ಹೀರೋಗಳ ಪಾತ್ರಗಳಿಗಷ್ಟೇ ಹೆಚ್ಚು ಸ್ಕೋಪ್‌ ಕೊಟ್ಟಿರುವ ನಿರ್ದೇಶಕರು ಈ ಪಾತ್ರಗಳು ರೂಪುಗೊಳ್ಳಲು ಭದ್ರ ಕಾರಣಗಳನ್ನು ನೀಡಿಲ್ಲ. ಹಾಗಾಗಿ ಸುದೀರ್ಘ ಅವಧಿಯ ಸಿನಿಮಾ ಅದ್ಧೂರಿತನ, ಆಕ್ಷನ್‌ನಿಂದ ತುಂಬಿದೆಯೇ ಹೊರತು ನೋಡುಗರಿಗೆ ‘ಫೀಲ್‌’ ನೀಡುವಲ್ಲಿ ವಿಫಲವಾಗಿದೆ.

”ನನ್ನ ಸಿನಿಮಾದ ಕೇಂದ್ರ ಬಿಂದು ಎಮೋಷನ್ಸ್‌. ಅದರ ಸುತ್ತ ಪಾತ್ರ ಕಟ್ಟಿ ಕತೆ ಹೇಳುತ್ತೇನೆ” ಎನ್ನುತ್ತಾರೆ ನಿರ್ದೇಶಕ ರಾಜಮೌಳಿ. ಈ ಹಿಂದಿನ ಅವರ ‘ಬಾಹುಬಲಿ’ ಸರಣಿ ಚಿತ್ರಗಳಲ್ಲಿ ಎಮೋಷನ್ಸ್‌ ಜೊತೆ ಫ್ಯಾಂಟಸಿ ಮತ್ತು ಆಕ್ಷನ್‌ ವರ್ಕ್‌ ಆಗಿತ್ತು. ಮೂರು ಗಂಟೆ ಆರು ನಿಮಿಷದ ‘RRR’ ಸಿನಿಮಾದಲ್ಲಿ ಎಮೋಷನ್ಸ್‌ ಕನೆಕ್ಟ್‌ ಆಗುವುದಿಲ್ಲ. ಇಬ್ಬರು ಹೀರೋಗಳ ಪಾತ್ರಗಳಿಗಷ್ಟೇ ಹೆಚ್ಚು ಸ್ಕೋಪ್‌ ಕೊಟ್ಟಿರುವ ನಿರ್ದೇಶಕರು ಈ ಪಾತ್ರಗಳು ರೂಪುಗೊಳ್ಳಲು ಭದ್ರ ಕಾರಣಗಳನ್ನು ನೀಡಿಲ್ಲ. ಹಾಗಾಗಿ ಸುದೀರ್ಘ ಅವಧಿಯ ಸಿನಿಮಾ ಅದ್ಧೂರಿತನ, ಆಕ್ಷನ್‌ನಿಂದ ತುಂಬಿದೆಯೇ ಹೊರತು ನೋಡುಗರಿಗೆ ‘ಫೀಲ್‌’ ನೀಡುವಲ್ಲಿ ವಿಫಲವಾಗಿದೆ.

ನಿರ್ದೇಶಕ ಎಸ್‌.ಎಸ್‌.ರಾಜಮೌಳಿ ಅವರ ಸಿನಿಮಾ ‘ಕ್ಯಾನ್ವಾಸ್‌’ ದೊಡ್ಡದಾಗಿದ್ದು ‘ಬಾಹುಬಲಿ’ ಸಿನಿಮಾದಿಂದ. ಅಲ್ಲಿಯವರೆಗೆ ಅವರು ಕತೆಯನ್ನು ಪ್ರಧಾನವಾಗಿಟ್ಟುಕೊಂಡು ಸಿನಿಮಾ ಮಾಡಿದ್ದರು. ಐತಿಹಾಸಿಕ – ಫ್ಯಾಂಟಸಿ ‘ಬಾಹುಬಲಿ’ ಸಿನಿಮಾ ಬಜೆಟ್‌, ಪಾತ್ರಗಳು, ಕಥಾವಿಸ್ತಾರದ ದೃಷ್ಟಿಯಿಂದಲೂ ಹೊಸ ಪ್ರಯೋಗ. ಬೆಳ್ಳಿತೆರೆ ಮೇಲೆ ಚೆಂದದ ಲೋಕವೊಂದನ್ನು ಸೃಷ್ಟಿಸಿ ಕತೆಯನ್ನು ಆಕರ್ಷಕವಾಗಿ ಹೇಳಬಹುದು ಎಂದು ‘ಬಾಹುಬಲಿ’ ಸರಣಿ ಚಿತ್ರಗಳಲ್ಲಿ ನಿರೂಪಿಸಿದ ಅವರು ಅಲ್ಲಿ ದೊಡ್ಡ ಯಶಸ್ಸು ಕಂಡರು. ಅಲ್ಲಿ ಫ್ಯಾಂಟಸಿ, ಆಕ್ಷನ್‌ ಜೊತೆ ರೊಮ್ಯಾನ್ಸ್‌, ಕೆಲವು ಪಾತ್ರಗಳಲ್ಲಿ ತಿಳಿಹಾಸ್ಯವನ್ನೂ ತಂದಿದ್ದರು. ‘RRR’ನಲ್ಲಿ ರೊಮ್ಯಾನ್ಸ್‌, ಹಾಸ್ಯಕ್ಕೆ ಜಾಗವಿಲ್ಲ. ಅತಿಯಾದ ಆಕ್ಷನ್‌ ಎಲಿಮೆಂಟ್‌ನಿಂದಾಗಿ ಕೆಲವೆಡೆ ನೋಡುಗರು ಸುಸ್ತಾಗುತ್ತಾರೆ.

ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮರಾವ್‌ ಮತ್ತು ಕೊಮರಮ್‌ ಭೀಮ್‌ ಪಾತ್ರಗಳು ತಮಗೆ ಸ್ಫೂರ್ತಿಯಷ್ಟೇ ಎಂದು ಹೇಳಿಕೊಂಡಿದ್ದ ರಾಜಮೌಳಿ ಸಿನಿಮಾದ ಕತೆ ಸಂಪೂರ್ಣ ಕಾಲ್ವನಿಕ ಎಂದಿದ್ದರು. ಅವರು ಹಾಗೆ ಹೇಳಿದ್ದರೂ ಈ ಹೋರಾಟಗಾರರ ಬಗ್ಗೆ ಅರಿತಿರುವ ಜನರು ಈ ಹೋರಾಟಗಾರರೊಂದಿಗೆ ಪಾತ್ರಗಳನ್ನು ಹೋಲಿಸಿ ನೋಡುತ್ತಾರೆ. ಸಿನಿಮಾದಲ್ಲಿ ಈ ಪಾತ್ರಗಳನ್ನು ನಿರ್ದೇಶಕರು ತೀರಾ ಡ್ರಾಮಟೈಸ್‌ ಮಾಡಿರುವುದು ಈ ಸ್ವಾತಂತ್ರ್ಯ ಹೋರಾಟಗಾರರನ್ನು ಅಭಿಮಾನಿಸುವವರಿಗೆ ಇಷ್ಟವಾಗಲಿಕ್ಕಿಲ್ಲ. ಇನ್ನು ಪಾತ್ರಗಳನ್ನು ಕಟ್ಟುವಾಗ ಸಾಮಾನ್ಯವಾಗಿ ರಾಜಮೌಳಿ ಬಲು ಎಚ್ಚರಿಕೆಯಿಂದಿರುತ್ತಾರೆ. ಇಲ್ಲಿ ಬ್ರಿಟಿಷ್‌ ಪೌರತ್ವ, ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯ ಕತೆ ದೊಡ್ಡ ಕ್ಯಾನ್ವಾಸ್‌ಗೆ ಹೊಂದುವಂಥದ್ದೇ ಆಗಿದೆ. ಆದರೆ ಪಾತ್ರಗಳ ಆಕ್ಷನ್‌ – ರಿಯಾಕ್ಷನ್‌ಗೆ ಗಟ್ಟಿಯಾದ ಕಾರಣಗಳು ಯಾವ ಹಂತದಲ್ಲೂ ಎಸ್ಟಾಬ್ಲಿಷ್‌ ಆಗುವುದಿಲ್ಲ.

