ರಾಜಮೌಳಿ ನಿರ್ದೇಶನದ ‘RRR’ ಸಿನಿಮಾ ಮಾರ್ಚ್‌ 25ರಂದು ತೆರೆಕಾಣುತ್ತಿದ್ದು, ಬೆರಳೆಣಿಕೆಯ ಸ್ಕ್ರೀನ್‌ಗಳಲ್ಲಿ ಕನ್ನಡ ಡಬ್ಬಿಂಗ್‌ ಅವತರಣಿಕೆ ಪ್ರದರ್ಶನಗೊಳ್ಳಲಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಹಲವರು ಟ್ವಿಟರ್‌ನಲ್ಲಿ #boycottRRRinkarnataka ಟ್ರೆಂಡಿಂಗ್‌ ಆರಂಭಿಸಿದ್ದಾರೆ.

ಕರ್ನಾಟಕದಲ್ಲಿ ತೆಲುಗು ಚಿತ್ರಗಳಿಗೆ ಉತ್ತಮ ಮಾರುಕಟ್ಟೆಯಿದೆ. ಹೈದರಾಬಾದ್‌ ಕರ್ನಾಟಕ ಸೇರಿದಂತೆ ಗಡಿಭಾಗದಲ್ಲಿ ತೆಲುಗು ಚಿತ್ರಗಳನ್ನು ಜನರು ಮುಗಿಬಿದ್ದು ನೋಡುತ್ತಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಸಿನಿಮಾ ವಿತರಣೆ ಮಾಡುತ್ತಿರುವ KVN ಡಿಸ್ಟ್ರಿಬ್ಯೂಷನ್‌ ಸಂಸ್ಥೆ ಗಡಿಜಿಲ್ಲೆ ಚಿಕ್ಕಬಳ್ಳಾಪುರದಲ್ಲಿ ಅದ್ಧೂರಿಯಾಗಿ ‘RRR’ ಪ್ರೀ ರಿಲೀಸ್‌ ಇವೆಂಟ್‌ ಆಯೋಜಿಸಿತ್ತು. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಸುಧಾಕರ್‌, ನಟ ಶಿವರಾಜಕುಮಾರ್‌ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಅವತರಣಿಕೆ ಬಿಡುಗಡೆ ಮಾಡಿ ಎಂದು ನಟ ಶಿವರಾಜಕುಮಾರ್‌ ಚಿತ್ರತಂಡಕ್ಕೆ ಮನವಿ ಮಾಡಿದ್ದರು.

ಈಗ ಸಿನಿಮಾ ಬುಕ್ಕಿಂಗ್‌ಗೆ ಚಾಲನೆ ಸಿಕ್ಕಿದ್ದು, ಬೆರಳೆಣಿಕೆಯ ಚಿತ್ರಮಂದಿರಗಳಲ್ಲಿ ಕನ್ನಡ ಅವತರಣಿಕೆಗೆ ಅವಕಾಶವಿದೆಯಷ್ಟೆ. ಈ ಹಿನ್ನೆಲೆಯಲ್ಲಿ ಕನ್ನಡಿಗರು ದೊಡ್ಡ ಸಂಖ್ಯೆಯಲ್ಲಿ #boycottRRRinkarnataka ಟ್ವಿಟರ್‌ ಟ್ರೆಂಡ್‌ ಆರಂಭಿಸಿದ್ದಾರೆ. ಚಿತ್ರದ ಪ್ರೀ ರಿಲೀಸ್‌ ಇವೆಂಟ್‌ನಲ್ಲಿ ನಟ ಶಿವರಾಜಕುಮಾರ್‌ ಅವರು ರಾಜಮೌಳಿ ಅವರಿಗೆ ಮಾಡಿದ ಮನವಿಯೂ ಇದಕ್ಕೆ ಪ್ರೇರಣೆ ನೀಡಿದೆ. ಈ ಹಿಂದೆ ‘ಪುಷ್ಪ’, ‘ಶ್ಯಾಮ್‌ ಸಿಂಗಾ ರಾಯ್‌’, ‘ರಾಧೆ ಶ್ಯಾಮ್‌’ ತೆಲುಗು ಸಿನಿಮಾಗಳ ಬಿಡುಗಡೆ ಸಂದರ್ಭದಲ್ಲೂ ಹೀಗಾಗಿತ್ತು. ಕನ್ನಡ ಅವತರಣಿಕೆ ರೂಪಿಸಿ ಪ್ರಚಾರ ಪಡೆದ ಚಿತ್ರತಂಡಗಳು ಬೆರಳೆಣಿಕೆಯ ಸ್ಕ್ರೀನ್‌ಗಳಲ್ಲಿ ಕನ್ನಡ ಡಬ್ಬಿಂಗ್‌ ಅವತರಣಿಕೆ ಬಿಡುಗಡೆ ಮಾಡಿ ಕನ್ನಡಿಗರ ಕೋಪಕ್ಕೆ ಗುರಿಯಾಗಿದ್ದವು. ಈ ಬಾರಿ ‘RRR’ಗೆ ಈ ಬಿಸಿ ತಟ್ಟಿದೆ.

