನ್ನ ಹೆಸರಿಗಂಟಿರುವ ಕಪ್ಪುಚುಕ್ಕೆಯನ್ನು ತೊಳೆಯುವ ಪ್ರಯತ್ನದಲ್ಲಿ ರಾ ಏಜೆಂಟ್ ಆಗಿರುವ ಅಮನ್‌ದೀಪ್‌, ತನ್ನ ಅಂಡರ್ ಕವರ್ ಆಪರೇಷನ್ ಭಾಗವಾಗಿ ಪಾಕಿಸ್ತಾನಿ ಹುಡುಗಿ ನಸ್ರೀನ್‌ಳನ್ನು (ರಶ್ಮಿಕಾ ಮಂದಣ್ಣ) ಮದುವೆಯಾಗಿರುತ್ತಾನೆ.

ಈಗ ಪಾಕಿಸ್ತಾನ ಪರಮಾಣು ಪರೀಕ್ಷೆ ನಡೆಸುತ್ತಿರುವ ತಾಣವನ್ನು ಪತ್ತೆಹಚ್ಚುವ ಗುರುತರ ಜವಾಬ್ದಾರಿ ಹೊತ್ತಿರುವ ಅಮನ್‌ದೀಪ್‌ ಅದರಲ್ಲಿ ಹೇಗೆ ಯಶಸ್ವಿಯಾಗುತ್ತಾನೆಂಬುದು ಮುಖ್ಯ ಕತೆ. ಇಂತಹ ಚಿತ್ರವೊಂದಕ್ಕೆ ಬೇಕಾದ ಎಲ್ಲಾ ಭಾವನಾತ್ಮಕ ಮತ್ತು ರೋಚಕ ಅಂಶಗಳನ್ನು ಸೇರಿಸಿ ಕಥೆಯನ್ನು ಹೆಣೆಯಲಾಗಿದೆಯಾದರೂ, ಅವು ಯಾವುವೂ ಮನಸ್ಸನ್ನು ಆಳವಾಗಿ ತಟ್ಟುವುದಿಲ್ಲ. ಎಲ್ಲಾ ಅಂಶಗಳನ್ನೂ ಪಟ್ಟಿ, ಟಿಕ್ ಮಾಡಿ ಮುಗಿಸಿದ ರೀತಿಯಲ್ಲಿ ಮೂಡಿಬಂದಿದೆ. ದೇಶದ್ರೋಹಿಯೊಬ್ಬನ ಮಗ ಎಂಬ ಹಣೆಪಟ್ಟಿ ಹೊತ್ತಿರುವ ವ್ಯಕ್ತಿಯ ಬದುಕು, ಭಾವನೆಗಳನ್ನು ಹಲವು ಸ್ತರಗಳಲ್ಲಿ, ಆಯಾಮಗಳಲ್ಲಿ ನೋಡುವ ಅವಕಾಶವನ್ನು ಸಿನಿಮಾ ಬಳಸಿಕೊಳ್ಳುವುದಿಲ್ಲ. ಪಾಕಿಸ್ತಾನದ ಅಂಧ ಹುಡುಗಿ ಮತ್ತು ರಾ ಏಜಂಟ್ ನಡುವಣ ನಿಷಿದ್ಧ ಪ್ರೇಮ ಕೂಡ ಕಚಗುಳಿಯನ್ನಿಡುವುದಿಲ್ಲ. ನವಿರು ಭಾವವನ್ನೂ ಮೂಡಿಸುವುದಿಲ್ಲ. ಈ ಬೇಹುಗಾರಿಕೆಯ ಪ್ರಕ್ರಿಯೆಯಲ್ಲಿ ಬಲಿಯಾಗುವವರ ಸಾವೂ ಕೂಡ ನಮ್ಮನ್ನು ಗಾಢವಾಗಿ ತಟ್ಟದೆ, ಸುಮ್ಮನೆ ಸಾಗಿ ಹೋಗುತ್ತದೆ.

