ನಟಿ ರಾಗಿಣಿ ದ್ವಿವೇದಿ ಅವರು ‘ಸಂಜು ವೆಡ್ಸ್ ಗೀತಾ 2’ ಸಿನಿಮಾದ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್ ಜೋಡಿಯ ಈ ಸಿನಿಮಾ ಸಂಗೀತ – ಹಾಡುಗಳಿಂದ ಸುದ್ದಿಯಾಗುತ್ತಿದೆ. ನಿರ್ದೇಶಕ ನಾಗಶೇಖರ್ ಚಿತ್ರಕ್ಕೆ ಮತ್ತೊಂದು ಸುಂದರ ಹಾಡನ್ನು ಚಿತ್ರಿಸಿದ್ದಾರೆ.
ಪ್ರೇಮಕತೆಗಳ ಸಿನಿಮಾಗಳ ಮೂಲಕ ಗಮನ ಸೆಳೆದ ನಾಗಶೇಖರ್ ಸದ್ಯ ‘ಸಂಜು ವೆಡ್ಸ್ ಗೀತಾ 2’ ಸಿನಿಮಾದ ಚಿತ್ರೀಕರಣದಲ್ಲಿದ್ದಾರೆ. ದಶಕದ ಹಿಂದೆ ತೆರೆಕಂಡ ಅವರ ‘ಸಂಜು ವೆಡ್ಸ್ ಗೀತಾ’ ಮ್ಯೂಸಿಕಲ್ ಹಿಟ್ ಎನಿಸಿಕೊಂಡಿತ್ತು. ಈಗ ನಾಗಶೇಖರ್ ಸಿನಿಮಾದ ಪಾರ್ಟ್2 ಸಿದ್ಧಪಡಿಸುತ್ತಿದ್ದಾರೆ. ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಚಿತ್ರದ ಹಾಡೊಂದರ ಚಿತ್ರೀಕರಣ ಇತ್ತೀಚೆಗೆ ನಡೆದಿದೆ. ನಾಯಕ ಸಂಜು ಹಾಗೂ ನಾಯಕಿ ಗೀತಾ ಇಬ್ಬರ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ಬರುವ ಪಾರ್ಟಿ ಸಾಂಗ್ ಇದು. ಈ ಹಾಡಿನಲ್ಲಿ ರಾಗಿಣಿ ದ್ವಿವೇದಿ ಇಬ್ಬರ ಜೊತೆ ಹೆಜ್ಜೆ ಹಾಕಿದ್ದಾರೆ ಎನ್ನುವುದು ವಿಶೇಷ.
ಕುಂಬಳಗೋಡಿನ ಬಿಜಿಎಸ್ ಹೈಸ್ಕೂಲಿನ ಗ್ಲಾಸ್ಹೌಸ್ನಲ್ಲಿ ಈ ಹಾಡಿನ ಚಿತ್ರೀಕರಣ ನಡೆದಿದೆ. 200ಕ್ಕೂ ಹೆಚ್ಚು ನೃತ್ಯಕಲಾವಿದರು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಖ್ಯಾತ ಗಾಯಕಿ ಮಂಗ್ಲಿ ಈ ಹಾಡಿಗೆ ದನಿಯಾಗಿದ್ದು, ಭಜರಂಗಿ ಮೋಹನ್ ಅವರು ಕೊರಿಯೋಗ್ರಾಫ್ ಮಾಡಿದ್ದಾರೆ. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, 2 ಫೈಟ್ಸ್, ಒಂದು ಹಾಡಿನ ಪ್ಯಾಚ್ವರ್ಕ್ ಮಾತ್ರ ಬಾಕಿಯಿದೆ. ರೇಶ್ಮೆ ನೂಲಿಗೆ ಉತ್ತಮ ಬೆಲೆ ಸಿಗಬೇಕೆಂದು ಹೋರಾಡುವ ನಮ್ಮ ಮಣ್ಣಿನ ಪ್ರೇಮಿಗಳ ಅದ್ಭುತ ಪ್ರೇಮಕಥೆ ಈ ಚಿತ್ರದಲ್ಲಿದೆ ಎನ್ನುತ್ತಾರೆ ನಿರ್ದೇಶಕ ನಾಗಶೇಖರ್.
ಈಗಾಗಲೇ ಚಿತ್ರದ ಎಡಿಟಿಂಗ್ ಮುಗಿದು, ಡಬ್ಬಿಂಗ್ ಕೂಡ ಕೊನೆಯ ಹಂತದಲ್ಲಿದೆ. ಚಿತ್ರಕ್ಕೆ ಸ್ವಿಟ್ಜರ್ಲ್ಯಾಂಡ್ನಲ್ಲಿ 15 ದಿನ ಹನ್ನೊಂದು ಲೊಕೇಶನ್ಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಕುಣಿಗಲ್ನ ಯುಬಿ ಸ್ಟೆಡ್ ಫಾರಂನಲ್ಲಿ (ಕುದುರೆ ಫಾರಂ) ಸುಮಾರು 5 ದಿನಗಳ ಕಾಲ ಹಾಡೊಂದನ್ನು ಚಿತ್ರೀಕರಿಸಲಾಗಿದೆ. ಒಟ್ಟಿನಲ್ಲಿ ಇದನ್ನೊಂದು ಮ್ಯೂಸಿಕಲ್ ಲವ್ಸ್ಟೋರಿಯನ್ನಾಗಿ ರೂಪಿಸಬೇಕು ಎನ್ನುವುದು ತಮ್ಮ ಗುರಿ ಎನ್ನುತ್ತಾರೆ ನಿರ್ದೇಶಕ ನಾಗಶೇಖರ್. ನಿರ್ಮಾಪಕ ಛಲವಾದಿ ಕುಮಾರ್ ಅವರು ಕೂಡ ನಿರ್ದೇಶಕರ ಆಶಯಕ್ಕೆ ಸಹಕಾರ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹಾಸನ ಮತ್ತು ಹಾವೇರಿಯಲ್ಲಿ ಅದ್ದೂರಿ ಸಮಾರಂಭಗಳ ಮೂಲಕ ಹಾಡುಗಳನ್ನು ಬಿಡುಗಡೆ ಮಾಡುವುದು ನಿರ್ಮಾಪಕರ ಯೋಜನೆ. ನಾಗಶೇಖರ್ ಕತೆ, ಚಿತ್ರಕಥೆ, ನಿರ್ದೇಶನ ಚಿತ್ರಕ್ಕಿದ್ದು ಶ್ರೀಧರ್ ವಿ ಸಂಭ್ರಮ್ ಸಿನಿಮಾದ ೫ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಸೋನು ನಿಗಂ, ಶ್ರೇಯಾ ಘೋಷಾಲ್, ಮಂಗ್ಲಿ ದನಿಯಾಗಿದ್ದಾರೆ. ಚೇತನ್ ಚಂದ್ರ, ರಂಗಾಯಣ ರಘು, ಸಾಧು ಕೋಕಿಲ , ತಬಲಾನಾಣಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.