‘ಕೆಜಿಎಫ್‌’ ಖ್ಯಾತಿಯ ಕನ್ನಡ ನಿರ್ದೇಶಕ ಪ್ರಶಾಂತ್ ನೀಲ್‌ ಅವರು ತೆಲುಗು ಮೆಗಾಸ್ಟಾರ್ ಚಿರಂಜೀವಿ ಅವರನ್ನು ಭೇಟಿ ಮಾಡಿದ್ದಾರೆ. ಚಿರು ಪುತ್ರ ರಾಮ್‌ಚರಣ್‌ ತೇಜಾರ ಹದಿನೇಳನೇ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಿಸುವುದು ಖಾತ್ರಿಯಾಗಿದೆ.

ನಿರ್ದೇಶಕ ಪ್ರಶಾಂತ್ ನೀಲ್‌ ತಮ್ಮ ಚೊಚ್ಚಲ ‘ಉಗ್ರಂ’ ಸಿನಿಮಾದಲ್ಲೇ ತಮ್ಮ ತಂತ್ರಗಾರಿಕೆಯನ್ನು ಪರಿಚಯಿಸಿದ್ದರು. ದೃಶ್ಯಮಾಧ್ಯಮವನ್ನು ಪ್ರಭಾವಶಾಲಿಯಾಗಿ ಬಳಕೆ ಮಾಡಿಕೊಂಡ ಅವರು ‘ಕೆಜಿಎಫ್‌’ ಚಿತ್ರದೊಂದಿಗೆ ಪ್ಯಾನ್‌ಇಂಡಿಯಾ ನಿರ್ದೇಶಕರಾದರು. ಇದೀಗ ‘ಕೆಜಿಎಫ್‌2’ ತೆರೆಗೆ ಸಿದ್ಧವಾಗುತ್ತಿದೆ. ಸದ್ಯ ಪ್ರಶಾಂತ್ ನೀಲ್‌ ಪ್ರಭಾಸ್‌ ನಟನೆಯ ‘ಸಲಾರ್‌’ ಚಿತ್ರೀಕರಣದಲ್ಲಿದ್ದಾರೆ. ಈ ಮಧ್ಯೆ ಅವರು ನಿನ್ನೆ ತೆಲುಗು ಮೆಗಾಸ್ಟಾರ್ ಚಿರಂಜೀವಿ ಮನೆಗೆ ಭೇಟಿ ಕೊಟ್ಟಿದ್ದಾರೆ. ಚಿರಂಜೀವಿ ಮತ್ತು ಅವರ ತಾರಾಪುತ್ರ ರಾಮ್‌ಚರಣ್ ತೇಜಾ ಜೊತೆಗಿನ ಅವರ ಫೋಟೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮೂಲಗಳ ಪ್ರಕಾರ ರಾಮ್‌ಚರಣ್‌ ತೇಜಾರ ಹದಿನೇಳನೇ ಚಿತ್ರವನ್ನು ಪ್ರಶಾಂತ್ ನೀಲ್‌ ನಿರ್ದೇಶಿಸಲಿದ್ದಾರೆ. ನಿನ್ನೆಯ ಭೇಟಿಯಲ್ಲಿ ಇದು ಪಕ್ಕಾ ಆಗಿದೆ.

