ರಮೇಶ್ ಅರವಿಂದ್ ನಟಿಸಿ, ನಿರ್ದೇಶಿಸಿರುವ ಸೈಬರ್ ಕ್ರೈಂ ಥ್ರಿಲ್ಲರ್ ‘100’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಥ್ರಿಲ್ಲಿಂಗ್‌ ಸನ್ನಿವೇಶಗಳ ಮೂಲಕ ಕಟ್ಟಿರುವ ಟ್ರೈಲರ್ ಚಿತ್ರದ ಬಗ್ಗೆ ನಿರೀಕ್ಷೆ ಹುಟ್ಟುಹಾಕುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಬಹುದು. ನವೆಂಬರ್‌ 19ರಂದು ಸಿನಿಮಾ ತೆರೆಗೆ ಬರುತ್ತಿದೆ.

ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಥ್ರಿಲ್ಲರ್ ಜಾನರ್‌ನ ಕತೆಗಳು ಸಿನಿಮಾಗಳಾಗಿ ಬರುತ್ತಿವೆ. ಈ ಪಟ್ಟಿಗೆ ಹೊಸ ಸೇರ್ಪಡೆ ‘100’. ಯಶಸ್ವೀ ‘ಶಿವಾಜಿ ಸುರತ್ಕಲ್‌’ ಚಿತ್ರದ ತನಿಖಾಧಿಕಾರಿಯಾಗಿ ನಟಿಸಿದ ನಂತರ ರಮೇಶ್ ಅವರಿಗೆ ಪೊಲೀಸ್ ಕತೆಗಳ ಬಗ್ಗೆ ಒಲವು ಮೂಡಿದಂತಿದೆ. ಈ ಬಾರಿ ‘100’ ಚಿತ್ರದಲ್ಲಿ ಅವರು ನಟನೆ ಜೊತೆಗೆ ನಿರ್ದೇಶನದ ಹೊಣೆಯನ್ನೂ ಹೊತ್ತಿದ್ದಾರೆ. ಎಮರ್ಜೆನ್ಸೀ ಪೊಲೀಸ್ ದೂರವಾಣಿ ನಂಬರ್‌ ‘100’ ಸಿನಿಮಾ ಶೀರ್ಷಿಕೆಯಾಗಿದ್ದು, ಬಿಡುಗಡೆಯಾಗಿರುವ ಟ್ರೈಲರ್‌ ಚಿತ್ರದ ಕತೆಯ ಬಗ್ಗೆ ನಿರೀಕ್ಷೆ ಮೂಡಿಸಿದೆ.

“ಪ್ರತೀ ಕತೆಗೆ ಹೀರೋ ಮತ್ತು ವಿಲನ್ ಇರುತ್ತಾರೆ. ಇಲ್ಲಿ ಇಬ್ಬರೂ ವಿಲನ್‌ಗಳೇ!” ಎನ್ನುವ ಟ್ರೈಲರ್‌ನಲ್ಲಿನ ಹಿನ್ನೆಲೆ ಧ್ವನಿ ಹೀರೋ ರಮೇಶ್ ಪಾತ್ರ ಹೇಗಿರಬಹುದು ಎನ್ನುವ ಕುತೂಹಲ ಸೃಷ್ಟಿಸಿದೆ. ಪ್ರಸ್ತುತ ಸ್ಯಾಂಡಲ್‌ವುಡ್‌ನ ಬೇಡಿಕೆಯ ಹಿರೋಯಿನ್‌ಗಳಲ್ಲಿ ಒಬ್ಬರಾದ ರಚಿತಾ ರಾಮ್‌ ಚಿತ್ರದಲ್ಲಿ ರಮೇಶ್ ತಂಗಿಯಾಗಿ ಕಾಣಿಸಿಕೊಂಡಿದ್ದಾರೆ ಎನ್ನುವುದು ವಿಶೇಷ. ಅವರ ಪಾತ್ರವೇ ಚಿತ್ರಕಥೆಯ ಕೇಂದ್ರಬಿಂದು. “ಇಂದು ಮನೆಯಲ್ಲಿ ನಾಲ್ಕು ಜನರಿದ್ದರೆ ಎಲ್ಲರಲ್ಲೂ ಒಂದೊಂದು ಮೊಬೈಲ್ ಫೋನ್‌ಗಳಿರುತ್ತವೆ. ನಮ್ಮ ಮೊಬೈಲ್‌ಗಳು ಹೇಗೆಲ್ಲಾ ಸಂಕಷ್ಟ ತಂದೊಡ್ಡಬಹುದು? ಮೊಬೈಲ್‌ನಲ್ಲಿನ ನಮ್ಮ ವೈಯಕ್ತಿಕ ಡಾಟಾ ಹೇಗೆ ಸೈಬರ್‌ ಕ್ರಿಮಿನಲ್‌ಗಳ ಪಾಲಾಗುತ್ತದೆ? ಎನ್ನುವ ವಿಷಯಗಳನ್ನು ಚಿತ್ರದಲ್ಲಿ ಚರ್ಚಿಸಿದ್ದೇವೆ” ಎನ್ನುತ್ತಾರೆ ನಟ, ನಿರ್ದೇಶಕ ರಮೇಶ್‌. ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಪ್ರಕಾಶ್ ಬೆಳವಾಡಿ, ಪೂರ್ಣ, ರಾಜು ತಾಳೀಕೋಟೆ, ಮಾಲತಿ ಸುಧೀರ್ ಇದ್ದಾರೆ. ಸತ್ಯ ಹೆಗಡೆ ಛಾಯಾಗ್ರಹಣ, ರವಿ ಬಸ್ರೂರು ಸಂಗೀತ, ಶ್ರೀನಿವಾಸ್ ಕಲಾಲ್ ಸಂಕಲನ ಚಿತ್ರಕ್ಕಿದೆ.

Previous articleಡಬ್ಬಿಂಗ್ ಸಿನಿಮಾ ವೃತ್ತಿಪರತೆ ಹೆಚ್ಚಲಿ; ‘ಶ್ಯಾಂ ಸಿಂಗಾ ರಾಯ್’ಗೆ ಹಾಡು ಬರೆದ ಕವಿರಾಜ್ ಆಶಯ
Next articleಮೆಗಾ – 154; ಬಾಬ್ಬಿ ನಿರ್ದೇಶನದಲ್ಲಿ ಚಿರಂಜೀವಿ

LEAVE A REPLY

Connect with

Please enter your comment!
Please enter your name here