ಈ ಸರಣಿಯ ಕತೆ ಎಲ್ಲೇ ನಡೆಯಬಲ್ಲಂತಹುದು, ಆ ಭಾವನೆಗಳು ಜಗತ್ತಿನ ಯಾವ ಭಾಗದಲ್ಲಾದರೂ ಸಲ್ಲುವಂತಹುದು, ಆದರೆ ಈ ಕತೆಗೆ ಪುಷ್ಕರ್ ಮತ್ತು ಗಾಯಿತ್ರಿ ನೀಡಿರುವ ಪ್ರಾದೇಶಿಕತೆಯ ಸ್ಪರ್ಶ ಈ ಸರಣಿಯನ್ನು ವಿಶೇಷವಾಗಿಸುತ್ತದೆ. ‘Suzal – The Vortex’ ಸರಣಿ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

‘ವಿಕ್ರಮ್ ವೇದ’ ಎನ್ನುವ ರೋಮಾಂಚಕಾರಿಯಾದ, ಹಲವು ಪದರಗಳ ಸಿನಿಮಾ ಸೃಷ್ಟಿಸಿದ ಪುಷ್ಕರ್ ಮತ್ತು ಗಾಯಿತ್ರಿ, ಅಮೇಜಾನ್ ಪ್ರೈಮ್‌ಗಾಗಿ ನಿರ್ಮಿಸಿರುವ ಸರಣಿ ‘ಸುಡಲ್’. ಅಂದರೆ ಸುಳಿ. ಅಪರಾಧ, ಮಾಫಿಯಾ, ಬಂದೂಕು, ಕ್ರಿಕೆಟ್, ಸೆಕ್ಸ್ ಇತ್ಯಾದಿಗಳನ್ನಿಟ್ಟುಕೊಂಡು ಹಲವಾರು ವೆಬ್ ಸರಣಿಗಳು ಬಂದಿವೆ. ಇವೆಲ್ಲಕ್ಕೂ ಕಥೆಯನ್ನು ಆಕರ್ಷಕ ಮತ್ತು ರೋಮಾಂಚಕಾರಿಯಾಗಿಸುವ ಶಕ್ತಿ ಬಹುಶಃ ಅಂತಸ್ತವಾಗಿಯೇ ಇದೆ. ಆದರೆ ಇದು ಅವೆಲ್ಲವುಗಳಿಗಿಂತ ಭಿನ್ನವಾದ ಸರಣಿ. ಪುಷ್ಕರ್ ಮತ್ತು ಗಾಯತ್ರಿಯ ಕತೆ ಮತ್ತು ಚಿತ್ರಕಥೆ ಎನ್ನುವಾಗ ನಿರೀಕ್ಷೆಗಳು ಹೆಚ್ಚಾಗಿಯೇ ಇರುತ್ತದೆ. ಏಕೆಂದರೆ ಅವರ ‘ವಿಕ್ರಮ್ ವೇದ’ ತನ್ನ ವಿಶಿಷ್ಟ ನಿರೂಪಣೆ ಹಾಗು ಕಥೆಯ ಕಾರಣಕ್ಕೆ ಗಮನ ಸೆಳೆದಿತ್ತು. ಅವರೇ ಹೇಳುವ ಹಾಗೆ ಒಂದು ಫೀಚರ್ ಸಿನಿಮಾದಲ್ಲಿ ಯಾವುದೇ ಪಾತ್ರವನ್ನು ಆಳವಾಗಿ ಶೋಧಿಸಲು ಸಾಧ್ಯವಿರುವುದಿಲ್ಲ, ಒಂದು ನಿರ್ದಿಷ್ಟ ಮತ್ತು ಗೊತ್ತಾದ ಸಮಯದೊಳಗೇ ಕಥೆಯನ್ನು ಪೂರ್ಣಗೊಳಿಸಬೇಕು. ಆದರೆ ವೆಬ್ ಸರಣಿ ಹಾಗಲ್ಲ, ಅಲ್ಲಿ ಸಮಯದ ಮಿತಿಯನ್ನು ಬಾಗಿಸಬಹುದು, ಹಿಗ್ಗಿಸಬಹುದು, ಆ ಸಂಚಿಕೆ ಬೇಡಿದರೆ ಕುಗ್ಗಿಸಲೂಬಹುದು. ಹಾಗಾಗಿ ಇದು ಅವರಿಗೊಂದು ಪ್ರಶಸ್ತ ರಂಗವಾಗಿತ್ತು. ಇವರು ಕೈಗೆತ್ತಿಕೊಂಡಿರುವ ಕಥೆ ಇದುವರೆಗೂ ರಂಗದ ಮೇಲೆ ಬಂದಿಲ್ಲ ಎನ್ನುವಂತಿಲ್ಲ, ಅದನ್ನು ವಿಶೇಷವಾಗಿಸಲು ಅವರಿಗೊಂದು ಹೊಸತಾದ ಆವರಣ ಬೇಕಿರುತ್ತದೆ. ಆಗ ಅವರು ಆಯ್ದುಕೊಳ್ಳುವುದು ಪಕ್ಕಾ ತಮಿಳು ದೇಸೀಯತೆಯ ಅಂಗಾಳ ಪರಮೇಶ್ವರಿ ಉತ್ಸವ. ಅಮ್ಮನಿಂದ ಕೆಡುಕಿನ ಮರ್ದನದ ಎಳೆಯನ್ನೇ ತೆಗೆದುಕೊಂಡು ಇವರು ಕಥೆಯನ್ನು ಕಟ್ಟುತ್ತಾ ಹೋಗುತ್ತಾರೆ. ಇವರು ಕಥೆಗಾಗಿ ಆರಿಸಿಕೊಳ್ಳುವ ಊರುಗಳು ಊಟಿ, ಕೊಡೈ, ಕೊಯಮತ್ತೂರು, ಮುನ್ನಾರ್. ಈ ಎಲ್ಲಾ ಊರುಗಳಿಂದ ಹಲವಾರು ಜಾಗಗಳನ್ನು ಆಯ್ದುಕೊಂಡು ಅವರೊಂದು ಕಾಲ್ಪನಿಕ ಊರನ್ನು ಕಟ್ಟಿಕೊಳ್ಳುತ್ತಾರೆ.

ಬೆಟ್ಟದ ತಪ್ಪಲಿನ ಆ ಪುಟ್ಟ ಊರಿನಲ್ಲಿ ಎಲ್ಲರಿಗೂ ಎಲ್ಲರೂ ಗೊತ್ತು. ಕುಲದ ಕಟ್ಟುಪಾಡಿಗೆ ಎಲ್ಲರೂ ಒಳಗೊಂಡವರೇ. ಆ ಊರಿನಲ್ಲಿ ಒಂದು ಸಿಮೆಂಟ್ ಫ್ಯಾಕ್ಟರಿ. ಬಹುಪಾಲು ಊರಿನವರಿಗೆ ಅಲ್ಲೇ ಕೆಲಸ. ತಮ್ಮ ತಮ್ಮ ಜಮೀನುಗಳನ್ನು ಆ ಫ್ಯಾಕ್ಟರಿಗೆ ‘ಮಾರಿಕೊಂಡವರು’ ಅವರು. ಈಗ ಆ ಪ್ಯಾಕ್ಟರಿಯೇ ಅವರ ಜೀವನಾಧಾರ. ಅಲ್ಲೊಂದು ಯೂನಿಯನ್ ಸಹ ಇರುತ್ತದೆ. ಫ್ಯಾಕ್ಟರಿಯ ಮಾಲಿಕರ ಮಗ ಈಗ ಫ್ಯಾಕ್ಟರಿ ವಹಿಸಿಕೊಂಡಿದ್ದಾನೆ. ಅವನಿಗೂ, ಆ ಯೂನಿಯನ್ ಲೀಡರ್‌ಗೂ ತಿಕ್ಕಾಟ. ಸರಣಿಯ ಮೊದಲ ಸಂಚಿಕೆ ಶುರುವಾಗುವುದೇ ಫ್ಯಾಕ್ಟರಿಯಲ್ಲಿ ನಡೆಯುತ್ತಿರುವ ಒಂದು ಮುಷ್ಕರದಿಂದ. ಆ ಊರಿನಲ್ಲೊಂದು ಪೋಲಿಸ್ ಠಾಣೆ, ಅದಕ್ಕೊಬ್ಬ ಸ್ಟ್ರಿಕ್ಟ್ ಮಹಿಳಾ ಸಬ್ ಇನ್‌ಸ್ಪೆಕ್ಟರ್‌. ಆಕೆಯ ಗಂಡ ಅದೇ ಫ್ಯಾಕ್ಟರಿಯಲ್ಲಿ ಅಕೌಂಟೆಂಟ್. ಆಕೆಗೊಬ್ಬ ಮುದ್ದಿನ ಮಗ, ಅದೇ ಠಾಣೆಯಲ್ಲಿ ಕೆಲಸ ಮಾಡುವ ಇನ್‌ಸ್ಪೆಕ್ಟರ್‌ ಕಂಡರೆ ಅವಳಿಗೆ ವಾತ್ಸ್ಯಲ್ಯ, ವಿಶ್ವಾಸ.

ಯೂನಿಯನ್ ಲೀಡರ್ ಮನೆಯಲ್ಲಿರುವುದು ಆತ ಮತ್ತು ಕಿರಿಮಗಳು ಮಾತ್ರ. ಹೆಂಡತಿ ಯಾವುದೋ ಆಶ್ರಮದಲ್ಲಿದ್ದರೆ, ದೊಡ್ಡಮಗಳು ಮನೆಬಿಟ್ಟು ಓಡಿಹೋಗಿ ಕೊಯಮತ್ತೂರಿನಲ್ಲಿ ಕೆಲಸ ಮಾಡುತ್ತಿರುತ್ತಾಳೆ. ಅದೊಂದು ಅಸಮರ್ಪಕವಾದ ಕುಟುಂಬ. ಪಕ್ಕದ ಮನೆಯಲ್ಲೇ ಆ ಯೂನಿಯನ್ ಲೀಡರ್ ತಮ್ಮ ಮತ್ತು ಹೆಂಡತಿ ಇರುತ್ತಾರೆ. ಈ ಪುಟ್ಟ ಊರಿನಲ್ಲಿ ಅಂಗಾಳ ಪರಮೇಶ್ವರಿ ಉತ್ಸವ ಪ್ರಾರಂಭವಾತ್ತದೆ, ಫ್ಯಾಕ್ಟರಿಗೆ ಬೆಂಕಿ ಬೀಳುತ್ತದೆ, ಯೂನಿಯನ್ ಲೀಡರ್ ಮಗಳು ಕಾಣೆಯಾಗುತ್ತಾಳೆ, ಆ ಪುಟ್ಟ ಊರಿನ ಸುಳಿಯೊಳಗಣ ಒಳಸುಳಿಗಳು ಬಿಚ್ಚಿಕೊಳ್ಳತೊಡಗುತ್ತವೆ. ವೆಬ್ ಸರಣಿ ಕಥೆ ಹೇಳಿದರೆ ಮಾತ್ರ ಸಾಲದು, ಪ್ರತಿಯೊಂದು ಸಂಚಿಕೆಯೂ ಹೊಸ ವಿಷಯವೊಂದನ್ನು ಹೇಳಬೇಕು, ಈ ಸಂಚಿಕೆ ನೋಡಿದವರು ಮುಂದಿನ ಸಂಚಿಕೆ ನೋಡಲೇಬೇಕು ಎನ್ನುವ ಸಣ್ಣ ಒತ್ತಡ ಸೃಷ್ಟಿಯಾಗಬೇಕು, ಪ್ರತಿಯೊಂದು ಸಂಚಿಕೆಯೂ ಒಂದು ಸಮಸ್ಯೆಯನ್ನು ಬಿಡಿಸಿದರೆ ಮತ್ತೊಂದು ಸಮಸ್ಯೆಯೊಂದಿಗೆ ಕೊನೆಯಾಗಬೇಕು. ಮತ್ತು ಇವೆಲ್ಲವೂ ಕಥೆಗೆ ಪೂರಕವಾಗಿಯೇ ಇರಬೇಕು. ಬ್ರಮ್ಮಾ ಮತ್ತು ಅನುಚರಣ್ ನಿರ್ದೇಶನದ ‘ಸುಡಲ್’ ಈ ಸವಾಲನ್ನು ಚೆನ್ನಾಗಿ ನಿರ್ವಹಿಸಿದೆ. ಹಲವಾರು ಸುಳಿಗಳ ಈ ಕಥೆ 8 ಭಾಗಗಳಲ್ಲಿ ಅನಾವರಣಗೊಳ್ಳುತ್ತದೆ.

