ಹಿರಿಯ ಚಿತ್ರನಿರ್ಮಾಪಕ ಸಾ.ರಾ.ಗೋವಿಂದು ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಮೇ 28ರಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮೇ 28ರಂದು ಚುನಾವಣೆ ನಡೆಯುತ್ತಿದೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದ್ದು, ಇಂದು ಹಿರಿಯ ಚಿತ್ರನಿರ್ಮಾಪಕ ಸಾ.ರಾ.ಗೋವಿಂದು ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. “ಅಧ್ಯಕ್ಷನಾಗಿದ್ದಾಗ ನಾನು ಮಾಡಿದ ಕೆಲಸ ಎಲ್ಲರಿಗೂ ಗೊತ್ತಿದೆ. ಸ್ನೇಹಿತರ ಒತ್ತಾಯದ ಮೇರೆಗೆ ಚುನಾವಣೆಗೆ ನಿಂತಿದ್ದೇನೆ. ಚುನಾವಣೆಯನ್ನು ಸ್ಪರ್ಧಾತ್ಮಕವಾಗಿ ತೆಗೆದುಕೊಳ್ಳೋಣ. ಗೆದ್ದವರು ಕೆಲಸ ಮಾಡೋಣ. ಸೋತವರು ಗೆದ್ದವರಿಗೆ ಬೆನ್ನೆಲುಬಾಗಿ ನಿಲ್ಲೋಣ” ಎಂದರು ಗೋವಿಂದು.
ಸಾ.ರಾ.ಗೋವಿಂದು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ನಾಮಪತ್ರ ಸಲ್ಲಿಸಿದ್ದರೆ, ಅವರ ತಂಡದಲ್ಲಿರುವ ಕೆ.ಎಂ.ವೀರೇಶ್ ನಿರ್ಮಾಪಕರ ವಲಯದ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಕರಿಸುಬ್ಬು (ವಿ.ಸುಬ್ರಮಣಿ) ನಿರ್ಮಾಪಕರ ವಲಯದ ಉಪಾಧ್ಯಕ್ಷ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಿದ್ದಾರೆ. ವಿತರಕರ ವಲಯದ ಉಪಾಧ್ಯಕ್ಷ ಸ್ಥಾನಕ್ಕೆ ಪಿ.ಎಸ್.ಜ್ಞಾನೇಶ್ವರ ಐತಾಳ್, ಪ್ರದರ್ಶಕರ ಉಪಾಧ್ಯಕ್ಷ ಸ್ಥಾನಕ್ಕೆ ಜಿ.ಪಿ.ಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ. ಕೆ.ಸಿ.ಎನ್. ಕುಮಾರ್ (ಎಂ.ಎನ್.ಕುಮಾರ್) ವಿತರಕರ ವಲಯದ ಗೌರವ ಕಾರ್ಯದರ್ಶಿ ಸ್ಥಾನಕ್ಕೆ, ಪ್ರದರ್ಶಕರ ವಲಯದ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಎಲ್.ಸಿ.ಕುಶಾಲ್ ಹಾಗೂ ಗೌರವ ಖಜಾಂಚಿ ಸ್ಥಾನಕ್ಕೆ ಬಿ.ಕೆ.ಜಯಸಿಂಹ ಮುಸರಿ ನಾಮಪತ್ರ ಸಲ್ಲಿಸಿದ್ದಾರೆ. ಮೇ 28ರಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ.