ಕನ್ನಡ ಚಿತ್ರೋದ್ಯಮದ ವಿವಿಧ ವಿಭಾಗಗಳ ಕ್ರಿಯಾಶೀಲರು ಹಮ್ಮಿಕೊಳ್ಳುವ ಡಾ.ರಾಜ್‌ ಕ್ರಿಕೆಟ್‌ ಕಪ್‌ ಟೂರ್ನಿ ಮೇ ತಿಂಗಳಲ್ಲಿ ನಡೆಯಲಿದೆ. ಪಂದ್ಯಾವಳಿಯ ಸೆಮಿಫೈನಲ್‌ ಮತ್ತು ಫೈನಲ್‌ ಪಂದ್ಯಗಳು ದುಬೈನ ಶಾರ್ಜಾದಲ್ಲಿ ನಡೆಯಲಿರುವುದು ವಿಶೇಷ.

ಕರ್ನಾಟಕ ಚಲನಚಿತ್ರ ನೃತ್ಯ ನಿರ್ದೇಶಕರು ಮತ್ತು ನೃತ್ಯ ಕಲಾವಿದರ ಸಂಘದ ವತಿಯಿಂದ ಐದನೇ ವರ್ಷದ ಡಾ.ರಾಜ್ ಕ್ರಿಕೆಟ್ ಕಪ್ ಟೂರ್ನಿ ಮೇ ತಿಂಗಳ 13,14 ಹಾಗೂ 15ರಂದು ನಡೆಯಲಿದೆ. ಇದಕ್ಕೆ ಸಂಬಂಧಿಸಿದಂತೆ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ನೃತ್ಯ ನಿರ್ದೇಶಕರ ಸಂಘದ ಅಧ್ಯಕ್ಷ ರಾಜೇಶ್ ಬ್ರಹ್ಮಾವರ್ ಅವರು ಮಾತನಾಡಿ, “ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಿರ್ಮಾಪಕರು, ನಿರ್ದೇಶಕರು, ಕಲಾವಿದರು, ತಂತ್ರಜ್ಞರು, ಪ್ರದರ್ಶಕರು, ಶಾಸಕರು, ಪತ್ರಕರ್ತರು, ಕಾರ್ಮಿಕರು ಹಾಗೂ ಚಿತ್ರೋದ್ಯಮದಲ್ಲಿ ಕೆಲಸ ಮಾಡುವ ಎಲ್ಲಾ ವರ್ಗದವರು ಭಾಗವಹಿಸುತ್ತಿದ್ದಾರೆ. ಜೊತೆಗೆ ಒಬ್ಬ ಕಾಮನ್ ಮ್ಯಾನ್ ಕೂಡ ಇರುತ್ತಾರೆ” ಎಂದರು. ಬಿಜಿಎಸ್ ಗ್ರೌಂಡ್‌ನಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಡಾ.ರಾಜ್ ಕ್ರಿಕೆಟ್ ಕಪ್‌ನ ಸೆಮಿಫೈನಲ್‌ ಹಾಗೂ ಫೈನಲ್ ಪಂದ್ಯಗಳು ದುಬೈನ ಶಾರ್ಜಾದಲ್ಲಿ ಜೂನ್ ಮೊದಲ ವಾರ ನಡೆಯಲಿದೆ.

ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಜೈರಾಜ್ ಮಾತನಾಡಿ, “ಇಡೀ ಚಿತ್ರೋದ್ಯಮ ಒಟ್ಟಾಗಿ ಸೇರಿ ಮಾಡುವ ಕಾರ್ಯಕ್ರಮವಿದು. ಇದಕ್ಕೆ ಛೇಂಬರ್‌ ಬೆಂಬಲವಿದೆ. ನಾವು ಎಲ್ಲಾ ರೀತಿಯ ಸಹಕಾರ ನೀಡಲಿದ್ದೇವೆ” ಎಂದರು. ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು, “ಬಹಳ ವರ್ಷಗಳ ನಂತರ ರಾಜ್ ಕಪ್ ನಡೆಯುತ್ತಿದೆ. ಇಂಡಸ್ಟ್ರಿಯಲ್ಲಿ ಸೌಹಾರ್ದಯುತ ವಾತಾವರಣ ಕ್ರಿಯೇಟ್ ಮಾಡುವ ಕೆಲಸವೂ ಈ ಮೂಲಕ ನಡೆಯುತ್ತಿದೆ. ಇಂಡಸ್ಟ್ರಿ ವತಿಯಿಂದ ನಾವು ಅವರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇವೆ. ಈಗ ಪಂದ್ಯಾವಳಿಗೆ ರಾಜ್ ಜೊತೆ ಪುನೀತ್ ಹೆಸರೂ ಸಹ ಸೇರ್ಪಡೆಯಾಗಿದೆ” ಎಂದರು. ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್, ನಿರ್ಮಾಪಕರಾದ ಕೆ.ಮಂಜು, ಎನ್.ಎಂ.ಸುರೇಶ್, ನಾಗಣ್ಣ, ಗಣೇಶ್, ಫೈವ್ ಸ್ಟಾರ್ ಗಣೇಶ್ ಇತರರು ಉಪಸ್ಥಿತರಿದ್ದರು.

LEAVE A REPLY

Connect with

Please enter your comment!
Please enter your name here