‘ಮಯಾನ ಕೊಳ್ಳೈ’ ಅಥವಾ ‘ಸ್ಮಶಾನ ಕೊಳ್ಳೆ’ ಎನ್ನುವ ಹಳ್ಳಿಯ ಅಂಗಾಳಮ್ಮನ ಪೂಜೆ ಆಚರಣೆಯ 10 ದಿನಗಳಲ್ಲಿ ಈ ಕಥೆ ನಡೆಯುತ್ತದೆ. ಕಥೆಗೂ ಈ ಆಚರಣೆಗೂ ಒಂದು ಸಂಬಂಧದ ಎಳೆ ಇದೆ. ಐತಿಹ್ಯದ ಪ್ರಕಾರ ಅರಕ್ಕನ್ ಎನ್ನುವ ದುಷ್ಟನೊಬ್ಬ ಒಂದು ಹುಡುಗಿಯನ್ನು ಅಪಹರಿಸಿರುತ್ತಾನೆ. ತನ್ನ ಅನುಚರ ಪಾವಾಡರಾಯನ್ ಜೊತೆ ಸೇರಿ ಅಮ್ಮ ಸ್ಮಶಾನದಲ್ಲಿ ಅಡಗಿದ್ದ ಈ ದುಷ್ಟನನ್ನು ಸಂಹರಿಸಿ, ಹುಡುಗಿಯನ್ನು ಕಾಪಾಡುತ್ತಾಳೆ. ಕಥೆಯ ಎಳೆಯನ್ನು ಈ ಪೂಜೆಯ ಆಚರಣೆಯೊಂದಿಗೆ ಬೆಸೆಯಲಾಗಿದೆ. ಕಾಣೆಯಾದ ಹುಡುಗಿ ನಿಲಾಳ ಅಕ್ಕ ನಂದಿನಿ ಊರಿಗೆ ಬರುವಾಗ ಅವಳನ್ನು ತೋರಿಸುವ ಮೊದಲ ಫ್ರೇಮಿನಲ್ಲೇ ಅಂಗಾಳಮ್ಮನ ಮೆರವಣಿಗೆ ಅವಳಿಗೆ ಎದುರಾಗುತ್ತದೆ. ಮುಂದೆ ಯಾವಾಗಲೋ ಆ ಸಮೀಕರಣ ನಮಗೆ ಎದುರಾಗುತ್ತದೆ.

ಹಿನ್ನೆಲೆ ಸಂಗೀತ ಕಥೆಯ ಎಲ್ಲಾ ಭಾವಗಳನ್ನೂ ಮಾತಿಲ್ಲದೆ ನಮಗೆ ದಾಟಿಸಿದರೆ, ಛಾಯಾಗ್ರಹಣ ಕವಿತೆಯ ಹಾಗಿದೆ. ಆ ಇಬ್ಬರು ಪುಟ್ಟ ಪ್ರೇಮಿಗಳು ಭೇಟಿಯಾಗುವ ಸಮಾಧಿ, ರೈಲ್ವೇ ಟ್ರ್ಯಾಕ್, ಅಮ್ಮನ ವಿಗ್ರಹ, ಅಮ್ಮನ ಮುಖವಾಡ ಎಲ್ಲವೂ ಸುಂದರ. ಆದರೆ ನಿಜಕ್ಕೂ ಕಥೆಗೆ ತಕ್ಕಾದ ಸಾಥ್ ನೀಡಿರುವುದು ಕಲಾವಿದರ ಅಭಿನಯ. ಪೆರಿಯಾರ್ ಅನುಯಾಯಿ ಯೂನಿಯನ್ ಲೀಡರ್ ಪಾತ್ರದಲ್ಲಿ ಪಾರ್ತಿಬನ್ ಪ್ರತಿ ಫ್ರೇಮಿನಲ್ಲೂ ಎದ್ದು ಕಾಣುತ್ತಾರೆ. ಅವರು ಮಾತನಾಡದೆ ಇರುವಾಗಲೂ ಅವರ ಮೌನ, ದೇಹಾಭಿನಯ ಮಾತನಾಡುತ್ತಲೇ ಇರುತ್ತದೆ. ಐಶ್ವರ್ಯಾ ರಾಜೇಶ್ ಎಂದೂ ಗ್ಲಾಮರ್‌ಗೆ ಸೊಪ್ಪು ಹಾಕದೆ ತನ್ನ ಅಭಿನಯದಿಂದಲೇ ಚಿತ್ರರಂಗದಲ್ಲಿ ಕಾಲೂರಿರುವ ಕಲಾವಿದೆ. ಪೋಲೀಸ್ ಆಫೀಸರ್ ಆಗಿ ಮತ್ತು ಮಗ ಎಂದರೆ ಜಗತ್ತಿನ ಎಲ್ಲರಿಗಿಂತಾ, ಎಲ್ಲದಕ್ಕಿಂತ ಹೆಚ್ಚಾಗಿ ಪ್ರೀತಿಸುವ, ಅವನು ಕೇಳಿದ್ದನ್ನು ಕೊಡಿಸಲು ಲಂಚಕ್ಕೆ ಕೂಡ ಕೈಚಾಚುವ ತಾಯಿಯಾಗಿ ಶ್ರೇಯಾ ರೆಡ್ಡಿ ತನ್ನ ಪಾತ್ರದ ಕಪ್ಪು, ಬಿಳಿ, ಗ್ರೇ ಶೇಡ್ ಗಳನ್ನು ಸೊಗಸಾಗಿ ನಿಭಾಯಿಸಿದ್ದಾರೆ.