ಪ್ರೇಕ್ಷಕರ ಮೇಲೆ ಭಾವನಾತ್ಮಾಕವಾಗಿ ಪರಿಣಾಮ ಬೀರುವುದರಲ್ಲಿ ಸೋಲುವ ಚಿತ್ರ ಬೇಹುಗಾರಿಕಾ ಸಿನಿಮಾ ಒದಗಿಸಬಹುದಾದ ರೋಚಕ ತಿರುವು, ಚತುರ ತಂತ್ರಗಾರಿಕೆ, ರೋಮಾಂಚಕ ಸನ್ನಿವೇಶಗಳನ್ನೂ ಹೊಂದಿಲ್ಲದೇ ಇರುವುದರಿಂದ ಆ ವಿಷಯದಲ್ಲೂ ನೀರಸೆನಿಸುತ್ತದೆ. ಅಂಡರ್ ಕವರ್ ಏಜೆಂಟ್ ಒಬ್ಬ ಬೇಹುಗಾರಿಯನ್ನು ಸದ್ದಿಲ್ಲದಂತೆ ಬುದ್ದಿವಂತಿಕೆಯಿಂದ ನಡೆಸಬೇಕೆಂಬ ಸರಿಯಾದ ಸೂತ್ರವನ್ನು ಸಿನಿಮಾ ಅನುಸರಿಸುತ್ತದೆ. ಹೀಗಾಗಿ, ಕತೆಯಲ್ಲಿ ಹೆಚ್ಚು ಆ್ಯಕ್ಷನ್ ಸೇರಿಸದೆ, ಮಾಹಿತಿ ಹೊರತೆಗೆಯಲು ತನ್ನ ಮಾರುವೇಷವನ್ನೇ ಅಮನ್‌ದೀಪ್‌ ಹೆಚ್ಚಾಗಿ ಬಳಸಿಕೊಳ್ಳುತ್ತಾನೆ. ಆದರೆ, ಆ ನಿಟ್ಟಿನಲ್ಲಿ ಬರುವ ಸನ್ನಿವೇಶಗಳು ಮಾತ್ರ ತೀರಾ ಬಾಲಿಶವಾಗಿದೆ. ತನ್ನ ಹೊಸ ದರ್ಜಿಯೊಂದಿಗೆ ಹರಟುತ್ತಾ ಪಾಕಿಸ್ತಾನದ ಟಾಪ್ ಸೀಕ್ರೆಟ್ ಪರಮಾಣು ಪರೀಕ್ಷೆಯ ಬಗ್ಗೆ ತಿಳಿಸುವ ಪಾಕ್ ಸೇನಾ ಅಧಿಕಾರಿ, ರಾವಲ್ಪಿಂಡಿಯಲ್ಲಿ ವೆಸ್ಚರ್ನ್ ಕಮೋಡ್ ಯಾರು ಬಳಸುತ್ತಾರೆ ಎಂಬುದನ್ನು ಅನುಸರಿಸುತ್ತಾ ವಿಜ್ಞಾನಿಯ ಮನೆ ಪತ್ತೆ ಹಚ್ಚುವವ ನಾಯಕ, ಅತೀ ಭದ್ರತೆಯ ಪರಮಾಣು ಪರೀಕ್ಷಾ ತಾಣವನ್ನು ಗ್ರಾಮಸ್ಥರ ವೇಷದಲ್ಲಿ ಸಮೀಪಿಸಿ ಕದ್ದು ನೋಡುವ ಭಾರತೀಯ ಏಜೆಂಟರ ನಂಬಲಸಾಧ್ಯ ಸುಳ್ಳುಗಳನ್ನು ಕೇಳಿಯೂ ಹಾಗೆಯೇ ಬಿಟ್ಟುಬಿಡುವ ಪಾಕ್ ಸೈನಿಕರು, ಅತೀ ಭದ್ರತಾ ಸ್ಥಳಗಳಲ್ಲೆಲ್ಲಾ ಅರಾಮವಾಗಿ ಒಡಾಡಿ ಬರುವ, ಅವರಿವರಲ್ಲಿ ಮಾತಾಡುತ್ತಾ ಮಾಹಿತಿ ಸಂಗ್ರಹಿಸುವ ನಾಯಕ ಹೀಗೆ ಹಲವಾರು ವಿಷಯಗಳು ಕತೆಯನ್ನು ನಂಬಲು ಸಾಧ್ಯವಾಗದಂತೆ ಮಾಡುತ್ತವೆ. ಹೀಗಾಗಿ, ಇದು ಬಹುತೇಕ ಕೊಲೆಗಾರನನ್ನು ಪತ್ತೆ ಮಾಡುತ್ತಿರುವ ಪತ್ತೇದಾರಿಯೊಬ್ಬನ ಸಾಹಸದಂತೆ ಕಾಣುತ್ತದೆಯೇ ಹೊರತು, ಟಾಪ್ ಸೀಕ್ರೆಟ್ ಬೇಹುಗಾರಿಯಂತೆ ಅನಿಸುವುದಿಲ್ಲ.

