ಖ್ಯಾತ ಸಂಗೀತ ಸಂಯೋಜಕ ರವಿ ಬಸ್ರೂರು ನಿರ್ದೇಶನದ ‘ವೀರ ಚಂದ್ರಹಾಸ’ ಸಿನಿಮಾ ಮುಂದಿನ ವಾರ ಏಪ್ರಿಲ್ 18ರಂದು ತೆರೆಗೆ ಬರುತ್ತಿದೆ. ಇಂದು (ಮಾರ್ಚ್ 12) ಸಂಜೆ ನಟ ಸುದೀಪ್ ಅವರು ಈ ಸಿನಿಮಾದ ಮೇಕಿಂಗ್ ವೀಡಿಯೋ ಬಿಡುಗಡೆ ಮಾಡುತ್ತಿದ್ದಾರೆ.
‘KGF’ ಸರಣಿ ಸಿನಿಮಾಗಳ ಖ್ಯಾತಿಯ ರವಿ ಬಸ್ರೂರು ನಿರ್ದೇಶನದ ‘ವೀರ ಚಂದ್ರಹಾಸ’ ಯಕ್ಷಗಾನ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇಂದು ಸಂಜೆ ನಟ ಸುದೀಪ್ ಚಿತ್ರದ ಮೇಕಿಂಗ್ ವೀಡಿಯೋ ರಿಲೀಸ್ ಮಾಡಲಿದ್ದಾರೆ. 2 ಗಂಟೆ 36 ನಿಮಿಷ ಅವಧಿಯ ಈ ಚಿತ್ರದಲ್ಲಿ 60ಕ್ಕೂ ಹೆಚ್ಚು ಯಕ್ಷಗೀತೆಗಳನ್ನು ಬಳಕೆ ಮಾಡಿರುವುದೊಂದು ದಾಖಲೆ. ನಟ ಶಿವರಾಜಕುಮಾರ್ ಈ ಸಿನಿಮಾದ ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಎಸ್ ಎಸ್ ರಾಜಕುಮಾರ್ ನಿರ್ಮಿಸಿರುವ ಈ ಚಿತ್ರವನ್ನು ಹೊಂಬಾಳೆ ಫಿಲಂಸ್ ಅರ್ಪಿಸುತ್ತಿದೆ.
‘ಕುಂದಾಪುರದ ಸಂಸ್ಕೃತಿ, ಭಾಷೆ, ಅಲ್ಲಿನ ಸೊಗಡನ್ನು ನಾಡಿಗೆ ಪರಿಚಯಿಸುವುದು ನನ್ನ ಉದ್ದೇಶ. ಯಕ್ಷಗಾನವನ್ನು ವಿಶ್ವಮಾನ್ಯ ಮಾಡಬೇಕೆನ್ನುವುದು ನನ್ನ ಬಹುವರ್ಷಗಳ ಕನಸು. ಈ ಹಿನ್ನೆಲೆಯಲ್ಲಿ ಈ ಯಕ್ಷ ಸಿನಿಮಾ ತಯಾರಾಗಿದೆ. ವೀರ ಚಂದ್ರಹಾಸ ಪ್ರಸಂಗವೇ ಚಿತ್ರವಾಗಿದೆ. ಈ ಪ್ರಸಂಗದ ಹೊರತಾದ ಮಾತುಗಳು, ಹಾಡುಗಳು ಚಿತ್ರದಲ್ಲಿ ಇರಲಿವೆ’ ಎನ್ನುತ್ತಾರೆ.
ಚಿತ್ರದ ಎಲ್ಲಾ ಪಾತ್ರಗಳನ್ನು ಯಕ್ಷಗಾನ ಕಲಾವಿದರೇ ನಿರ್ವಹಿಸಿದ್ದಾರೆ. ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ಶಿವರಾಜಕುಮಾರ್ ಅವರಿಗೆ ಕುಣಿತ ಹೆಚ್ಚು ಇಲ್ಲ. ಮಾತಿನ ಭಾಗವೇ ಹೆಚ್ಚಾಗಿದೆ ಎನ್ನಲಾಗಿದೆ. ಚಂದನ್ ಶೆಟ್ಟಿ, ಗರುಡ ರಾಮ್, ಪುನೀತ್ ಮೊದಲಾದ ಸಿನಿಮಾ ಕಲಾವಿದರು ಯಕ್ಷಗಾನದ ಪಾತ್ರಧಾರಿಗಳಾಗಿಯೇ ಕಾಣಿಸಿಕೊಂಡಿದ್ದಾರೆ. ಹಿನ್ನೆಲೆ ಸಂಗೀತದಲ್ಲಿ 600ಕ್ಕೂ ಹೆಚ್ಚು ಟ್ರ್ಯಾಕ್ ಬಳಕೆ ಮಾಡಲಾಗಿದೆ. ಒಟ್ಟು 450ಕ್ಕೂ ಹೆಚ್ಚು ಯಕ್ಷಗಾನ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಬೃಹತ್ ಸೆಟ್‌ಗಳನ್ನು ಹಾಕಿ ಸಹಜ ಬೆಳಕಿನಲ್ಲೇ ಚಿತ್ರಿಸಲಾಗಿದೆ.