ಹಿಂದಿ ಕಿರುತೆರೆಯ ‘ಮಹಾಭಾರತ’ ಜನಪ್ರಿಯ ಸರಣಿಯಲ್ಲಿ ಭೀಮನ ಪಾತ್ರದ ಮೂಲಕ ಚಿರಪರಿಚಿತರಾಗಿದ್ದ ಪ್ರವೀಣ್‌ ಕುಮಾರ್‌ ಸೋಬ್ತಿ ನಿನ್ನೆ ರಾತ್ರಿ ಹೃದಯಾಘಾತದಿಂದ ಅಗಲಿದ್ದಾರೆ. ಮೂಲತಃ ಅಥ್ಲೀಟ್‌ ಆಗಿದ್ದ ಅವರು ಹ್ಯಾಮರ್‌ ಮತ್ತು ಡಿಸ್ಕಸ್‌ ಥ್ರೋನಲ್ಲಿ ನಾಲ್ಕು (ಏಷ್ಯನ್‌ ಗೇಮ್ಸ್‌) ಪದಕ ಗಳಿಸಿದ್ದರು.

ಮಾಜಿ ಅಥ್ಲೀಟ್‌, ನಟ ಪ್ರವೀಣ್‌ ಕುಮಾರ್‌ ಸೋಬ್ತಿ (75 ವರ್ಷ) ನಿನ್ನೆ ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬಿ.ಆರ್.ಚೋಪ್ರಾ ನಿರ್ದೇಶನದ ‘ಮಹಾಭಾರತ’ ಹಿಂದಿ ಕಿರುತೆರೆ ಸರಣಿಯ ಭೀಮನ ಪಾತ್ರದ ಮೂಲಕ ಅವರು ಜನರಿಗೆ ಚಿರಪರಿಚಿತರಾಗಿದ್ದರು. ಈ ಧಾರಾವಾಹಿ ಜೊತೆಗೆ ಹಲವಾರು ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ. ಅಮಿತಾಭ್‌ ಬಚ್ಚನ್‌ ನಟನೆಯ ‘ಶೇಹನ್‌ಷಾ’, ಧರ್ಮೇಂದ್ರ ನಾಯಕನಟರಾಗಿ ಅಭಿನಯಿಸಿದ್ದ ‘ಲೋಹಾ’, ಆಜ್‌ ಕಾ ಅರ್ಜುನ್‌, ಅಜೂಬಾ, ಘಾಯಲ್‌ ಸೇರಿದಂತೆ ಹಲವು ಹಿಂದಿ ಸಿನಿಮಾಗಳು ಸೇರಿದಂತೆ ದಕ್ಷಿಣದ ಪ್ರಾದೇಶಿಕ ಭಾಷೆಗಳ ಸಿನಿಮಾಗಳಲ್ಲಿ ಸೋಬ್ತಿ ನಟಿಸಿದ್ದಾರೆ. ಅಂಬರೀಶ್‌ ಅಭಿನಯದ ಅಜಿತ್‌ (1982) ಚಿತ್ರದಲ್ಲಿ ಸೋಬ್ತಿ ನಟಿಸಿದ್ದರು.

‘ಅಜಿತ್‌’ ಕನ್ನಡ ಸಿನಿಮಾದಲ್ಲಿ ಅಂಬರೀಶ್‌ ಜೊತೆ

ನಟನಾಗುವ ಮುನ್ನ ಅವರು ಹ್ಯಾಮರ್‌ ಮತ್ತು ಡಿಸ್ಕಸ್‌ ಥ್ರೋ ಅಥ್ಲೀಟ್‌ ಆಗಿದ್ದರು. ಏಷ್ಯನ್‌ ಗೇಮ್ಸ್‌ನಲ್ಲಿ ನಾಲ್ಕು ಬಾರಿ ಪದಕ ಪಡೆದಿದ್ದ ಸೋಬ್ತಿ 1968ರ ಮೆಕ್ಸಿಕೋ ಮತ್ತು 1972ರ ಮ್ಯೂನಿಚ್‌ ಒಲಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಕ್ರೀಡಾಕ್ಷೇತ್ರದ ಸಾಧನೆಗಾಗಿ ಅವರಿಗೆ ಅರ್ಜುನ ಪ್ರಶಸ್ತಿ ಸಂದಿದೆ. ಬಾರ್ಡರ್‌ ಸೆಕ್ಯೂರಿಟಿ ಫೋರ್ಸ್‌ನಲ್ಲಿ ಅವರು ಡೆಪ್ಯೂಟಿ ಕಮ್ಯಾಂಡೆಂಟ್‌ ಆಗಿ ಸೇವೆ ಸಲ್ಲಿಸಿದ್ದಾರೆ. ಅಗಲಿದ ನಟ, ಅಥ್ಲೀಟ್‌ಗೆ BSF ಟ್ವಿಟರ್‌ ಸಂದೇಶಗಳ ಮೂಲಕ ಸ್ಮರಿಸಿಕೊಂಡು ನಮನ ಸಲ್ಲಿಸಿದೆ.

LEAVE A REPLY

Connect with

Please enter your comment!
Please enter your name here