ಚಿತ್ರದ ಹೀರೋ ಶ್ರೀನಗರ ಕಿಟ್ಟಿ ಮೊದಲ ಬಾರಿಗೆ ಭರ್ಜರಿ ಆಕ್ಷನ್‌ ಸನ್ನಿವೇಶಗಳನ್ನು ನಿಭಾಯಿಸಿದ್ದಾರೆ. ಅವರ ಪಾತ್ರಕ್ಕಿಂತ ನಾಯಕಿ ಪಾವನಾ ಪಾತ್ರ ಹೆಚ್ಚು ಸಂಕೀರ್ಣವಾಗಿದೆ. ಕಲಾವಿದರು ಹಾಗೂ ತಂತ್ರಜ್ಞರ ಶ್ರದ್ಧೆ ಮತ್ತು ಪರಿಶ್ರಮ ಚಿತ್ರದುದ್ದಕ್ಕೂ ಕಾಣಿಸುತ್ತದೆ.

”ನಾನು ಏನ್‌ ತಪ್ಪು ಮಾಡೀನಿ? ನಾನು ಬದುಕಬಾರದಾ!” ಎನ್ನುವುದು ಗೌಳಿಯ ಆಕ್ರಂಧನ. ಪತ್ನಿ, ಮಗಳ ಪುಟ್ಟ ಸಂಸಾರದೊಂದಿಗ ಗೌಳಿಯನ್ನು ವ್ಯವಸ್ಥೆ ವಿಪರೀತ ಕಾಡುತ್ತದೆ. ತನ್ನದೇನೂ ತಪ್ಪಿರದ ಆತನಿಗೆ ನಾನಾ ಕಷ್ಟಗಳು ಬಂದೊದಗುತ್ತವೆ. ಕೊನೆಗೊಮ್ಮೆ ಬಂಡೇಳುತ್ತಾನೆ ಗೌಳಿ. ಆತನಿಗೆ ನ್ಯಾಯ ಸಿಕ್ಕಿತೇ? ಆತನ ಸಂಸಾರದ ಕತೆಯೇನು? ಹೀಗೆ ಪ್ರೇಕ್ಷಕರನ್ನು ಕ್ಲೈಮ್ಯಾಕ್ಸ್‌ವರೆಗೂ ಕರೆದೊಯ್ಯುವ ನಿರ್ದೇಶಕರು ಅಲ್ಲೊಂದು ಅನಿರೀಕ್ಷಿತ ತಿರುವಿನ ಮೂಲಕ ಚಿತ್ರವನ್ನು ಕೊನೆಗಾಣಿಸುತ್ತಾರೆ.

ಕನ್ನಡದಲ್ಲಿ ಅದ್ಧೂರಿತನದೊಂದಿಗೆ ತಯಾರಾಗುವ ಬಹುಪಾಲು ಸಿನಿಮಾಗಳು ಈಗ ಮೇಕಿಂಗ್‌ನಿಂದಾಗಿ ಗಮನ ಸೆಳೆಯುತ್ತಿವೆ. ಅಂತಹ ಹಲವು ಸಿನಿಮಾಗಳಲ್ಲಿ ಪಾತ್ರ, ನಿರೂಪಣೆಯಲ್ಲಿ ಕಸುವು ಇರದ ಬರಿಯ ಶ್ರೀಮಂತಿಕೆ ಕಾಣಿಸುತ್ತದೆ. ಕೆಲವಷ್ಟೇ ಸಿನಿಮಾಗಳಲ್ಲಿ ಅದ್ಧೂರಿ ಮೇಕಿಂಗ್‌ ಜೊತೆ ಕಸುವು ಕಾಣಿಸುತ್ತವೆ. ಈ ಸಾಲಿಗೆ ಸೇರ್ಪಡೆಗೊಳಿಸಬಹುದಾದ ಸಿನಿಮಾ ‘ಗೌಳಿ’. ಈ ವಿಚಾರದಲ್ಲಿ ನಿರ್ದೇಶಕ ಸೂರ ಅವರಿಗೆ ಛಾಯಾಗ್ರಾಹಕ ಸಂದೀಪ್‌ ಮತ್ತು ಸಂಗೀತ ನಿರ್ದೇಶಕ ಶಶಾಂಕ್‌ ಶೇಷಗಿರಿ ಅವರು ಸೂಕ್ತ ರೀತಿಯಲ್ಲಿ ನೆರವಾಗಿದ್ದಾರೆ.

