ಭಾರತೀಯ ಸಿನಿಮಾರಂಗದ ಮೇರು ಹಿನ್ನೆಲೆ ಗಾಯಕಿ ವಾಣಿ ಜಯರಾಂ (78 ವರ್ಷ) ಅಗಲಿದ್ದಾರೆ. ಐದು ದಶಕಗಳ ವೃತ್ತಿ ಬದುಕಿನಲ್ಲಿ ಅವರು ವಿವಿಧ ಪ್ರಾದೇಶಿಕ ಭಾಷೆಗಳ 10 ಸಾವಿರಕ್ಕೂ ಹೆಚ್ಚು ಗೀತೆಗಳಿಗೆ ದನಿಯಾಗಿದ್ದಾರೆ. ಈ ಪಟ್ಟಿಯಲ್ಲಿ ಕನ್ನಡ ಹಾಡುಗಳ ಸಂಖ್ಯೆ ಸಾವಿರ ದಾಟುತ್ತದೆ. ಕಳೆದ ತಿಂಗಳು ಗಣರಾಜ್ಯೋತ್ಸವದಂದು ಅವರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಣೆಯಾಗಿತ್ತು.

ದೇಶ ಕಂಡ ಅಪರೂಪದ ಗಾಯಕಿ ವಾಣಿ ಜಯರಾಂ. ಅವರ ನಿಜವಾದ ಹೆಸರು ಕಲೈವಾಣಿ. ಅವರು ಒಂದು ರೀತಿಯಲ್ಲಿ ಚೈಲ್ಡ್ ವಂಡರ್ ಅನ್ನಿಸಿಕೊಂಡವರು. ಎರಡು ವರ್ಷದ ಪುಟಾಣಿಯಾಗಿದ್ದಾಗಲೇ ಸಂಗೀತದತ್ತ ಆಸಕ್ತಿ. ಏಳನೇ ವಯಸ್ಸಿಗೆ ದೇಶಿಕಾಚಾರ್ ಅವರ ಕೃತಿಗಳ ಸ್ಪುಟವಾದ ಗಾಯನ, ಎಂಟನೇ ವರ್ಷಕ್ಕೆ ಆಕಾಶವಾಣಿಯಲ್ಲಿ ಕಾರ್ಯಕ್ರಮ. ಹತ್ತನೇ ವಯಸ್ಸಿಗೆ ಮೂರು ಗಂಟೆಗಳ ಸಂಗೀತ ಕಚೇರಿ! ಹೀಗೆ ಅವರ ಬಾಲ್ಯದ ಸಾಧನೆಗಳ ಪಟ್ಟಿ ಕೂಡ ದೊಡ್ಡದು.

ವಾಣಿ ಜಯರಾಂ ಕಡಲೂರು ಶ್ರೀನಿವಾಸ ಅಯ್ಯಂಗಾರ್, ಟಿ.ಆರ್.ಬಾಲಸುಬ್ರಹ್ಮಣ್ಯಂ, ಆರ್.ಎನ್.ಮಣಿ ಅವರಿಂದ ಕರ್ನಾಟಕಿ ಸಂಗೀತದಲ್ಲಿ ಪರಿಣತಿ ಪಡೆದರು. ಓದಿನಲ್ಲಿ ಕೂಡ ಮುಂದಿದ್ದ ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಉದ್ಯೋಗಿಯಾದರು. 1969ರಲ್ಲಿ ಜಯರಾಂ ಅವರನ್ನು ವಿವಾಹವಾಗಿದ್ದು ಅವರ ಜೀವನದ ದೊಡ್ಡ ತಿರುವು. ಸ್ವತಃ ಸಿತಾರ್ ವಾದಕರಾದ ಜಯರಾಂ, ಪತ್ನಿಯ ಪ್ರತಿಭೆಗೆ ಬೆಂಬಲವಾಗಿ ನಿಂತರು. ಉನ್ನತ ಹುದ್ದೆಯಲ್ಲಿದ್ದ ಪತಿ ಮುಂಬೈಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ವಾಣಿಯವರೂ ಮುಂಬೈಗೆ ವರ್ಗಾವಣೆ ಪಡೆದುಕೊಂಡರು. ಇದು ಅವರ ಜೀವನದ ಇನ್ನೊಂದು ತಿರುವಿಗೆ ಕಾರಣವಾಯಿತು.

