‘ಆದಿಪುರಷ್‌’ನಲ್ಲಿ ಮಾಡಲಾಗಿರುವ ಯಾವುದೇ ಘನ ಉದ್ದೇಶವೂ ಇಲ್ಲದ ಎಲ್ಲಾ ಪ್ರಯೋಗಗಳು ಚಿತ್ರವನ್ನು ಅಪ್ರಜ್ಞಾಪೂರ್ವಕವಾಗಿ ಹಾಸ್ಯಮಯವಾಗಿಸಿದೆ, ತರ್ಕಹೀನವಾಗಿಸಿದೆ. ಆ ಕಡೆ ಭಕ್ತಿ ಪ್ರಧಾನ ಸಾಂಪ್ರದಾಯಿಕ ಚಿತ್ರವೂ ಅಲ್ಲದ, ಈ ಕಡೆ ಮಹಾಕಾವ್ಯವೊಂದನ್ನು ಹೊಸ ಮಸೂರದಲ್ಲಿ ನೋಡುವ ಪ್ರಯೋಗಿಕ ಚಿತ್ರವೂ ಆಗದೆ ಮದ್ಯದಲ್ಲಿ ಸಿಲುಕಿಕೊಂಡಿದೆ.

ಪೌರಾಣಿಕ ಕತೆಗಳು ಅಥವಾ ಮಹಾಕಾವ್ಯಗಳ ಒಂದು ವಿಶೇಷವೆಂದರೆ ಅವುಗಳನ್ನು ಹಲವಾರು ರೀತಿಗಳಲ್ಲಿ, ವಿವಿಧ ಆಯಾಮಗಳಲ್ಲಿ, ವಿಭಿನ್ನ ದೃಷ್ಟಿಕೋನಗಳಲ್ಲಿ, ಬೇರೆ ಬೇರೆ ಕಾಲಘಟ್ಟಗಳಲ್ಲಿ, ಹಲವು ಮಂದಿ ಮತ್ತೆ ಮತ್ತೆ ನಿರೂಪಿಸಿರುವುದು ಮತ್ತು ನಿರೂಪಿಸುತ್ತಲೇ ಇರುವುದು. ರಾಮಾಯಣ, ಮಹಾಭಾರತಗಳು ಪಡೆದಿರುವ ಸಾಹಿತ್ಯಕ ರೂಂಪಾತರಗಳು ಮತ್ತು ದೃಶ್ಯ ಮಾಧ್ಯಮಗಳಲ್ಲಿ ಅವುಗಳ ಅಳವಡಿಕೆಗಳು ಲೆಕ್ಕವಿಲ್ಲದಷ್ಟಿವೆ. ಈ ಪುರಾಣ ಕತೆಗಳು ಮೂಲರೂಪದಲ್ಲಿಯೇ ಇರಬೇಕೆಂಬ ಮಡಿವಂತಿಕೆಯನ್ನು ಕಳಚಿಕೊಂಡಿರುವ ಕಾರಣಕ್ಕೆ ಉತ್ಕೃಷ್ಟ ಸಾಹಿತ್ಯಕ ಮತ್ತು ಕಲಾತ್ಮಕ ಕೃತಿಗಳ ಸೃಷ್ಟಿ ಸಾಧ್ಯವಾಗಿದೆ. ಆದರೆ, ಅಂತಹದೊಂದು ಸೃಷ್ಟಿ ಸಾಧ್ಯವಾಗುವುದು ಸೃಜನಶೀಲ ಮನಸ್ಸು ಮತ್ತು ಸ್ವಂತಿಕೆ ಇದ್ದಾಗ ಮಾತ್ರ. ರಾಮಾಯಣದ ಕತೆಯನ್ನು ಆಧರಿಸಿದ ‘ಆದಿಪುರುಷ್’ ಸಿನಿಮಾ ದೊಡ್ಡ ಮಟ್ಟದಲ್ಲಿ ನಿರಾಶೆ ಮೂಡಿಸುವುದು ಈ ವಿಷಯದಲ್ಲಿ.

