‘ಪೆದ್ರೊ’ ಕನ್ನಡ ಸಿನಿಮಾ ಚೀನಾದ ಪಿಂಗ್ಯಾವೋ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಗೌರವಕ್ಕೆ ಪಾತ್ರವಾಗಿದೆ. ಈ ಚಿತ್ರದ ನಿರ್ದೇಶನಕ್ಕಾಗಿ ಕನ್ನಡದ ಹುಡುಗ ನಟೇಶ್ ಹೆಗ್ಡೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ.

ಕನ್ನಡಿಗರು ಹೆಮ್ಮೆ ಪಡುವಂತಹ ಸುದ್ದಿಯಿದು. ಕನ್ನಡದ ಹುಡುಗ ನಟೇಶ್ ಹೆಗ್ಡೆ ನಿರ್ದೇಶನದ ‘ಪೆದ್ರೊ’ ಕನ್ನಡ ಚಿತ್ರಕ್ಕೆ ಚೀನಾದ ಪಿಂಗ್ಯಾವೋ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಗೌರವ ಲಭಿಸಿದೆ. ಈ ಚಿತ್ರಕ್ಕಾಗಿ ನಟೇಶ್ ಹೆಗ್ಡೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ. ಖ್ಯಾತ ನಿರ್ದೇಶಕ ರಾಬರ್ಟ್‌ ರೊಸ್ಸೆಲೆನಿ ಅವರ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ಕೊಡಲಾಗುತ್ತದೆ. 10,000 ಡಾಲರ್ ಪ್ರಶಸ್ತಿ ಮೊತ್ತದ ಜೊತೆ ಮೊಮೆಂಟೊ ತಮ್ಮದಾಗಿಸಿಕೊಂಡಿದ್ದಾರೆ ನಟೇಶ್‌. ನಟ, ನಿರ್ದೇಶಕ ರಿಷಬ್‌ ಶೆಟ್ಟಿ ನಿರ್ಮಾಣದ ಈ ಚಿತ್ರದ ಪ್ರಮುಖ ಪಾತ್ರದಲ್ಲಿ (ಪೆದ್ರೊ) ನಟೇಶ್ ಹೆಗ್ಡೆ ಅವರ ತಂದೆ ಗೋಪಾಲ್ ಹೆಗ್ಡೆ ಅಭಿನಯಿಸಿದ್ದಾರೆ. ನಟ ರಾಜ್‌ ಬಿ. ಶೆಟ್ಟಿ, ರಾಮಕೃಷ್ಣಭಟ್ ದುಂಡಿ, ಮೇದಿನಿ ಕೆಳಮನೆ, ನಾಗರಾಜ್ ಹೆಗ್ಡೆ  ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ.

“ನಮ್ಮ ಪ್ರಯತ್ನ ಗುರುತಿಸಿ ಮನ್ನಣೆ ನೀಡಿರುವುದು ಚಿತ್ರತಂಡದ ಎಲ್ಲರಿಗೂ ಖುಷಿ ತಂದಿದೆ. ಈ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕ ರಿಷಬ್ ಶೆಟ್ಟಿ ಮತ್ತು ತಂಡದವರಿಗೆ ಥ್ಯಾಂಕ್ಸ್ ಹೇಳುತ್ತೇನೆ” ಎನ್ನುತ್ತಾರೆ ನಟೇಶ್. ಶಿರಸಿ ಬಳಿಯ ಉಮ್ಮಚಿಗಿ ಗ್ರಾಮದ ನಟೇಶ್ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ‘ಕುರ್ಲಿ’, ‘ನಮಗೆ ನಾವು ಗೋಡೆಗೆ ಮಣ್ಣು’ ಕಿರುಚಿತ್ರಗಳನ್ನು ನಿರ್ದೇಶಿಸಿದ್ದ ಅವರಿಗೆ ‘ಪೆದ್ರೊ’ ಮೊದಲ ಫೀಚರ್ ಫಿಲ್ಮ್‌. ತಮ್ಮೂರಿನ ಸುತ್ತಮುತ್ತಲೇ ಸಿನಿಮಾ ಚಿತ್ರಿಸಿದ್ದಾರೆ. ಕ್ರಿಶ್ಚಿಯನ್ ಧರ್ಮದ ಎಲೆಕ್ಟ್ರೀಷಿನ್‌ ಆಕಸ್ಮಿಕವೊಂದರಲ್ಲಿ ಗೋವಿನ ಸಾವಿಗೆ ಕಾರಣನಾಗುತ್ತಾನೆ. ಈ ಘಟನೆಯ ನಂತರ ಸುತ್ತಲಿನ ಸಮಾಜ ಅವನನ್ನು ನೋಡುವ ಬಗೆ, ಆತನ ತಳಮಳಗಳನ್ನು ನೂರಾ ಎಂಟು ನಿಮಿಷಗಳ ಸಿನಿಮಾದಲ್ಲಿ ಹಿಡಿದಿಟ್ಟಿದ್ದಾರೆ ನಟೇಶ್‌.

