ತೆಲಂಗಾಣ ರಾಜ್ಯಪಾಲರನ್ನಾಗಿ ರಜನೀಕಾಂತ್ ಅವರನ್ನು ಆಯ್ಕೆ ಮಾಡಲು ಕೇಂದ್ರ ಸರ್ಕಾರ ಆಲೋಚಿಸುತ್ತಿದೆ ಎನ್ನುವ ದಟ್ಟ ವದಂತಿ ಹರಡಿದೆ. ಈ ಮೂಲಕ ನಟನ ಜನಪ್ರಿಯತೆಯನ್ನು ಬಳಕೆ ಮಾಡಿಕೊಳ್ಳುವುದು ಬಿಜೆಪಿ ರಾಷ್ಟ್ರೀಯ ಮುಖಂಡರ ಯೋಜನೆ ಎನ್ನಲಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಹರಡಿರುವ ದಟ್ಟ ವದಂತಿಗಳನ್ನು ನಂಬುವುದಾದರೆ ನಟ ರಜನೀಕಾಂತ್ ಅವರು ಮುಂದಿನ ಕೆಲ ದಿನಗಳಲ್ಲಿ ತೆಲಂಗಾಣ ರಾಜ್ಯಪಾಲರಾಗಲಿದ್ದಾರೆ. ರಜನೀಕಾಂತ್ ಅವರು ಇತ್ತೀಚೆಗೆ ಸಿನಿಮಾರಂಗದಿಂದ ನಿವೃತ್ತಿ ಹೊಂದುವ ಮಾತನಾಡಿದ್ದರು. ಅಲ್ಲದೆ ಇತ್ತೀಚೆಗೆ ಅವರು ಬಿಜೆಪಿ ಪಕ್ಷದ ಪರ ಹೇಳಿಕೆಗಳನ್ನೂ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಟ ತೆಲಂಗಾಣ ರಾಜ್ಯಪಾಲರಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ ಎನ್ನುವುದು ತೆಲಂಗಾಣದ ರಾಜಕೀಯ ಪಂಡಿತರ ಲೆಕ್ಕಾಚಾರ. ರಜನೀಕಾಂತ್ ಅವರಿಗೆ ಈ ದೊಡ್ಡ ಹುದ್ದೆ ನೀಡುವ ಮೂಲಕ ತೆಲುಗು ಮತ್ತು ತಮಿಳು ಜನರನ್ನು ಪಕ್ಷದೆಡೆಗೆ ಸೆಳೆಯುವ ಉದ್ದೇಶ ಬಿಜೆಪಿ ಪಕ್ಷದ್ದು ಎನ್ನಲಾಗಿದೆ. ‘ರಜನೀಕಾಂತ್ ಅವರಿಗೆ ಈ ಮಹತ್ವದ ಹುದ್ದೆ ನೀಡಿ ದಕ್ಷಿಣದ ಜನರ ವಿಶ್ವಾಸ ಗಳಿಸುವುದು ಪಕ್ಷದ ಯೋಜನೆ’ ಎಂದು ಮೂಲಗಳು ಹೇಳುತ್ತವೆ.
ಈ ವದಂತಿಗೆ ಇಂಬು ನೀಡಿರುವುದು ರಜನೀಕಾಂತ್ ಅವರ ಸಹೋದರ ಸತ್ಯನಾರಾಯಣ ರಾವ್ ಗಾಯಕ್‌ವಾಡ್ ಅವರ ಹೇಳಿಕೆ. ಮೊನ್ನೆಯಷ್ಟೇ ಸತ್ಯನಾರಾಯಣ್ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ‘ರಜನೀಕಾಂತ್ ನೇರವಾಗಿ ರಾಜಕೀಯಕ್ಕೆ ಬರದೇ ಇರಬಹುದು. ಆದರೆ ಅವರು ಭಾರತದ ಯಾವುದಾದರೂ ರಾಜ್ಯದ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಲಿದ್ದಾರೆ’ ಎಂದಿದ್ದರು. ರಜನೀಕಾಂತ್ ಕೂಡ ಇತ್ತೀಚೆಗೆ ಉತ್ತರ ಪ್ರದೇಶಕ್ಕೆ ತೆರಳಿದ್ದಾಗ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಭೇಟಿ ಮಾಡಿದ್ದರು. ‘ಜೈಲರ್’ ಸಿನಿಮಾದ ದೊಡ್ಡ ಯಶಸ್ಸು ರಜನೀಕಾಂತ್‌ರ ಜನಪ್ರಿಯತೆಯನ್ನು ಹೆಚ್ಚು ಮಾಡಿದೆ. ಈ ಹಿನ್ನೆಲೆಯಲ್ಲಿ ನಟನ ಜನಪ್ರಿಯತೆಯ ಲಾಭ ಪಡೆಯಲು ಬಿಜೆಪಿ ರಾಷ್ಟ್ರೀಯ ಮುಖಂಡರು ರಜನೀಕಾಂತ್‌ರಿಗೆ ಇಂಥದ್ದೊಂದು ದೊಡ್ಡ ಆಫರ್ ಕೊಡಲು ಮುಂದಾಗಿದ್ದಾರೆ ಎನ್ನಲಾಗಿದೆ.