ಮುಂಬೈನಲ್ಲಿ ಅವರು ‘ಪಾಟಿಯಾಲ ಘರಾಣ’ದ ಸಾಧಕ ಉಸ್ತಾದ್ ಅಬ್ದುಲ್‌ ರೆಹಮಾನ್ ಖಾನ್ ಅವರ ಬಳಿ ಹಿಂದೂಸ್ತಾನಿ ಸಂಗೀತ ಕಲಿತರು. ಈ ಸಂದರ್ಭದಲ್ಲಿಯೇ ಅವರಿಗೆ ವಸಂತ ದೇಸಾಯಿ ಅವರ ಪರಿಚಯ ಆಗಿದ್ದು. ಅವರ ಮೂಲಕ ಕುಮಾರ ಗಂಧರ್ವ ಅವರ ಜೊತೆಗಿನ ‘ಋಣಾನುಬಂಧಚ’ ಆಲ್ಭಂ ಹೊರಗೆ ಬಂದಿತು. ಇದು ಅವರಿಗೆ ಖ್ಯಾತಿ ತಂದುಕೊಟ್ಟಿತು. ಹಾಗೆ ನೋಡಿದರೆ ಆಗ ಅವರಿಗೆ ಚಿತ್ರಗೀತೆಗಳ ಬಗ್ಗೆ ಆಸಕ್ತಿ ಇರಲಿಲ್ಲ. ಪಂಡಿತ್ ರವಿಶಂಕರ್‌ ಸಂಗೀತ ನೀಡಿದ್ದಾರೆ ಎನ್ನುವ ಕಾರಣಕ್ಕೆ ‘ಮೀರಾ’ ಚಿತ್ರಕ್ಕೆ ಹಾಡಿದರು. ಈ ಸಿನಿಮಾದ ಗೀತೆಗಳು ಜನಪ್ರಿಯತೆ ಪಡೆದವು. ‘ಗುಡ್ಡಿ’ ಚಿತ್ರದ ‘ಬೋಲಾರೆ ಪಾಪಿಹರ’ ಗೀತೆ ಅವರನ್ನು ದೇಶದೆಲ್ಲೆಡೆ ಜನಪ್ರಿಯಗೊಳಿಸಿತು. ಅಲ್ಲಿಂದ ಮುಂದೆ ವಾಣಿ ಜಯರಾಂ ಅವರ ಕಂಠಸಿರಿ ಎಂಟು ಭಾಷೆಗಳ ಚಿತ್ರಗೀತೆಗಳಿಗೂ ಸಿಕ್ಕಿತು.

ಕನ್ನಡಕ್ಕೆ ವಾಣಿ ಜಯರಾಂ ಅವರನ್ನು ಕರೆ ತಂದಿದ್ದು ಆರ್.ಎನ್.ಜಯಗೋಪಾಲ್. ಅವರ ನಿರ್ದೇಶನದ ‘ಕೆಸರಿನ ಕಮಲ’ ಚಿತ್ರದಲ್ಲಿ ವಿಜಯಭಾಸ್ಕರ್ ಸಂಗೀತ ನಿರ್ದೇಶನದಲ್ಲಿ ಮೊದಲ ಗೀತೆ ಹಾಡಿದರು. ‘ನಗು ನೀ ನಗು’ ಎಂಬ ಈ ಗೀತೆ ವಿಶಿಷ್ಟವಾಗಿ ಮೂಡಿಬಂದಿತ್ತು. ವಾಣಿ ಜಯರಾಂ ಕನ್ನಡದಲ್ಲಿ ಹಾಡಿರುವ ಕೆಲವು ಗೀತೆಗಳು ಅವರ ವೈವಿಧ್ಯತೆಗೆ ಸಾಕ್ಷಿಯಾಗಿವೆ. ಸವಿ ನೆನಪುಗಳು ಬೇಕು (ಅಪರಿಚಿತ), ದಾರಿ ಕಾಣದಾಗಿದೆ ರಾಘವೇಂದ್ರನೆ (ದೀಪಾ), ಹೋದೆಯಾ ದೂರ ಓ ಜೊತೆಗಾರ (ಅನುಭವ), ಮುತ್ತು ಮಳೆಗಾಗಿ (ಬೆಳುವಲದ ಮಡಿಲಲ್ಲಿ), ಹ್ಯಾಪಿಯಸ್ಟ್ ಮೂಮೆಂಟ್ (ಬಿಳಿ ಹೆಂಡ್ತಿ)… ಒಂದೊಂದೂ ಒಂದೊಂದು ರೀತಿಯಲ್ಲಿ ವಿಶಿಷ್ಟ.

