ಇತ್ತೀಚೆಗೆ ದೇಶದಲ್ಲಿ ಕೋಮುವಾದ ಎನ್ನುವುದು ನಾನಾ ತೆರನಾಗಿ ಪ್ರಕಟಗೊಂಡು ಜನತೆಗೆ ಆತಂಕಗಳನ್ನು ಒಡ್ಡುತ್ತಿದೆ. ಕೋಮು ಸಾಮರಸ್ಯ ಕದಡಿ, ಜನತೆಯನ್ನು ವಿಭಜಿಸಿ, ತಮ್ಮ ಬೇಳೆಯನ್ನು ಬೇಯಿಸಿಕೊಳ್ಳಲು ಅನೇಕ ಹುನ್ನಾರಗಳನ್ನು ಹೆಣೆಯಲಾಗುತ್ತದೆ. ಇಂತಹ ಒಂದು ವಸ್ತುವುಳ್ಳ ‘ರಂಡು’ (2022) ಮಲಯಾಳಂ ಚಲನಚಿತ್ರ ಅಮೇಜಾನ್ ಪ್ರೈಮ್‌ನಲ್ಲಿ ವೀಕ್ಷಿಸಲು ಲಭ್ಯವಿದೆ.
ಸಮಕಾಲೀನ ವಿದ್ಯಮಾನಗಳು ಕಲಾ ಪ್ರಕಾರಗಳ ಮೂಲಕ ಅಭಿವ್ಯಕ್ತಿಗೊಳ್ಳುವುದು ತಿಳಿದ ಸಂಗತಿಯೇ ಆಗಿದೆ. ಅದರಲ್ಲೂ ಚಲನಚಿತ್ರದಂತಹ ಶಕ್ತಿಶಾಲಿ ಮಾಧ್ಯಮವನ್ನು ಪ್ರಜ್ಞಾವಂತರು ಇಂತಹ ವಿಷಯಗಳಿಗಾಗಿ ವಿಶೇಷವಾಗಿ ಆಯ್ಕೆಮಾಡಿಕೊಳ್ಳುತ್ತಾರೆ ಹೇಳಿ, ಕೇಳಿ ಮಲಯಾಳಂ ಚಲನಚಿತ್ರರಂಗ ತನ್ನ ಪ್ರಯೋಗಾತ್ಮಕ, ಭಿನ್ನ ನಡೆಗಳಿಂದ ಇತ್ತೀಚಿನ ದಶಕಗಳಲ್ಲಿ ಚಲನಚಿತ್ರ ಆಸಕ್ತರ ಮತ್ತು ವಿಮರ್ಶಕರ ಗಮನವನ್ನು ಸೆಳೆದಿದೆ. ಹೀಗಾಗಿ ‘ರಂಡು’ ಅಂತಹ ಚಲನಚಿತ್ರಗಳು ಮಲಯಾಳಂ ಚಲನಚಿತ್ರರಂಗದಲ್ಲಿ ನಿರ್ಮಾಣಗೊಳ್ಳುತ್ತವೆ.
ಕೇರಳದ ಒಂದು ಹಳ್ಳಿಯಲ್ಲಿ ವಾವ (ನಟ ವಿಷ್ಣು ಉನ್ನಿಕೃಷ್ಣನ್) ಎಂಬ ಆಟೋರಿಕ್ಷ ಚಾಲಕ ಇರುತ್ತಾನೆ. ಆತ ಎಲ್ಲರೊಡನೆ, ಅಂದರೆ ಸಮಾಜದಲ್ಲಿರುವ ಸಾಮಾಜಿಕ. ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಕಂದರಗಳಾಚೆ ಸ್ನೇಹದ ಹಸ್ತವನ್ನು ಚಾಚಿ ಸೌಹಾರ್ದತೆಯಿಂದ ಬಾಳ್ವೆ ನಡೆಸುತ್ತಿರುತ್ತಾನೆ. ಕ್ರೀಡಾ ಚಟುವಟಿಕೆಗಳಲ್ಲೂ ಮುಂದಿರುತ್ತಾನೆ. ತನ್ನ ಸಮುದಾಯದ ಕೆಲವರು ಬೇಕೆಂತಲೇ ತಗಾದೆ ತೆಗೆದಾಗ ಆತ ಮಧ್ಯಪ್ರವೇಶ ಮಾಡಿ ಕಲಹ ವಿಕೋಪಕ್ಕೆ ಹೋಗದಂತೆ ಜಾಗ್ರತೆ ವಹಿಸುತ್ತಿರುತ್ತಾನೆ. ದೇಶದಲ್ಲಿ ಜರಗುತ್ತಿರುವ ಕೋಮು ವಿಭಜನೆಗಳ ಕರಿ ನೆರಳು ಈ ಹಳ್ಳಿಯ ಮೇಲೂ ಬಿದ್ದಿರುತ್ತದೆ. ಬಾಹ್ಯವಾಗಿ ಮತೀಯ ನಾಯಕರು ಸೌಹಾರ್ದತೆಯನ್ನು ಎತ್ತಿಹಿಡಿಯುತ್ತಿರುವಂತೆ ಕಂಡರೂ ಒಳಗೊಳಗೆ ಅವರು ಮತೀಯ ವಿಭಜನೆಗಳಿಗೆ ಕುಮ್ಮಕ್ಕು ನೀಡುತ್ತಿರುತ್ತಾರೆ.
