ಕ್ರಿಷ್ಟೊಫರ್ ನೋಲನ್‌ ತನ್ನ ʼಡಾರ್ಕ್ ನೈಟ್‌ʼನಲ್ಲಿ ಸೃಷ್ಟಿಸಿದ ಪ್ರತಿನಾಯಕ ಜೋಕರ್ ಪಾತ್ರವು ವ್ಯವಸ್ಥೆಯ ಕೆಡುಕನ್ನು ನಗ್ನವಾಗಿ ತೋರಿಸುವ ಗಟ್ಟಿ ಪಾತ್ರವಾಗಿ ಕಟ್ಟಿ ಮೆಚ್ಚುಗೆಯ ಸಿನೆಮಾ ಕಟ್ಟಿದ್ದರು. ಆದರೆ, ಬಾಸಿಲ್ ಅದಕ್ಕಿಂತ ಹೆಚ್ಚು ಭಾವ ಜೀವಂತಿಕೆಯುಳ್ಳ ಶಿಬು ಪಾತ್ರವನ್ನು ಸಿನೆಮಾಕ್ಕೆ ಅನಿರೀಕ್ಷಿತ ಕಸುವು ನೀಡಿದ್ದಾರೆ. ‘ಮಿನ್ನಾಲ್ ಮುರಳಿ’ ಮಲಯಾಳಂ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಬರ್ಟೋಲ್ಟ್ ಬ್ರೆಕ್ಟನ ʼಲೈಫ್ ಆಫ್ ಗೆಲಿಲಿಯೊʼ ನಾಟಕದಲ್ಲಿ ಗೆಲಿಲಿಯೊ, ತನ್ನ ಕ್ರಾಂತಿಕಾರಕ ವೈಜ್ಙಾನಿಕ ಸಂಶೋಧನೆಯು ಚರ್ಚಿನ ಅಧಿಕಾರಸ್ಥರ ಕೆಂಗಣ್ಣಿಗೆ ಬಲಿಯಾದಾಗ ʼತಪ್ಪೊಪ್ಪಿಗೆʼ ಸಲ್ಲಿಸಿ ಬದುಕುಳಿಯುತ್ತಾನೆ; ಆಗ ಆತನ ಪ್ರಿಯ ಶಿಷ್ಯೆ ಆಂಡ್ರಿಯಾ ʼಧೀರ ನಾಯಕರಿಲ್ಲದ ನಾಡು ಭಾಗ್ಯಹೀನರ ಬೀಡುʼ ಎಂದದ್ದಕ್ಕೆ ಗೆಲಿಲಿಯೊ ʼಧೀರ ನಾಯಕರಿಗೆ ಹಂಬಲಿಸುವ ನಾಡು ಭಾಗ್ಯಹೀನರ ಬೀಡುʼ ಎನ್ನುತ್ತಾನೆ; ಈ ಎರಡೂ ಮಾತುಗಳೂ ಒಂದಕ್ಕೊಂದು ಕೊಂಡಿ ಹಾಕಿಕೊಂಡಿರುವಂತಹು; ಒಂದು ಸಮಾಜದ ನೈಜ ಸ್ಥಿತಿ ಈ ಎರಡು ಮಾತುಗಳ ನಡುವಿನ ಮೌನದಲ್ಲಿದೆ. ”ಮಿನ್ನಾಲ್ ಮುರಳಿ’ಯ ಚಿತ್ರಕತೆ ಬರೆದಿರುವ ಅರುಣ್ ಅನಿರುದ್ಧ್-ಜಸ್ಟಿನ್ ಮ್ಯಾಥ್ಯು ಮತ್ತು ನಿರ್ದೇಶಕ ಬಾಸಿಲ್ ಜೋಸೆಫ್ ಇವರುಗಳು ಈ ಬಗೆಯ ಮೌನದ ಸಂವೇದನೆಯನ್ನು ಗ್ರಹಿಸಿರುವ ಕಾರಣವಾಗಿ, ಇದೊಂದು ಕುತೂಹಲಕಾರಿ ʼಅತಿಮಾನುಷ ಶಕ್ತಿಯ ನಾಯಕʼನ ಸಿನೆಮಾವಾಗಿದೆ; ಪಶ್ಚಿಮದ ಸಿನೆಮಾಗಳಿಗಿಂತ ಭಿನ್ನವಾದ ದೇಸಿ ಸೊಗಡನ್ನು ಹೊಮ್ಮಿಸುತ್ತದೆ.