‘ಸೀತಾ’ ಪಾತ್ರ ಮಾಡಿರುವ ಅಲಿಯಾ ಭಟ್‌ ಅವರಿಗೆ ಹೆಚ್ಚು ಸ್ಕ್ರೀನ್‌ ಸ್ಪೇಸ್‌ ಇಲ್ಲ. ಅತಿಯಾದ ಮೇಕಪ್‌, ಸದಾ ಫಳಫಳನೆ ಹೊಳೆಯುವ ಕಾಸ್ಟ್ಯೂಮ್‌ನಿಂದಾಗಿ ಈ ಪಾತ್ರ ಕೃತಕವೆನಿಸುತ್ತದೆ. ಫ್ಯಾಂಟಸಿ ‘ಬಾಹುಬಲಿ’ಯಲ್ಲಾದರೆ ಐತಿಹಾಸಿಕ ಪೋಷಾಕು, ಮೇಕಪ್‌ ಪ್ರೇಕ್ಷಕರಿಗೆ ಕನ್ವಿನ್ಸ್‌ ಆಗುತ್ತದೆ. ‘RRR’ ಅನ್ನು ದಶಕಗಳ ಹಿಂದೆ ನಮ್ಮ ಸುತ್ತಲೇ ನಡೆದ ಕತೆ ಎನ್ನುವಂತೆ ನೋಡುತ್ತಾರೆ ಪ್ರೇಕ್ಷಕರು. ಆಗೆಲ್ಲಾ ಅಲಿಯಾರ ಓವರ್‌ ಮೇಕಪ್‌, ಲಾಜಿಕ್‌ ಇಲ್ಲದ ಕೆಲವು ಆಕ್ಷನ್‌ ಸನ್ನಿವೇಶಗಳು ಅಭಾಸ ಎನಿಸುತ್ತವೆ. ರಾಮ್‌ ಚರಣ್‌ ಪಾತ್ರವನ್ನು ‘ಬೆಂಕಿ’ಗೆ, ಜ್ಯೂನಿಯರ್‌ NTR ಪಾತ್ರವನ್ನು ‘ನೀರಿ’ಗೆ ಸಮೀಕರಿಸುವ ನಿರ್ದೇಶಕರ ಕಾನ್ಸೆಪ್ಟ್‌ ಪ್ರೇಕ್ಷಕರಿಗೆ ಕನ್ವಿನ್ಸ್‌ ಆಗೋಲ್ಲ. ಬಿಡಿಬಿಡಿಯಾಗಿ ತೆರೆಯ ಮೇಲೆ ಕೆಲವು ವಿಶ್ಯೂಯಲ್ಸ್‌ ಇಷ್ಟವಾದರೂ ಒಟ್ಟಾರೆ ಸಿನಿಮಾ ಆಗಿ ಇದು ಇಂಪ್ಯಾಕ್‌ ಬೀರುವುದಿಲ್ಲ.

ಹೀರೋಗಳಾದ ರಾಮ್‌ ಚರಣ್‌ ತೇಜಾ ಮತ್ತು ಜ್ಯೂನಿಯರ್‌ NTR ನಿರ್ದೇಶಕರ ಅಣತಿಯಂತೆ ಅಚ್ಚುಕಟ್ಟಾಗಿ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗದಂತೆ ಇಬ್ಬರು ಹೀರೋಗಳಿಗೂ ಸಮಾನವಾದ ಸ್ಕ್ರೀನ್‌ ಸ್ಪೇಸ್‌ ಕೊಡಲು ನಿರ್ದೇಶಕರು ಯತ್ನಿಸಿದ್ದಾರೆ. ನಿರ್ದೇಶಕರಿಗೆ ಎಲ್ಲಾ ವಿಭಾಗಗಳ ಉತ್ತಮ ತಾಂತ್ರಿಕ ಸಹಕಾರವೂ ಇದೆ. ಆದರೆ ರಾಜಮೌಳಿ ಅವರ ಹೀರೋಗಳ ಪಾತ್ರಗಳು ಪ್ರೇಕ್ಷಕರ ಮನಸ್ಸಿಗೆ ಮುಟ್ಟುವುದಿಲ್ಲ. ‘ಹಳ್ಳಿ ನಾಟು’ ಹಾಡು ಉತ್ತಮ ಕೊರಿಯೋಗ್ರಫಿ ಮತ್ತು ಹೀರೋಗಳ ಪರ್ಫಾರ್ಮೆನ್ಸ್‌ನೊಂದಿಗೆ ಗಮನ ಸೆಳೆಯುತ್ತದೆ. ಸಿನಿಮಾದ ಕನ್ನಡ ಡಬ್ಬಿಂಗ್‌ ಅವತರಣಿಕೆಯಲ್ಲಿ ಸ್ಪಷ್ಟ ಉಚ್ಛಾರಣೆಯ ತೊಡಕಿದೆ. ಹಿನ್ನೆಲೆ ಸಂಗೀತದ ಅಬ್ಬರದ ಮಧ್ಯೆ ಪಾತ್ರಗಳಾಡುವ ಮಾತುಗಳು ಸರಿಯಾಗಿ ಕೇಳಿಸುವುದಿಲ್ಲ. ಭಾರೀ ಸುದ್ದಿ ಮಾಡಿದ್ದ ಸಿನಿಮಾ ನಿರೀಕ್ಷೆ ಹುಸಿಗೊಳಿಸಿದೆ.

LEAVE A REPLY

Connect with

Please enter your comment!
Please enter your name here