ಹಿರಿಯ ನಿರ್ಮಾಪಕ ಸಾ.ರಾ.ಗೋವಿಂದು ಅವರು ಮಾತನಾಡಿ, “ಕನ್ನಡ ನಾಡಿನಲ್ಲಿ ಕನ್ನಡ ಭಾಷೆಯಲ್ಲಿ ಹೆಚ್ಚಿನ ಸಂಖ್ಯೆಯ ಸ್ಕ್ರೀನ್‌ಗಳಲ್ಲಿ ಸಿನಿಮಾ ಬರಬೇಕಿರುವುದು ನ್ಯಾಯ. ಆದರೆ ಕನ್ನಡಕ್ಕೆ ಕೆಲವೇ ಸ್ಕ್ರೀನ್‌ ಕೊಟ್ಟಿದ್ದಾರೆ. ಇದು ಖಂಡಿತ ಕನ್ನಡ ಭಾಷೆ ಮತ್ತು ಕನ್ನಡ ಚಿತ್ರರಂಗಕ್ಕೆ ಹಿನ್ನೆಡೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಟಿಕೆಟ್‌ ದರಗಳನ್ನೂ ತೀರಾ ದುಬಾರಿ ಮಾಡಿದ್ದು, ಸರ್ಕಾರ ಈ ಬಗ್ಗೆ ಏನು ಕ್ರಮ ಕೈಗೊಳ್ಳುತ್ತದೋ ನೋಡಬೇಕು” ಎನ್ನುತ್ತಾರೆ. ‘ಕನ್ನಡವಲ್ಲದ RRR ಚಿತ್ರವನ್ನು ನಾವು ನೋಡೋಲ್ಲ’, ‘ಕನ್ನಡಕ್ಕೆ ಹೆಚ್ಚು ಸ್ಕ್ರೀನ್‌ ಬೇಕೇ ಬೇಕು’, ‘ಕನ್ನಡ ವರ್ಷನ್‌ ಹೆಚ್ಚು ರಿಲೀಸ್‌ ಮಾಡುತ್ತೇವೆ ಎಂದು ತೆಲುಗು ಸಿನಿಮಾ ಪ್ರೊಮೋಟ್‌ ಮಾಡುತ್ತಿದ್ದಾರೆ’ ಎನ್ನುವ ಕಾಮೆಂಟ್‌ಗಳೊಂದಿಗೆ ಟ್ವಿಟರ್‌ನಲ್ಲಿ ಹಲವರು #boycottRRRinkarnataka ಹ್ಯಾಶ್‌ಟ್ಯಾಗ್‌ನೊಂದಿಗೆ ಟ್ರೆಂಡ್‌ ಮಾಡುತ್ತಿದ್ದಾರೆ.

