ಒಂದು ನಿರ್ಧಾರದ ಹಿಂದೆ ಹಲವು ಘಟನೆಗಳ ಪರಿಣಾಮವಿರುತ್ತದೆ. ಅಮೃತಾ, ಕೇಶವ್ ವಿಷಯದಲ್ಲಿ ಮಾಡುವುದು ಅಂತಹ ನಿರ್ದಾರವಾಗಿತ್ತಾ? ಅವಳ ಒಳಗಿನ ಕಾರುಣ್ಯ ತನ್ನ ವೈಯಕ್ತಿಕ ಬದುಕನ್ನೂ ಮೀರಿ ಅವಳಿಂದ ಆ ಕೆಲಸ ಮಾಡಿಸಿತ್ತಾ? ಏನು ಮಾಡುತ್ತಾಳವಳು? ‘ಪ್ಯಾರಡೈಸ್‌’ ಮಲಯಾಳಂ ಸಿನಿಮಾ ಪ್ರೈಂನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಬದುಕು ಕೆಲವೊಮ್ಮೆ ಎಲ್ಲವನ್ನೂ ಕೊಡುತ್ತದೆ. ಬಯಸಿದ ಕನಸುಗಳನ್ನು ಬಾಗಿಲ ಮುಂದೆ ತಂದು ನಿಲ್ಲಿಸುತ್ತದೆ. ಆದರೆ ಯಾವುದೋ ಒಂದು ಸಣ್ಣ ತಿರುವಲ್ಲಿ ಅನಿರೀಕ್ಷಿತವಾಗಿ ಎಲ್ಲವನ್ನೂ ಇಲ್ಲವಾಗಿಸುತ್ತದೆ. ಯಾವುದೋ ದಾರಿಯಲ್ಲಿ ಯಾತಕ್ಕೂ ನಡೆದವರು, ಅಲ್ಲಿಂದ ಮರಳುವುದೇ ಇಲ್ಲ. ಪಯಣದ ಆರಂಭದಲ್ಲಿ ಇದ್ದ ಭರವಸೆ ಮರಳುವಾಗ ಇಲ್ಲ.

ಪ್ಯಾರಡೈಸ್! ಮದುವೆಯಾದ ಹುಡುಗಿ ಒಟಿಟಿ ಪ್ರಾಜೆಕ್ಟ್ ಮಾಡುವ ಅವಕಾಶ ಕೈಯಲ್ಲಿ, ಶ್ರೀಲಂಕೆಯ ಸುಂದರ ತಾಣಕ್ಕೆ ಪ್ರಯಾಣ, ಸ್ವರ್ಗದ ತುಣುಕೇ ಎನ್ನುವಂಥ ಜಾಗ. ಚಿಂತೆ, ಸಮಸ್ಯೆ ಇರುವುದೇ ಇಲ್ಲ. ಕೇಶವ್ ಮತ್ತು ಅಮೃತಾ ನೂರು ಕನಸುಗಳೊಂದಿಗೆ ಅಲ್ಲಿ ಹೋಗುತ್ತಾರೆ. ಕಾಡಿನ ಮಧ್ಯದ ಆ ರೆಸಾರ್ಟ್‌ನಲ್ಲಿ ಇಬ್ಬರೂ ಕಳೆದುಹೋಗುವಂಥ ಸಂತೋಷದಲ್ಲಿ ಇರುತ್ತಾರೆ. ಇಷ್ಟೇ ಆದರೆ ಕತೆಯಾಗುವುದೇ? ಕೇಶವ್‌ ರೆಸಾರ್ಟ್‌ನಲ್ಲಿ ಮಲಗಿದ್ದಾಗ ಪ್ರಾಜೆಕ್ಟ್ ವಿವರ ಇದ್ದ ಅವನ ಲ್ಯಾಪ್‌ಟಾಪ್‌, ಫೋನ್ ಕದ್ದೊಯ್ಯುತ್ತಾರೆ ಕಳ್ಳರು. ಇಲ್ಲಿಂದಲೇ ಶುರುವಾಗೋದು ತಿರುವು.