ಆದರೆ ಅಂತಹವರ ಮಧ್ಯೆ ಎಲ್ಲರಿಗೂ ಒಳಿತನ್ನು ಬಯಸುವವರೂ ಇರುತ್ತಾರೆ. ಒಮ್ಮೆ ವಾವ ಒಂದು ವಿವಾದಾತ್ಮಕ ಸನ್ನಿವೇಶದಲ್ಲಿ ಸಿಲುಕುತ್ತಾನೆ. ಆತನನ್ನು ಇಷ್ಟಪಡದ ಹಾಗೂ ವಿನಾಕಾರಣ ಬಗ್ಗುಬಡಿಯಬೇಕೆಂಬ ಇರಾದೆಯುಳ್ಳ ಕೆಲವರು ಈ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಆತನಿಗೆ ತಕ್ಕ ಪಾಠ ಕಲಿಸಲು ಸನ್ನದ್ಧರಾಗುತ್ತಾರೆ. ಆಗ ಆತನ ಸಮುದಾಯದ ನಾಯಕರು ವಾವನ ಪರವಾಗಿ ನಿಲ್ಲುತ್ತಾರೆ. ಇದಕ್ಕಾಗಿ ಆತನಿಂದ ಸೂಕ್ತ ಬೆಲೆಯನ್ನು ನಿರೀಕ್ಷಿಸುತ್ತಾರೆ. ಬೇರೆ ಮತದವರ ವಿರುದ್ಧ ಪ್ರಚಾರ ಮಾಡಲು ಒತ್ತಾಯಿಸುತ್ತಾರೆ! ಎರಡು ಮತೀಯ ಗುಂಪುಗಳ ನಡುವೆ ವಾವ ಪಗಡೆಯಾಟದ ಕಾಯಿಯಾಗುತ್ತಾನೆ. ಆತ ತಾನಿರುವ ಸಂದಿಗ್ಧ ಸ್ಥಿತಿಯಿಂದ ಪಾರಾಗುತ್ತಾನೋ ಅಥವಾ ಇಲ್ಲವೋ ಎನ್ನುವುದನ್ನು ಚಲನಚಿತ್ರದ ಅಂತಿಮ ಘಟ್ಟ ತಿಳಿಸುತ್ತದೆ.