‘ವಿಕ್ರಂ ವೇದ’ ಚಿತ್ರದಲ್ಲಿ ವಿಜಯ್ ಸೇತುಪತಿಯ ತಮ್ಮನಾಗಿ ಅಭಿನಯಿಸಿದ್ದ ಕದಿರ್ ಇಲ್ಲಿ ಸಕ್ಕರೈ ಅಥವಾ ಚಕ್ರವರ್ತಿಯಾಗಿ ಪೂರ್ಣಪ್ರಮಾಣದ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಒಂದು ರೀತಿಯಲ್ಲಿ ಸಕ್ಕರೈ ನೋಡುಗರ ಪ್ರತಿನಿಧಿ ಸಹ. ಕತೆ ಅನಾವರಣವಾಗುತ್ತಾ ಹೋದಹಾಗೆ ಆ ಪಾತ್ರದ ಅನುಮಾನಗಳು, ನಿರ್ಧಾರಗಳು ನೋಡುಗರದ್ದೂ ಆಗುತ್ತದೆ. ಜನಗಳಲ್ಲಿರುವ ಪೂರ್ವಾಗ್ರಹಗಳ ಬಗ್ಗೆ ಸಕ್ಕರೈ ಒಮ್ಮೆ ಮಾತನಾಡುತ್ತಾನೆ ಸಹ : ‘ನಾವು ಅದೆಷ್ಟು ಬೇಗ ನಮ್ಮ ಪೂರ್ವಾಗ್ರಹಗಳ ಕಾರಣಕ್ಕೆ ಸಿದ್ಧ ತೀರ್ಮಾನಗಳನ್ನು ಕೈಗೊಳ್ಳುತ್ತೇವೆ.. ಆ ಪೂಜೆ ಮಾಡುವವ ಒರಟ, ನೋಡಲು ಹಾಗೆ ಕಾಣುತ್ತಾನೆ ಎಂದು ಅನಾಯಾಸವಾಗಿ ಅವನನ್ನು ವಿಲನ್ ಮಾಡುತ್ತೇವೆ, ಶ್ರಮಿಕ ಕಾರ್ಮಿಕರ ಈ ಊರಿನಲ್ಲಿ ಫ್ಯಾಕ್ಟರಿ ಮಾಲೀಕ ಸುಲಭವಾಗಿ ವಿಲನ್ ಆಗಿಬಿಡುತ್ತಾನೆ’ ಎಂದು ಹೇಳಿಕೊಳ್ಳುತ್ತಾನೆ. ಪಾತ್ರಗಳ ಆಯ್ಕೆ ಅದೆಷ್ಟು ಸಮರ್ಪಕವಾಗಿದೆ ಎಂದರೆ, ಮೇಲೆ ಹೇಳಿದ ಆ ಪೂಜೆ ಮಾಡುವವನನ್ನು ಒಂದು ದೃಶ್ಯದಲ್ಲಿ ಜೈಲಿನ ಕೋಣೆಯಲ್ಲಿ ಕೂಡಿ ಹಾಕಿರುತ್ತಾರೆ. ‘ನಾನೇನೂ ಮಾಡಿಲ್ಲ, ನಾನೇನು ಮಾಡಿಲ್ಲ’ ಎಂದು ಹೇಳುತ್ತಲೇ ಮೈಮೇಲೆ ದೇವರು ಬಂದಂತೆ ವೃತ್ತಾಕಾರದಲ್ಲಿ ಬಿರಬಿರನೆ ನಡೆಯುವ ದೃಶ್ಯದಲ್ಲಿ ಆತನ ನಟನೆ ಅದ್ಭುತ. ಕೆಲವೇ ದೃಶ್ಯಗಳಲ್ಲಿ ಬರುವ ಪಾತ್ರಗಳೂ ಸಹ ಇಲ್ಲಿ ಮರೆಯಲಾರದಂತಹ ಅಭಿನಯ ನೀಡುತ್ತವೆ.