ನಟ ರಾಮ್ ಚರಣ್ ತೇಜಾ ಅವರು ಪ್ರಸ್ತುತ ಪ್ಯಾನ್ ಇಂಡಿಯಾ ಸಿನಿಮಾಗಳತ್ತಲೇ ಗಮನ ಹರಿಸಿದ್ದಾರೆ. ರಾಜಮೌಳಿ ನಿರ್ದೇಶನದಲ್ಲಿ ಅವರು ನಟಿಸುತ್ತಿರುವ ‘ಆರ್‌ಆರ್‌ಆರ್‌’ ಮುಂದಿನ ದಿನಗಳಲ್ಲಿ ತೆರೆಕಾಣಲಿದೆ. ಖ್ಯಾತ ತಮಿಳು ಚಿತ್ರನಿರ್ದೇಶಕ ಶಂಕರ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಅವರ 15ನೇ ಸಿನಿಮಾ ಮುಂದಿನ ವರ್ಷ ಬಿಡುಗಡೆಯಾಗಲಿದೆ. ಇದು ತೆಲುಗು ಮತ್ತು ಹಿಂದಿ ಭಾ‍ಷೆಗಳಲ್ಲಿ ತಯಾರಾಗುತ್ತಿರುವ ಸಿನಿಮಾ. ಇದಾದ ನಂತರ ‘ಜೆರ್ಸಿ’ ತೆಲುಗು ಸಿನಿಮಾ ಖ್ಯಾತಿಯ ಗೌತಮ್‌ ತಿನ್ನನೂರಿ ನಿರ್ದೇಶನದಲ್ಲಿ ರಾಮ್‌ಚರಣ್ ತೇಜಾ ನಟನೆಯ ಹದಿನಾರನೇ ಚಿತ್ರ ಬರುತ್ತದೆ. ಇದಾದ ನಂತರ ಪ್ರಶಾಂತ್ ನೀಲ್ ನಿರ್ದೇಶನದ ಪ್ಯಾನ್‌ ಇಂಡಿಯಾ ಚಿತ್ರದಲ್ಲಿ ರಾಮ್‌ಚರಣ್ ನಟಿಸಲಿದ್ದಾರೆ. ರಾಮ್‌ಚರಣ್‌ರ ಎರಡು ಚಿತ್ರಗಳನ್ನು ನಿರ್ಮಿಸಿರುವ ಡಿ.ವಿ.ವಿ.ದಾನಯ್ಯ ಈ ಚಿತ್ರ ನಿರ್ಮಿಸಲಿದ್ದಾರೆ.

ರಾಮ್‌ ಚರಣ್ ತೇಜಾ, ಪ್ರಶಾಂತ್ ನೀಲ್, ಡಿ.ವಿ.ವಿ.ದಾನಯ್ಯ

ನಿರ್ದೇಶಕ ಪ್ರಶಾಂತ್ ನೀಲ್‌ ಅವರು ಚಿರಂಜೀವಿ ಮತ್ತು ರಾಮ್‌ಚರಣ್‌ ಜೊತೆಗಿನ ಫೋಟೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡು, “ಲೆಜೆಂಡರಿ ನಟ ಚಿರಂಜೀವಿ ಅವರನ್ನು ಭೇಟಿ ಮಾಡುವುದು ನನ್ನ ಬಾಲ್ಯದ ಕನಸು. ಇದನ್ನು ಸಾಧ್ಯವಾಗಿಸಿದ ರಾಮ್‌ಚರಣ್‌ರಿಗೆ ಧನ್ಯವಾದ. ಮತ್ತೊಂದು ದೊಡ್ಡ ಸಿನಿಮಾ ಸಿದ್ಧವಾಗಲಿದೆ” ಎಂದಿದ್ದಾರೆ. ಮತ್ತೊಂದೆಡೆ ನಟ ರಾಮ್‌ಚರಣ್ ತೇಜಾ ಕೂಡ ಟ್ವಿಟರ್‌ನಲ್ಲಿ ಈ ಫೋಟೋ ಹಂಚಿಕೊಂಡು ಪ್ರಶಾಂತ್ ನೀಲ್‌ ಜೊತೆಗಿನ ತಮ್ಮ ಹೊಸ ಸಿನಿಮಾದ ಸೂಚನೆ ನೀಡಿದ್ದಾರೆ.

Previous articleಮಿಸ್ಟರ್ ‘ಡಿ’ ಅಥವಾ ಮಿಸ್ಟರ್ ‘ಎಕ್ಸ್’; ಶುರುವಾಯ್ತು ಡಿಟೆಕ್ಟಿವ್ ಕತೆ
Next articleಸುದೀಪ್ ಸಿನಿಮಾಗೆ ಬೇಕೆಂದೇ ಮೋಸ: ‘ಕೋಟಿಗೊಬ್ಬ3’ ವಿತರಕ ಜಾಕ್‌ ಮಂಜು ಬೇಸರ

LEAVE A REPLY

Connect with

Please enter your comment!
Please enter your name here