‘ಆದಿಪುರುಷ್’ ಸಿನಿಮಾದ ಟೀಸರ್ ಬಿಡುಗಡೆಗೊಂಡಾಗ ದೊಡ್ಡ ಮಟ್ಟದಲ್ಲಿ ಟೀಕೆ ಎದುರಿಸಿತ್ತು. ಅದರ VFX ಜೊತೆಗೆ ಪಾತ್ರ ಚಿತ್ರಣದಲ್ಲಿ ಮಾಡಿರುವ ಪ್ರಯೋಗ, ಅದರಲ್ಲೂ ಮುಖ್ಯವಾಗಿ ರಾವಣನ ಹೊಸ ರೀತಿಯ ಲುಕ್ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ನಂತರದಲ್ಲಿ ಟ್ರೈಲರ್ ಬಿಡುಗಡೆ ಸಂದರ್ಭದಲ್ಲಿ ಜನರ ಧಾರ್ಮಿಕ ಭಾವನೆಗಳನ್ನು ಸಮಾಧಾನಿಸುವ ರೀತಿಯಲ್ಲಿ ಮಾತನಾಡಿದ್ದ ನಿರ್ದೇಶಕ ಓಂ, ಸಿನಿಮಾ ಮಂದಿರಗಳಲ್ಲಿ ಒಂದು ಸೀಟನ್ನು ಹನುಮಾನ್‌ಗಾಗಿ ಮೀಸಲಿಡುವುದಾಗಿ ಹೇಳಿ ರಾಮಭಕ್ತರ ಮನ ಗೆದ್ದಿದ್ದರು. ಧಾರ್ಮಿಕವಾಗಿಯಷ್ಟೇ ಅಲ್ಲದೆ, ರಾಜಕೀಯವಾಗಿಯೂ ಹೆಚ್ಚು ಪ್ರಾಮುಖ್ಯತೆ ಪಡೆದಿರುವ ರಾಮ ಹಾಗು ರಾಮಾಯಣ ಜನರನ್ನು ಸಿನಿಮಾಮಂದಿರದತ್ತ ಕರೆತರಲು ನೆರವಾಗುತ್ತದೆ ಎಂಬುದು ಚಿತ್ರತಂಡದ ಊಹೆಯಾಗಿತ್ತೇನೋ. ಆದರೆ, ಚಿತ್ರದ ಆತ್ಮ ಮತ್ತು ಅದರ ಬಾಹ್ಯರೂಪಗಳ ನಡುವಣ ಗೊಂದಲದಲ್ಲಿ ಸಿಲುಕಿ ನಿರ್ದೇಶಕರು ಎಡವಿದ್ದಾರೆ. ಸಂಪ್ರದಾಯವಾದಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಮೂಲಕತೆ ಪಾತ್ರಗಳು, ಸನ್ನಿವೇಶಗಳಿಗೆ ಅಂಟಿಕೊಂಡು, ನೇರ ಮತ್ತು ಸರಳ ಚಿತ್ರವನ್ನೂ ನಿರ್ಮಿಸಿಲ್ಲ. ಕಥಾನಕದ ಆಳಕ್ಕಿಳಿದು ಪಾತ್ರಗಳನ್ನು ಸನ್ನಿವೇಶಗಳನ್ನು ಹೊಸ ರೀತಿಯಲ್ಲಿ ನೋಡಿ ಅದಕ್ಕೊಂದು ಆಧುನಿಕ ದೃಷ್ಚಿಕೋನವನ್ನು ಕೊಟ್ಟೋ, ಕತೆಯನ್ನು ಹೆಚ್ಚು ಪ್ರಸ್ತುತವಾಗಿಸಿಯೋ, ಉದಾರವಾದಿಗಳ ಮನಗೆಲ್ಲುವಂತಹ ಹೊಳಹುಗಳನ್ನೂ ತೆರೆಯ ಮೇಲೆ ತಂದಿಲ್ಲ.