ಕುರುಕ್ಕನ್ಮೂಲ ಎರಡು ಕುದರುಗಳು (ನದಿಯ ನಡುವಿನ ಭೂಮಿ) ಒಂದು ಪುಟ್ಟ ಊರು. ಅಲ್ಲಿ ಶಾಲೆ, ಕಾಲೇಜು, ಆಸ್ಪತ್ರೆಗಳು ಇವೆ, ಬಸ್ಸಿನ ಸಂಪರ್ಕವಿದೆ, ಕರಾಟೆ ಕಲಿಸುವ ಶಾಲೆ ಹಾಗು ಫೋಟೋ ಸ್ಟುಡಿಯೋ ಕೂಡ ಇವೆ; ಹಾಗೆ SI, ASI ಗಳಿರುವ ಒಂದು ಪೋಲೀಸು ಠಾಣೆಯೂ ಇದೆ; ಇಂಥ ಊರಿನ ಚಿತ್ರವು ಚಿತ್ರಕಥಾ ರಚನೆಯ ಕಸುಬುದಾರಿಕೆಯನ್ನು ಸೂಚಿಸುತ್ತದೆ. ಇಂಥ ಊರಿನ ರೂಢಿಗತ ಜಾತಿ-ವರ್ಗಗಳ ಸಮುದಾಯದ ನಿತ್ಯ ಬದುಕಿಗೆ ಖುಷಿ-ಗೋಜಲುಗಳು ಇವೆ, ಅದಕ್ಕೆ ಯಾವ ಬಗೆಯ ಅತಿಮಾನುಷ ಶಕ್ತಿಯ ಆಗಮನದ ಆಪೇಕ್ಷೆ-ನಿರೀಕ್ಷೆಗಳು ಇಲ್ಲವೇ ಇಲ್ಲ. ಟೈಲರ್ ವೃತ್ತಿಯ (ಸಾಕು) ತಂದೆ ವರ್ಕೆಯ ಅಂಗಡಿಯಲ್ಲಿ ಯುವಕ ಜೈಸನ್ ದರ್ಜಿ ಕೆಲಸ ಮಾಡಿಕೊಂಡಿದ್ದಾನೆ; ಅವರ ಜೊತೆ ದಾಸ ಎಂಬುವವನು ಕೆಲಸಕ್ಕಿದ್ದಾನೆ. ಜೈಸನ್ ಕಾಲೇಜು ಓದಿದವನು, ಊರು ತೊರೆದು ಅಮೇರಿಕೆಗೆ ಹೋಗಿ ತಳ ಊರುವ ಕನಸು ಕಟ್ಟಿಕೊಂಡು, ಕರಾಟೆ ಶಾಲೆ ನಡೆಸುವ ಜೊತೆ ಪಾಸ್ ಪೋರ್ಟ್ ಏಜೆಂಟ್ ಕೂಡ ಆಗಿರುವ ಯುವತಿ ʼಬ್ರುಸ್ಲೀʼ ಬಿಜಿಯ ನೆರವಿಗೆ ಬೆನ್ನು ಬಿದ್ದವನು; ಅದಕ್ಕೆ ಬೇಕಾದ ಕಾಸನ್ನು ಪೋಲಿಸು ಸಿಬಿಯ ಹೆಂಡತಿಯಾದ ಜೈಸನನ ಅಕ್ಕ ಕದ್ದು ಮುಚ್ಚಿ ಕೊಡುತ್ತಿರುತ್ತಾಳೆ.