“ಕನ್ನಡ ಅವತರಣಿಕೆಗೆ ಹೆಚ್ಚು ಡಿಮ್ಯಾಂಡ್‌ ಬರುತ್ತಿಲ್ಲ. ಅಲ್ಲದೆ ಹೆಚ್ಚಿನ ಸಂಖ್ಯೆಯ ಥಿಯೇಟರ್‌ಗಳಲ್ಲಿ ಪುನೀತ್‌ ರಾಜಕುಮಾರ್‌ ಅವರ ‘ಜೇಮ್ಸ್‌’ ಪ್ರದರ್ಶನಗೊಳ್ಳುತ್ತಿದೆ. ಥಿಯೇಟರ್‌ ಕೊರತೆ ಎದುರಾಗಿದ್ದು, ಕನ್ನಡ ಅವತರಣಿಕೆ ಪ್ರದರ್ಶಿಸಲು ಹೆಚ್ಚು ಸ್ಕ್ರೀನ್‌ ಇಲ್ಲದಂತಾಗಿದೆ. ಇದು ಒಂದು ರೀತಿ ಟ್ರಿಕ್ಕೀ ಸನ್ನಿವೇಶ” ಎಂದು ಬೆಂಗಳೂರಿನ ಥಿಯೇಟರ್‌ ಮಾಲೀಕರೊಬ್ಬರು ಅಭಿಪ್ರಾಯಪಡುತ್ತಾರೆ. ತಮ್ಮ ಹೆಸರು ಬಹಿರಂಗವಾಗಕೂಡದು ಎನ್ನುವ ಷರತ್ತಿನ ಮೇಲೆ ಅವರು ಮೇಲಿನ ಹೇಳಿಕೆ ನೀಡುತ್ತಾರೆ.

ಈ ಬಗ್ಗೆ ಎಚ್ಚೆತ್ತುಕೊಂಡಿರುವ KVN ಡಿಸ್ಟ್ರಿಬ್ಯೂಷನ್‌ ಸಂಸ್ಥೆ ಮಾಧ್ಯಮ ಹೇಳಿಕೆ ನೀಡಿದೆ. “RRR ಚಿತ್ರದ ಹೀರೋಗಳಾದ ರಾಮ್‌ ಚರಣ್‌ ತೇಜಾ ಮತ್ತು ಜ್ಯೂನಿಯರ್‌ NTR ಕನ್ನಡ ಕಲಿತು ಕನ್ನಡದಲ್ಲೇ ಡಬ್‌ ಮಾಡಿದ್ದಾರೆ. ಕನ್ನಡ ಭಾಷೆಯಲ್ಲೇ ಈ ದೃಶ್ಯಕಾವ್ಯವನ್ನು ನೋಡಲು ನೀವು ಇಚ್ಛಿಸುತ್ತೀರಿ ಎಂದು ನಾವು ಭಾವಿಸುತ್ತೇವೆ. ಚಿತ್ರದ ಕನ್ನಡ ಅವತರಣಿಕೆಯನ್ನು ಪ್ರದರ್ಶಿಸಲು ಪ್ರದರ್ಶಕರು ಹಿಂದೇಟು ಹಾಕುತ್ತಿದ್ದಾರೆ. ನಾವು ಅವರ ಮನವೊಲಿಸಲು ಪ್ರಯತ್ನಿಸುತ್ತಿದ್ದೇವೆ” ಎಂದು KVN ವಿತರಣೆ ಸಂಸ್ಥೆ ಹೇಳಿಕೊಂಡಿದೆ. ನಾಡಿದ್ದು 25ರಂದು ಸಿನಿಮಾ ತೆರೆಕಾಣುತ್ತಿದೆ. ಬಾಯ್ಕಾಟ್‌ ಬೆದರಿಕೆಯ ಹಿನ್ನೆಲೆಯಲ್ಲಿ ಚಿತ್ರಕ್ಕೆ ರಾಜ್ಯದಲ್ಲಿ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಲಿದೆ ಎಂದು ನೋಡಬೇಕು.

LEAVE A REPLY

Connect with

Please enter your comment!
Please enter your name here