ರಾಮಾಯಣವನ್ನು ಹೊಸ ರೀತಿಯಲ್ಲಿ ಹೇಳುವ ಅವರ ಪ್ರಯೋಗ ಪಾತ್ರಗಳ ರೂಪ, ಭಾಷೆ ಬದಲಿಸುವುದು, ಹೊಸ ತಾಂತ್ರಿಕತೆಗಳನ್ನು ಬಳಸಿಕೊಳ್ಳುವುದಕ್ಕಷ್ಟೇ ಸೀಮಿತವಾಗಿದೆಯೇ ಹೊರತು, ಅದಕ್ಕೆ ಪೂರಕವಾಗಿ ಹೊಸ ರೀತಿಯ ನಿರೂಪಣೆ, ವಿಶ್ಲೇಷಣೆಗಳು ಬೇಕಾಗುತ್ತದೆ ಎಂಬುದನ್ನು ಮರೆತಿದ್ದಾರೆ. ಸತ್ವಹೀನ ಮತ್ತು ಭಾವಹೀನ ಚಿತ್ರಕಥೆಗೆ ಅಗತ್ಯವಿಲ್ಲದ ಅದ್ದೂರಿತನ ಮತ್ತು ಅಬ್ಬರತೆಯಿಂದ ಮೇಕ್ ಅಪ್ ಮಾಡಲು ಹೊರಟಿದ್ದಾರೆ. ಹೀಗಾಗಿ, ಅವರು ಚಿತ್ರದಲ್ಲಿ ಮಾಡಿರುವ ಎಲ್ಲಾ ಪ್ರಯೋಗಗಳು ಹಾಸ್ಯಾಸ್ಪದವೆನಿಸಿಬಿಡುತ್ತದೆ.

ಸಿನಿಮಾ ಆರಂಭವಾಗುವಾಗಲೇ ರಾಮ, ಸೀತೆ ಮತ್ತು ಲಕ್ಷ್ಮಣರ ಅರಣ್ಯವಾಸ ಆರಂಭವಾಗಿರುತ್ತದೆ. ಅದಕ್ಕೆ ಕಾರಣವಾದ ಘಟನೆಗಳನ್ನು ಕ್ಲುಪ್ತವಾಗಿ ಹೇಳಿ ನಂತರದಲ್ಲಿ ಶೂರ್ಪನಖಿಯ ಮೂಗು ಕತ್ತರಿಸುವುದು, ಮಾಯಾಜಿಂಕೆ, ಸೀತೆಯ ಅಪಹರಣ, ಜಟಾಯು ಮರಣ, ಶಬರಿಯ ತಪಸ್ಸು, ವಾಲಿ ವಧೆ ಮುಂತಾದ ಎಲ್ಲಾ ಪ್ರಮುಖ ಭಾಗಗಳನ್ನು ಮೊದಲಭಾಗದಲ್ಲೇ ವೇಗವಾಗಿ ಮತ್ತು ಸಂಕ್ಷಿಪ್ತವಾಗಿ ಹೇಳಿ ಮುಗಿಸಲಾಗಿದೆ. ಆದರೆ, VFXಗಳ ಮೇಲಿನ ಅತಿಯಾದ ಮೋಹಕ್ಕೆ ಬಲಿಯಾಗಿ ರಾಮನ ಎಂಟ್ರಿ ದೃಷ್ಯಕ್ಕಾಗಿ ಯಾವುದೋ ಕೇಳರಿಯದ ಅನ್ಯಗ್ರಹವಾಸಿಗಳಂತೆ ಕಾಣುವ ಜೀವಿಗಳೊಂದಿಗೆ ಹೋರಾಡುವ ಸೀಕ್ವೆನ್ಸ್ ಅನ್ನು ದೀರ್ಘವಾಗಿ ಪೋಣಿಸಲಾಗಿದೆ.