ಸಿಬಿಗೆ ತನ್ನ ಹೆಂಡತಿಯ ತವರಿನ ಬಗ್ಗೆ ಹೇವರಿಕೆ ಬಿಟ್ಟರೆ ಮತ್ತೇನೂ ಇಲ್ಲ. ಪೋಲಿಸು ಇನ್ಪೆಕ್ಟರ್ ಸಾಜನ್‌ನ ಮಗಳು ಬಿನ್ಸಿ ಕಾಲೇಜಿನಲ್ಲಿ ಜೈಸನ್‌ನನ್ನು ಪ್ರೀತಿಸಿರುತ್ತಾಳೆ; ಸಾಜನ್ ಬಿನ್ಸಿಯ ಮದುವೆಯನ್ನು ಕರಾಟೆಯ ಬಿಜಿಯ ಪ್ರೇಮಿಯೂ ಕೊಂಚ ಸ್ಥಿತಿವಂತನೂ ಆದ ಅನಿಶನ ಜೊತೆ ನಿಕ್ಕಿ ಮಾಡಿದ್ದಾನೆ; ಬಿನ್ಸಿ ಮತ್ತು ಅನಿಶ್ ತಮ್ಮ ಪ್ರೇಮಿಗಳಿಗೆ ಕೈ ಕೊಟ್ಟು ಮದುವೆಯಾಗುವವರಿದ್ದು, ಇದರಿಂದ ಬಿಜಿ ಹಾಗು ಜೈಸನ್ ಭಗ್ನ ಪ್ರೇಮಿಗಳಾಗಿದ್ದಾರೆ; ಜೈಸನ್ ಅಧಿಕಾರ ದರ್ಪದ ಸಾಜನ್‌ನಿಂದ ಅವಮಾನಿತನಾಗುತ್ತಿದ್ದಾನೆ; ತಾನು ಅಮೇರಿಕೆಗೆ ಹೋಗಿ ಹಣ ಗಳಿಸಿ, ಸಾಜನ್‌ಗೆ ತನ್ನ ಸ್ಥಾನಮಾನ ತೋರಿಸುವ ಕೈಲಾಗದವನ ಸಿಟ್ಟು ಜೈಸನ್ ನಲ್ಲಿದೆ. ಇದೆಲ್ಲಾ ಎಲ್ಲ ಊರುಗಳ ಸಾಧಾರಣ ಕತೆ.

ಮತ್ತೊಂದು ಕಡೆ, ಊರಿನ ಯಾರಿಗೂ ಬೇಡವಾದ ಶಿಬು, ಊರಿನ ಹೊಟೆಲ್ ಒಂದರಲ್ಲಿ ಚಾಕರಿಗಿದ್ದಾನೆ; ಅವನಿಗೆ ಇರುವ ಬದುಕಿನ ಆಸರೆ ಎಂದರೆ, ಬಾಲ್ಯದಿಂದ ಪ್ರೀತಿಸುತ್ತಿರುವ ದಾಸನ ತಂಗಿ ಉಷಾಳ ಪ್ರೀತಿಯನ್ನು ಪಡೆಯುವುದು. ಉಷಾ ಯೌವನದಲ್ಲಿ ಯುವಕನೊಬ್ಬನ ಜೊತೆ ಓಡಿ ಹೋಗಿದ್ದವಳು, ಗಂಡನನ್ನು ತೊರೆದು ಮಗಳ ಜೊತೆ ದಾಸನ ಆಸರೆಗೆ ಬಂದಾಗ, ಊರಿನ ಹಡಬೆ ಗಂಡಸರ ಕಣ್ಣಿಗೆ ಆಹಾರವಾಗುತ್ತಾಳೆ; ಶಿಬುವಿಗೆ ತನ್ನ ಭಾಗ್ಯವೇ ಮರಳಿದಂತಾಗಿ ಬದುಕಿನಲ್ಲಿ ಲವಲವಿಕೆ ಹುಟ್ಟುತ್ತದೆ. ಉಷಾಳ ಪ್ರೀತಿ ಗಳಿಸಿ, ಅವಳು ಮತ್ತವಳ ಮಗಳಿಗೆ ಆಸರೆಯಾಗುವುದೇ ಶಿಬುವಿನ ಬದುಕಿನ ಗುರಿಯಾಗುತ್ತದೆ. ಆದರೆ ದಾಸ ಬಡತನದಿಂದ ಅಸಹಾಯಕನಾಗಿದ್ದು, ಉಷಾಳನ್ನು ಸ್ಥಿತಿವಂತನೊಬ್ಬನಿಗೆ ಕಟ್ಟಿ ನಿರುಮ್ಮಳವಾಗಿರುವ ಒತ್ತಡವಿದೆ. ಶಿಬುವಿಗೆ ಈ ಗೋಜಲು ಬಿಡಿಸುವ ದಾರಿ ಕಾಣದೆ ಒದ್ದಾಡುತ್ತಿದ್ದಾನೆ. ಇದೂ ಕೂಡ ಊರುಗಳಲ್ಲಿ ನಡೆಯುವ ಸಾಧಾರಣ ಪ್ರೇಮದ ಕತೆಯೇ.

ನಿರ್ದೇಶಕ ಬಾಸಿಲ್, 160 ನಿಮಿಷದ ಈ ಸಿನಿಮಾದಲ್ಲಿ, ನೂರು ನಿಮಿಷಗಳನ್ನು ಕುರುಕ್ಕನ್ಮೂಲ ಎಂಬ ಸಾಧಾರಣ ಊರಿನ ದೈನಂದಿನ ಬದುಕಿನ ಭಾಗವಾಗಿರುವ ಸಾಧಾರಣ ವ್ಯಕ್ತಿಗಳಾದ ಜೈಸನ್ ಮತ್ತು ಶಿಬು ಅವರುಗಳ ಪ್ರೇಮ-ಹತಾಶೆಗಳ ಭಾವ ಗೋಜಲುಗಳನ್ನು ಎಳೆಎಳೆಯಾಗಿ ಹೆಣೆದು ತೋರಲು ಬಳಸಿದ್ದಾರೆ. ಇಂಥ ಸಾಮಾನ್ಯರ ಬದುಕಿನ ಚಿತ್ರ ಕಟ್ಟುವಿಕೆಯ ಕಸುಬುದಾರಿಕೆಯು ಇತ್ತೀಚಿನ ದಶಕದ ಮಲಯಾಳಂ ಸಿನೆಮಾಗಳ ಜೀವಾಳವೇ ಆಗಿದೆ. ಸೂಕ್ಷ್ಮವಾಗಿ ಬದುಕನ್ನು ಕಂಡು, ಬದುಕಿನ ಸಹಜ ಕಥನವನ್ನು ಚಿತ್ರಿಸುವ ಜೀವಂತಿಕೆಯು ವಾಸ್ತಾವವಾದಿ ಸಿನಿಮಾ ರಚನೆಗೆ ಗೌರವ ತರುವಂತಿವೆ. ಈ ಚಿತ್ರಕತೆಗೆ ಮತ್ತ್ಯಾವುದೋ ಬಗೆಯ ತಿರುವು ನೀಡಿ, ಜೈಸನ್-ಶಿಬು ಅವರ ಭಾವ ತಕಲಾಟಗಳನ್ನು ಪ್ರೇಕ್ಷಕರ ಮನಸ್ಸಿಗೆ ಸಂವೇದಶೀಲವಾಗಿ ತಲುಪಿಸುವ ದೃಷ್ಯ ರಚನೆಯಲ್ಲೂ ಮಲಯಾಳಂ ಸಿನೆಮಾಗಳು ಪಳಗಿವೆ. ಆ ಕಾರಣಕ್ಕಾಗಿಯೇ ಭಾರತದ ಬೇರೆಲ್ಲ ಭಾಷೆಯ ಸಿನೆಮಾಗಳಿಗಿಂತ ಹೆಚ್ಚು ಬೆರಗಿನಿಂದ ನೋಡುವ ಖ್ಯಾತಿ ಗಳಿಸಿವೆ.

