ಕಿರುಚಿತ್ರಗಳು ಚಿಕ್ಕದಾಗಿ ಚೊಕ್ಕವಾಗಿರುತ್ತದೆ. ಹೇಳಬೇಕಾದ ವಿಷಯವನ್ನ ಸರಳವಾಗಿ ಹೇಳಿ ಬಿಡುತ್ತವೆ. ಅದರಲ್ಲೂ ಕೆಲವೊಂದು ಕಿರುಚಿತ್ರಗಳು ಒಂದು ಕ್ಷಣದಲ್ಲಿ ನಮ್ಮ ಮನಸ್ಸಿಗೆ ನಾಟಿಬಿಡುತ್ತವೆ. ಅಂತಹ ಒಂದು ಕಿರುಚಿತ್ರ ‘ಮೆಮೋರೀಸ್‌’ ಮೊನ್ನೆಯಷ್ಟೆ ರಿಲೀಸ್‌ ಆಗಿದೆ.

ಕಿರುಚಿತ್ರಗಳು ಮಹತ್ವದ ಸಂದೇಶವನ್ನು ತಂಬಾ ಸರಳವಾಗಿ ಹಾಗೂ ಅರ್ಥವಾಗುವ ರೀತಿಯಲ್ಲಿ ಜನರಿಗೆ ತಲುಪಿಸುತ್ತವೆ. ಹಾಗೇ ಸೂಕ್ಷ್ಮ ವಿಚಾರಗಳನ್ನು ಪರಿಣಾಮಕಾರಿಯಾಗಿ ಹೇಳಲು ನಿರ್ದೇಶಕರು ಕಿರುಚಿತ್ರಗಳ ಮೊರೆ ಹೋಗುತ್ತಾರೆ. ನಿರ್ದೇಶಕ ಪೃಥ್ವಿ ಕುಣಿಗಲ್‌ ‘ಮೆಮೋರೀಸ್‌’ ಕಿರುಚಿತ್ರದ ಮೂಲಕ ನೆನಪುಗಳ ಬಗ್ಗೆ ಹೇಳಿದ್ದಾರೆ. ನೆನಪುಗಳು… ಕೆಲವರಿಗೆ ಜೀವನ ಕೊಟ್ಟರೆ, ಕೆಲವರನ್ನು ಜೀವ ತೆಗೆಯುವಷ್ಟು ಕಾಡುತ್ತವೆ. ಇಂತಹ ವಿಷಯದ ಬಗ್ಗೆ ಒಂದು ಕಿರುಚಿತ್ರವನ್ನ ಪೃಥ್ವಿ ಪ್ರಸ್ತುತಪಡಿಸಿದ್ದಾರೆ.

ರಾಜೇಶ್‌ ಕೀಲಂಬಿ ನಿರ್ಮಾಣ ಮಾಡಿರುವ ಈ ಕಿರುಚಿತ್ರದಲ್ಲಿ ಕಾಣಿಸಿಕೊಳ್ಳೋದು ಮೂರೇ ಪಾತ್ರಗಳು. ಹಳೇ ನೆನಪುಗಳನ್ನು ಉಳಿಸಿಕೊಂಡಿರುವ ಪತ್ನಿಗೆ ಪಕ್ಕದಲ್ಲೇ ಇರುವ ಪತಿಯ ನೆನಪೇ ಇಲ್ಲ. ತನ್ನ ಪತ್ನಿಯ ಬಳಿಯೇ ತನ್ನದೇ ಗುಣಗಾನ ಕೇಳುವ ಅಪರಿಚಿತ ಪತಿ, ಆಕೆಗೆ ತಾನೇ ಪತಿಯೆಂದು ನೆನಪಿಸುತ್ತಾ ಚಿಕಿತ್ಸೆಗೆ ಕರೆತರುವ ಈ ಕಿರುಚಿತ್ರ ಮನಮುಟ್ಟುವಂತಿದೆ. ಸೀತಾಕೋಟೆ ಹಾಗೂ ವಿನಯ್‌ ಕೃಷ್ಣಸ್ವಾಮಿ ಪತಿ-ಪತ್ನಿಯಾಗಿ ನಟಿಸಿದ್ದಾರೆ. ಇನ್ನು ಚಿತ್ರಕ್ಕೆ ಕಥೆ ಬರೆದಿರೋದು ವಿನಯ್‌ ಕೃಷ್ಣಸ್ವಾಮಿ ಹಾಗೂ ಪೃಥ್ವಿ ಕುಣಿಗಲ್‌. ಈ ಕಿರುಚಿತ್ರ Keelambi Media Lab youtube ಚಾನಲ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ.