ನಿರ್ದೇಶಕರು ತೆಗೆದುಕೊಂಡಿರುವ ಕ್ರಿಯೇಟಿವ್ ಫ್ರೀಡಂಗಳೆಲ್ಲಾ ಬಹುತೇಕ ತೆರೆಯ ಮೇಲೆ VFX ವೈಭವವನ್ನು ತುಂಬುವುದಕ್ಕಾಗಿಯೇ ಬಳಕೆಯಾಗಿದೆ. ಇದೇ ಕಾರಣಕ್ಕಾಗಿಯೇ ಎರಡನೇ ಭಾಗವನ್ನು ಪೂರ್ತಿಯಾಗಿ ಯುದ್ಧಕ್ಕಾಗಿ ಮೀಸಲಿಡಲಾಗಿದೆ. ವಿಪರ್ಯಾಸವೆಂದರೆ ಇಡೀ ಚಿತ್ರದ ಭಾರ ಹೊರಬೇಕೆಂದು ನಿರ್ದೇಶಕರು ಬಯಸಿರುವ VFX ಗುಣಮಟ್ಟ ಮಾತ್ರ ಕಳಪೆಯಾಗಿದೆ. ಹೀಗಾಗಿ, ಹೆಚ್ಚಿನ ಕತೆ ನಡೆಯುವ ಮೊದಲಾರ್ಧ ನೋಡುವಂತಿದ್ದರೆ, ಕತೆಯೂ ಇಲ್ಲದ, ಯುದ್ಧಕ್ಕೆ ಸಂಬಂಧಿಸಿದ ಕುತೂಹಲಕಾರಿ ವ್ಯೂಹ, ತಂತ್ರ – ಪ್ರತಿತಂತ್ರ, ರೋಮಾಂಚಕ ಹೋರಾಟದ ದೃಶ್ಯಗಳೂ ಇಲ್ಲದೆ ಎರಡನೇ ಭಾಗ ಪೂರ್ತಿ ಸೊರಗಿದೆ.

ಇನ್ನು, ರಾಮಾಯಣಕ್ಕೊಂದು ಹೊಸ ರೂಪ ನೀಡುವ ಯತ್ನದಲ್ಲಿ ನಿರ್ದೇಶಕರು ಮಾಡಿರುವ ಮೇಲ್ನೋಟದ, ಬಾಹ್ಯ ಬದಲಾವಣೆಗಳೂ ಕೂಡ ಕೆಲಸ ಮಾಡದಿರಲು ಕಾರಣ ಆ ಪ್ರಯೋಗಗಳಲ್ಲಿ ಇರುವ ಸ್ವಂತಿಕೆಯ ಕೊರತೆ. ಹಾಲಿವುಡ್‌ನ DC ಮತ್ತು ಮಾರ್ವೆಲ್ ಪ್ರಪಂಚದ ಹಲವು ಪಾತ್ರಗಳನ್ನು ಅನಾಮತ್ತಾಗಿ ಎತ್ತಿಕೊಂಡು ತಂದು ರಾಮಯಣದ ಮಧ್ಯೆ ಬಿಟ್ಟಂತೆ ಅನಿಸುತ್ತದೆ. ಹಾಲಿವುಡ್ ಸೂಪರ್ ಹೀರೋ ಸಿನಿಮಾಗಳು, ವೆಸ್ಚ್ರರ್ನ್ ಟಿವಿ ಸೀರೀಸ್‌ಗಳ ಪ್ರಭಾವ ಎದ್ದು ಕಾಣುತ್ತದೆ. ಹೀಗಾಗಿ, ‘ಆದಿಪುರುಷ್’ನಲ್ಲಿನ ಪಾತ್ರಗಳು, ವೇಷಭೂಷಣ, ಆಯುಧ, ಸೆಟ್ಟಿಂಗ್ ಇವೆಲ್ಲಾ ಹ್ಯಾರಿ ಪಾಟರ್, ಗೇಮ್ ಆಫ್ ಥ್ರೋನ್ಸ್, ರೈಸ್ ಆಫ್ ಪ್ಲಾನೆಟ್ ಆಫ್ ದಿ ಏಪ್ಸ್ ಹೀಗೆ ಸಾಲು ಸಾಲು ಚಿತ್ರಗಳನ್ನು ನೆನಪಿಸುತ್ತವೆ. ರಾವಣನ ಸೇನೆಯಲ್ಲಿರುವವರಿಗೆ ಚಿತ್ರ ವಿಚಿತ್ರ ರೂಪ ನೀಡಿರುವುದರ ಉದ್ದೇಶವೇ ಅರ್ಥವಾಗುವುದಿಲ್ಲ. ರಾಮ ಸೀತೆಯರ ವನವಾಸದ ಸ್ಥಳ ನಂಬಲಾರದಂತಹ ಪ್ರಾಕೃತಿಕ ಸೌಂದರ್ಯದಿಂದ ಕೂಡಿದ್ದರೆ, ರಾವಣನ ಲಂಕೆಯಲ್ಲಿ ಸೂರ್ಯ ಕಾಣುವುದೇ ಇಲ್ಲ, ಸದಾ ಮೋಡ ಮುಸುಕಿದ ವಾತಾವರಣ. ಸೀತೆ ಇರುವ ಅಶೋಕವನವನ್ನು ಹೊರತು ಪಡಿಸಿದರೆ ಲಂಕೆಯ ಅರಮನೆಯಲ್ಲೆಲ್ಲೂ ಮರ, ಗಿಡ, ಹೂವು, ಪಕ್ಷಿಗಳಿಲ್ಲ. ಕೊನೆಗೆ ಸಾಮಾನ್ಯ ಪ್ರಜೆಗಳೊಬ್ಬರೂ ಕಾಣುವುದಿಲ್ಲ. ಒಳ್ಳೆಯದು ಮತ್ತು ಕೆಟ್ಟದರ ನಡುವಿನ ವ್ಯತ್ಯಾಸವನ್ನು ಈ ರೀತಿ ಪ್ರತಿನಿಧಿಸಲಾಗಿದೆ ಎಂದುಕೊಂಡರೂ ಬಹುತೇಕ ಪೂರ್ತಿ ಸಿನಿಮಾ ಒಂದು ರೀತಿಯ ಮಬ್ಬುಗತ್ತಲಲ್ಲೇ ಕಳೆದಂತೆ ಅನಿಸಿಬಿಡುತ್ತದೆ.

