ಕನ್ನಡ ಚಿತ್ರನಿರ್ಮಾಪಕ, ವಿತರಕ ಜಾಕ್ ಮಂಜು ಅವರು ಗುಜರಾತಿ ಸಿನಿಮಾದ ಕನ್ನಡ ಅವತರಣಿಕೆಯನ್ನು ರಾಜ್ಯದಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಗುಜರಾತಿ ಕನ್ನಡಕ್ಕೆ ಬರುತ್ತಿರುವುದು ಇದೇ ಮೊದಲು. ವಿಫುಲ್ ಶರ್ಮಾ ನಿರ್ದೇಶನದ ಸಿನಿಮಾ ಜುಲೈ 7ರಂದು ತೆರೆಕಾಣಲಿದೆ.
ಸಮಾನ ಮನಸ್ಕ ಯುವಕ – ಯುವತಿ ಪ್ರೀತಿಸಿ ಮದುವೆಯಾಗುತ್ತಾರೆ. ಮದುವೆ ನಂತರ ಮನೆ ಅಳಿಯನಾಗಿ ಹೋಗುವ ನಾಯಕನ ಕತೆ ‘ರಾಯರು ಬಂದರು ಮಾವನ ಮನೆಗೆ’ ಚಿತ್ರದ ಕಥಾವಸ್ತು. ಮೂಲ ಗುಜರಾತಿ ಸಿನಿಮಾ ‘ವರ ಪಧಾರವೋ ಸಾವಧಾನ್’ ಕನ್ನಡ ಅವತರಣಿಕೆ ಇದು. ಈ ಹಿಂದೆ ‘ರತ್ನಪುರ’, ‘ಜೀವಿ ಲೇ ಜಿಂದಗಿ’ ಹಿಟ್ ಚಿತ್ರ ಕೊಟ್ಟಿರುವ ವಿಫುಲ್ ಶರ್ಮಾ ನಿರ್ದೇಶನದ ಸಿನಿಮಾ. ಮೊದಲ ಬಾರಿ ಗುಜರಾತಿ ಚಿತ್ರವೊಂದನ್ನು ಕನ್ನಡಕ್ಕೆ ತರುತ್ತಿದ್ದಾರೆ ನಿರ್ಮಾಪಕ ಹಾಗೂ ವಿತರಕ ಜಾಕ್ ಮಂಜು. ಅವರ ಶಾಲಿನಿ ಆರ್ಟ್ಸ್ ಬ್ಯಾನರ್ನಡಿ ಚಿತ್ರ ಬಿಡುಗಡೆಯಾಗುತ್ತಿದೆ. ಕನ್ನಡ ಅವತರಣಿಕೆಯ ಟ್ರೈಲರ್ ಲಾಂಚ್ ಆಗಿದ್ದು, ಜುಲೈ 7ರಂದು ಸಿನಿಮಾ ತೆರೆಕಾಣಲಿದೆ.
ವಿತರಕ ಜಾಕ್ ಮಂಜು, ‘ನಾವು ಕನ್ನಡ ಸಿನಿಮಾಗಳನ್ನು ಮಾಡಿ ಅನ್ಯ ಭಾಷೆಗಳಿಗೆ ಡಬ್ ಮಾಡಿ ಅಲ್ಲಿ ಹೋಗಿ ರಿಲೀಸ್ ಮಾಡಿದ್ದೇವೆ. ಬಹಳಷ್ಟು ಸಿನಿಮಾಗಳು ಗೆದ್ದಿವೆ. ಕಳೆದ ನಾಲ್ಕೈದು ವರ್ಷಗಳಿಂದ ಇದು ನಡೆಯುತ್ತಿದೆ. ಅದೇ ರೀತಿಯಾಗಿ ಒಂದು ಗುಜರಾತಿ ಸಿನಿಮಾವನ್ನು ಕನ್ನಡದಲ್ಲಿ ಡಬ್ ಮಾಡಿ ಇಲ್ಲಿ ರಿಲೀಸ್ ಮಾಡಲು ಬಂದಿದ್ದಾರೆ. ಅವರಿಗೂ ಅದೇ ರೀತಿ ಸ್ವಾಗತವನ್ನು ಕನ್ನಡಿಗರು ಕೊಡಬೇಕು. ಈ ಒಂದು ಸಿನಿಮಾ ಸಕ್ಸಸ್ ಆಗುವುದರಿಂದ ಬಹಳಷ್ಟು ಜನ ಇದೇ ರೀತಿ ಡಬ್ ಮಾಡಿ ನಮ್ಮ ಕರ್ನಾಟಕದಲ್ಲಿ ರಿಲೀಸ್ ಮಾಡುತ್ತಾರೆ. ಕನ್ನಡಿಗರಿಗೆ ನೋಡುವ ಅವಕಾಶ ಸಿಗುತ್ತದೆ. ಥಿಯೇಟರ್ಗಳು ಮುಚ್ಚುವಂಥ ಪರಿಸ್ಥಿತಿ ತಲೆದೋರಿದ್ದು, ಉತ್ತಮ ಕಂಟೆಂಟ್ನ ಸಿನಿಮಾಗಳು ಕನ್ನಡದಲ್ಲಿ ತೆರೆಕಾಣಬೇಕಿದೆ’ ಎನ್ನುತ್ತಾರೆ. ಶೈಲೇಶ್ ಧಮೇಲಿಯಾ, ಅನಿಲ್ ಸಂಘವಿ, ಭರತ್ ಮಿಸ್ತ್ರೀ ನಿರ್ಮಾಣದ ಚಿತ್ರದ ಪ್ರಮುಖ ಪಾತ್ರಗಳಲ್ಲಿ ತುಷಾರ್ ಸಾಧು, ಕಿಂಜಲ್ ರಾಜಪ್ರಿಯಾ, ರಾಗಿ ಜಾನಿ ಮತ್ತು ಕಾಮಿನಿ ಪಾಂಚಾಲ್ ನಟಿಸಿದ್ದಾರೆ.