ಚೇತನ್ ಚಂದ್ರಶೇಖರ್ ಶೆಟ್ಟಿ ನಿರ್ದೇಶನದ ‘ಸಂಭವಾಮಿ ಯುಗೇ ಯುಗೇ’ ಸಿನಿಮಾದ ‘ಡೋಲು ತಮಟೆ ವಾದ್ಯ’ ಹಾಡು ಬಿಡುಗಡೆಯಾಗಿದೆ. ಅರಸು ಅಂತಾರೆ ಬರೆದಿರುವ ಈ ಹಾಡಿಗೆ ಗೀತಾ ಮಾಸ್ಟರ್ ನೃತ್ಯ ಸಂಯೋಜಿಸಿದ್ದಾರೆ. ಪೂರನ್ ಶೆಟ್ಟಿಗಾರ್ ಸಂಗೀತ ಸಂಯೋಜಿಸಿದ್ದಾರೆ. ನಕಾಶ್ ಹಾಗೂ ಸ್ಪರ್ಶ ಹಾಡಿದ್ದಾರೆ.
‘ಇದು ನನ್ನ ಸ್ವತಂತ್ರ್ಯ ನಿರ್ದೇಶನದ ಮೊದಲ ಚಿತ್ರ. ನನ್ನ ಮೇಲೆ ನಂಬಿಕೆ ಇಟ್ಟು ಇಂಥದ್ದೊಂದು ಅವಕಾಶ ಕೊಟ್ಟ ನಿರ್ಮಾಪಕಿ ಪ್ರತಿಭಾ ಅವರಿಗೆ ಧನ್ಯವಾದ. ಇದೊಂದು ಕಮರ್ಷಿಯಲ್ ಥ್ರಿಲ್ಲರ್. ಇದೊಂದು ಹಳ್ಳಿ ಹಿನ್ನೆಲೆಯ ಚಿತ್ರ. ಹಳ್ಳಿ ಹುಡುಗರು ಓದಿ, ಪಟ್ಟಣಕ್ಕೆ ಹೋಗಿ ನೆಲೆಸುತ್ತಾರೆ. ಇದರಿಂದ ಮುಂದಿನ ತಲೆಮಾರಿನ ಕತೆ ಏನು? ಹಳ್ಳಿ ಉಳಿಯುವುದು ಹೇಗೆ? ಯುವಕರು ಹಳ್ಳಿಯಲ್ಲೇ ನೆಲಸಬೇಕು ಎಂಬುದೇ ಚಿತ್ರದ ಕಥಾಸಾರಾಂಶ. ಇವತ್ತಿನ ತಲೆಮಾರಿನವರಿಗೆ ಕನೆಕ್ಟ್ ಆಗುವ ಹಲವು ಅಂಶಗಳು ಚಿತ್ರದಲ್ಲಿವೆ’ ಎನ್ನುತ್ತಾರೆ ‘ಸಂಭವಾಮಿ ಯುಗೇ ಯುಗೇ’ ಚಿತ್ರದ ನಿರ್ದೇಶಕ ಚೇತನ್ ಚಂದ್ರಶೇಖರ್ ಶೆಟ್ಟಿ. ಮೊನ್ನೆ ಈ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ. ಬಹುಭಾಷಾ ನಟಿ ಶ್ರುತಿ ಹರಿಹರನ್ ಅವರು ಈ ಜಾನಪದ ಶೈಲಿಯ ‘ಡೋಲು ತಮಟೆ ವಾದ್ಯ’ ಸಾಂಗ್ ಬಿಡುಗಡೆಗೊಳಿಸಿ ಚಿತ್ರಕ್ಕೆ ಶುಭಹಾರೈಸಿದ್ದಾರೆ. ಅರಸು ಅಂತಾರೆ ಬರೆದಿರುವ ಈ ಹಾಡಿಗೆ ಗೀತಾ ಮಾಸ್ಟರ್ ನೃತ್ಯ ಸಂಯೋಜಿಸಿದ್ದಾರೆ. ಪೂರನ್ ಶೆಟ್ಟಿಗಾರ್ ಸಂಗೀತ ಸಂಯೋಜಿಸಿದ್ದಾರೆ. ನಕಾಶ್ ಹಾಗೂ ಸ್ಪರ್ಶ ಹಾಡಿದ್ದಾರೆ.
ರಾಜಲಕ್ಷ್ಮಿ ಎಂಟರ್‌ಟೇನ್‌ಮೆಂಟ್ ಲಾಂಛನದಲ್ಲಿ ಪ್ರತಿಭಾ ಅವರು ನಿರ್ಮಿಸಿರುವ ಚಿತ್ರದ ಹೀರೋ ಅಗಿ ಜಯ್ ಶೆಟ್ಟಿ ನಟಿಸಿದ್ದಾರೆ. ‘ಇದೊಂದು ಕೃಷಿ ಮತ್ತು ರೈತರ ಸಿನಿಮಾ. ತನಗೆ ಆಶ್ರಯ ಕೊಟ್ಟ ಊರಿಗೆ ಏನಾದರೂ ಮಾಡಬೇಕು ಎಂದು ನಾಯಕ ಮುಂದಾಗುತ್ತಾನೆ. ಆ ಹಳ್ಳಿಯ ಪಂಚಾಯ್ತಿ ಅಧ್ಯಕ್ಷನಾಗುತ್ತಾನೆ. ಮುಂದೇನಾಗುತ್ತದೆ ಎಂಬುದು ಚಿತ್ರದ ಕಥೆ. ಹೊಸಬನಾದ ನನ್ನ ಮೇಲೆ ನಂಬಿಕೆ ಇಟ್ಟು, ಅವಕಾಶ ಕೊಟ್ಟ ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಧನ್ಯವಾದಗಳು’ ಎನ್ನುವುದು ನಟ ಜಯ್ ಶೆಟ್ಟಿ ಮಾತು. ಬಿಜಾಪುರದ ಮೂಲದ ನಿಶಾ ರಜಪೂತ್ ಚಿತ್ರದ ನಾಯಕಿ. ಮಾಡೆಲಿಂಗ್ ಮೂಲಕ ಅವರಿಗೆ ಇದು ಚೊಚ್ಚಲ ಸಿನಿಮಾ. ಅಶೋಕ್ ಕುಮಾರ್, ಮಧುರ ಗೌಡ, ರಾಜೇಂದ್ರ ಕಾರಂತ್, ಅಶ್ವಿನ್ ಹಾಸನ್, ವಿಕ್ಟರಿ ವಾಸು ಪ್ರಮುಖ ಪಾತ್ರಗಳಲ್ಲಿದ್ದಾರೆ. ರಾಜು ಹೆಮ್ಮಿಗೆಪುರ ಛಾಯಾಗ್ರಹಣ ಚಿತ್ರಕ್ಕಿದೆ.