ಸಿನಿಮಾದ ಮತ್ತೊಂದು ದೊಡ್ಡ ತೊಂದರೆ ಇರುವುದು ಅದರ ಪಾತ್ರ ಚಿತ್ರಣದಲ್ಲಿ. ರಾಮಾಯಣದಲ್ಲಿ ಬರುವ ಪಾತ್ರಗಳ ಸಂಕೀರ್ಣತೆಯನ್ನೆಲ್ಲಾ ಕಿತ್ತು ಹಾಕಿ ಅವುಗಳನ್ನು ಕಪ್ಪು ಬಿಳುಪಾಗಿ ಚಿತ್ರಿಸಲಾಗಿದೆ. ಸೀತೆಯನ್ನು ಹೊರತುಪಡಿಸಿ ಮಹಿಳಾ ಪಾತ್ರಗಳೆಲ್ಲಾ ಹೀಗೆ ಬಂದು ಹಾಗೆ ಹೋಗುತ್ತವೆ. ಯಾರ ಮುಖವೂ ನೆನಪಿನಲ್ಲಿ ಉಳಿಯುವುದಿಲ್ಲ. ಶೂರ್ಪನಖಿಯನ್ನು ಧಾರಾವಾಹಿಯ ವ್ಯಾಂಪ್‌ನಂತೆ ಚಿತ್ರಿಸಲಾಗಿದೆ. ಸೀತೆಯ ಪಾತ್ರಕ್ಕೂ ಯಾವುದೇ ಆಳವಿಲ್ಲ. ರಾಮನ ಸದ್ಗುಣಗಳನ್ನು ತೋರಿಸುವುದಕ್ಕಾಗಿಯೇ ಲಕ್ಷ್ಮಣನ ಪಾತ್ರ ಸೃಷ್ಚಿಸಿದಂತಿದೆಯೇ ಹೊರತು ಅವನಿಗೇ ಆದ ಒಂದು ಅಸ್ತಿತ್ವವಿಲ್ಲ. ಎಲ್ಲಕ್ಕಿಂತ ದೊಡ್ಡ ತೊಂದರೆ ಇರುವುದು ರಾವಣನ ಪಾತ್ರದಲ್ಲಿ.