ಜೊತೆಗೆ, ಇಂತಹ ಅದ್ಭುತ ಐಡಿಯಾಗಳು ನಾಯಕನಿಗೆ ಇನ್ನೇನೋ ಘಟನೆಯಿಂದಲೋ, ಇನ್ಯಾರದೋ ಮಾತಿನಿಂದಲೂ ಹೊಳೆಯುವುದು ತೀರಾ ಕ್ಲೀಷೆಯಂತೆ ಅನಿಸುತ್ತದೆ. ಚಿತ್ರಕಥೆ ಹಲವಾರು ಅನುಕೂಲಕರವಾದ ಸಂಗತಿಗಳನ್ನು ಬಳಸಿಕೊಂಡು ಮುಂದೆ ಸಾಗುತ್ತದೆ. ಜೊತೆಗೆ, ಚಿತ್ರದಲ್ಲಿ ಬಳಸಲಾಗಿರುವ ಪಾಕಿಸ್ತಾನಿ ಉರ್ದು ಕೂಡ ಸಮರ್ಪಕವಾಗಿಲ್ಲ ಎಂಬುದು ಎದ್ದು ಕಾಣುತ್ತದೆ. ಪಾಕಿಸ್ತಾನದಲ್ಲಿ ಅಲ್ಲಿನ ಭಾಷೆಯನ್ನು ಸರಿಯಾಗಿ ಆಡಲಾರದ ವ್ಯಕ್ತಿ, ಅಂಡರ್ ಕವರ್ ಏಜಂಟ್ ಆಗುವುದು ಚಿತ್ರದ ಮತ್ತೊಂದು ಮೈನಸ್ ಪಾಯಿಂಟ್. ಚಿತ್ರದಲ್ಲಿ ಪ್ರಮುಖವಾದ ಒಂದೇ ಆ್ಯಕ್ಷನ್ ದೃಶ್ಯವಿದೆ. ವಾಸ್ತವಕ್ಕೆ ದೂರವಾದಂತೆ ಕಂಡರೂ, ಚಿತ್ರದ ಉಳಿದ ಭಾಗಗಳಿಗೆ ಹೋಲಿಸಿದರೆ ಅದೇ ಕೊಂಚ ಮಟ್ಟಿನ ಮನರಂಜನೆ ನೀಡುತ್ತದೆ. ಚಿತ್ರದಲ್ಲಿರುವ ಐತಿಹಾಸಿಕ ವಿದ್ಯಮಾನಗಳು ಕೊಂಚ ಮಟ್ಟಿಗೆ ಕುತೂಹಲ ಕೆರಳಿಸುತ್ತವೆ. ಇಂದಿರಾಗಾಂದಿ, ಭುಟ್ಟೋ, ಮೊರಾರ್ಜಿ ದೇಸಾಯಿ, ಜಿಯಾ ಉಲ್ ಹಕ್ ಮುಂತಾದ ಹಲವು ಪಾತ್ರಗಳು ಚಿತ್ರಕಥೆಗೆ ಸ್ವಲ್ಪ ಜೀವ ತುಂಬಿವೆ. ಉಳಿದ ದೃಶ್ಯಗಳಿಗೆ ಹೋಲಿಸಿದರೆ ಈ ದೃಶ್ಯಗಳೇ ಹೆಚ್ಚು ಆಸಕ್ತಿಕರವಾಗಿದೆ.

