ನೋಬೆಲ್ ಪುರಸ್ಕೃತ ಸಮಾಜಸೇವಕಿ ಮದರ್ ತೆರೇಸಾ ಜೀವನ ಚರಿತ್ರೆ ವೆಬ್ ಸರಣಿ ರೂಪದಲ್ಲಿ ಸಿದ್ಧವಾಗುತ್ತಿದೆ. ಪಿ ಚಂದ್ರಕುಮಾರ್ ನಿರ್ದೇಶನದ ಸರಣಿ ಹಿಂದಿ ಸೇರಿದಂತೆ ದಕ್ಷಿಣ ಭಾರತದ ಭಾಷೆಗಳಲ್ಲೂ ತಯಾರಾಗಲಿದೆ. ಪತ್ರಕರ್ತರೊಬ್ಬರ ದೃಷ್ಟಿಕೋನದಲ್ಲಿ ಈ ಕತೆ ಇರಲಿದೆ ಎನ್ನುತ್ತಾರೆ ನಿರ್ದೇಶಕ ಪಿ ಚಂದ್ರಶೇಖರ್.
ಪಿ ಚಂದ್ರಶೇಖರ್ ನಿರ್ದೇಶನದಲ್ಲಿ ಪದ್ಮಶ್ರೀ, ನೋಬೆಲ್ ಪುರಸ್ಕೃತ ಮದರ್ ತೆರೇಸಾ ಅವರು ಬಯೋಪಿಕ್ ವೆಬ್ ಸರಣಿ ತಯಾರಾಗಲಿದೆ. ಮಲಯಾಳಂ ಮತ್ತು ಹಿಂದಿ ಸನಿಮಾಗಳ ನಿರ್ದೇಶಕ ಪಿ ಚಂದ್ರಶೇಖರ್ ಈ ಪ್ರಾಜೆಕ್ಟ್‌ಗಾಗಿ ಮೂರು ವರ್ಷ ಕೆಲಸ ಮಾಡಿದ್ದಾರೆ. ಸಾಹಿತಿ, ಚಿತ್ರಕಥೆಗಾರ ದಿ ಜಾನ್‌ಪಾಲ್ ಪುತ್ತುಸ್ಸೆರಿ ಅವರು ಈ ಯೋಜನೆಗೆ ಚಂದ್ರಶೇಖರ್ ಅವರಿಗೆ ಕೈಜೋಡಿಸಿದ್ದರು. ಹಲವು ಭಾಷೆಗಳಲ್ಲಿ ಮೂಡಿಬರಲಿರುವ ಇದು PAN ಇಂಡಿಯಾ ವೆಬ್ ಸರಣಿ ಎನ್ನುತ್ತಾರೆ ಪಿ ಚಂದ್ರಶೇಖರ್. ‘ಮದರ್ ತೆರೇಸಾ ಅವರ ಬಾಲ್ಯ, ಹರೆಯದ ಜೀವನ, ಸಮಾಜ ಸೇವೆಗೆ ನಿಂತಾಗ ನಡೆದ ಘಟನೆಗಳು ಸರಣಿಯಲ್ಲಿ ಇರಲಿವೆ. ಮದರ್ ತೆರೇಸಾ ಅವರು ಹೆಜ್ಜೆ ಇಟ್ಟ ನೆಲದಲ್ಲೇ ಶೂಟಿಂಗ್ ಮಾಡಲಾಗುತ್ತಿದೆ. ಅವರು ನೆಲೆಸಿದ್ದ ರೋಮ್, ಜೆರುಸಲೇಂ, ಬೆತ್ಲಹೆಮ್, ಮ್ಯಾಸಿಡೋನಿಯಾ, ಯುಕೆ ಮತ್ತು ಇಟಲಿಯಂತಹ ಸ್ಥಳಗಳ ಜೊತೆಗೆ ಮದರ್ ತೆರೇಸಾ ಅವರ ಜೀವನದ ಮೇಲೆ ಪ್ರಭಾವ ಬೀರಿದ ಪಶ್ಚಿಮ ಬಾಂಗಾಳ, ಬಾಂಗ್ಲಾದೇಶ, ಮುಂಬೈ, ಕೇರಳ, ಬಿಹಾರ, ಕರ್ನಾಟಕ ಮುಂತಾದ ಪ್ರಮುಖ ಸ್ಥಳಗಳಲ್ಲೂ ಚಿತ್ರಿಸಲಿದ್ದೇವೆ’ ಎನ್ನುತ್ತಾರೆ ನಿರ್ದೇಶಕ ಪಿ ಚಂದ್ರಶೇಖರ್.
ಮಲಯಾಳಂ, ತೆಲುಗು, ತಮಿಳು ಮತ್ತು ಹಿಂದಿ ಚಿತ್ರಗಳನ್ನು ನಿರ್ಮಿಸಿರುವ ಚಂದ್ರಶೇಖರ್ ಈ ಸರಣಿ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಚಂದ್ರಶೇಖರ್ ಮಾತಾನಡಿ, ‘ಕನ್ನಡದಲ್ಲೂ ಸರಣಿ ಮೂಡಿಬರಲಿದೆ. ಯಂಗ್ ತೆರೇಸಾ ಪಾತ್ರಕ್ಕಾಗಿ ಕಲಾವಿದೆಯನ್ನು ಹುಡುಕುತ್ತಿದ್ದೇವೆ. ನಾಲ್ಕು ವರ್ಷದ ಹಿಂದೆಯೇ ಇದರ ಪ್ಲ್ಯಾನ್ ಮಾಡಿದ್ದೆವು. ಮೂರು ಸೀಜನ್‌ಗಳಲ್ಲಿ ಒಟ್ಟು 30 ಎಪಿಸೋಡ್‌ಗಳು ತಯಾರಾಗಲಿವೆ. ಸ್ಟ್ರೀಮಿಂಗ್‌ಗೆ ಸಂಬಂಧಿಸಿದಂತೆ ಮಾತುಕತೆ ನಡೆಯುತ್ತಿದೆ. ಪತ್ರಕರ್ತರೊಬ್ಬರ ದೃಷ್ಟಿಕೋನದಲ್ಲಿ ಈ ಕಥೆ ಸಾಗುತ್ತದೆ’ ಎನ್ನುತ್ತಾರೆ. ಪಿ ಸುಕುಮಾರ್ ಛಾಯಾಗ್ರಹಣ, ಜರೀ ಅಮರದೇವ ಸಂಗೀತ ಸರಣಿಗೆ ಇರಲಿದೆ. ಅನಿತಾ ಮೆನ್ನನ್, ತನಿಮಾ ಮೆನ್ನನ್, ಸಾಪಿಕೌರ್, ಜೋಷಿ ಜೋಸೆಫ್ ಪ್ರಮುಖ ತಾರಾಗಣದಲ್ಲಿದ್ದಾರೆ.