‘ಪೆದ್ರೊ’ ನಿರ್ಮಾಪಕ ರಿಷಭ್ ಶೆಟ್ಟಿ, ನಿರ್ದೇಶಕ ನಟೇಶ್ ಹೆಗ್ಡೆ

ಕತೆ, ಚಿತ್ರಕಥೆ ರಚನೆ ನಟೇಶ್ ಹೆಗ್ಡೆ ಅವರದೆ. ವಿಶೇಷವೆಂದರೆ ಚಿತ್ರದಲ್ಲಿ ಪ್ರತ್ಯೇಕವಾಗಿ ಹಿನ್ನೆಲೆ ಸಂಗೀತ ಬಳಕೆ ಮಾಡಿಲ್ಲ. ಸ್ವಾಭಾವಿಕವಾದ ಸದ್ದೇ ಚಿತ್ರದಲ್ಲಿದ್ದು, ಶ್ರೇಯಾಂಕ್ ನಂಜಪ್ಪ ಧ್ವನಿ ವಿನ್ಯಾಸಕಾರರಾಗಿ ಕೆಲಸ ಮಾಡಿದ್ದಾರೆ. ವಿಕಾಸ್ ಅರಸ್‌ ಛಾಯಾಗ್ರಹಣ ಇದ್ದು, ಪರೇಶ್ ಕಾಮದಾರ್ ಮತ್ತು ನಟೇಶ್ ಹೆಗ್ಡೆ ಸಂಕಲನವಿದೆ. ಚೀನಾ ಚಿತ್ರೋತ್ಸವಕ್ಕೆ ಮುನ್ನ ದಕ್ಷಿಣ ಕೊರಿಯಾ ಮತ್ತು ಲಂಡನ್ ಚಿತ್ರೋತ್ಸವಗಳಲ್ಲೂ ‘ಪೆದ್ರೊ’ ಪ್ರದರ್ಶನಗೊಂಡಿತ್ತು. ಮುಂದಿನ ದಿನಗಳಲ್ಲಿ ಮತ್ತಷ್ಟು ಸಿನಿಮೋತ್ಸವಗಳಲ್ಲಿ ಸ್ಕ್ರೀನ್ ಆಗಲು ಸಜ್ಜಾಗಿದೆ.

‘ಒಂದು ಮೊಟ್ಟೆಯ ಕತೆ’ ಸಿನಿಮಾ ಖ್ಯಾತಿಯ ನಿರ್ದೇಶಕ, ನಟ ‘ಪೆದ್ರೊ’ದ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಅವರು ತಮ್ಮ ಪಾತ್ರ ಹಾಗೂ ಚಿತ್ರೋತ್ಸವದಲ್ಲಿ ‘ಪೆದ್ರೊ’ಗೆ ಸಿಕ್ಕ ಗೌರವದ ಬಗ್ಗೆ ಹೇಳುವುದು ಹೀಗೆ – “ಚಿತ್ರದಲ್ಲಿ ಪುಟ್ಟ ಪಾತ್ರದಲ್ಲಿ ನಟಿಸಿದ್ದೇನೆ. ಕತೆಗೆ ತಿರುವು ನೀಡುವಂತಹ, ಹಿಂಸೆಗೆ ಪ್ರೇರೇಪಣೆ ನೀಡುವಂತಹ ಪಾತ್ರ. ಚಿಕ್ಕ ಹುಡುಗನಾದರೂ ನಟೇಶ್ ತುಂಬಾ ಪ್ರಬುದ್ಧ ನಿರ್ದೇಶಕನಂತೆ ಇಲ್ಲಿ ತೋರುತ್ತಾನೆ. ಸಿನಿಮಾ ನೋಡುವಾಗ ನನಗೆ ಒಂದು ರೀತಿ ಮೆಡಿಟೇಷನ್ ಅನುಭವವಾಯ್ತು. ಉತ್ತಮ ಸಿನಿಮಾವೊಂದು ವೀಕ್ಷಕರನ್ನು ಅದು ಹೇಳುವ ಸಮಯ, ಜಾಗಕ್ಕೆ ಕರೆದೊಯ್ಯುತ್ತದೆ. ಸಿನಿಮಾದ ಥೀಮ್ ಯೂನಿವರ್ಸಲ್ ಆಗಿರಬೇಕು, ಸೆಟ್‌ಅಪ್‌ ಲೋಕಲ್ ಆಗಿರಬೇಕು. ಹಾಗಾದರಷ್ಟೇ ಅದು ಒಳ್ಳೆಯ ಸಿನಿಮಾ ಆಗಲು ಸಾಧ್ಯ. ‘ಪೆದ್ರೊ’ಗೆ ಆ ಗುಣವಿದೆ. ನಟೇಶ್ ಅವರಿಗೆ ಅಭಿನಂದನೆಗಳು”

LEAVE A REPLY

Connect with

Please enter your comment!
Please enter your name here