ಕನ್ನಡ ಚಿತ್ರರಂಗದಲ್ಲಿ ನಾಲ್ಕು ದಶಕಗಳ ಕಾಲ ಸ್ಥಿರಚಿತ್ರ ಛಾಯಾಗ್ರಾಹಕರಾಗಿ ದುಡಿದವರು ಡಿ.ಸಿ.ನಾಗೇಶ್‌. ಎಲ್ಲರಿಗೂ ಬೇಕಾಗಿದ್ದ ಸಹೃದಯ ವ್ಯಕ್ತಿ. ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಿನಿಮಾಗೆ ಅವರ ಸೇವೆ ಸಂದಿದೆ. ಅವರು ಅಗಲಿ ಈ ಹೊತ್ತಿಗೆ ಒಂದು ವರ್ಷ. ನಾಗೇಶ್‌ರ ನೆನಪಿಗೆ ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘ ಪ್ರಕಟಿಸುತ್ತಿರುವ ‘ಜೀವ ಬಿಂಬ’ ಪುಸ್ತಕ ನಾಳೆ (ಫೆಬ್ರವರಿ 5) ಬಿಡುಗಡೆಯಾಗುತ್ತಿದೆ.

ದೊಡ್ಡಬಳ್ಳಾಪುರ ಚಂದ್ರಶೇಖರ್‌ ನಾಗೇಶ್‌ (ಡಿ.ಸಿ.ನಾಗೇಶ್‌) ಕನ್ನಡ ಚಿತ್ರರಂಗಕ್ಕೆ ಚಿರಪರಿಚಿತ ಹೆಸರು. ಇಂಜಿನಿಯರ್‌ ಪದವಿ ಪಡೆದರೂ ಅವರು ಆಸಕ್ತಿಯಿಂದ ಆಯ್ಕೆಮಾಡಿಕೊಂಡದ್ದು ಫೋಟೊಗ್ರಫಿಯನ್ನು. ನಾಲ್ಕು ದಶಕಗಳ ಕಾಲ ಕ್ಯಾಮರಾ ಹಿಡಿದು ಕನ್ನಡ ನಾಡು – ನುಡಿಯ ಹತ್ತು ಹಲವು ಆಯಾಮಗಳನ್ನು ಸೆರೆಹಿಡಿದರು. ಪ್ರಮುಖವಾಗಿ ಸಿನಿಮಾರಂಗಕ್ಕೆ ಅವರ ಸೇವೆ ಸಂದಿದೆ. ಚಲನಚಿತ್ರ ನಟ – ನಟಿಯರು, ತಂತ್ರಜ್ಞರು ಮಾತ್ರವಲ್ಲದೆ ಕನ್ನಡ ಸಾಹಿತ್ಯ, ರಂಗಭೂಮಿ, ಸಂಗೀತ ಕ್ಷೇತ್ರಗಳ ಗಣ್ಯರನ್ನು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ರಾಜ್ಯದ ಪ್ರಮುಖ ದಿನಪತ್ರಿಕೆಗಳು, ಮ್ಯಾಗಜಿನ್‌ಗಳಲ್ಲಿ ಅವರು ಕ್ಲಿಕ್ಕಿಸಿದ ಫೋಟೊಗಳು ಬಳಕೆಯಾಗಿವೆ. ದೊಡ್ಡಹುಲ್ಲೂರು ರುಕ್ಕೋಜಿ ಅವರು ರಚಿಸಿರುವ ‘ಡಾ.ರಾಜಕುಮಾರ್‌ ಸಮಗ್ರ ಚರಿತ್ರೆ ಜೀವನ – ಚಲನಚಿತ್ರ ಪುಸ್ತಕಕ್ಕೆ ಹದಿನೈದು ವರ್ಷಗಳು ದುಡಿದಿದ್ದಾರೆ ನಾಗೇಶ್‌.