ಚಿತ್ರದ ಒಂದು ಅನಿರೀಕ್ಷಿತ ಪ್ಲಸ್ ಪಾಯಿಂಟ್ ಎಂದರೆ ಇದು ಅತಿಯಾದ ದೇಶಪ್ರೇಮದ ಭಾವದಿಂದ ತಪ್ಪಿಸಿಕೊಂಡಿದೆ. ಆದರೆ, ಭಾರತೀಯ ಸಿನಿಮಾಗಳಲ್ಲಿರುವ ಪಾಕಿಸ್ತಾನದ ಸ್ಚಿರಿಯೋಟೈಪ್‌ಗಳನ್ನು ಹಾಗೆಯೇ ಮುಂದುವರಿಸಿದೆ. ರಷ್ಮಿಕಾ ಮತ್ತು ಸಿದ್ದಾರ್ಥ ನಡುವಿನ ಕೆಮಿಸ್ಚ್ರಿಯಾಗಲೀ, ಅಥವಾ ರಾವಲ್ಪಿಂಡಿಯಲ್ಲಿ ನಾಯಕನಿಗೆ ನೆರವಾಗುವ ಇತರ ರಾ ಎಜೆಂಟ್‌ಗಳ ಜೊತೆ ನಾಯಕನ ಬಾಂಧವ್ಯವಾಗಲೀ ಗಮನ ಸೆಳೆಯುವುದಿಲ್ಲ. ಯಾರ ನಟನೆಯೂ ನೆನಪಿನಲ್ಲಿ ಉಳಿಯವುದಿಲ್ಲ. ಫರ್ವೇಜ್ ಶೇಖ್ ಮತ್ತು ಅಸೀಮ್ ಅರೋರಾ ಅವರ ಜಾಣ್ಮೆಯಿಲ್ಲದ, ದುರ್ಬಲ ಚಿತ್ರಕಥೆಯನ್ನು, ತೆರೆಗೆ ಅಳವಡಿಸಿರುವ ನಿರ್ದೇಶಕ ಶಂತನು ಬಾಗ್ಚಿ ಅದನ್ನು ಯಾವುದೇ ರೀತಿಯಲ್ಲೂ ಉತ್ತಮಗೊಳಿಸುವ ಪ್ರಯತ್ನವನ್ನು ಮಾಡಿಲ್ಲ. ಇದು ಅವರ ಚೊಚ್ಚಲ ಚಿತ್ರ ಎಂದು ವಿನಾಯತಿ ನೀಡಬಹುದಾದರೂ, ಸಾಕಷ್ಚು ಹೊಸ ಪ್ರತಿಭೆಗಳು ಚೊಚ್ಚಲ ಚಿತ್ರದಲ್ಲೇ ಗಮನ ಸೆಳೆಯುತ್ತಿರುವುದರಿಂದ, ಶಂತನು ಅವರಿಗೆ ಇದೊಂದು ಕಳೆದುಹೋದ ಅವಕಾಶವೆಂದೇ ಹೇಳಬಹುದು. ಕೇತನ್ ಸೂದ ಅವರ ಹಿನ್ನೆಲೆ ಸಂಗೀತದಲ್ಲಾಗಲಿ, ಹಾಡುಗಳಲ್ಲಾಗಲಿ ಹೊಸದೇನೂ ಇಲ್ಲ. ಇದು ೭೦ರ ದಶಕದ ಕತೆ ಹೇಳುವ ಪಿರಿಯಡ್ ಸಿನಿಮಾವಾದರೂ, ೭೦ರ ದಶಕದಲ್ಲಿ ಬಂದ ಸಿನಿಮಾವೇನೋ ಎಂಬ ಭಾವ ಮೂಡಿಸಿದರೂ ಅಚ್ಚರಿಯಿಲ್ಲ. ಥಿಯೇಟರ್ ಬಿಡುಗಡೆಯ ವಿಷಯದಲ್ಲಿ ಹಲವಾರು ಅಡೆತಡೆಗಳನ್ನು ಎದುರಿಸಿದ್ದ ಸಿನಿಮಾ ‘ಮಿಷನ್ ಮಜ್ನು’ ಈಗ ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಕಂಡಿದ್ದು, ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

LEAVE A REPLY

Connect with

Please enter your comment!
Please enter your name here