ವರನಟ ಡಾ.ರಾಜಕುಮಾರ್ ಅಭಿನಯದ ಸಿನಿಮಾಗಳು ರೀರಿಲೀಸ್ ಆಗುತ್ತಲೇ ಇರುತ್ತವೆ. ಕನ್ನಡಿಗರು ಕೂಡ ಈ ಸಿನಿಮಾಗಳನ್ನು ಮತ್ತೆ ಮತ್ತೆ ನೋಡಿ ಆನಂದಿಸುತ್ತಾರೆ. ಈಗ ಅವರ ಸೂಪರ್‌ಹಿಟ್‌ ಸಿನಿಮಾ ‘ಭಾಗ್ಯವಂತರು’ ನವೀನ ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗುತ್ತಿದೆ.

ರಾಜಕುಮಾರ್ ಮತ್ತು ಬಿ.ಸರೋಜಾದೇವಿ ಅಭಿನಯದ ‘ಭಾಗ್ಯವಂತರು’ ಸಿನಿಮಾ 1977ರಲ್ಲಿ ತೆರೆಕಂಡಿತ್ತು. ಭಾರ್ಗವ ಸ್ವತಂತ್ರ್ಯ ನಿರ್ದೇಶನದ ಚಿತ್ರವನ್ನು ದ್ವಾರಕೀಶ್ ನಿರ್ಮಿಸಿದ್ದರು. ಆಗ ದೊಡ್ಡ ಯಶಸ್ಸು ಕಂಡಿದ್ದ ಚಿತ್ರವನ್ನು ರಾಜಕುಮಾರ್ ಅಭಿಮಾನಿ ಮುನಿರಾಜು ನವೀನ ತಂತ್ರಜ್ಞಾನ ಅಳವಡಿಸಿ ಮರು ಬಿಡುಗಡೆ ಮಾಡುತ್ತಿದ್ದಾರೆ. ನಿರ್ಮಾಪಕ ದ್ವಾರಕೀಶ್ ಅವರಿಂದ ಐದು ವರ್ಷಗಳ ಅವಧಿಗೆ ಅವರು ಹಕ್ಕುಗಳನ್ನು ಪಡೆದಿದ್ದು, ಈಗ ನವೆಂಬರ್‌ನಲ್ಲಿ ರಾಜ್ಯದ ಸುಮಾರು 150 ಥಿಯೇಟರ್‌ಗಳಲ್ಲಿ ಸಿನಿಮಾ ಬಿಡುಗಡೆ ಮಾಡಲಿದ್ದಾರೆ. ದಿನಾಂಕವಿನ್ನೂ ನಿಗಧಿಯಾಗಿಲ್ಲವಾದರೂ ನವೆಂಬರ್‌ನಲ್ಲಿ ಬಿಡುಗಡೆ ಫಿಕ್ಸ್‌ ಆಗಿದೆ. ಡಿ.ಐ, 7.1 ಟ್ರ್ಯಾಕ್ ಸೇರಿದಂತೆ ಮತ್ತೆ ಕೆಲವು ತಂತ್ರಜ್ಞಾನ ಅಳವಡಿಕೆಯೊಂದಿಗೆ ಚಿತ್ರ ಬಿಡುಗಡೆಯಾಗುತ್ತಿದೆ.