ಮದರಾಸಿನಿಂದ ಪ್ರಕಟವಾಗುತ್ತಿದ್ದ ‘ವಿಜಯಚಿತ್ರ’ದ ಮೂಲಕ ವೃತ್ತಿ ಆರಂಭಿಸಿದ ಡಿ.ಸಿ.ನಾಗೇಶ್‌ ರೂಪತಾರಾ, ಸುಧಾ, ತರಂಗ, ಕರ್ಮವೀರ, ಡೆಕ್ಕನ್‌ ಹೆರಾಲ್ಡ್‌, ಮಯೂರ, ಉದಯವಾಣಿ… ಹೀಗೆ ಹಲವಾರು ಪತ್ರಿಕೆಗಳಿಗಾಗಿ ದುಡಿದಿದ್ದಾರೆ. ಸಾಹಿತ್ಯ ಸಮ್ಮೇಳನ, ಚಲನಚಿತ್ರ ಉತ್ಸವ, ಜಾನಪದ ಮೇಳ, ವಿಜ್ಞಾನ ಉತ್ಸವ, ಕ್ರೀಡಾ ಉತ್ಸವ, ವಸ್ತುಪ್ರದರ್ಶನ, ವಿಶ್ವಸಮ್ಮೇಳನಗಳ ಅಪೂರ್ವ ಕ್ಷಣಗಳನ್ನು ತಮ್ಮ ಒಳಗಣ್ಣಿನಿಂದ ದಾಖಲು ಮಾಡಿರುವುದು ನಾಗೇಶ್‌ರ ಹೆಗ್ಗಳಿಕೆ. ಕರ್ನಾಟಕ ಚಲನಚಿತ್ರ ಅಕಾಡೆಮಿಯ ‘ಬೆಳ್ಳಿಹೆಜ್ಜೆ’ ಕಾರ್ಯಕ್ರಮದ ಯಶಸ್ಸಿನಲ್ಲಿ ಅವರ ಪಾತ್ರ ದೊಡ್ಡದು. ಹೀಗೆ, ಕನ್ನಡ ಸಿನಿಮಾರಂಗದಲ್ಲಿ ಹಾಸುಹೊಕ್ಕಾಗಿದ್ದ ಡಿ.ಸಿ.ನಾಗೇಶ್‌ ಅಗಲಿ ಈ ಹೊತ್ತಿಗೆ ಒಂದು ವರ್ಷ. ಅವರ ನೆನಪಿಗೆ ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘ ‘ಜೀವ ಬಿಂಬ’ ಪುಸ್ತಕ ಪ್ರಕಟಿಸಿದೆ. ನಾಗೇಶ್‌ರಿಗೆ ಅತ್ಯಾಪ್ತರಾಗಿದ್ದ ಸಿನಿಮಾ ಪತ್ರಕರ್ತ ಚೇತನ್‌ ನಾಡಿಗೇರ್‌ ಈ ಕೃತಿಯನ್ನು ಸಂಪಾದಿಸಿದ್ದಾರೆ. ನಾಳೆ (ಫೆಬ್ರವರಿ 5) ‘ಜೀವ ಬಿಂಬ’ ಬಿಡುಗಡೆಯಾಗುತ್ತಿದೆ. ಬೆಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಬೆಳಗ್ಗೆ 10.30ರಿಂದ ಕಾರ್ಯಕ್ರಮ.

ಡಿ.ಸಿ.ನಾಗೇಶ್‌ ಅವರ ಕುರಿತು ಹಿರಿಯ ಪತ್ರಕರ್ತರು, ಲೇಖಕರಾದ ಡಾ.ವಿಜಯ ಮತ್ತು ದೊಡ್ಡಹೊಲ್ಲೂರು ರುಕ್ಕೋಜಿ ಮತ್ತು ನಟ ಸುದೀಪ್‌ ಅವರು ಪುಸ್ತಕಕ್ಕೆ ಕೊಟ್ಟ ಲೇಖನಗಳ ಆಯ್ದ ಟಿಪ್ಪಣಿ ಇಲ್ಲಿದೆ…

