PRK ಪ್ರೊಡಕ್ಷನ್ಸ್‌ನ ‘O2’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಇದು ಈ ಬ್ಯಾನರ್‌ನ 10ನೇ ಪ್ರಯೋಗ. ಪ್ರಶಾಂತ್ ರಾಜ್ ಮತ್ತು ರಾಘವ್ ನಾಯಕ್ ನಿರ್ದೇಶನದ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಆಶಿಕಾ ರಂಗನಾಥ್ ಮತ್ತು ಪ್ರವೀಣ್ ತೇಜ್ ನಟಿಸಿದ್ದಾರೆ. ನಿರ್ದೇಶಕ ರಾಘವ್ ನಾಯಕ್ ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿವಾನ್ ರಾಧಾಕೃಷ್ಣ ಚಿತ್ರದ ಸಂಗೀತ ಸಂಯೋಜಕ.
ದೊಡ್ಮನೆಯ ರಾಜಕುಮಾರ ಪುನೀತ್ ರಾಜಕುಮಾರ್ ಅವರ ಕನಸಿನ ಕೂಸಾಗಿದ್ದ ಪಿಆರ್‌ಕೆ ಪ್ರೊಡಕ್ಷನ್ ನಿರ್ಮಾಣದ ಹತ್ತನೇ ಸಿನಿಮಾ ‘O2’ ಬಗ್ಗೆ ಹೊಸ ಅಪ್ಡೇಟ್ ಸಿಕ್ಕಿದೆ. ಅಶ್ವಿನಿ ಪುನೀತ್ ರಾಜಕುಮಾರ್ ನಿರ್ಮಾಣದ ‘O2’ ಸಿನಿಮಾ ‘ಪ್ರೀತಿ ಮತ್ತು ವಿಮೋಚನೆಯ ಉತ್ಕಟ ಸಂಗಮ’ ಅನ್ನೋ ಟ್ಯಾಗ್ ಲೈನ್‌ನಿಂದಲೇ ಕುತೂಹಲ ಮೂಡಿಸಿದ್ದು, ಈಗ ಚಿತ್ರದ ರಿಲೀಸ್ ದಿನಾಂಕ ರಿವೀಲ್ ಆಗಿದೆ.
ಪಿ ಆರ್ ಕೆ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ ‘O2’ ಸಿನಿಮಾ ಪ್ರೇಕ್ಷಕರನ್ನ ರಂಜಿಸಲು ಸಜ್ಜಾಗಿದೆ. ಪ್ರಶಾಂತ್ ರಾಜ್ ಮತ್ತು ರಾಘವ್ ನಾಯಕ್ ನಿರ್ದೇಶನದ ಈ ಚಿತ್ರದಲ್ಲಿ ಆಶಿಕಾ ರಂಗನಾಥ್, ಪ್ರವೀಣ್ ತೇಜ್, ರಾಘವ್ ನಾಯಕ್, ಸಿರಿ ರವಿಕುಮಾರ್, ಪ್ರಕಾಶ್ ಬೆಳವಾಡಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ವಿಭಿನ್ನವಾದ ಥ್ರಿಲ್ಲರ್ ಕಥಾಹಂದರ ಹೊಂದಿರುವ ಸಿನಿಮಾದಲ್ಲಿ ನವಿರಾದ ಲವ್ ಸ್ಟೋರಿ ಸಹ ಇದೆ. ಸಿನಿಮಾ ಏಪ್ರಿಲ್ 19ರಂದು ತೆರೆಗೆ ಬರುತ್ತಿದೆ.
ಮೆಡಿಕಲ್ ಮಾಫಿಯಾ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಆಶಿಕಾ ರಂಗನಾಥ್ ವೈದ್ಯೆ ಶ್ರದ್ಧಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವೈದ್ಯರನ್ನು ನಂಬಿ ಬರುವ ರೋಗಿಗಳಿಗೆ ಉತ್ತಮ ಆರೋಗ್ಯ ನೀಡುವುದು ಶ್ರದ್ಧಾ ಧ್ಯೇಯ. ‘O2’ ಡ್ರಗ್ ಮೂಲಕ ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವವರನ್ನು ಬದುಕಿಸುವ ಪ್ರಯತ್ನಕ್ಕೆ ಮುಂದಾಗುತ್ತಾಳೆ. ಈ ಹಾದಿಯಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸುತ್ತಾಳೆ. ಎಲ್ಲ ಅಡೆತಡೆಗಳನ್ನು ಮೀರಿ ಗುರಿ ತಲುಪಲು ನಾಯಕಿ ಶ್ರದ್ಧಾಳಿಗೆ ಸಾಧ್ಯವಾಗುವುದೋ ಇಲ್ಲವೋ ಎಂಬುದನ್ನು ಪ್ರೇಕ್ಷಕರು ಚಿತ್ರಮಂದಿರದಲ್ಲಿ ನೋಡಬಹುದು.
‘O2’ ಸಿನಿಮಾಗೆ ವಿವಾನ್ ರಾಧಾಕೃಷ್ಣ ಸಂಗೀತ ನೀಡಿದರೆ, ನವೀನ್ ಕುಮಾರ್ ಎಸ್ ಅವರ ಛಾಯಾಗ್ರಹಣ ಹಾಗೂ ದೀಪು ಎಸ್ ಕುಮಾರ್ ಸಂಕಲನವಿದೆ. ಚಿತ್ರದ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ ಚಿತ್ರದ ಬಗ್ಗೆ ಮಾತನಾಡಿ, ‘O2 ಒಂದು ವಿಭಿನ್ನವಾದ ಚಿತ್ರ. ಈ ಚಿತ್ರವನ್ನು ಪ್ರೇಕ್ಷಕರ ಮುಂದಿಡಲು ಕಾತುರದಿಂದ ಕಾಯುತ್ತಿದ್ದೇನೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶ ಹೊಂದಿರುವ ನಮ್ಮ ಸಂಸ್ಥೆಯಿಂದ ಮೂಡಿಬರುತ್ತಿರುವ ಈ ಚಿತ್ರ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುತ್ತದೆ ಎಂದು ನಂಬಿದ್ದೇನೆ’ ಎಂದಿದ್ದಾರೆ.
PRK ನಿರ್ಮಾಣದ ಸಿನಿಮಾಗಳು | ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಪಿ ಆರ್ ಕೆ ಪ್ರೊಡಕ್ಷನ್ಸ್ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವುದರಲ್ಲಿ ಸದಾ ಮುಂದೆ. ಈ ಸಂಸ್ಥೆಯ ಬ್ಯಾನರ್‌ನಲ್ಲಿ ಈವರೆಗೆ ತಯಾರಾದ ಚಿತ್ರಗಳಿವು – ಕವಲುದಾರಿ, ಮಾಯಾಬಜಾರ್ 2016, ಲಾ, ಫ್ರಂಚ್ ಬಿರಿಯಾನಿ, ಒನ್ ಕಟ್ ಟೂ ಕಟ್, ಮ್ಯಾನ್ ಆಫ್ ದಿ ಮ್ಯಾಚ್, ಫ್ಯಾಮಿಲಿ ಪ್ಯಾಕ್, ಗಂಧದ ಗುಡಿ, ಆಚಾರ್ & ̧ಕೋ.