ಕತೆ ಮುಂದುವರೆಯುತ್ತಾ ಹೋದಂತೆ ಕಾಣೆಯಾದ ಹುಡುಗಿ ಅಪಹರಣಕ್ಕೊಳಗಾದಳೆ ಎನ್ನುವ ಅನುಮಾನ, ಅವಳನ್ನು ಅಪಹರಿಸಿದವನು ಆ ಸಬ್ ಇನ್‌ಸ್ಪೆಕ್ಟರ್‌ ಮಗನೆ ಎನ್ನುವ ಅನುಮಾನ, ಆಮೇಲೆ ಅದು ಪ್ರೇಮಿಗಳಿಬ್ಬರು ಓಡಿ ಹೋದ ಪ್ರಸಂಗವೆ ಎನ್ನುವ ಅನುಮಾನ, ಹುಡುಗಿ ನರಬಲಿಗೆ ಈಡಾದಳೆ ಎನ್ನುವ ಅನುಮಾನ… ಹೀಗೆ ಒಂದೊಂದು ಸಂಚಿಕೆಗೂ ಕತೆಯ ಪ್ಲಾಟ್ ಆಳವಾಗುತ್ತಾ, ನಿಗೂಢವಾಗುತ್ತಾ ಹೋಗುತ್ತದೆ. ಸಣ್ಣ ಊರಿನಲ್ಲಿ ಎಲ್ಲರಿಗೆ ಎಲ್ಲರೂ ಗೊತ್ತು ಎಂದು ಎಲ್ಲರೂ ಅಂದುಕೊಳ್ಳುತ್ತಿರುವಾಗ ಅವರು ಊಹಿಸಲೂ ಆಗದ ಸತ್ಯಗಳು ಅವರನ್ನು ಬೆಚ್ಚಿಬೀಳಿಸುತ್ತವೆ. ಕೆಲವೊಂದು ಎಳೆಗಳನ್ನು ಉತ್ತರಿಸದೆ ಬಿಡಲಾಗಿದೆ. ಹದಿನೈದರ ಹೆಣ್ಣುಹುಡುಗಿ ತನ್ನಿಚ್ಛೆಯಂತೆಯೇ ಆದರೂ ಓಡಿಹೋಗಿದ್ದಾಳೆ ಎನ್ನುವಾಗ ಅವಳನ್ನು ಹುಡುಕದೆ ಅಕ್ಕ ತನ್ನ ಪಾಡಿಗೆ ತಾನು ಕೆಲಸಕ್ಕೆ ಹಿಂದಿರುಗುತ್ತೇನೆ ಎನ್ನುವುದು, ಅಪ್ಪ ಮಾಮೂಲಿನಂತೆ ಇರುವುದನ್ನು ಸಹಜ ಎನ್ನಲಾಗುವುದಿಲ್ಲ. ಒಮ್ಮೊಮ್ಮೆ ಕೆಲವು ತಿರುವುಗಳು ಬೇಕೆಂದೇ ಸೇರಿಸಿದವೇನೋ ಎಂದು ಅನಿಸುತ್ತದೆಯಾದರೂ, ಆ ಅನಿಸಿಕೆಯೊಂದಿಗೇ ನೋಡಿದರೂ ಕಥೆ ಎಲ್ಲೂ ಬೀಳುವುದಿಲ್ಲ.