ಮೂರು ರಾಷ್ಟ್ರ ಪ್ರಶಸ್ತಿಗಳನ್ನು (ಅಪೂರ್ವ ರಾಗಂಗಳ್ -1975, ಶಂಕರಾಭರಣಂ -1980, ಸ್ವಾತಿ ಕಿರಣಂ – 1991) ಪಡೆದಿರುವ ವಾಣಿ ಜಯರಾಂ ಚಿತ್ರರಂಗದಲ್ಲಿ ಇದ್ದರೂ ಅದರ ಆಕರ್ಷಣೆಗೆ ಒಳಗಾಗಲಿಲ್ಲ. ಶಾಸ್ತ್ರೀಯ ಸಂಗೀತದ ಸಾಧನೆ ಕೈ ಬಿಡಲಿಲ್ಲ. ಸಂಗೀತದ ಚಿಕಿತ್ಸೆ ಕುರಿತು ಅವರಿಗೆ ವಿಶ್ವಾಸ. ಇದಕ್ಕಾಗಿ ಅನೇಕ ಪ್ರಯೋಗಗಳನ್ನೂ ಮಾಡಿದ್ದಾರೆ. ಚೆನ್ನೈನಲ್ಲಿ ಇದಕ್ಕಾಗಿ ಸಂಶೋಧನಾ ಕೇಂದ್ರವನ್ನೇ ಕಟ್ಟಿದ್ದರು. ಕ್ಯಾನ್ಸರ್ ರೋಗಿಗಳ ಕೊನೆಯ ದಿನಗಳಲ್ಲಿ, ಸಂಗೀತದ ಮೂಲಕ ಅವರ ನೋವನ್ನು ಕಡಿಮೆ ಮಾಡುವ ಪ್ರಯತ್ನವನ್ನು ಅವರು ನಿರಂತರವಾಗಿ ಮಾಡುತ್ತಾ ಬಂದಿದ್ದರು. ಮೇರು ಸಾಧಕಿ ವಾಣಿ ಜಯರಾಂ ಅವರಿಗೆ ಕಳೆದ ತಿಂಗಳು ಗಣರಾಜ್ಯೋತ್ಸವದಂದು ಪದ್ಮಭೂಷಣ ಘೋಷಣೆಯಾಗಿತ್ತು. ಕನ್ನಡ ಚಿತ್ರರಂಗದ ಸಂದರ್ಭದಲ್ಲಿ ಹೇಳುವುದಾದರೆ ವಾಣಿ ಜಯರಾಂ ಅವರು ಅತ್ಯಂತ ಪ್ರಮುಖ ಗಾಯಕಿ. ‘ಈ ಶತಮಾನದ ಮಾದರಿ ಹೆಣ್ಣು’ ಎಂದು ಹಾಡಿದ ವಾಣಿ ಜಯರಾಂ ‘ಭಾವವೆಂಬ ಹೂವು ಅರಳಿ’ ಎಂದು ಹಾಡಿದ್ದರು. ಇವೆರಡೂ ಗೀತೆ ಸದಾ ನನಗೆ ಅವರ ವ್ಯಕ್ತಿತ್ವಕ್ಕೆ ನಿದರ್ಶನವಾಗಿ ಕಾಣುತ್ತದೆ.

Previous articleಲುಂಗಿ ಡ್ಯಾನ್ಸ್‌ನೊಂದಿಗೆ ರಜನಿಗೆ ಸ್ವಾಗತ; ವೈರಲ್‌ ಆದ ವೀಡಿಯೊ!
Next articleಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕ ಡಿ.ಸಿ.ನಾಗೇಶ್‌ ನೆನಪು – ‘ಜೀವ ಬಿಂಬ’

LEAVE A REPLY

Connect with

Please enter your comment!
Please enter your name here