ಕನ್ನಡ ಚಿತ್ರನಿರ್ದೇಶಕ, ನಿರ್ಮಾಪಕ, ಜಿ ಅಕಾಡೆಮಿ ಸಂಸ್ಥಾಪಕರಾದ ಗುರು ದೇಶಪಾಂಡೆ ಈಗ ತಮ್ಮ ಇತ್ತೀಚಿನ ಸಂಕಷ್ಟದಿಂದ ನಿರಾಳವಾಗಿದ್ದಾರೆ. ಮತ್ತೆ ಅವರ ಸಿನಿಮಾ ಪಯಣ ಮುಂದುವರೆದಿದೆ.

ಗುರು ದೇಶಪಾಂಡೆ ನಿರ್ಮಾಣದ ‘ಲವ್ ಯೂ ರಚ್ಚು’ ಚಿತ್ರ ಬೇಡದ ಕಾರಣಕ್ಕೆ ಇತ್ತೀಚೆಗೆ ಸುದ್ದಿಯಾಗಿತ್ತು. ಚಿತ್ರದ ಫೈಟಿಂಗ್ ದೃಶ್ಯದ ಚಿತ್ರೀಕರಣದ ವೇಳೆಯಲ್ಲಿ ಸಂಭವಿಸಿದ ಆಕಸ್ಮಿಕದಿಂದ ಉಂಟಾದ ಸಾಹಸ ಕಲಾವಿದನ ಸಾವಿನಿಂದ ಗುರು ದೇಶಪಾಂಡೆ ಸಂಕಷ್ಟಕ್ಕೆ ಈಡಾಗಿದ್ದರು. ಈಗ ಎಲ್ಲವನ್ನೂ ಬಗೆಹರಿಸಿಕೊಂಡಿರುವ ಅವರು ಮತ್ತೆ ಚಿತ್ರದ ಚಿತ್ರೀಕರಣವನ್ನು ಮುಂದುವರಿಸುತ್ತಿದ್ದಾರೆ. “ಅಂದಿನ ಅವಘಡದ ಬಗ್ಗೆ ಹೇಳುವ ಅವರು ನಾನು ಒಬ್ಬ ನಿರ್ಮಾಪಕನಾಗಿ ತೆಗೆದುಕೊಳ್ಳಬೇಕಾದ ಎಲ್ಲ ಎಚ್ಚರಿಕೆ ಮತ್ತು ಜವಾಬ್ದಾರಿಗಳನ್ನೂ ತೆಗೆದುಕೊಂಡಿದ್ದೆ. ಆದರೆ ಆಕಸ್ಮಿಕಗಳು ಯಾರನ್ನು ಕೇಳಿಯೂ ಆಗೋದಿಲ್ಲ. ಆದರೆ ಕೆಲವರು ನಿಮ್ಮ ಬೇಜವಾಬ್ದಾರಿಯಿಂದ ಹೀಗಾಯಿತು ಎಂದು ನಮ್ಮ ಮೇಲೆ ಆರೋಪ ಮಾಡಿದರು. ಇದರಿಂದ ಬೇಸರವಾಗಿದ್ದು ನಿಜ. ಆದರೆ ಈಗ ಮತ್ತೆ ಅದರಿಂದ ಹೊರಬಂದು ಸಿನಿಮಾ ಮುಂದುವರಿಸುತ್ತಿದ್ದೇನೆ” ಎನ್ನುತ್ತಾರೆ ಗುರು ದೇಶಪಾಂಡೆ.

ಇಂದು (ಅಕ್ಟೋಬರ್ 20) ಗುರು ದೇಶಪಾಂಡೆ ತಮ್ಮ ಚಿತ್ರದ ಆಕ್ಷನ್ ದೃಶ್ಯದ ಚಿತ್ರೀಕರಣ ಮುಂದುವರಿಸುತ್ತಿದ್ದಾರೆ. ಹೊಸಕೋಟೆ ಮುಖ್ಯರಸ್ತೆಯ ಕೊಳತ್ತೂರಿನಲ್ಲಿ ‘ಲವ್ ಯೂ ರಚ್ಚು’ ಚಿತ್ರದ ಫೈಟಿಂಗ್ ದೃಶ್ಯದ ಚಿತ್ರೀಕರಣ ನಡೆಯಲಿದೆ. ಅರ್ಜುನ್ ಮಾಸ್ಟರ್ ಅವರ ಸಾರಥ್ಯದಲ್ಲಿ ಈ ಚಿತ್ರೀಕರಣ ನಡೆಯಲಿದೆ. ಹಾಗಾಗಿ ತಮ್ಮ ಮೇಲೆ ಬೇಜವಾಬ್ದಾರಿಯ ಆರೋಪ ಬಂದಿರುವ ಹಿನ್ನೆಲೆಯಲ್ಲಿ ಗುರು ದೇಶಪಾಂಡೆ ಅವರು ಈ ಚಿತ್ರೀಕರಣವನ್ನು ವೀಕ್ಷಿಸಲು ಮಾಧ್ಯಮಗಳನ್ನು ಆಹ್ವಾನಿಸಿದ್ದಾರೆ. ಹಾಗಾಗಿ, ಅವಘಡ ಸಂಭವಿಸಿದ ಸಮಯದಲ್ಲಿ ನಿರ್ಮಾಪಕರ ಮೇಲೆ ಗೂಬೆ ಕೂರಿಸಿದ ಮಾಧ್ಯಮಗಳನ್ನು ಕರೆದು, ನೀವೇ ಬಂದು ನಾವು ಚಿತ್ರೀಕರಣದ ವೇಳೆ ತೆಗೆದುಕೊಳ್ಳುವ ಎಚ್ಚರಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಎಂದು ಅವರು ಪರೋಕ್ಷವಾಗಿ ಹೇಳುತ್ತಿದ್ದಾರೆ ಎನಿಸಿದರೆ ತಪ್ಪಿಲ್ಲ.

LEAVE A REPLY

Connect with

Please enter your comment!
Please enter your name here