ನಿರ್ದೇಶಕರು ಅತೀ ಹೆಚ್ಚಿನ ಸೃಜನಶೀಲ ಸ್ವಾತಂತ್ರ್ಯವನ್ನು ಬಳಸಿಕೊಂಡಿರುವುದು ರಾವಣನ ಪಾತ್ರ ಚಿತ್ರಣದಲ್ಲಿ. ಓಂ ಅವರ ಹಿಂದಿನ ಸಿನಿಮಾ ‘ತನ್ಹಾಜಿ’ಯಲ್ಲಿ ಖಳ ಪಾತ್ರದಲ್ಲಿ ನಟಿಸಿದ್ದ ಸೈಫ್ ಅಲಿ ಖಾನ್, ಇಲ್ಲಿ ರಾವಣನಾಗಿ ಕಾಣಿಸಿಕೊಂಡಿದ್ದಾರೆ. ‘ತನ್ಹಾಜಿ’ಯಲ್ಲಿ ರಜಪೂತ ಸೇನಾನಿ ಉದಯಭಾನು ರಾಥೋಡ್ ಪಾತ್ರದಲ್ಲಿಯೂ ಸೈಫ್ ಮೊಗಲರಂತೆಯೇ ಕಾಣುತ್ತಿದ್ದರು. ಮೊಗಲರ ಸೇನೆಯಲ್ಲಿದ್ದ ಕಾರಣ ಅವರ ಪ್ರಭಾವ ಎಂಬ ಕಾರಣವನ್ನಾದರೋ ಆ ಸಿನಿಮಾಕ್ಕೆ ನೀಡಬಹುದಿತ್ತು. ಆದರೆ, ‘ಆದಿಪುರುಷ್’ನ ರಾವಣನೂ ಮೊಘಲರನ್ನೇ ಹೋಲುವುದು ವಿಚಿತ್ರವೆನಿಸದೇ ಇರದು. ಓಂ ರಾವತ್‌ಗೆ ಖಳ ಪಾತ್ರಗಳೆಲ್ಲಾ ಮೊಘಲರಂತೆ ಕಾಣುತ್ತದೆಯೇನೋ?

ರಾಮಾಯಣದಲ್ಲಿ ಲಂಕಾಧಿಪತಿಯದ್ದು ಅತ್ಯಂತ ಸಂಕೀರ್ಣ ಪಾತ್ರ. ಆದರೆ, ಆತನನ್ನು ಗಹಗಹಿಸಿ ನಗುವ 80ರ ದಶಕದ ಸಿನಿಮಾ ಖಳರಂತೆ ಚಿತ್ರಿಸಲಾಗಿದೆ. ಈ ಚಿತ್ರಣ ರಾವಣ ಮಹಾಜ್ಞಾನಿ, ದೊಡ್ಡ ಶಿವಭಕ್ತ, ಮಹಾವೀರ ಎಂದು ನಂಬುವ ಆಸ್ತಿಕರಿಗೂ, ಎಲ್ಲಾ ಖಳರಿಗೂ ಮೊಘಲ್ ರಾಜರ ಛಾಯೆ ನೀಡುವ, ದ್ರಾವಿಡ ರಾಜರನ್ನು ಖಳರಂತೆ ತೋರಿಸುವ ಬಗ್ಗೆ ಅಸಮಾಧಾನ ಹೊಂದಿರುವ ಪ್ರಗತಿಪರರಿಗೂ, ಇಬ್ಬರಿಗೂ ಸಂತೋಷ ಕೊಡುವುದಿಲ್ಲ ಎಂಬುದಂತೂ ನಿಜ. ರಾವಣನ ಹತ್ತು ತಲೆಗಳನ್ನು ಆತನ ಹತ್ತು ಭಿನ್ನ ವ್ಯಕ್ತಿತ್ವಗಳಂತೆ ತೋರಿಸುವ ಪರಿಕಲ್ಪನೆ ಹೊಸದಾಗಿಯೂ, ಗಮನಸೆಳೆಯುವಂತೆಯೂ ಇದೆಯಾದರೂ, ಅದು ಸಿಜಿಯಲ್ಲಿ ಸರಿಯಾಗಿ ಚಿತ್ರಿತವಾಗದ ಕಾರಣ ತನ್ನ ಅನನ್ಯತೆ ಕಳೆದುಕೊಂಡಿದೆ.