ಚಿತ್ರದಲ್ಲಿ ಪ್ರೀತಿಯ ಕತೆಯಿದೆ. ಅದು ಮದುವೆ ನಂತರದ ದಾಂಪತ್ಯ ಪ್ರೀತಿ. ಈ ದಂಪತಿಗೊಬ್ಬಳು ಮಗಳು ಪುಟ್ಟಕ್ಕ. ದನ – ಕುರಿಗಳೊಂದಿಗಿನ ಒಡನಾಟವೇ ಬದುಕು. ಸುಂದರ ಸಂಸಾರದ ಮೇಲೆ ದುಷ್ಟರು ಮುಗಿಬೀಳುತ್ತಾರೆ. ಚಿತ್ರದ ನಾಯಕನ ಕುಟುಂಬದ ಹಾನಿಯನ್ನು ಗಾಢವಾಗಿ ತೋರಿಸಲು ನಿರ್ದೇಶಕರು ಅತಾರ್ಕಿಕ ಘಟನೆಗಳನ್ನು ಸೃಷ್ಟಿಸಿದ್ದಾರೆ. ಕಾಲ್ಪನಿಕ ಕತೆ ಎಂದು ಸಮಜಾಯಿಷಿ ಕೊಟ್ಟುಕೊಳ್ಳಬಹುದೇನೋ…ಒಂದೆಡೆ ದುಷ್ಟ ಪೊಲೀಸ್‌, ಮತ್ತೊಂದೆಡೆ ಹಳ್ಳಿಗಳನ್ನು ದೋಚುವ ಡಕಾಯಿತ ಗುಂಪೊಂದನ್ನು ಸೃಷ್ಟಿಸಲಾಗಿದೆ. ಕೊಚ್ಚುವ ಸನ್ನಿವೇಶಗಳು ಹೆಚ್ಚೇ ಇದ್ದು, ಛಾಯಾಗ್ರಾಹಕರ ನಾಜೂಕುತನದಿಂದ ಅದರ ಇಂಪ್ಯಾಕ್ಟ್‌ ಕಡಿಮೆಯಾಗಿದೆ ಎಂದು ಹೇಳಬಹುದು.

ಚಿತ್ರದ ಹೀರೋ ಶ್ರೀನಗರ ಕಿಟ್ಟಿ ಮೊದಲ ಬಾರಿಗೆ ಭರ್ಜರಿ ಆಕ್ಷನ್‌ ಸನ್ನಿವೇಶಗಳನ್ನು ನಿಭಾಯಿಸಿದ್ದಾರೆ. ಐದು ವರ್ಷಗಳ ನಾಯಕನಟನಾಗಿ ತೆರೆಗೆ ಮರಳುತ್ತಿರುವ ಅವರಿಗೆ ಇಲ್ಲಿ ದೊಡ್ಡ ಕ್ಯಾನ್ವಾಸ್‌ ಸಿಕ್ಕಿದೆ. ಅವರ ಪಾತ್ರಕ್ಕಿಂತ ನಾಯಕಿ ಪಾವನಾ ಪಾತ್ರ ಹೆಚ್ಚು ಸಂಕೀರ್ಣವಾಗಿದೆ. ನಟಿ ಪಾವನಾ ಅವಕಾಶವನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ. ರಂಗಾಯಣ ರಘು ಅವರಿಗೆ ಗೌಳಿ ಪಾತ್ರ ಒಪ್ಪಿದೆ. ಪೊಲೀಸ್‌ ಪಾತ್ರದಲ್ಲಿ ಶರತ್‌ ಲೋಹಿತಾಶ್ವ ಖಳಪಾತ್ರಗಳಿಂದ ಹೆಚ್ಚು ಭೀತಿ ಉಂಟುಮಾಡುತ್ತಾರೆ. ಯಶ್‌ ಶೆಟ್ಟಿ ಮತ್ತು ಕಾಕ್ರೋಚ್‌ ಸುಧಿ ವಿಚಿತ್ರ ಮ್ಯಾನರಿಸಂನೊಂದಿಗೆ ಪ್ರೇಕ್ಷಕರಿಗೆ ಹೇವರಿಕೆ ಉಂಟುಮಾಡುತ್ತಾ ತಮ್ಮ ಪಾತ್ರಗಳನ್ನು ಗೆಲ್ಲಿಸಿದ್ದಾರೆ. ಕಲಾವಿದರು ಹಾಗೂ ತಂತ್ರಜ್ಞರ ಶ್ರದ್ಧೆ ಮತ್ತು ಪರಿಶ್ರಮ ಚಿತ್ರದುದ್ದಕ್ಕೂ ಕಾಣಿಸುತ್ತದೆ.

LEAVE A REPLY

Connect with

Please enter your comment!
Please enter your name here