‘ನಟ ಭಯಂಕರ’ ಚಿತ್ರದ ಪೋಸ್ಟರ್ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಬಿಡುಗಡೆ ಮಾಡಿದ್ದಾರೆ. ಪ್ರಥಮ್ ಚಿತ್ರಕಥೆ, ಸಂಭಾಷಣೆ ರಚಿಸಿ, ಹೀರೋ ಆಗಿ ನಟಿಸಿ, ನಿರ್ದೇಶಿಸಿರುವ ಈ ಸಿನಿಮಾ ಸದ್ಯದಲ್ಲೇ ತೆರೆಕಾಣಲಿದೆ.
ಬಿಗ್‌ಬಾಸ್ ಖ್ಯಾತಿಯ ಪ್ರಥಮ್ ಒಂದಿಲ್ಲೊಂದು ರೀತಿ ಸುದ್ದಿಯಲ್ಲಿರುವ ವ್ಯಕ್ತಿ. ಈ ಬಾರಿ ಅವರು ತಮ್ಮ ನಟನೆ, ನಿರ್ದೇಶನದ ‘ನಟ ಭಯಂಕರ’ ಸಿನಿಮಾಗೆ ಸಂಬಂಧಿಸಿದಂತೆ ಸುದ್ದಿಯಾಗಿದ್ದಾರೆ. ತಮ್ಮ ನಿರ್ದೇಶನದ ಚಿತ್ರದ ಪೋಸ್ಟರ್ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ರಿಲೀಸ್ ಮಾಡಿಸಿದ್ದಾರೆ. “ಮುಖ್ಯಮಂತ್ರಿ ಅವರಿಂದ ಪೋಸ್ಟರ್ ಬಿಡುಗಡೆ ಮಾಡಿಸಬೇಕೆಂಬ ಹಂಬವಿತ್ತು. ಕೋವಿಡ್ ನಿಯಮಗಳ ಪ್ರಕಾರ ಪ್ರಸ್ತುತ ಅವರ ಬಳಿ ತುಂಬಾ ಜನ ಹೋಗಲು ಅವಕಾಶವಿರಲಿಲ್ಲ. ಸೀಮಿತ ಜನರೊಂದಿಗೆ ಮಾತ್ರ ಹೋಗಿದ್ದೆವು. ಮುಖ್ಯಮಂತ್ರಿಗಳು ಪೋಸ್ಟರ್ ಮೆಚ್ಚಿ ಶುಭ ಹಾರೈಸಿದರು” ಎನ್ನುತ್ತಾರೆ ಪ್ರಥಮ್.
ಮುಖ್ಯಮಂತ್ರಿಗಳಿಂದ ಪೋಸ್ಟರ್ ಬಿಡುಗಡೆ ಮಾಡಿಸಲು ನೆರವಾದ ಶಾಸಕ ರೇಣುಕಾಚಾರ್ಯ ಅವರಿಗೆ ಪ್ರಥಮ್ ವಿಶೇಷ ಧನ್ಯವಾದ ಹೇಳುತ್ತಾರೆ. ಮುಂದಿನ ದಿನಗಳಲ್ಲಿ ಸಿನಿಮಾ ತೆರೆಕಂಡಾಗ, ಬಿಡುವು ಮಾಡಿಕೊಂಡು ಸಿನಿಮಾ ವೀಕ್ಷಿಸಲು ಮುಖ್ಯಮಂತ್ರಿಗಳಿಗೆ ಅವರು ಮನವಿ ಮಾಡಿದ್ದಾರಂತೆ ಉದಯ್ ಕೆ. ಮೆಹ್ತಾ ಚಿತ್ರಕ್ಕೆ ಕತೆ ರಚಿಸಿದ್ದರೆ ಪ್ರಥಮ್ ಚಿತ್ರಕಥೆ, ಸಂಭಾಷಣೆ ರಚಿಸಿ ನಿರ್ದೇಶನದ ಹೊಣೆಯನ್ನೂ ಹೊತ್ತಿದ್ದಾರೆ. ವಿ.ನಾಗೇಂದ್ರ ಪ್ರಸಾದ್, ನಾಗತಿಹಳ್ಳಿ ಚಂದ್ರಶೇಖರ್, ಬಹದ್ದೂರ್ ಚೇತನ್, ಅರಸು ಅಂತಾರೆ ರಚಿಸಿರುವ ಹಾಡುಗಳಿಗೆ ಪ್ರದ್ಯೋತನ್ ಸಂಗೀತ ಸಂಯೋಜಿಸಿದ್ದಾರೆ. ಒಂದು ಹಾಡನ್ನು ನಟ ಉಪೇಂದ್ರ ಹಾಡಿದ್ದು, ನಟ ಧ್ರುವ ಸರ್ಜಾ ಚಿತ್ರಕ್ಕೆ ಧ್ವನಿ ನೀಡಿದ್ದಾರೆ. ಹಿರಿಯ ನಟ ಸಾಯಿಕುಮಾರ್, ಓಂಪ್ರಕಾಶ್ ರಾವ್, ನಿಹಾರಿಕಾ ಶೆಣೈ, ಸುಶ್ಮಿತ ಜೋಶಿ, ಶೋಭ್ ರಾಜ್, ಕುರಿ ಪ್ರತಾಪ್, ಚಂದನ ರಾಘವೇಂದ್ರ, ಶಂಕರ್ ಅಶ್ವತ್ಥ್, ಮೋಹನ್ ಜುನೇಜಾ ಇತರರು ಅಭಿನಯಿಸಿದ್ದಾರೆ.