ಪುನೀತ್‌ ರಾಜಕುಮಾರ್‌ ಅವರ ಮಹಾತ್ವಾಕಾಂಕ್ಷೆಯ ‘ಗಂಧದ ಗುಡಿ’ ಡಾಕ್ಯೂಡ್ರಾಮಾ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಕನ್ನಡ ನಾಡಿನ ವನ್ಯಜಗತ್ತನ್ನು ಜಗತ್ತಿಗೆ ಪರಿಚಯಿಸುವ ಅಪರೂಪದ ಚಿತ್ರದ ಟ್ರೈಲರ್‌ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ‘ವೈಲ್ಡ್‌ ಕರ್ನಾಟಕ’ ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದ ಅಮೋಘವರ್ಷ ಈ ಚಿತ್ರದ ನಿರ್ದೇಶಕರು. ಅಕ್ಟೋಬರ್‌ 28ರಂದು ಚಿತ್ರ ಬಿಡುಗಡೆಯಾಗುತ್ತಿದೆ.

ನಟ ಪುನೀತ್‌ ರಾಜಕುಮಾರ್‌ ಅವರು ಪ್ರೀತಿಯಿಂದ ರೂಪಿಸಿರುವ ‘ಗಂಧದ ಗುಡಿ’ Docu-Drama ಟ್ರೈಲರ್‌ ಇಂದು ಬೆಳಗ್ಗೆ ಬಿಡುಗಡೆಯಾಗಿದೆ. ಕನ್ನಡ ಸಿನಿಮಾ ವಲಯದಲ್ಲಿ ಚಿತ್ರಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದ್ದು, ಅಪ್ಪು ಅಭಿಮಾನಿಗಳು ಟ್ರೈಲರನ್ನು ಸಂಭ್ರಮಿಸಿದ್ದಾರೆ. ಕನ್ನಡ ನಾಡಿನ ವನ್ಯಜಗತ್ತು, ಪ್ರಾಕೃತಿಕ ಸಂಪತ್ತನ್ನು ಪರಿಚಯಿಸುವುದರೊಂದಿಗೆ ಉತ್ತಮ ಸಂದೇಶ ಹೊಂದಿರುವ ಚಿತ್ರವಿದು. ಪುನೀತ್‌ ರಾಜಕುಮಾರ್‌ ಮತ್ತು ಅಮೋಘವರ್ಷ ನಾಡಿನ ವನ್ಯಸಂಪತ್ತನ್ನು ಪರಿಚಯಿಸುವ ಚಿತ್ರದ ಟ್ರೈಲರ್‌ ಅದ್ಭುತ ಮೇಕಿಂಗ್‌ನ ಸೂಚನೆ ನೀಡುತ್ತದೆ. ಪಿಆರ್‌ಕೆ ಪ್ರೊಡಕ್ಷನ್ಸ್‌ ಬ್ಯಾನರ್‌ನಡಿ ಅಶ್ವಿನಿ ಪುನೀತ್‌ ರಾಜಕುಮಾರ್‌ ಮತ್ತು ಮಡ್‌ಸ್ಕಿಪ್ಪರ್‌ ಜೊತೆಗೂಡಿ ನಿರ್ಮಿಸಿರುವ ಚಿತ್ರಕ್ಕೆ ‘ವೈಲ್ಡ್‌ ಕರ್ನಾಟಕ’ ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದ ಅಮೋಘವರ್ಷ ಅವರ ನಿರ್ದೇಶನವಿದೆ. ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜಿಸಿದ್ದು, ಪ್ರತೀಕ್‌ ಶೆಟ್ಟಿ ಛಾಯಾಗ್ರಹಣ ಮಾಡಿದ್ದಾರೆ.

ಕನ್ನಡ ಚಿತ್ರರಂಗದ ಬಹಳಷ್ಟು ಕಲಾವಿದರು ಹಾಗೂ ತಂತ್ರಜ್ಞರು ತಮ್ಮ ಸೋಷಿಯಲ್‌ ಮೀಡಿಯಾ ಹ್ಯಾಂಡಲ್‌ಗಳಲ್ಲಿ ‘ಗಂಧದ ಗುಡಿ’ ಟ್ರೈಲರ್‌ ಹಂಚಿಕೊಂಡು ಶುಭಾಶಯ ಕೋರಿದ್ದಾರೆ. ಕಾಡು, ಜಲಪಾತ, ಸಮುದ್ರ, ಬುಡಕಟ್ಟು ಜನರು, ವನ್ಯಜೀವಿಗಳಿರುವ ಟ್ರೈಲರ್‌ ಮತ್ತೆ ಮತ್ತೆ ನೋಡುವಂತಿದೆ. ತಂದೆ, ವರನಟ ರಾಜಕುಮಾರ್‌ ಅವರ ಹುಟ್ಟೂರು ಗಾಜನೂರಿನ ಕುರಿತೂ ಟ್ರೈಲರ್‌ನಲ್ಲಿ ಅಪ್ಪು ಮಾತನಾಡುತ್ತಾರೆ. ಮುಗ್ಧತೆಯಿಂದ ಕಾಡನ್ನು ವೀಕ್ಷಿಸುತ್ತಾ ಪ್ರಶ್ನೆಗಳೊಂದಿಗೆ ಅಪ್ಪು ಜರ್ನೀ ಸಾಗುತ್ತದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಮಿಲಿಯನ್‌ ವೀಕ್ಷಣೆ ದಾಖಲಿಸಿದ ಟ್ರೈಲರ್‌ ಕನ್ನಡಿಗರನ್ನಷ್ಟೇ ಅಲ್ಲದೆ ಇತರೆ ಭಾಷಿಕರನ್ನೂ ಸೆಳೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬೊಮ್ಮಾಯಿ ಸೇರಿದಂತೆ ನೂರಾರು ಪ್ರಮುಖರು ಟ್ವೀಟ್‌ ಮಾಡಿ ಶುಭಾಶಯ ಕೋರಿದ್ದಾರೆ.

