ಆರಂಭದಲ್ಲಿ ಸಾಧು ಕೋಕಿಲಾ ಅವರು ಸಂಗೀತ ನಿರ್ದೇಶಕರಾಗಿ ಹೆಸರು ಮಾಡಿದವರು. ನಂತರ ಗಾಯಕ, ನಟ, ನಿರ್ಮಾಪಕರೂ ಆದರು. ನಂತರ ಸಿನಿಮಾ ನಿರ್ದೇಶನಕ್ಕೂ ಕೈಹಾಕಿದರು. ಅವರು ಒಂಥರಾ ಆಲ್‌ರೌಂಡರ್‌. ಈಗ  ಒಂದಷ್ಟು ಗ್ಯಾಪ್‌ ನಂತರ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ.

ಸಾಧು ಕೋಕಿಲಾ ಮತ್ತೆ ನಿರ್ದೇಶನದತ್ತ ಒಲವು ತೋರಿಸಿದ್ದಾರೆ. ಆದರೆ ಇಲ್ಲಿ ಒಂದು ವಿಶೇಷವಿದೆ. ಇದುವರೆಗೂ ಕೇವಲ ಕಮರ್ಷಿಯಲ್ ಚಿತ್ರಗಳನ್ನೇ ನಿರ್ದೇಶನ ಮಾಡಿದ್ದ ಸಾಧು ಈಗ ಆಧ್ಯಾತ್ಮದತ್ತ ವಾಲಿದ್ದಾರೆ. ಹಾಗಂತೆ ಅವರು ಕಾವಿ ಧರಿಸುತ್ತಿಲ್ಲ. ಬದಲಾಗಿ ಸಾಧು ಕೋಕಿಲಾ ತಮ್ಮ ಹೆಸರಿಗೆ ತಕ್ಕಂತೆ, ಸಾಧು ಸಂತರ ಸಿನಿಮಾ ಮಾಡುವತ್ತ ಆಸಕ್ತಿ ತೋರಿದ್ದಾರೆ. ಅದರ ಫಲವಾಗಿ ‘ಮಹಾಯೋಗಿ ಸಿದ್ದಾರೂಢ’ ಚಿತ್ರ ತಯಾರಾಗುತ್ತಿದೆ.

ಸಾಧು ಕೋಕಿಲಾ ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಸಾಧನೆ ಮಾಡಿದವರು. ಆದರೆ ಬರೀ ಸಾಧನೆ ಅಷ್ಟೇ ಅಲ್ಲದೆ, ಸಾಲವನ್ನೂ ಮಾಡಿಕೊಂಡವರು. ಸಂಗೀತ ನಿರ್ದೇಶಕರಾಗಿದ್ದ ಅವರು ‘ನಂಬರ್ ಒನ್’ ಚಿತ್ರದಿಂದ ನಿರ್ಮಾಪಕರೂ ಆದರು. ಆದರೆ ಆ ಚಿತ್ರ ಅವರ ಕೈ ಹಿಡಿಯಲಿಲ್ಲ. ಹಾಗಾಗಿ ಸಾಧು ಕೋಕಿಲಾ ಸಾಲಕ್ಕೆ ಸೋಲಬೇಕಾಯಿತು. ಆ ನಂತರ ಸಂಗೀತ ನಿರ್ದೇಶನಕ್ಕಿಂತ ನಟನೆಗೆ ಹೆಚ್ಚು ಒತ್ತು ಕೊಟ್ಟಿದ್ದು, ಆ ಸಾಲವನ್ನು ತೀರಿಸಲಿಕ್ಕಾಗಿಯೇ ಎಂದು ಸಾಧು ಕೋಕಿಲಾ ಅವರೇ ಬಹಳಷ್ಟು ಬಾರಿ ಹೇಳಿಕೊಂಡಿದ್ದಾರೆ. ಆದರೆ ಅದಾದ ನಂತರ ಸಾಧು ಅವರ ಅದೃಷ್ಟ ತಿರುಗಿದ್ದು ಎಲ್ಲರಿಗೂ ಗೊತ್ತು. ನಿರ್ದೇಶಕರಾದ ಮೇಲೆ ‘ರಕ್ತ ಕಣ್ಣೀರು’ ಸೇರಿದಂತೆ ಅನೇಕ ಕಮರ್ಷಿಯಲ್ ಚಿತ್ರಗಳನ್ನು ನಿರ್ದೇಶಿಸಿ ಯಶಸ್ಸು ಕಂಡ ಸಾಧು ಈಗ ಸಿದ್ದಾರೂಢನ ಮೊರೆ ಹೋಗಿದ್ದಾರೆ. ಅವರ ಸಂಗೀತ ಸಂಯೋಜನೆ ಹಾಗೂ ನಿರ್ದೇಶನದ ‘ಮಹಾಯೋಗಿ ಸಿದ್ದಾರೂಢ’ ಚಿತ್ರದ ಟ್ರೇಲರ್ ಈಗ ಬಿಡುಗಡೆಯಾಗಿದೆ. ಶ್ರೀಸದಾನಂದ ಮಹಾಸ್ವಾಮಿ, (ಸಿದ್ದರೂಢ ಮಠ) ಅವರ ನಿರ್ಮಾಣದ ಈ ಚಿತ್ರದಲ್ಲಿ ರಂಗಭೂಮಿಯ ಅನೇಕ ಪ್ರತಿಭೆಗಳು ಅಭಿನಯಿಸಿದ್ದಾರೆ ಅನ್ನೋದು ವಿಶೇಷ.

LEAVE A REPLY

Connect with

Please enter your comment!
Please enter your name here