ಹೊಸ ತಲೆಮಾರಿನ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ಇಬ್ಬರು ಪ್ರತಿಭಾವಂತರು ಹೇಮಂತ್‌ ರಾವ್‌ ಮತ್ತು ಜನಾರ್ಧನ ಚಿಕ್ಕಣ್ಣ. ಇವರ ಕಾಂಬಿನೇಷನ್‌ನಲ್ಲಿ ‘ಅಜ್ಞಾತವಾಸಿ’ ಸಿನಿಮಾ ಸೆಟ್ಟೇರಿದೆ. ಇದು ನೈಜ ಘಟನೆಯೊಂದನ್ನು ಆಧರಿಸಿದ ಥ್ರಿಲ್ಲರ್‌.

“ನನ್ನ ಗುರುಗಳಾದ ಕೃಷ್ಣರಾಜ್ ಕತೆ ಬರೆದಿದ್ದಾರೆ. 1997ರಲ್ಲಿ ಮಲೆನಾಡಿನಲ್ಲಿ ನಡೆದ ಆಕಸ್ಮಿವೊಂದನ್ನು ಆಧರಿಸಿ ಕತೆ ರಚಿಸಲಾಗಿದೆ. ನನಗೆ ತಿಳಿದ ಹಾಗೆ ಕನ್ನಡದಲ್ಲಿ ಇದೊಂದು ವಿಶಿಷ್ಟ ಮರ್ಡರ್‌ ಮಿಸ್ಟರಿ ಆಗಲಿದೆ. ಕತೆ ಹೇಳಿದಾಕ್ಷಣ ಸಿನಿಮಾ ನಿರ್ಮಿಸಲು ಹೇಮಂತ್‌ ರಾವ್‌ ಮುಂದಾದರು. ಚಿತ್ರದಲ್ಲಿ ರಂಗಾಯಣ ರಘು ಸರ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸಿದ್ದು ಮೂಲಿಮನಿ, ಪಾವನ ಗೌಡ ಪ್ರಮುಖ ಪಾತ್ರಗಳಲ್ಲಿರುತ್ತಾರೆ” ಎಂದರು ಜನಾರ್ಧನ್‌ ಚಿಕ್ಕಣ್ಣ. ಹೇಮಂತ ರಾವ್‌ ನಿರ್ಮಾಣದಲ್ಲಿ ಅವರು ನಿರ್ದೇಶಿಸುತ್ತಿರುವ ‘ಅಜ್ಞಾತವಾಸಿ’ ಸಿನಿಮಾ ಕುರಿತ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾ ಖ್ಯಾತಿಯ ಹೇಮಂತ್‌ ರಾವ್‌ ಅವರ ಮೇಲೆ ಚಿತ್ರನಿರ್ಮಾಣದ ಜವಾಬ್ದಾರಿ ಇದೆ. “ನಿರ್ದೇಶಕರು ಹೇಳಿದ ಕತೆ ಇಷ್ಟವಾಯಿತು. ರಂಗಾಯಣ ರಘು ಅವರ ಅಭಿನಯವನ್ನು ನೋಡಲು ನಾನು ನಿರ್ಮಾಪಕನಿಗಿಂತ ಹೆಚ್ಚಾಗಿ ಅಭಿಮಾನಿಯಾಗಿ ಕಾಯುತ್ತಿದ್ದೇನೆ.
‘ಕವಲುದಾರಿ’ ಸಿನಿಮಾ ಸಂದರ್ಭದಲ್ಲಿ ಪುನೀತ್ ರಾಜಕುಮಾರ್‌ ಅವರು ರಂಗಾಯಣ ರಘು ಬಗ್ಗೆ ಹೇಳಿದ ಮಾತು ಇನ್ನೂ ಕಿವಿಯಲ್ಲೇ ಇದೆ.‌ ಈ ಚಿತ್ರ ನಿರ್ಮಾಣಕ್ಕೆ ಅವರೆ ಸ್ಪೂರ್ತಿ” ಎಂದರು ಹೇಮಂತ್‌ ರಾವ್‌.

ಚಿತ್ರಕ್ಕೆ ಅದ್ವೈತ ಛಾಯಾಗ್ರಹಕರಾಗಿ, ಚರಣ್ ರಾಜ್ ಸಂಗೀತ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ರಂಗಾಯಣ ರಘು ಅವರು ಇಲ್ಲಿ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಪಾವನ ಗೌಡ , ಸಿದ್ದು ಮೂಲಿಮನಿ ಅವರಿಗೆ ಪ್ರಮುಖ ಪಾತ್ರಗಳಿವೆ. ರಂಗಾಯಣ ರಘು ಅವರ ವೃತ್ತಿ ಬದುಕಿನ ಪ್ರಮುಖ ಚಿತ್ರವಾಗಿ ಇದು ದಾಖಲಾಗಲಿದೆ ಎನ್ನುವ ಸೂಚನೆ ಸಿಗುತ್ತದೆ. “ನಾನು ಟಿವಿ ಜ್ಯೋತಿಷಿಗಳಿಗಿಂತ ಹೆಚ್ಚಾಗಿ ಜನಾರ್ದನ ಚಿಕ್ಕಣ್ಣ ಅವರನ್ನು ನಂಬುತ್ತೇನೆ. ಏಕೆಂದರೆ “ಗುಲ್ಟು” ಚಿತ್ರದಲ್ಲಿ ಅವರು ಹೇಳಿದ್ದ ಒಂದು ಹಗರಣದ ವಿಷಯ ನಂತರ ನಿಜವಾಯಿತು. ಹೇಮಂತ್ ರಾವ್ ಕೂಡ ಹಾಗೆ ಈ ಯುವ ನಿರ್ದೇಶಕರ ಯೋಚನಾಶೈಲಿಯೇ ಬೇರೆ. ನನಗೆ ಉತ್ತಮ ಪಾತ್ರ ನೀಡಿದ್ದಾರೆ‌. ಇಡೀತಂಡಕ್ಕೆ ಒಳ್ಳೆಯದಾಗಲಿ” ಎಂದು ಹಾರೈಸಿದರು.

LEAVE A REPLY

Connect with

Please enter your comment!
Please enter your name here