‘ಗಂಧದ ಗುಡಿ’ ಸಿನಾಪ್ಸಿಸ್‌ ಹೀಗೆ ಹೇಳುತ್ತದೆ – “ನಾಡಿನ ಘನತೆಯನ್ನು ಜಗತ್ತಿಗೆ ಪರಿಚಯಿಸುವ ಕನಸಿನೊಂದಿಗೆ ಪುನೀತ್‌ ಅವರು ಕೈಗೊಂಡ ವಿಶಿಷ್ಟ ಪಯಣವೇ ‘ಗಂಧದ ಗುಡಿ’. ಪುನೀತ್‌ ಅವರ ದೃಷ್ಟಿಕೋನದಲ್ಲಿ ಕರ್ನಾಟಕದ ಸೊಬಗು ಅನಾವರಣಗೊಳ್ಳುವ ಹೊಸ ಬಗೆಯ ಈ ಪ್ರಯೋಗಕ್ಕೆ ‘ವೈಲ್ಡ್‌ ಕರ್ನಾಟಕ’ ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದ ಅಮೋಘವರ್ಷ ಅವರ ನಿರ್ದೇಶನವಿದೆ. ಒಬ್ಬ ಸೂಪರ್‌ಸ್ಟಾರ್‌ ಮತ್ತು ವನ್ಯಜೀವಿ ಛಾಯಾಗ್ರಾಹಕ ಜೊತೆಗೂಡಿ ಒಂದು ಭೂಪ್ರದೇಶವನ್ನು ಅನ್ವೇಷಣೆ ಮಾಡಿರುವ ಚಿತ್ರವೊಂದು ಬಹುಶಃ ಜಗತ್ತಿನ ಯಾವುದೇ ಭಾಷೆಯಲ್ಲಿಯೂ ಬಂದಿಲ್ಲವೆಂದು ಹೇಳಬಹುದು. ಕನ್ನಡ ನಾಡು, ಕಾಡು, ಭಾಷೆ, ಜನ, ಸಂಸ್ಕೃತಿ… ಇವೆಲ್ಲಾ ಒಂದನ್ನೊಂದು ಬೆಸೆದುಕೊಂಡಿವೆ ಎನ್ನುವುದನ್ನು ಪುನೀತ್‌ ರಾಜಕುಮಾರ್‌ ಅರಸುತ್ತಾ ಹೋಗುವುದರ ನೈಜ ಚಿತ್ರಣವೇ ‘ಗಂಧದ ಗುಡಿ’. ಅತ್ಯಾಧುನಿಕ ಉಪಕರಣಗಳನ್ನು ಬಳಕೆ ಮಾಡಿ ನಾಡಿನ ದೃಶ್ಯವೈಭವವನ್ನು ಸೆರೆಹಿಡಿದು ಪ್ರೇಕ್ಷಕರಿಗೆ ಉಣಬಡಿಸುವುದರ ಜೊತೆಗೆ ಎಲ್ಲಿಯೂ ಬೋಧನೆ ಎನ್ನಿಸದಂತೆ ಕುತೂಹಲಕರಾಗಿ ಕಥನವನ್ನು ಕಟ್ಟುವ ಪ್ರಯತ್ನ ಈ ಚಿತ್ರದಲ್ಲಾಗಿದೆ. ಚಿತ್ರಮಂದಿರದ ಅನುಭವಕ್ಕಾಗಿಯೇ ತಯಾರಾಗಿರುವ ಸಿನಿಮಾ ನೇರವಾಗಿ ನಮ್ಮ ನಾಡಿನ ವಿಶೇಷ ತಾಣಗಳಿಗೆ ಕೊಂಡೊಯ್ದು ರೋಮಾಂಚನಗೊಳಿಸುವುದಷ್ಟೇ ಅಲ್ಲದೆ ಅವುಗಳನ್ನು ಉಳಿಸಿಕೊಳ್ಳುವುದರಲ್ಲಿ ನಮ್ಮ ಪಾತ್ರವೇನು ಎನ್ನುವುದನ್ನು ಮನದಟ್ಟು ಮಾಡಿಸಲಿದೆ”.

LEAVE A REPLY

Connect with

Please enter your comment!
Please enter your name here