ಇಷ್ಟಿದ್ದೂ ಇಡೀ ಚಿತ್ರದಲ್ಲಿ ಗಮನಸಳೆಯುವುದು, ನೆನಪಿನಲ್ಲಿಳಿಯುವುದು ರಾವಣನ ಪಾತ್ರ ನಿರ್ವಹಿಸಿರುವ ಸೈಫ್. ರಾಮನಿಗಿಂತಲೂ ಶಕ್ತಿಶಾಲಿಯಾಗಿ, ಪ್ರಭಾವಿಯಾಗಿ ಕಾಣುವ ರಾವಣ ತೆರೆಯನ್ನು ಆವರಿಸಿಕೊಂಡು ಬಿಡುತ್ತಾನೆ. ಪ್ರಭಾಸ್, ರಾಮನಾಗಿ ಅಷ್ಟಾಗಿ ಮನಸ್ಸಿನೊಳಗೆ ಇಳಿಯುವುದಿಲ್ಲ. ರಾಮನ ಶಾಂತತೆ, ತಾಳ್ಮೆ, ಸಹನೆ, ಕಾರುಣ್ಯ ಮುಂತಾದ ಭಾವಗಳನ್ನು ಸೃಜಿಸುವಲ್ಲಿ ಪ್ರಭಾಸ್ ಹಲವು ಕಡೆ ಸೋಲುತ್ತಾರೆ. ಸೀತೆ ಪಾತ್ರಕ್ಕೆ ಕೃತಿ ಸನೋನ್ ಹೊಂದಿಕೊಂಡಿದ್ದರೂ, ಅವರ ಪಾತ್ರ ಹೆಚ್ಚಿನ ಪೋಷಣೆಯಿಲ್ಲದೆ ಸೊರಗಿದೆ. ಹನುಮಂತ ಸೇರಿದಂತೆ ಇನ್ಯಾವುದೇ ಪಾತ್ರಧಾರಿಗಳು ಗಮನಸೆಳೆಯುವುದಿಲ್ಲ.

ಕೆಲವು ಸ್ಥಳಗಳಲ್ಲಿ ಸೋತಿದ್ದರೂ, ಹಲವಾರು ಕಡೆ ಚಿತ್ರವನ್ನು ರಕ್ಷಿಸಿರುವುದು ಹಿನ್ನೆಲೆ ಸಂಗೀತ ಮತ್ತು ಕೆಲವು ಹಾಡುಗಳು. ಚಿತ್ರದ ಮೊದಲಾರ್ಧದಲ್ಲಿ ತುಂಬಾ ಕಡಿಮೆ ಸಂಭಾಷಣೆಯಿದೆ. ಬಹುತೇಕ ಆ್ಯಕ್ಷನ್‌ನಲ್ಲಿಯೇ ಕತೆ ಮುಗಿಯುತ್ತದೆ. ಯುದ್ಧವೇ ತುಂಬಿರುವ ಎರಡನೇ ಭಾಗದಲ್ಲಿ ಮಾತ್ರ ಅನಗತ್ಯ ಸಂಭಾಷಣೆಗಳನ್ನು ತುರುಕಲಾಗಿದೆ. ಪೌರಾಣಿಕ ಚಿತ್ರಗಳಲ್ಲಿ ಶಿಷ್ಟ ಭಾಷೆಯನ್ನೇ ಕೇಳಿ ಅಭ್ಯಾಸವಿರುವ ಭಾರತೀಯ ಪ್ರೇಕ್ಷಕರಿಗೆ ಹನುಮಂತ ಲಂಕೆ ಪ್ರವೇಶಿಸಿದ ನಂತರದಲ್ಲಿ ಕೇಳಿಬರುವ ಸಂಭಾಷಣೆಗಳು ಸಣ್ಣಮಟ್ಟಿನ ಶಾಕ್ ನೀಡಿದರೂ ಆಶ್ಚರ್ಯವಿಲ್ಲ. ಶಿಷ್ಟ ಭಾಷೆಯನ್ನು ಬದಿಗಿಡುವ ಪ್ರಯೋಗ ಉತ್ತಮವೇ ಆದರೂ, ಅಲ್ಲಿ ಬಳಸಲಾಗಿರುವ ಟಪೋರಿ ಭಾಷೆ ಚಿತ್ರದ ಒಟ್ಟಾರೆ ಭಾವಕ್ಕೆ ಹೊಂದುವುದಿಲ್ಲ. ಜೊತೆಗೆ, ಈ ಭಾಷೆ ಕೇವಲ ಲಂಕೆಯಲ್ಲಿ ಮಾತ್ರ ಕೇಳಿಬರುತ್ತದೆಂಬುದು ಮತ್ತಷ್ಟು ಕಾಡುತ್ತದೆ. ರಾವಣ, ಹನುಮಂತ, ಇಂದ್ರಜಿತ್ ರಸ್ತೆ ರೌಡಿಗಳಂತೆ ಮಾತನಾಡುವುದನ್ನು ಭಾಷಾ ಪ್ರಯೋಗದಂತೆ ನೋಡುವುದು ಕಷ್ಟವಾಗುತ್ತದೆ.

