ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ‘RRR’ ಸಿನಿಮಾದ ಬಿಡುಗಡೆ ಮುಂದೂಡಲ್ಪಟ್ಟಿದೆ. ಚಿತ್ರದ ನಿರ್ಮಾಪಕರು ಸುದ್ದಿಯನ್ನು ಟ್ವೀಟ್‌ ಮಾಡಿದ್ದು, ತಮ್ಮ ಸಿನಿಮಾ ಕುರಿತಂತೆ ಪ್ರೀತಿ, ಕಾಳಜಿ ಹೊಂದಿರುವ ಸಿನಿಪ್ರಿಯರಿಗೆ ಧನ್ಯವಾದ ಹೇಳಿದ್ದಾರೆ.

“ನಮ್ಮ ಎಲ್ಲಾ ಪ್ರಯತ್ನಗಳ ನಂತರವೂ ಕೆಲವು ಪರಿಸ್ಥಿತಿಗಳಿಂದ ಹಿನ್ನೆಡೆಯಾಗಿದೆ. ಒಮಿಕ್ರಾನ್‌ ಆತಂಕದಿಂದಾಗಿ ದೇಶದ ಹಲವು ರಾಜ್ಯಗಳ ಥಿಯೇಟರ್‌ಗಳನ್ನು ಮುಚ್ಚಲಾಗುತ್ತಿದೆ. ಹಾಗಾಗಿ ಚಿತ್ರದ ಬಿಡುಗಡೆಯನ್ನು ಮುಂದೂಡುತ್ತಿದ್ದೇವೆ. ಸೂಕ್ತ ಸಮಯದಲ್ಲಿ ಮರಳಲಿದ್ದು, ಎಂದಿನಂತೆ ನಿಮ್ಮ ಪ್ರೋತ್ಸಾಹವಿರಲಿ” ಎಂದು ‘RRR’ ಸಿನಿಮಾದ ನಿರ್ಮಾಣ ಸಂಸ್ಥೆ DVV ಎಂಟರ್‌ಟೇನ್‌ಮೆಂಟ್‌ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಟ್ವೀಟ್‌ ಮಾಡಿದೆ. ಕಳೆದೆರೆಡು ದಿನಗಳಿಂದ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗುವ ಕುರಿತಂತೆ ವದಂತಿಗಳು ಹರಿದಾಡುತ್ತಿದ್ದವು. ನಾಳೆ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಚಿತ್ರದ ಪ್ರೀರಿಲೀಸ್‌ ಇವೆಂಟ್‌ ಕೂಡ ರದ್ದಾಯ್ತು. ಥಿಯೇಟರ್‌ ಲಭ್ಯತೆ ಹಾಗೂ ಇನ್ನಿತರೆ ಸಂಗತಿಗಳ ಕುರಿತಂತೆ ಚರ್ಚೆ ನಡೆಸಲು ನಿರ್ದೇಶಕ ರಾಜಮೌಳಿ ಮುಂಬಯಿಗೆ ತೆರೆಳಿದ್ದರು. ಅಂತಿಮವಾಗಿ ಸಿನಿಮಾ ಪೋಸ್ಟ್‌ಪೋನ್‌ ಆಗುತ್ತಿದೆ ಎಂದು ನಿರ್ಮಾಪಕರು ಈಗ ಟ್ವೀಟ್‌ ಮಾಡಿದ್ದಾರೆ.

‘RRR’ ಬಿಡುಗಡೆಯಾಗುತ್ತಿಲ್ಲ ಎಂದು ಗೊತ್ತಾಗುತ್ತಿದ್ದಂತೆ ಸೋಷಿಯಲ್‌ ಮೀಡಿಯಾದಲ್ಲಿ ಚಿತ್ರದ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರತಂಡ ಕಳೆದ ಮೂರ್ನಾಲ್ಕು ವಾರಗಳಿಂದ ದೇಶದ ಹಲವೆಡೆ ಪ್ರೊಮೋಷನ್‌ ಹಮ್ಮಿಕೊಳ್ಳುತ್ತಿದೆ. ನಿರ್ದೇಶಕ ರಾಜಮೌಳಿ ಕೂಡ ತಮ್ಮ ಸಿನಿಮಾ ಯಾವುದೇ ಸಂದರ್ಭದಲ್ಲೂ ಪೋಸ್ಟ್‌ಪೋನ್‌ ಆಗದು ಎಂದಿದ್ದರು. “ರಿಚ್‌ ವಿಶ್ಯುಯಲ್ಸ್‌ನ ಈ ಸಿನಿಮಾವನ್ನು ಜನರು ಥಿಯೇಟರ್‌ನಲ್ಲೇ ವೀಕ್ಷಿಸಬೇಕು ಎನ್ನುವುದು ಚಿತ್ರತಂಡದ ಆಶಯವಾಗಿದೆ. ಕೋವಿಡ್‌ ಆತಂಕದಿಂದ ದೇಶದ ಹಲವೆಡೆ ಥಿಯೇಟರ್‌ ಮುಚ್ಚುತ್ತಿರುವುದು, ಶೇ. 50ರಷ್ಟು ಆಕ್ಯುಪೆನ್ಸೀ ಕೊಟ್ಟಿರುವುದು ಚಿತ್ರತಂಡದ ಈ ನಿರ್ಧಾರಕ್ಕೆ ಕಾರಣ” ಎಂದು ನಿರ್ಮಾಣ ಸಂಸ್ಥೆಯ ಮೂಲಗಳು ಹೇಳಿವೆ.

LEAVE A REPLY

Connect with

Please enter your comment!
Please enter your name here