ಕ್ರೇಜಿಸ್ಟಾರ್‌ ರವಿಚಂದ್ರನ್‌ ವಕೀಲರಾಗಿ ಕಾಣಿಸಿಕೊಂಡಿರುವ ಸಿನಿಮಾ ‘ದ ಜಡ್ಜ್ ಮೆಂಟ್’ ಚಿತ್ರೀಕರಣ ಮುಕ್ತಾಯವಾಗಿದೆ. ಗುರುರಾಜ ಕುಲಕರ್ಣಿ ನಿರ್ದೇಶನದ ಈ ಸಿನಿಮಾವನ್ನು ರಿಲಯನ್ಸ್ ಎಂಟರ್‌ಟೇನ್‌ಮೆಂಟ್‌ ಸಂಸ್ಥೆ ವಿತರಣೆ ಮಾಡಲಿದೆ.

ನಟ ರವಿಚಂದ್ರನ್‌ ಒಂದರ ಹಿಂದೆ ಒಂದರಂತೆ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ‘ದೃಶ್ಯ’ ಸರಣಿ ಸಿನಿಮಾದಲ್ಲಿ ಅಪ್ಪನಾಗಿ ನಟಿಸಿ ಸೈ ಎನಿಸಿಕೊಂಡಿದ್ದ ರವಿಮಾಮ ಈಗ ವಕೀಲನಾಗಿ ಕಾಣಿಸಿಕೊಳ್ಳಲಿದ್ದಾರೆ. ಜಿ9 ಕಮ್ಯುನಿಕೇಷನ್‌ ಮೀಡಿಯಾ ಅಂಡ್‌ ಎಂಟರ್‌ಟೇನ್‌ಮೆಂಟ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ‘ದ ಜಡ್ಜ್‌ಮೆಂಟ್‌’ ಚಿತ್ರದಲ್ಲಿ ಕಪ್ಪು ಕೋಟ್‌ ಧರಿಸಿ ಲಾಯರ್‌ ಆಗಿದ್ದಾರೆ. ಅದ್ಧೂರಿ ತಾರಾಬಳಗ ಇರುವ ಈ ಸಿನಿಮಾದ ವಿತರಣೆ ಹಕ್ಕು ಭಾರತದ ಹೆಸರಾಂತ ರಿಲಯನ್ಸ್ ಎಂಟರ್‌ಟೇನ್‌ಮೆಂಟ್‌ ಸಂಸ್ಥೆ ಪಡೆದುಕೊಂಡಿದೆ. ಚಿತ್ರದ ಟೀಸರ್ ಸಹ ಬಿಡುಗಡೆಯಾಗಿದ್ದು ಕುತೂಹಲ ಮೂಡಿಸಿದೆ.

ನಿರ್ಮಾಪಕ ಹಾಗೂ ನಿರ್ದೇಶಕ ಗುರುರಾಜ ಕುಲಕರ್ಣಿ ಮಾತನಾಡಿ, ‘ಡಾ ರಾಜಕುಮಾರ್ ಅವರ ಹುಟ್ಟುಹಬ್ಬದ ದಿನದಂದು ನಮ್ಮ ಚಿತ್ರದ ಚಿತ್ರೀಕರಣ ಮುಕ್ತಾಯ ಮಾಡಿ ಕುಂಬಳಕಾಯಿ ಒಡೆಯಲಾಯಿತು. ಟೀಸರ್ ಸಹ ಬಿಡುಗಡೆಯಾಗಿದ್ದು, ಪ್ರಶಂಸೆ ವ್ಯಕ್ತವಾಗುತ್ತಿದೆ. ಇದರ ಜೊತೆಗೆ ಮತ್ತೊಂದು ಖುಷಿಯ ವಿಚಾರವೆಂದರೆ ನಮ್ಮ ಚಿತ್ರದ ವಿತರಣೆ ಹಕ್ಕನ್ನು ಪ್ರತಿಷ್ಠಿತ ರಿಲಯನ್ಸ್ ಎಂಟರ್‌ಟೇನ್‌ಮೆಂಟ್‌ ಸಂಸ್ಥೆ ಪಡೆದುಕೊಂಡಿದೆ. ಈ ಹೆಸರಾಂತ ಸಂಸ್ಥೆಯ ಮೂಲಕ ಚಿತ್ರ ಬಿಡುಗಡೆಯಾಗಲಿದೆ. ಈ ಚಿತ್ರದ ವಿತರಣೆ ಅಷ್ಟೇ ಅಲ್ಲದೆ, ಮುಂದೆ ನಮ್ಮ ಸಂಸ್ಥೆಯಿಂದ ನಿರ್ಮಾಣವಾಗುವ ಚಿತ್ರಗಳ ನಿರ್ಮಾಣದಲ್ಲೂ ಸಹಯೋಗ ನೀಡುವುದಾಗಿ ರಿಲಯನ್ಸ್ ಎಂಟರ್‌ಟೇನ್‌ಮೆಂಟ್‌ ಸಂಸ್ಥೆ ತಿಳಿಸಿದೆ. ಸಾಕಷ್ಟು ಜನಪ್ರಿಯ ಚಿತ್ರಗಳನ್ನು ರಿಲಯನ್ಸ್ ಎಂಟರ್‌ಟೇನ್‌ಮೆಂಟ್‌ ಸಂಸ್ಥೆ ವಿತರಣೆ ಮಾಡಿದೆ. ಆ ಪೈಕಿ 19 ಚಿತ್ರಗಳು ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾಗಿರುವ ಚಿತ್ರಗಳಾಗಿದೆ. ಇಂತಹ ಸಂಸ್ಥೆ ನಮ್ಮ ಚಿತ್ರವನ್ನು ವಿತರಣೆ ಮಾಡುತ್ತಿರುವುದು ನಿಜಕ್ಕೂ ಹೆಮ್ಮೆ. ಕೋರ್ಟ್ ಡ್ರಾಮ ಜಾನರ್‌ನ ಈ ಚಿತ್ರವನ್ನು ಸದ್ಯದಲ್ಲೇ ತೆರೆಗೆ ತರುವುದಾಗಿ’ ತಿಳಿಸಿದ್ದಾರೆ.

ಪಿ ಕೆ ಹೆಚ್ ದಾಸ್ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಹಾಗೂ ಕೆಂಪರಾಜ್ ಅವರ ಸಂಕಲನ ಈ ಚಿತ್ರಕ್ಕಿದೆ. ಕ್ರೇಜಿಸ್ಟಾರ್ ರವಿಚಂದ್ರನ್, ದಿಗಂತ್ , ಧನ್ಯ ರಾಮಕುಮಾರ್, ಮೇಘನಾ ಗಾಂವ್ಕರ್, ಲಕ್ಷ್ಮೀ ಗೋಪಾಲಸ್ವಾಮಿ, ನಾಗಾಭರಣ, ಪ್ರಕಾಶ್ ಬೆಳವಾಡಿ, ರಂಗಾಯಣ ರಘು, ರವಿಶಂಕರ್ ಗೌಡ, ಸುಜಯ್ ಶಾಸ್ತ್ರಿ ಕೃಷ್ಣ ಹೆಬ್ಬಾಳೆ, ರೇಖಾ ಕೂಡ್ಲಿಗಿ, ನವಿಲ ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

LEAVE A REPLY

Connect with

Please enter your comment!
Please enter your name here