‘ನೆನಪಿನ ಶಕ್ತಿ ಇಲ್ಲದ ಅಜ್ಜಿಯೊಬ್ಬರನ್ನು ರಸ್ತೆಯಲ್ಲಿ ನೋಡಿದೆ. ಅವರು ಮಗುವೊಂದರ ಜೊತೆ ಮಾತನಾಡುತ್ತಿದ್ದ ರೀತಿ ಕಂಡು ಆಶ್ಚರ್ಯವಾಯಿತು. ನಂತರ ಅವರಿಗೆ ನೆನಪಿನ ಶಕ್ತಿ ಇಲ್ಲ ಎಂಬ ಸತ್ಯ ತಿಳಿಯಿತು. ಆಗಲೇ ಈ ಕಿರುಚಿತ್ರ ಮಾಡುವ ಕಲ್ಪನೆ ಮನಸ್ಸಿಗೆ ಬಂತು’ ಎನ್ನುತ್ತಾರೆ ನಿರ್ದೇಶಕ ಪೃಥ್ವಿ. ರಾಜೇಶ್‌ ಕೀಲಂಬಿ ನಿರ್ಮಾಣ ಮಾಡಿರುವ ಈ ಕಿರುಚಿತ್ರವನ್ನು ಐಫೋನ್‌ನಲ್ಲಿ ಒಂದು ಗಂಟೆಯಲ್ಲಿ ಶೂಟ್‌ ಮಾಡಲಾಗಿದೆಯಂತೆ. 20 ಸಾವಿರ ವೆಚ್ಚದಲ್ಲಿ ನಿರ್ಮಾಣವಾಗಿರುವ ಕಿರುಚಿತ್ರ ಒಂದು ಆಸ್ಪತ್ರೆಯ ರಿಸೆಪ್ಷನ್‌ನಲ್ಲಿ ನಡೆಯುವ ಪುಟ್ಟ ಕಥೆಯಾಗಿದೆ. ಸೊಲೊಮನ್‌ ಕ್ರೂಸ್‌ ಅವರ ಛಾಯಾಗ್ರಹಣ ಇರುವ ಕಿರುಚಿತ್ರಕ್ಕೆ ಚೇತನ್‌ ಕುಮಾರ್‌ ಸಂಗೀತ ನೀಡಿದ್ದಾರೆ.

ನಿರ್ದೇಶಕ ಪೃಥ್ವಿ ಕುಣಿಗಲ್‌, ಈ ಹಿಂದೆಯೂ ಎರಡು ಕಿರುಚಿತ್ರಗಳನ್ನು ಮಾಡಿದ್ದಾರೆ. ಒಂದು ‘ನಾನು ಮತ್ತು ಕಾವ್ಯ’ ಹಾಗೂ ‘ಮೆನಾರ್ಕಿ’. ಕೋವಿಡ್‌ ಸಮಯದಲ್ಲಿ ಎದುರಾದ ಒಂದು ಘಟನೆಯನ್ನೇ ಮೆನಾರ್ಕಿ ಎಂಬ ಕಿರುಚಿತ್ರವನ್ನಾಗಿ ಮಾಡಿದ್ದಾರೆ. ಈ ಕಿರುಚಿತ್ರಕ್ಕೆ 52 ಪ್ರಶಸ್ತಿಗಳು ಸಿಕ್ಕಿವೆ. ‘ಮೆನಾರ್ಕಿ’ ಹೆಣ್ಣು ಮಕ್ಕಳು ಋತುಮತಿಯಾದಾಗ ಅನುಭವಿಸುವ ನೋವಿನ ಬಗ್ಗೆ ಬೆಳಕು ಚೆಲ್ಲುವ ಕಿರುಚಿತ್ರವಾಗಿದೆ. KGF, ಹಂಬಲ್‌ ಪೊಲಿಟೀಶಿಯನ್‌ ನೋಗರಾಜ್‌ ಸೇರಿದಂತೆ ತಮಿಳು ಸಿನಿಮಾಗಳಲ್ಲಿ ಕೆಲಸ ಮಾಡಿರುವ ಪೃಥ್ವಿ ತಮ್ಮ ಮೊದಲ ಸಿನಿಮಾದ ತಯಾರಿಯಲ್ಲಿದ್ದಾರೆ. ಇನ್ನೇನು ಸ್ವಲ್ಪ ಸಮಯದಲ್ಲೇ ಅವರು ತಮ್ಮ ಚೊಚ್ಚಲ ಸಿನಿಮಾವನ್ನು ಪ್ರಕಟಿಸಲಿದ್ದಾರೆ.

LEAVE A REPLY

Connect with

Please enter your comment!
Please enter your name here