ಸಿನಿಮಾ ಮೇಕಿಂಗ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಪಿ ಸಿ ಶೇಖರ್‌ ಹೊಸ ಪ್ರಾಜೆಕ್ಟ್‌ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಬಾರಿ ಅವರು ‘ರೋಷಮನ್‌ ಎಫೆಕ್ಟ್‌’ ಮಾದರಿ ಪ್ರಯೋಗಕ್ಕೆ ಸಜ್ಜಾಗಿರುವುದು ವಿಶೇಷ. ನಕುಲ್‌ ಗೌಡ, ಮಾನ್ವಿತಾ ಹರೀಶ್‌ ಪ್ರಮುಖ ಪಾತ್ರಧಾರಿಗಳು. ಈಗಾಗಲೇ ಮುಕ್ಕಾಲು ಭಾಗ ಚಿತ್ರೀಕರಣ ಮುಗಿದಿದೆ.

ಪಿ ಸಿ ಶೇಖರ್‌ ನಿರ್ದೇಶನದ ಹತ್ತನೇ ಸಿನಿಮಾ ‘BAD’ ಸದ್ದಿಲ್ಲದೆ ಚಿತ್ರೀಕರಣಗೊಳ್ಳುತ್ತಿದೆ. ತಾವು ಆಯ್ಕೆ ಮಾಡಿಕೊಳ್ಳುವ ವಿಷಯ ಮತ್ತು ಮೇಕಿಂಗ್‌ನಿಂದಾಗಿ ಪಿ ಸಿ ಶೇಖರ್‌ ಗಮನ ಸೆಳೆಯುತ್ತಾರೆ. ಈ ಬಾರಿಯೂ ಅವರು ವಿಶೇಷತೆ ಕಾಯ್ದುಕೊಂಡಿದ್ದಾರೆ. ‘ಚಿತ್ರಕ್ಕೆ BAD ಎಂದು ಹೆಸರಿಡಲು ಕಾರಣವಿದೆ. ಚಿತ್ರದಲ್ಲಿ ನಾಯಕ ಹಾಗೂ ನಾಯಕಿ ಅಂತ ಇಲ್ಲ. ಎಲ್ಲಾ ವಿಲನ್ ಪಾತ್ರಗಳೇ. ಅದರಲ್ಲಿ ಮುಖ್ಯ ವಿಲನ್‌ಗಳಿರುತ್ತಾರಷ್ಟೆ. ರೋಷಮಾನ್ ಎಫೆಕ್ಟ್ ವಿಧಾನವನ್ನು ಈ ಚಿತ್ರದಲ್ಲಿ ಬಳಸಿಕೊಳ್ಳಲಾಗುತ್ತಿದೆ‌. ಜಪಾನ್ ನಿರ್ದೇಶರೊಬ್ಬರು ಈ ವಿಧಾನವನ್ನು ತಮ್ಮ ಚಿತ್ರದ ಮೂಲಕ ಪರಿಚಯಿಸಿದ್ದರು. ಕನ್ನಡದಲ್ಲಿ ಇದರ ಬಳಕೆಯಾಗಿರುವುದು ವಿರಳ ಎನ್ನಬಹುದು’ ಎನ್ನುತ್ತಾರೆ ಪಿ ಸಿ ಶೇಖರ್‌. ಸಿನಿಮಾಗೆ ಕತೆ, ಚಿತ್ರಕಥೆ ಬರೆದಿರುವ ಪಿ ಸಿ ಶೇಖರ್‌ ಸಂಕಲನ ಹೊಣೆಗಾರಿಕೆಯನ್ನೂ ಹೊತ್ತಿದ್ದಾರೆ. ಈಗಾಗಲೇ ಸಿನಿಮಾದ ಶೇ. 75ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ.

ಪಿ ಸಿ ಶೇಖರ್‌ ನಿರ್ದೇಶನದ ಹತ್ತು ಚಿತ್ರಗಳಲ್ಲಿ ಒಂಬತ್ತು ಸಿನಿಮಾಗಳಿಗೆ ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಈಗ ‘BAD’ ಸಿನಿಮಾಗೆ ಜನ್ಯ ಅವರದ್ದೇ ಸಂಗೀತ. ಪಿ ಸಿ ಶೇಖರ್‌ ನಿರ್ದೇಶನದ ಈ ಹಿಂದಿನ ‘ರಾಗ’ ಹಾಗೂ ‘ದಿ ಟೆರರಿಸ್ಟ್’ ಚಿತ್ರಗಳಿಗೆ ಸಂಭಾಷಣೆ ಬರೆದಿದ್ದ ಸಚಿನ್ ಬಿ ಹೊಳಗುಂಡಿ ಈ ಚಿತ್ರಕ್ಕೂ ಸಂಭಾಷಣೆ ಬರೆದಿದ್ದಾರೆ. ಜಿ.ರಾಜಶೇಖರ್ ಕಲಾ ನಿರ್ದೇಶನ, ಶಕ್ತಿ ಶೇಖರ್‌ ಛಾಯಾಗ್ರಹಣ ಚಿತ್ರಕ್ಕಿದೆ. ‘ಇದೊಂದು ಪ್ರಯೋಗಾತ್ಮಕ ಚಿತ್ರವಾಗಿದ್ದು, ಬರುವ ಪಾತ್ರಗಳ ಅಭಿನಯ ನೋಡುಗರಿಗೆ ಸಹಜ ರೀತಿಯಲ್ಲಿ ಕಾಣಬೇಕು ಹಾಗೂ ಅವರ ಪಾತ್ರವನ್ನು ನೋಡಿದ ಕೂಡಲೇ, ಇವರದು ಇಂಥದ್ದೇ ಪಾತ್ರ ಎಂದು ಪ್ರೇಕ್ಷಕರು ಅಂದುಕೊಳ್ಳಬಾರದು. ಹಾಗಾಗಿ ಈ ಚಿತ್ರದಲ್ಲಿ ಹೆಚ್ಚು ಹೊಸ ಕಲಾವಿದರೇ ಅಭಿನಯಿಸುತ್ತಿದ್ದಾರೆ’ ಎನ್ನುತ್ತಾರೆ ನಿರ್ದೇಶಕರು. ‘ಪ್ರೀತಿಯ ರಾಯಭಾರಿ’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ನಕುಲ್ ಗೌಡ, ಮಾನ್ವಿತ ಹರೀಶ್, ಸಾಯಿ ಕೃಷ್ಣ, ಅಪೂರ್ವ ಭಾರದ್ವಾಜ್, ಮಂಜುನಾಥ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

Previous articleನಿಖಿಲ್‌ ಸಿದ್ಧಾರ್ಥ್‌ ‘ಸ್ಪೈ’ | ಗ್ಯಾರಿ ನಿರ್ದೇಶನದ ತೆಲುಗು ಆಕ್ಷನ್‌ – ಥ್ರಿಲ್ಲರ್‌
Next articleಸಡಿಲ ನಿರೂಪಣೆ, ಅಲ್ಲಲ್ಲಿ ಥ್ರಿಲ್‌! ಇದು ‘ಧೂಮಂ’

LEAVE A REPLY

Connect with

Please enter your comment!
Please enter your name here