ಮುನಿರಾಜು ಅವರು ಈ ಹಿಂದೆ ರಾಜಕುಮಾರ್ ಅಭಿನಯದ ಆಪರೇಷನ್ ಡೈಮಂಡ್ ರಾಕೆಟ್‌, ನಾನೊಬ್ಬ ಕಳ್ಳ, ರಾಜಾ ನನ್ನ ರಾಜ, ದಾರಿ ತಪ್ಪಿದ ಮಗ ಚಿತ್ರಗಳನ್ನು ನವೀನ ತಂತ್ರಜ್ಞಾನದೊಂದಿಗೆ ಬಿಡುಗಡೆ ಮಾಡಿ ಯಶಸ್ಸು ಕಂಡಿದ್ದರು. ರಾಜ್ ಕುರಿತ ಅಪಾರ ಅಭಿಮಾನವೇ ಈ ಪ್ರಯೋಗಕ್ಕೆ ಪ್ರೇರಣೆ ಎನ್ನುತ್ತಾರವರು. “ನಾನು ಅಣ್ಣಾವ್ರ ಅಪ್ಪಟ ಅಭಿಮಾನಿ. ರಾಜಕುಮಾರ್ ಎಂದರೆ ನನಗೆ ಪ್ರಾಣ. 78ನೇ ಇಸವಿಯಿಂದ ಕನ್ನಡ ಚಿತ್ರರಂಗದೊಂದಿಗೆ ನಂಟು ಇದೆ. ಹದಿನೆಂಟು ವರ್ಷಗಳ ಕಾಲ ವಜ್ರೇಶ್ವರಿ ಸಂಸ್ಥೆಯಲ್ಲಿ ಕೆಲಸ ಮಾಡಿದ್ದೇನೆ. ಪಾರ್ವತಮ್ಮ ರಾಜಕುಮಾರ್ ಅವರೇ ನನ್ನನ್ನು ಮೊದಲು‌ ಚಿತ್ರಮಂದಿರದ ಆರ್‌ಪಿ ಆಗಿ ನೇಮಕ‌ ಮಾಡಿ ಯಳಂದೂರಿಗೆ ಕಳುಹಿಸಿದ್ದರು. ಈ ಹಿಂದೆ ರಾಜ್ ಅಭಿನಯದ ನಾಲ್ಕು ಚಿತ್ರಗಳನ್ನು ರೀರಿಲೀಸ್ ಮಾಡಿದ್ದು, ಈಗ ‘ಭಾಗ್ಯವಂತರು’ ತೆರೆಗೆ ಸಿದ್ಧಪಡಿಸಿದ್ದೇವೆ. ಅಭಿಮಾನಿಗಳು ಎಂದಿನ ಪ್ರೋತ್ಸಾಹ ನೀಡುವ ಭರವಸೆಯಿದೆ” ಎನ್ನುತ್ತಾರವರು. 

ಹಂಚಿಕೆದಾರ ಮುನಿರಾಜು, ಚಿತ್ರನಿರ್ದೇಶಕ ಭಾರ್ಗವ

ಭಾರ್ಗವ ಅವರಿಗೆ ಸ್ವತಂತ್ರ್ಯ ನಿರ್ದೇಶನದಲ್ಲಿ ಇದು ಮೊದಲ ಸಿನಿಮಾ. ಹಾಗಾಗಿ ಅವರಿಗೆ ಈ ಚಿತ್ರದ ಬಗ್ಗೆ ವಿಶೇ‍ಷ ಪ್ರೀತಿ. “ನಾನು ಆಗಲೇ ರಾಜಕುಮಾರ್ ಅವರ ಬಬ್ರುವಾಹನ, ನಾ ನಿನ್ನ ಮರೆಯಲಾರೆ, ಜಗ ಮೆಚ್ಚಿದ ಮಗ ಸೇರಿದಂತೆ ಅನೇಕ ಚಿತ್ರಗಳಿಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದೆ. ಹಾಗಾಗಿ ರಾಜ್ ಅವರಿಗೆ ನನ್ನ ಮೇಲೆ ವಿಶೇಷ ಪ್ರೀತಿ. ನನಗೂ ಅವರೆಂದರೆ ಅಷ್ಟೇ ಪ್ರೀತಿ. ನಿರ್ಮಾಪಕ ದ್ವಾರಕೀಶ್ ಹಾಗು ರಾಜಕುಮಾರ್ ಇಬ್ಬರೂ ನೀವೇ ಈ ಚಿತ್ರ ನಿರ್ದೇಶನ ಮಾಡಿ ಎಂದರು. ನನ್ನ ಮೊದಲ ನಿರ್ದೇಶನದ ಚಿತ್ರವೇ ಸೂಪರ್ ಹಿಟ್ ಆಯಿತು. ಈಗ ಮುನಿರಾಜು ನೂತನ ತಂತ್ರಜ್ಞಾನ ಅಳವಡಿಕೆಯೊಂದಿಗೆ ಈ ಚಿತ್ರವನ್ನು ಮರು‌ ಬಿಡುಗಡೆ ಮಾಡುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ” ಎಂದು ಭಾರ್ಗವ ಹರಸಿದರು.

https://youtu.be/rqIl2fyY3yw

LEAVE A REPLY

Connect with

Please enter your comment!
Please enter your name here