ನಿಧಾನಿ, ನಿರ್ಮೋಹಿ, ಸ್ನೇಹಮಯಿ, ಇತರರಿಗಾಗಿ ತನ್ನನ್ನೇ ಕೊಟ್ಟುಕೊಳ್ಳುತ್ತಿದ್ದ ಸದ್ಗುಣಿ, ಆಪ್ತರಿಗಾಗಿ ಸರ್ವಸ್ವವನ್ನೂ ಕೊಟ್ಟುಬಿಡುವ ಫಕೀರ ನಮ್ಮ ನಾಗೇಶ್! ಅವರಿಗವರೇ ಸಾಟಿ. ಅವರು ಇಲ್ಲೇ ಎಲ್ಲೋ ಸದ್ದಿಲ್ಲದೇ ಹಣ್ಣು ಹೆಚ್ಚುತ್ತಲೋ, ಫೋಟೋ ಕ್ಲಿಕ್ಕಿಸುವ ಮೊದಲಿನ ಫೋಕಸ್‌ನಲ್ಲಿ ತೊಡಗಿಯೋ ಇದ್ದಾರೆನ್ನಿಸುತ್ತದೆ. – ಡಾ.ವಿಜಯ

ನಾಗೇಶ್ ಬರೀ ಒಬ್ಬ ಒಳ್ಳೆಯ ಫೋಟೋಗ್ರಾಫರ್ ಅಷ್ಟೇ ಅಲ್ಲ, ಸದಭಿರುಚಿಯ ಫೋಟೋಗ್ರಾಫರ್ ಆಗಿದ್ದರು. ತಾಂತ್ರಿಕವಾಗಿ ಸಾಕಷ್ಟು ಅಪ್ಡೇಟ್ ಆಗಿದ್ದರು. ಹೊಸ ತಂತ್ರಜ್ಞಾನವನ್ನು ಅರಿತುಕೊಂಡಿದ್ದರು. ಹೊಸಬರೊಂದಿಗೆ ಸ್ಪರ್ಧಿಸುತ್ತಿದ್ದರು. ಅವರೊಬ್ಬ ಸಮಾಜಮುಖಿ. ಸದಾ ಒಂದಿಲ್ಲೊಂದು ಕೆಲಸ ಮತ್ತು ಜವಾಬ್ದಾರಿಯನ್ನು ವಹಿಸಿಕೊಂಡು ಅದನ್ನು ಪೂರೈಸುತ್ತಿದ್ದರು. – ಟಿ.ಎಸ್‌.ನಾಗಾಭರಣ

ಆರಂಭದ ದಿನಗಳಲ್ಲಿ ನನ್ನ ಫೋಟೋಗಳನ್ನು ಕ್ಲಿಕ್ಕಿಸಿದ ಛಾಯಾಗ್ರಾಹಕರಲ್ಲಿ ನಾಗೇಶ್‌ ಪ್ರಮುಖರು. ಹೊಸದರಲ್ಲಿ ನನಗೆ ಕ್ಯಾಮರಾಗೆ ಪೋಸ್ ಕೊಡುವುದಕ್ಕೆ ಬರುತ್ತಿರಲಿಲ್ಲ. ನನ್ನ ಎಕ್ಸ್‌ಪ್ರೆಷನ್ಸ್‌ ಕೂಡ ಚೆನ್ನಾಗಿರುತ್ತಿರಲಿಲ್ಲ. ಆದರೂ ನನ್ನನ್ನು ಚೆನ್ನಾಗಿ ಕಾಣುವಂತೆ ಮಾಡಲು ಅವರ ಕೊಡುಗೆ ಜಾಸ್ತಿ ಇದೆ. ಅವರ ಗೈರುಹಾಜರಿ ಇಂದಿಗೂ ನಮ್ಮ ಪ್ರೆಸ್‌ಮೀಟ್‌ಗಳಲ್ಲಿ ಎದ್ದು ಕಾಣುತ್ತಿದೆ. – ಕಿಚ್ಚ ಸುದೀಪ್‌

LEAVE A REPLY

Connect with

Please enter your comment!
Please enter your name here