ಆರಂಭದಲ್ಲಿ ಪೋಲಿಸ್ ಕಂಪ್ಲೇಂಟ್ ಕೊಟ್ಟು ಅದು ಸಿಗಬಹುದೆಂಬ ಭರವಸೆಯಲ್ಲಿ ಇರುತ್ತಾರೆ. ಆದರೆ ದಿನ ಕಳೆದಂತೆ ಇವರು ಹೋಗುವ ದಿನ ಬಂದರೂ ಅದು ಸಿಗುವುದಿಲ್ಲ. ಅಲ್ಲಿ ಟ್ರೈಬ್ ಜನ, ರೆಸಾರ್ಟಿನ ಹುಡುಗರು… ಈ ಮುಂಚೆ ಎಲ್ಲವೂ ಚೆನ್ನಾಗಿದ್ದ, ಖುಷಿಯ ಭಾಗವಾಗಿದ್ದ ಸಂಗತಿಗಳೆಲ್ಲ ಅನುಮಾನದ, ಸಿಟ್ಟಿನ, ಸಿಡಿಮಿಡಿಯ ಕಾರಣವಾಗುತ್ತಾ ಹೋಗುತ್ತವೆ. ತನ್ನ ಲ್ಯಾಪ್‌ಟಾಪ್‌ಗಾಗಿ ಮೇಲಧಿಕಾರಿಗಳಿಂದ ಒತ್ತಡ ಹಾಕಿಸುವ ಕೇಶವ್ ಕಾರಣಕ್ಕೆ ಪೋಲಿಸರು ಸ್ಥಳೀಯರನ್ನು ಹಿಂಸಿಸುತ್ತಾರೆ. ಅದರಲ್ಲೊಬ್ಬ ಸತ್ತೇ ಹೋಗುತ್ತಾನೆ. ಪ್ರತಿ ದಿನ ಪರಿಸ್ಥಿತಿ ಹದಗೆಡುತ್ತಾ ಒಂದೊಂದು ತಿರುವು ಪಡೆದುಕೊಳ್ಳುತ್ತಾ ಹೋಗುತ್ತದೆ. ಒಬ್ಬನ ಸಾವಿನ ನಂತರ ಸ್ಥಳೀಯರ ಪ್ರತಿಭಟನೆ ಆರಂಭವಾಗುತ್ತದೆ. ರೆಸಾರ್ಟ್‌ಗೆ ದಾಳಿ ಮಾಡುತ್ತಾರೆ. ಆ ಗಲಾಟೆಯಲ್ಲಿ ಆಗುತ್ತದಲ್ಲಾ… ಅದು ಊಹೆಗೂ ಮೀರಿದ್ದು. ಆದರೆ ಆಕಸ್ಮಿಕವಲ್ಲ ಒಂದು ನಿರ್ಧಾರದ ಹಿಂದೆ ಹಲವು ಘಟನೆಗಳ ಪರಿಣಾಮವಿರುತ್ತದೆ. ಅಮೃತಾ, ಕೇಶವ್ ವಿಷಯದಲ್ಲಿ ಮಾಡುವುದು ಅಂತಹ ನಿರ್ದಾರವಾಗಿತ್ತಾ? ಅವಳ ಒಳಗಿನ ಕಾರುಣ್ಯ ತನ್ನ ವೈಯಕ್ತಿಕ ಬದುಕನ್ನೂ ಮೀರಿ ಅವಳಿಂದ ಆ ಕೆಲಸ ಮಾಡಿಸಿತ್ತಾ? ಏನು ಮಾಡುತ್ತಾಳವಳು?

ಈ ಸಿನಿಮಾದಲ್ಲಿ ಅಮೃತಾ ಪಾತ್ರಧಾರಿ ದರ್ಶನಾ, ಗೈಡ್ ಹನುಮಂತ ಸೀತೆಯನ್ನು ಭೇಟಿ ಮಾಡಿದ ಜಾಗಗಳನ್ನು ತೋರಿಸುವಾಗ ಕೇಳುವ ಪ್ರಶ್ನೆ, ಒಂದು ಜಿಂಕೆಯ ಸೊಗಸಿಗಾಗಿ ಅದನ್ನು ಕಾಯುತ್ತಾ ಕೂರುವ ಅವಳ ನಡೆ… ಕಳ್ಳಬೇಟೆಯ ಬಗ್ಗೆ ವ್ಯಕ್ತಪಡಿಸೋ ಬೇಸರ… ಇದೆಲ್ಲ ಸಿನೆಮಾದ ಅಂತ್ಯಕ್ಕೆ ಮಾಡುವ ತಯಾರಿ ಅಂತ ನಮಗೆ ಗೊತ್ತೇ ಆಗುವುದಿಲ್ಲ. ‘ಪ್ಯಾರಡೈಸ್’, ಶ್ರೀಲಂಕನ್ ನಿರ್ದೇಶಕ ಪ್ರಸನ್ನ ವಿಟನಾಗೆಯ ಮೊದಲ ಮಲಯಾಳಂ ಸಿನೆಮಾ. ಪ್ರೈಂನಲ್ಲಿ ಸ್ಟ್ರೀಮ್‌ ಆಗುತ್ತಿದೆ.

LEAVE A REPLY

Connect with

Please enter your comment!
Please enter your name here