‘ಸ್ಪೈ’ ತೆಲುಗು ಚಿತ್ರದಲ್ಲಿ ಭಯೋತ್ಪಾದಕರನ್ನು ಸೆರೆಹಿಡಿಯುವ ಸಾಹಸಿಯಾಗಿ ಹೀರೋ ನಿಖಿಲ್ ಸಿದ್ಧಾರ್ಥ್ ಕಾಣಿಸಿಕೊಂಡಿದ್ದಾರೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ನಿಗೂಢ ಸಾವಿನ ವಿಷಯವೂ ಇಲ್ಲಿ ಪ್ರಸ್ತಾಪವಾಗುತ್ತದೆ. ಗ್ಯಾರಿ ನಿರ್ದೇಶನದ ಸಿನಿಮಾದ ಟ್ರೈಲರ್ ಬಂದಿದ್ದು, ಮುಂದಿನ ವಾರ ತೆರೆಕಾಣಲಿದೆ.
ನಟ ನಿಖಿಲ್ ಸಿದ್ಧಾರ್ಥ್ ಅಭಿನಯದ ‘ಸ್ಪೈ’ ತೆಲುಗು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಗ್ಯಾರಿ ಬಿ ಎಚ್ ನಿರ್ದೇಶನದ ಚಿತ್ರದಲ್ಲಿ ಐಶ್ವರ್ಯಾ ಮೆನನ್ ನಾಯಕಿ. ಕೆ ರಾಜಶೇಖರ್ ರೆಡ್ಡಿ ಕತೆ ಬರೆದು ಚಿತ್ರ ನಿರ್ಮಿಸಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಅವರ ನಿಗೂಢ ಸಾವಿನ ಸುತ್ತ ಟ್ರೈಲರ್ ಸುತ್ತುತ್ತದೆ. ಆಕ್ಷನ್ ಥ್ರಿಲ್ಲರ್ ಸಿನಿಮಾದಲ್ಲಿ ಬೋಸ್ ಅವರ ನಿಗೂಢ ಸಾವಿನ ಹಿಂದಿನ ರಹಸ್ಯಗಳು ಮತ್ತು ನಡೆಸಿದ ಪಿತೂರಿ ಪ್ರಯತ್ನಗಳನ್ನು ಅನಾವರಣಗೊಳಿಸಲು ನಿಖಿಲ್ ಹೊರಡುತ್ತಾನೆ. ಭಯೋತ್ಪಾದಕರನ್ನು ಸೆರೆಹಿಡಿಯುವ ಮತ್ತು ದಾಖಲೆಗಳನ್ನು ಹಿಂಪಡೆಯುವ ಜವಾಬ್ದಾರಿಯನ್ನು ನಾಯಕನ ಕೈಗೆ ನೀಡಲಾಗಿದೆ. ಸಿನಿಮಾದಲ್ಲಿ ಸಾನ್ಯಾ ಠಾಕೂರ್, ಅಭಿನವ್ ಗೋಮಾತಂ, ಮಕರಂದ್ ದೇಶಪಾಂಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಲನಚಿತ್ರವನ್ನು ಅದ್ದೂರಿಯಾಗಿ ಚಿತ್ರೀಕರಿಸಲಾಗಿದ್ದು, ಶ್ರೀಚರಣ್ ಪಕಲಾ ಮತ್ತು ವಿಶಾಲ್ ಚಂದ್ರಶೇಖರ್ ಸಂಗೀತ ಸಂಯೋಜಿಸಿದ್ದಾರೆ. ವಂಶಿ ಪಚ್ಚಿಪುಲುಸು ಮತ್ತು ಮಾರ್ಕ್ ಡೇವಿಡ್ ಛಾಯಾಗ್ರಾಹಣ ಮಾಡಿದ್ದಾರೆ. ಚಿತ್ರ ಜೂನ್ 29 ರಂದು ತೆರೆಕಾಣಲಿದೆ.