ಚೇತನ್ ಚಂದ್ರಶೇಖರ್ ಶೆಟ್ಟಿ ನಿರ್ದೇಶನದ ‘ಸಂಭವಾಮಿ ಯುಗೇಯುಗೇ’ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಈ ಮೋಷನ್ ಪೋಸ್ಟರ್‌ನಲ್ಲಿ ಚಿತ್ರದ ಪ್ರಮುಖ ಪಾತ್ರಗಳನ್ನು ಪರಿಚಯಿಸಲಾಗಿದೆ. ಫೋಟೊಗಳೊಂದಿಗೆ ಸಿನಿಮಾದ ತಂತ್ರಜ್ಞರನ್ನೂ ಪರಿಚಯಿಸಿರುವುದು ವಿಶೇಷ.
ಜಯ್ ಶೆಟ್ಟಿ ನಟನೆಯ ‘ಸಂಭವಾಮಿ ಯುಗೇ ಯುಗೇ’ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ ಮಾತು – ‘ಸಂಭವಾಮಿ ಯುಗೇಯುಗೇ’. ‘ಅಧರ್ಮ ಹೆಚ್ಚಾದಾಗ ಪುನಃ ಪುನಃ ಬರುತ್ತಿರುತ್ತೇನೆ’ ಎನ್ನುವುದು ಮಾತಿನ ಅರ್ಥ. ಕೃಷ್ಣ ಹೇಳಿದ ಈ ಮಾತೇ ಚಿತ್ರದ ಶೀರ್ಷಿಕೆಯಾಗಿದೆ. ಇನ್ನು ಮೋಷನ್ ಪೋಸ್ಟರ್‌ನಲ್ಲಿ ಚಿತ್ರದ ಪ್ರಮುಖ ಪಾತ್ರಗಳನ್ನು ಪರಿಚಯಿಸಲಾಗಿದೆ. ಇದೊಂದು ಆಕ್ಷನ್ – ಎಂಟರ್‌ಟೇನರ್ ಚಿತ್ರ ಎನ್ನುವುದನ್ನು ಈ ಪಾತ್ರಗಳು ಸಾರಿ ಹೇಳುತ್ತವೆ. ಚೇತನ್ ಚಂದ್ರಶೇಖರ್ ಶೆಟ್ಟಿ ನಿರ್ದೇಶನದ ಚಿತ್ರದ ನಾಯಕಿಯಾಗಿ ನಿಶಾ ರಜಪೂತ್ ನಟಿಸಿದ್ದಾರೆ.
‘ಭಗವದ್ಗೀತೆಯೇ ಈ ಸಿನಿಮಾದ ಕತೆಗೆ ಆದರ್ಶ. ಪಕ್ಕಾ ಕಮರ್ಷಿಯಲ್ ಕಥಾಹಂದರ ಹೊಂದಿರುವ ಚಿತ್ರ. ಥ್ರಿಲ್ಲರ್, ಆಕ್ಷನ್, ಲವ್, ಸೆಂಟಿಮೆಂಟ್ ಸೇರಿದಂತೆ ನೋಡುಗನಿಗೆ ಬೇಕಾದ ಎಲ್ಲಾ ಅಂಶಗಳೂ ಇಲ್ಲಿವೆ’ ಎನ್ನುತ್ತಾರೆ ಚಿತ್ರದ ನಿರ್ದೇಶಕ ಚೇತನ್ ಚಂದ್ರಶೇಖರ್ ಶೆಟ್ಟಿ. ಚಿತ್ರಕ್ಕೆ ಕತೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಅವರೇ ರಚಿಸಿದ್ದಾರೆ. ರಾಜಲಕ್ಷ್ಮಿ ಎಂಟರ್‌ಟೇನ್‌ಮೆಂಟ್ ಲಾಂಛನದಲ್ಲಿ ಪ್ರತಿಭಾ ಅವರು ನಿರ್ಮಿಸುತ್ತಿರುವ ಚಿತ್ರಕ್ಕೆ ಪುರಾನ್ ಶೆಟ್ಟಿಗಾರ್ ಸಂಗೀತ, ಪ್ರಾಂಕ್ರಿನ್ ರಾಖಿ ಹಿನ್ನೆಲೆ ಸಂಗೀತ, ರಾಜು ಹೆಮ್ಮಿಗೆಪುರ ಛಾಯಾಗ್ರಹಣ, ರವೀಶ್ ಆತ್ಮಾರಾಮ್ ಸಂಕಲನವಿದೆ. ಚನ್ನಪಟ್ಟಣದ ಸುತ್ತಮುತ್ತ ಹೆಚ್ಚಿನ ಚಿತ್ರೀಕರಣ ನಡೆದಿದೆ. ಚಿತ್ರದ ಪ್ರಚಾರ ಕಾರ್ಯವನ್ನು ಆರಂಭಿಸಿರುವ ಚಿತ್ರತಂಡ ಮೊದಲಹೆಜ್ಜೆಯಾಗಿ ಕ್ಯಾರೆಕ್ಟರ್ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದೆ. ಪ್ರಮೋದ್ ಶೆಟ್ಟಿ, ಸುಧಾರಾಣಿ, ಭವ್ಯ, ಅಶೋಕ್ ಕುಮಾರ್, ಅಭಯ್ ಪುನೀತ್, ಬಾಲ ರಾಜವಾಡಿ, ಅಶ್ವಿನ್ ಹಾಸನ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.