ಆದರೆ, ನಿರ್ದೇಶಕ ಬಾಸಿಲ್ ಜೋಸೆಫ್ ಜೈಸನ್-ಶಿಬುರಿಗೆ ಅತಿಮಾನುಷ ಶಕ್ತಿ ದಕ್ಕುವ ತಿರುವು ಕೊಡುವ ಸವಾಲಿಗೆ ಕೈ ಹಾಕಿದ್ದಾರೆ. ಕೈ ಹಾಕಿದ ಮೇಲೆ ಜೈಸನ್-ಶಿಬುರಲ್ಲಿ ಒಬ್ಬರು ನಾಯಕ ಮತ್ತೊಬ್ಬ ಪ್ರತಿ ನಾಯಕನಾಗುವುದು ಈ ಬಗೆಯ ಸಿನೆಮಾ ಪ್ರಕಾರಕ್ಕೆ ಅನಿವಾರ್ಯವಾಗಿ ಬಿಡುತ್ತದೆ. ಹಾಗಾಗಿ ಬಾಸಿಲ್, ಜೈಸನ್ನನ್ನು ನಾಯಕನನ್ನಾಗಿಯೂ ಶಿಬುವನ್ನು ಪ್ರತಿನಾಯಕನನ್ನಾಗಿಯೂ ಕಟ್ಟಿದ್ದಾರೆ. ಅತಿಮಾನುಷ ಶಕ್ತಿ ಸೆಣಸಾಟದ ದೃಷ್ಯಾವಳಿಗಳನ್ನೂ ಕಟ್ಟಿದ್ದಾರೆ; ನಾಯಕನ ಒಳಿತಿನ ಪರವಾಗಿ ಇರುವಂತೆ ಭೋದಿಸಲು, ಬಾಲ್ಯದ ಕಥನ ಹೆಣೆದಿದ್ದಾರೆ. ಇಷ್ಟೇ ಆಗಿದ್ದರೆ ಕಾಲುವಾಸಿಯ ಈ ತಿರುವಿನ ಕಥನವು, ಮುಕ್ಕಾಲುವಾಸಿ ಸಾಧಾರಣ ಬದುಕಿನ ಜೀವಂತ ಕಟ್ಟನ್ನು ನುಂಗಿ ನಿರಾಶೆ ಮೂಡಿಸಿಬಿಡುತ್ತಿತ್ತು.

ಈ ಹಂತದಲ್ಲಿ ನಿರ್ದೇಶಕರು ತಮ್ಮ ಗಟ್ಟಿಯಾದ ಗುಟ್ಟಿನ ಎಲೆ (ಟ್ರಂಪ್ ಕಾರ್ಡ್)ಯನ್ನು ಪ್ರದರ್ಶಿಸಿ ಗೆದ್ದಿದ್ದಾರೆ. ಆ ಎಲೆ ಶಿಬುವಿನ ಪಾತ್ರ ರಚನೆಯ ಸಂವೇದನಾಶೀಲತೆ. ಕುರುಕ್ಕನ್ಮೂಲದಲ್ಲಿ ನಿಜಕ್ಕೂ ಅತಿಮಾನುಷ ಶಕ್ತಿಯ ಅವಶ್ಯಕತೆ ಇದ್ದದಾದರೆ ಅದು ಶಿಬುವಿಗೆ, ಊರಿನ ರೂಢಿಗತ ಸಂಬಂಧಗಳ ಕಟ್ಟು ಹರಿದು ಉಷಾಳ ಜೊತೆ ಪ್ರೀತಿಯ ಬದುಕು ಸಾಗಿಸಲಿಕ್ಕೆ. ನಮ್ಮ ಸಮಾಜದಲ್ಲಿರುವ ಶಿಬುಗಳ ಸ್ಥಿತಿಯನ್ನೂ, ಅವರ ಹತಾಷೆಗೆ ಸಮಾಜದಲ್ಲಿರುವ ಬೀಜ ಕಾರಣಗಳನ್ನು ಚಿತ್ರಕತೆ-ನಿರ್ದೇಶನಗಳು ತಮ್ಮ ಹೆಚ್ಚಿನ ಶಕ್ತಿ ಹಾಕಿ ಕಟ್ಟಿವೆ. ಹೇಗೆ ಕಟ್ಟಿವೆ ಎಂದರೆ, ಜೈಸನ್ನನ ಅತಿ ಮಾನುಷ ಶಕ್ತಿಯ ಪ್ರದರ್ಶನವೂ, ಊರವರ ಮನೋಭಾವವೂ ಸ್ವಾರ್ಥದ್ದು ಮತ್ತೂ ಶಿಬುವನ್ನು ಮತ್ತಷ್ಟೂ ಕೇಡಿನ ಹತಾಶೆಗೆ ದೂಡುವಂತಹವು ಆಗಿವೆ ಎಂದು ದೃಷ್ಯ ಕಟ್ಟಿನಲ್ಲಿ ಕಟ್ಟಿರುವ ಬಗೆಯೇ ಸಿನಿಮಾದ ಭಿನ್ನತೆ.

ಕ್ರಿಷ್ಟೊಫರ್ ನೋಲನ್‌ ತನ್ನ ʼಡಾರ್ಕ್ ನೈಟ್‌ʼನಲ್ಲಿ ಸೃಷ್ಟಿಸಿದ ಪ್ರತಿನಾಯಕ ಜೋಕರ್ ಪಾತ್ರವು ವ್ಯವಸ್ಥೆಯ ಕೆಡುಕನ್ನು ನಗ್ನವಾಗಿ ತೋರಿಸುವ ಗಟ್ಟಿ ಪಾತ್ರವಾಗಿ ಕಟ್ಟಿ ಮೆಚ್ಚುಗೆಯ ಸಿನೆಮಾ ಕಟ್ಟಿದ್ದರು. ಆದರೆ, ಬಾಸಿಲ್ ಅದಕ್ಕಿಂತ ಹೆಚ್ಚು ಭಾವ ಜೀವಂತಿಕೆಯುಳ್ಳ ಶಿಬು ಪಾತ್ರವನ್ನು ಸಿನೆಮಾಕ್ಕೆ ಅನಿರೀಕ್ಷಿತ ಕಸುವು ನೀಡಿದ್ದಾರೆ. ಗುರು ಸೋಮಸುಂದರ್ ತಮ್ಮ ಶಿಬು ಪಾತ್ರದಲ್ಲಿ ತೋರಿದ ನಟನೆಯ ಪ್ರತಿಭೆಯು ಬಾಸಿಲರ ಪಾತ್ರ ರಚನೆಯ ತೂಕವನ್ನು ದುಪ್ಪಟ್ಟುಗೊಳಿಸಿದೆ. ಇಂಥ ಪ್ರತಿನಾಯಕನ ರಚನೆಯು ಜಗತ್ತಿನ ಯಾವುದೇ ʼಅತಿಮಾನುಷ ಶಕ್ತಿಯ ನಾಯಕʼರ ಸಿನೆಮಾಗಳಲ್ಲಿ ಅತ್ತ್ಯುತ್ತಮವಾದದ್ದು ಆಗಿದೆ. ಆ ಮೂಲಕ ʼಅತಿಮಾನುಷ ಶಕ್ತಿʼಯ ಸಿನೆಮಾಕ್ಕೆ ಸಮಾಜ ಟೀಕೆಯ ಮೊನಚನ್ನು ತಂದು ಕೊಟ್ಟಿದೆ.

LEAVE A REPLY

Connect with

Please enter your comment!
Please enter your name here