ಇಡೀ ಚಲನಚಿತ್ರದಲ್ಲಿ ರಾಜಕೀಯ ಮತ್ತು ಮತೀಯ ವಿಭಾಗೀಕರಣವನ್ನು, ಬೇರೆ ಬೇರೆ ಸಮುದಾಯಗಳ ಸ್ಥಾಪಿತ ಹಿತಾಸಕ್ತಿಗಳು ಹೂಡುವ ಆಟಗಳನ್ನು ವಿಡಂಬನಾತ್ಮಕವಾಗಿ ಬಿಂಬಿಸಲಾಗಿದೆ. ಒಂದು ದೃಶ್ಯದಲ್ಲಿ ಒಬ್ಬ ಬಲಪಂಥೀಯ ವ್ಯಕ್ತಿ ಒಂದು ಸ್ಕ್ವಾಶ್ ಪಂದ್ಯದಲ್ಲಿ ಭಾರತ, ಪಾಕಿಸ್ಥಾನದ ವಿರುದ್ಧ ಜಯವನ್ನು ಸಾಧಿಸಬೇಕೆಂದು ಜೋರಾಗಿ ಹಾಗೂ ಢಾಳಾಗಿಯೇ ಹಪಹಪಿಸುತ್ತಾನೆ. ಆದರೆ ಆತನಿಗೆ ಈ ಕ್ರೀಡೆಯ ಬಗೆಗೆ ಏನೇನೂ ತಿಳಿದಿರುವುದಿಲ್ಲ! ಭಾರತಕ್ಕೆ ಆ ಪಂದ್ಯದಲ್ಲಿ ಸೋಲಾಗುತ್ತದೆ. ಜೊತೆಯಲ್ಲಿದ್ದ ಒಬ್ಬ ಮುಸಲ್ಮಾನ ವ್ಯಕ್ತಿ ಭಾರತ ಪರಾಜಯ ಹೊಂದಿದ್ದಕ್ಕೆ ನಸುನಕ್ಕ ಎಂದು ಭಾವಿಸಿ, ಸಿಡಿಮಿಡಿಗೊಂಡು ಆತನ ಬೈಕನ್ನು ಹಾಳುಗೆಡುವುತ್ತಾನೆ! ಕೆಲವು ದಶಕಗಳ ಹಿಂದೆ ಇಂತಹ ದೃಶ್ಯವನ್ನು ಮೆಲೋಡ್ರಾಮಾದ ಒಂದು ಅಂಶ ಎಂದು ತಳ್ಳಿಹಾಕುವ ಸಾಧ್ಯತೆ ಜಾಸ್ತಿಯಿತ್ತು. ಆದರೆ ಪ್ರಸಕ್ತ ವಾತಾವರಣದಲ್ಲಿ ಇಂತಹ ಘಟನೆಗಳು ಸಂಭಾವ್ಯ ಎಂಬ ಅರಿವು ನಮ್ಮನ್ನು ರಾಚುತ್ತದೆ.
ಎರಡು ಸಮುದಾಯಗಳಲ್ಲಿರುವ ಕೋಮು ರಾಜಕೀಯವನ್ನು ದಿಟ್ಟವಾಗಿ ನಿರ್ದೇಶಕ ಸುಜಿತ್ ಲಾಲ್ ವೀಕ್ಷಕರಿಗೆ ತಲುಪಿಸಿದ್ದಾರೆ. ಚಲನಚಿತ್ರದ ಪ್ರಮುಖ ಪಾತ್ರವಾದ ವಾವನನ್ನು ಇನ್ನಷ್ಟು ಗಟ್ಟಿಯಾಗಿ ಕಟ್ಟಿಕೊಡಬಹುದಾಗಿತ್ತು. ಆತ ಎದುರಿಸುವ ಅನೇಕ ಭಾವನಾತ್ಮಕ ಸಂಘರ್ಷಗಳು ವೀಕ್ಷಕರನ್ನು ತಟ್ಟಬೇಕಾದಷ್ಟು ತಟ್ಟುವುದಿಲ್ಲ. ಇವು ಚಿತ್ರಕಥೆಯಲ್ಲಿರುವ ಕೆಲವು ದೋಷಗಳು ಎಂದೆನಿಸಿತು. ಅಲ್ಲದೆ ಚಲನಚಿತ್ರದಲ್ಲಿ ಸಾಮಾನ್ಯ ಚಲನಚಿತ್ರಗಳಲ್ಲಿರುವಂತೆ ಕೆಲವು ಅತಿಭಾವುಕ ಸನ್ನಿವೇಶಗಳಿವೆ. ಆದರೂ ವರ್ತಮಾನದ ಒಂದು ಸಂಕೀರ್ಣ, ಧ್ರುವೀಕರಣದ ವಿಷಯವನ್ನು ವಿಡಂಬನಾತ್ಮಕವಾಗಿ ಪ್ರಸ್ತುತಪಡಿಸಿರುವ ನಿರ್ದೇಶಕರ ಆಶಯ ವೀಕ್ಷಕರನ್ನು ತಲುಪುತ್ತದೆ.