ರಿಚಿ ಮೆಹ್ತಾ ನಿರ್ದೇಶನದ ‘ಪೋಚರ್‌’ ಮಲಯಾಳಂ ಸರಣಿ ಇಂದಿನಿಂದ (ಫೆ 23) ಸ್ಟ್ರೀಮಿಂಗ್‌ ಆರಂಭಿಸಿದೆ. ನಿಮಿಷಾ ಸಜಯನ್‌, ರೋಷನ್‌ ಮ್ಯಾಥ್ಯೂ, ದಿಬ್ಯೇಂದು ಭಟ್ಟಾಚಾರ್ಯ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸರಣಿ ದಂತ ದಂಧೆ ಕುರಿತು ಹೇಳುತ್ತದೆ. ಬಾಲಿವುಡ್‌ ನಟಿ ಆಲಿಯಾ ಭಟ್‌ ಈ ಸರಣಿಯ ಸಹನಿರ್ಮಾಪಕಿ ಎನ್ನುವುದು ವಿಶೇಷ.

ನಿಮಿಷಾ ಸಜಯನ್, ರೋಷನ್ ಮ್ಯಾಥ್ಯೂ ಮತ್ತು ದಿಬ್ಯೇಂದು ಭಟ್ಟಾಚಾರ್ಯ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಪೋಚರ್’ ಮಲಯಾಳಂ ಸರಣಿ ಇಂದಿನಿಂದ (ಫೆ 23) Prime Videoದಲ್ಲಿ ಸ್ಟ್ರೀಮಿಂಗ್‌ ಆರಂಭಿಸಿದೆ. ಸರಣಿಯನ್ನು ರಿಚಿ ಮೆಹ್ತಾ ನಿರ್ದೇಶಿಸಿದ್ದಾರೆ. 1990ರ ದಶಕದಲ್ಲಿ ಚಾಲ್ತಿಯಲ್ಲಿದ್ದ ದಂತ ಬೇಟೆಯ ದಂಧೆಯು ಕೇರಳದ ಕಾಡುಗಳಲ್ಲಿ ಮತ್ತೆ ಶುರುವಾಗಿರುವ ಸುದ್ದಿಯೊಂದಿಗೆ ಟ್ರೇಲರ್ ಪ್ರಾರಂಭವಾಗುತ್ತದೆ. ಭಾರತೀಯ ಇತಿಹಾಸದಲ್ಲಿಯೇ ಅತಿ ದೊಡ್ಡ ದಂಧೆ ಎಂದು ಪರಿಗಣಿಸಲಾದ ಈ ದಂತ ದಂಧೆ ಹತ್ತಿಕ್ಕಲು ನಿಮಿಷಾ ಮತ್ತು ದಿಬ್ಯೇಂದು ನೇತೃತ್ವದಲ್ಲಿ ತನಿಖಾ ತಂಡವನ್ನು ನಿಯೋಜಿಸಲಾಗುತ್ತದೆ. ನ್ಯಾಯಾಲಯದ ದಾಖಲೆಗಳು ಮತ್ತು ಪತ್ರಗಳ ಆಧಾರವಾಗಿಟ್ಟುಕೊಂಡು ಸರಣಿಯು ಕೇರಳದ ದಟ್ಟವಾದ ಕಾಡುಗಳು ಮತ್ತು ದೆಹಲಿಯ ಕಾಂಕ್ರೀಟ್ ಕಾಡಿನಲ್ಲಿ ಸಂಭವಿಸಿದ ಕೆಲವು ಘಟನೆಗಳ ಕಾಲ್ಪನಿಕ ದೃಶ್ಯಗಳನ್ನು ತೋರಿಸಿದೆ.

ಕೇರಳ ಮತ್ತು ನವದೆಹಲಿಯಲ್ಲಿ ಸೆಟ್‌ಗಳಲ್ಲಿ ಚಿತ್ರೀಕರಿಸಲಾದ ಈ ಸರಣಿಯು ಮಲಯಾಳಂ, ಹಿಂದಿ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಸರಣಿಯಲ್ಲಿ ಅಂಕಿತ್ ಮಾಧವ್, ಕನಿ ಕುಸೃತಿ, ಸೂರಜ್ ಪಾಪ್ಸ್, ರಂಜಿತಾ ಮೆನನ್, ವಿನೋದ್ ಶೆರಾವತ್ ಮತ್ತು ಸ್ನೂಪ್ ದಿನೇಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸರಣಿಯು ಮೂಲ ಮಲಯಾಳಂ ಸೇರಿದಂತೆ ತೆಲುಗು, ತಮಿಳು, ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ. ಸರಣಿಯನ್ನು QC Entertainments ಬ್ಯಾನರ್‌ ಅಡಿಯಲ್ಲಿ ಎಡ್ವರ್ಡ್ ಹೆಚ್ ಹ್ಯಾಮ್ ಜೂನಿಯರ್, ರೇಮಂಡ್ ಮ್ಯಾನ್ಸ್‌ಫೀಲ್ಡ್ ಮತ್ತು ಸೀನ್ ಮ್ಯಾಕ್‌ಕಿಟ್ಟ್ರಿಕ್ ನಿರ್ಮಿಸಿದ್ದು, Eternal Sunshine Productions ಬ್ಯಾನರ್‌ ಅಡಿಯಲ್ಲಿ ಆಲಿಯಾ ಭಟ್‌ ಕೂಡ ನಿರ್ಮಾಣ ಪಾಲುದಾರರಾಗಿದ್ದಾರೆ.

LEAVE A REPLY

Connect with

Please enter your comment!
Please enter your name here