ಒಟ್ಟಾರೆಯಾಗಿ, ‘ಆದಿಪುರಷ್‌’ನಲ್ಲಿ ಮಾಡಲಾಗಿರುವ ಯಾವುದೇ ಘನ ಉದ್ದೇಶವೂ ಇಲ್ಲದ ಎಲ್ಲಾ ಪ್ರಯೋಗಗಳು ಚಿತ್ರವನ್ನು ಅಪ್ರಜ್ಞಾಪೂರ್ವಕವಾಗಿ ಹಾಸ್ಯಮಯವಾಗಿಸಿದೆ, ತರ್ಕಹೀನವಾಗಿಸಿದೆ. ಆ ಕಡೆ ಭಕ್ತಿ ಪ್ರಧಾನ ಸಾಂಪ್ರದಾಯಿಕ ಚಿತ್ರವೂ ಅಲ್ಲದ, ಈ ಕಡೆ ಮಹಾಕಾವ್ಯವೊಂದನ್ನು ಹೊಸ ಮಸೂರದಲ್ಲಿ ನೋಡುವ ಪ್ರಯೋಗಿಕ ಚಿತ್ರವೂ ಆಗದೆ ಮದ್ಯದಲ್ಲಿ ಸಿಲುಕಿಕೊಂಡಿದೆ. ಸಿನಿಮಾ ಮುಗಿದಾಗ ಭಾರತೀಯ ಪುರಾಣಕ್ಕೆ ಹಾಲಿವುಡ್ ಉಡುಗೆ ತೊಡಿಸಿ ಪಾಶ್ಚಾತ್ಯರಿಗೆ ಪರಿಚಯಿಸುವ ಉದ್ದೇಶ ಇರಬಹುದೇ ಎಂಬ ಅನುಮಾನವಂತೂ ನನ್ನಲ್ಲಿ ಮೂಡಿತ್ತು, ಅದು ನಿಜವೇ ಆದರೆ ರಾಮಾಯಣದಂತಹ ಪುರಾತನ ಮಹಾಕಾವ್ಯವೊಂದು ಈ ರೀತಿ ಜಗತ್ತಿಗೆ ಪರಿಚಯವಾಗದೇ ಇರುವುದೇ ಮೇಲು.

Previous article‘ಮಾಮಣ್ಣನ್‌’ ಟ್ರೈಲರ್‌ | ಮಾರಿ ಸೆಲ್ವರಾಜ್‌ ಹೈ ವೋಲ್ಟೇಜ್‌ ಪೊಲಿಟಿಕಲ್‌ – ಡ್ರಾಮಾ
Next articleKiki Hakinson – ಮೊದಲ Miss World | ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆ ಇತಿಹಾಸ, ಪರಿಚಯ

LEAVE A REPLY

Connect with

Please enter your comment!
Please enter your name here