ಅಮ್ಮನ ಉತ್ಸವದ ಐತಿಹ್ಯದ ಹಾಗೆ ಇಲ್ಲಿಯೂ ಮನಸ್ಸಿನ ಸಮಾಧಿಯೊಳಗಡೆ ಅಡಗಿರುವ ಬಾಲ್ಯಕಾಲದ ಹಲವಾರು ಬೆಚ್ಚಿಬೀಳಿಸುವ ನೋವಿನ ನೆನಪುಗಳಿವೆ. ಅದನ್ನು ಹುಡುಕಿ ತೆಗೆದು ಬಲಿಹಾಕಬೇಕಿರುತ್ತದೆ. ತಂಗಿಯ ಮೇಲೆ ಲೈಂಗಿಕ ಹಲ್ಲೆ ನಡೆದಿರಬಹುದು ಎನ್ನುವ ಸುದ್ದಿ ತಿಳಿದ ಕ್ಷಣದಿಂದ ಅಕ್ಕ ಅನುಭವಿಸುವ ಮಾನಸಿಕ ತಲ್ಲಣ, ಅವಳ ನೆನಪು ಮತ್ತು ಮಾನಸಿಕ ಕ್ಲೇಶಗಳ ಜೊತೆಯಲ್ಲಿನ ಅವಳ ಹೋರಾಟ, ಮನಸ್ಸಿಗೆ ತೀರಾ ನೋವು ತರಬಲ್ಲಂತವನ್ನು ಮರೆವಿನ ಪರದೆಯೊಳಗೆ ಸರಿಸಿ, ತನ್ನನ್ನು ತಾನು ಕಾಪಾಡಿಕೊಳ್ಳುವ ಮನಸ್ಸಿನ ಮಾಯಾಜಾಲ, ಕಡೆಗೊಮ್ಮೆ ಆ ಮುಚ್ಚಿಟ್ಟ ನೆನಪು ಎದುರಾಗುವ ಕ್ಷಣ.. ಅವಳೊಂದಿಗೆ ನೋಡುಗರೂ ಸಹ ಒಮ್ಮೆ ಉಸಿರನ್ನು ಎಳೆದುಕೊಳ್ಳುತ್ತಾರೆ. ಎಲ್ಲಾ ಮುಗಿದ ಮೇಲೆ ತೆರೆಯ ಮೇಲೆ ಬರುವ, ‘ಬಾಲ್ಯಕಾಲದ ಲೈಂಗಿಕ ದೌರ್ಜನ್ಯಗಳಲ್ಲಿ ಸುಮಾರು 90% ಭಾಗ ಗೊತ್ತಿರುವರಿಂದ, ನಂಬಿದವರಿಂದಲೇ ಆಗುತ್ತದೆ’ ಎನ್ನುವ ವಾಕ್ಯ ಮಾತ್ರ ಕಾಡುತ್ತಲೇ ಇರುತ್ತದೆ.

ಈ ಸರಣಿಯ ಕತೆ ಎಲ್ಲೇ ನಡೆಯಬಲ್ಲಂತಹುದು, ಆ ಭಾವನೆಗಳು ಜಗತ್ತಿನ ಯಾವ ಭಾಗದಲ್ಲಾದರೂ ಸಲ್ಲುವಂತಹುದು, ಆದರೆ ಈ ಕತೆಗೆ ಪುಷ್ಕರ್ ಮತ್ತು ಗಾಯಿತ್ರಿ ನೀಡಿರುವ ಪ್ರಾದೇಶಿಕತೆಯ ಸ್ಪರ್ಶ ಈ ಸರಣಿಯನ್ನು ವಿಶೇಷವಾಗಿಸುತ್ತದೆ. ಬಾರತೀಯ ಚಿತ್ರರಂಗ ಎಂದರೆ ಹಿಂದಿ ಚಿತ್ರರಂಗ ಮಾತ್ರ ಅಲ್ಲ ಎನ್ನುವ ಗಟ್ಟಿಧ್ವನಿಯ ಕೂಗು ಎದ್ದಿರುವ ಈ ಕಾಲಕ್ಕೆ ಇಂತಹ ಸರಣಿಗಳು ಆ ಕೂಗಿಗೆ ಬೆಂಬಲವಾಗಿ ನಿಲ್ಲುತ್ತವೆ.

LEAVE A REPLY

Connect with

Please enter your comment!
Please enter your name here