ಚಿತ್ರೋತ್ಸವಗಳಲ್ಲಿ ಅಪಾರ ಮೆಚ್ಚುಗೆ ಪಡೆದ ‘ಫೊಟೊ’ ಸಿನಿಮಾದ ‘ನಿಮ್ಮ ಸಂಗ’ ಹಾಡು ಬಿಡುಗಡೆಯಾಗಿದೆ. ಉತ್ಸವ್‌ ಗೋನವಾರ ನಿರ್ದೇಶನದ ಸಿನಿಮಾ ಇದೇ ವಾರ ಮಾರ್ಚ್‌ 15ರಂದು ತೆರೆಕಾಣುತ್ತಿದೆ. ಬಹುಭಾಷಾ ನಟ ಪ್ರಕಾಶ್‌ ರೈ ಅವರು ತಮ್ಮ ‘ನಿರ್ದಿಗಂತ’ದ ಮೂಲಕ ಚಿತ್ರವನ್ನು ಪ್ರಸೆಂಟ್‌ ಮಾಡುತ್ತಿದ್ದಾರೆ.

ಕೋವಿಡ್‌ ಸಂದರ್ಭದ ಲಾಕ್‌ಡೌನ್‌ ಸಂಕಷ್ಟಗಳನ್ನು ತೆರೆದಿಡುವ ‘ಫೋಟೊ’ ಸಿನಿಮಾ ಇದೇ ವಾರ ಮಾರ್ಚ್‌ 15ರಂದು ತೆರೆಕಾಣುತ್ತಿದೆ. ಉತ್ಸವ್‌ ಗೋನವಾರ ನಿರ್ದೇಶನದ ಚಿತ್ರವಿದು. ಬಹಭಾಷಾ ನಟ ಪ್ರಕಾಶ್‌ ರೈ ಅವರು ಈ ಯುವ ತಂಡದ ಜೊತೆಗೆ ನಿಂತಿದ್ದು, ತಮ್ಮ ‘ನಿರ್ದಿಗಂತ’ದಡಿ ಚಿತ್ರವನ್ನು ಪ್ರಸೆಂಟ್‌ ಮಾಡುತ್ತಿದ್ದಾರೆ. KRG Studios ಚಿತ್ರವನ್ನು ರಿಲೀಸ್‌ ಮಾಡುತ್ತಿದೆ. ಸಿನಿಮಾ ಬಗ್ಗೆ ಮಾತನಾಡುವ ಪ್ರಕಾಶ್‌ ರೈ, ‘ನಾನು ಏನೂ ದೊಡ್ಡ ಕೆಲಸ ಮಾಡಿಲ್ಲ. ಇಂಥದ್ದೊಂದು ಕೆಲಸ‌ ಮಾಡಿಸಿಕೊಳ್ಳುವ ಅರ್ಹತೆ ಆ ಸಿನಿಮಾಗೆ ಇದೆ. ನಿರ್ದೇಶಕ ಉತ್ಸವ್ ಮತ್ತು ಅವರ ತಂಡದವರು ಪ್ರಕಾಶ್ ರೈಗೆ ಸಿನಿಮಾ ತೋರಿಸಬೇಕು ಅಂದಾಗಲೇ ನನ್ನಲ್ಲಿ ಸಾರ್ಥಕ ಭಾವ ಮೂಡಿತು. ಈ ಸಿನಿಮಾ ನೋಡಿದ ಬಳಿಕ ಹದಿನೈದು ನಿಮಿಷ ಮಾತು ಬರಲಿಲ್ಲ. ಯುವಕರ ತಂಡ ಮಾಡಿರುವ ಸಿನಿಮಾ ಇದು. ಈ ರೀತಿ ಯುವಕರು ಹಾಗೂ ಈ ರೀತಿ ಸಿನಿಮಾಗಳು ಬೆಳೆಯಬೇಕು’ ಎನ್ನುತ್ತಾರೆ.

ಇದೇ ಮಾರ್ಚ್‌ 15ಕ್ಕೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ಬಿಡುಗಡೆ ಮಾಡುವುದು ಯೋಜನೆ. 22ರ ನಂತರ ಉತ್ತರ ಕರ್ನಾಟಕದ ಸಿಂಗಲ್ ಥಿಯೇಟರ್‌ಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಚಿತ್ರವನ್ನು ಹೆಚ್ಚು ಜನರಿಗೆ ತಲುಪಿಸುವ ಸಲುವಾಗಿ 150 ರೂಪಾಯಿ ಟಿಕೆಟ್ ದರ ಫಿಕ್ಸ್‌ ಮಾಡಲಾಗಿದೆ. ತಮ್ಮ ಚಿತ್ರದ ಪರವಾಗಿ ನಿಂತ ಪ್ರಕಾಶ್‌ ರೈ ಅವರಿಗೆ ಧನ್ಯವಾದ ಅರ್ಪಿಸುವ ನಿರ್ದೇಶಕ ಉತ್ಸವ್‌, ‘ಫೋಟೋ ಸಿನಿಮಾ ರಿಲೀಸ್ ಮಾಡುವುದು ಹೇಗೆ ಎಂಬ ಪ್ರಶ್ನೆ ಇತ್ತು. ಪ್ರಕಾಶ್ ಸರ್ ಬಂದಿದ್ದು ನಮಗೆ ದೊಡ್ಡ ಶಕ್ತಿ. ಇದು ಉತ್ಸವ್‌ ಅವರಿಗಷ್ಟೇ ಶಕ್ತಿಯಲ್ಲ. ಈ ಥರಹದ ಸಿನಿಮಾ ಮಾಡುವವರಿಗೆ ನಂಬಿಕೆ. ಮುಂದಿನ ಸಿನಿಮಾ ಮಾಡಲು ಪ್ರಕಾಶ್ ಸರ್ ಧೈರ್ಯ ಕೊಟ್ಟಿದ್ದಾರೆ’ ಎಂದರು. ಸದ್ಯ ಬಿಡುಗಡೆಯಾಗಿರುವ ‘ನಿಮ್ಮ ಸಂಗ’ ಜನಪದ ಶೈಲಿಯ ಹಾಡು ಫೋಟೋ ಸಿನಿಮಾದ ಅಂತರಂಗ ಬಿಚ್ಚಿಟ್ಟಿದೆ. ನಿರ್ದೇಶಕ ಉತ್ಸವ್ ಸಾಹಿತ್ಯ ಬರೆದಿರುವ ಹಾಡಿಗೆ ಶಿಲ್ಪಾ ಮುಡ್ಬಿ ದನಿಯಾಗಿದ್ದಾರೆ. ‘ಮಸಾರಿ ಟಾಕೀಸ್‌’ ಬ್ಯಾನರ್‌ ಅಡಿ ತಯಾರಾಗಿರುವ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಮಹಾದೇವ ಹಡಪದ್, ಜಹಾಂಗೀರ್, ಸಂಧ್ಯಾ ಅರಕೆರೆ, ವೀರೇಶ್ ಗೋನವಾರ ಅಭಿನಯಿಸಿದ್ದಾರೆ. ದಿನೇಶ್ ದಿವಾಕರನ್ ಛಾಯಾಗ್ರಹಣ, ರವಿ ಹಿರೇಮಠ್ ಶಬ್ಧ ವಿನ್ಯಾಸ, ಶಿವರಾಜ್ ಮೆಹೂ ಸಂಕಲನ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here